For the best experience, open
https://m.samyuktakarnataka.in
on your mobile browser.

ವಿವಿಯನ್ನು ಅಧೋಗತಿಗಿಳಿಸಿದ ಗ್ಯಾರಂಟಿ

04:31 PM Aug 29, 2024 IST | Samyukta Karnataka
ವಿವಿಯನ್ನು ಅಧೋಗತಿಗಿಳಿಸಿದ ಗ್ಯಾರಂಟಿ

ಮಂಗಳೂರು ವಿವಿಯನ್ನು ಅಧೋಗತಿಗಿಳಿಸಿದ ರಾಜ್ಯ ಸರ್ಕಾರದ ಗ್ಯಾರಂಟಿ ; ಬಡವರ ಶಿಕ್ಷಣಕ್ಕೂ ಹಣ ಇಲ್ಲದ ಸ್ಥಿತಿ, ವಿವಿ ಕಾಲೇಜನ್ನೇ ಮುಚ್ಚುವ ಹುನ್ನಾರದಲ್ಲಿ ಕಾಂಗ್ರೆಸ್ ಸರ್ಕಾರ :- ಶಾಸಕ ವೇದವ್ಯಾಸ ಕಾಮತ್ ಆಕ್ರೋಶ

ಮಂಗಳೂರು: ಶಿಕ್ಷಣ ಮೂಲಭೂತ ಹಕ್ಕಾದರೂ, ಗ್ಯಾರಂಟಿ ಹಿಂದೆ ಬಿದ್ದಿರುವ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನೂ ನಿರ್ಲಕ್ಷ್ಯ ಮಾಡಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಒಂದೆಡೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಆರ್ಥಿಕ ದುರ್ಗತಿ ಒದಗಿದ್ದರೆ, ರಾಜ್ಯ ಸರ್ಕಾರಕ್ಕೆ ಅನುದಾನ ಕೊಟ್ಟು ಮಕ್ಕಳ ಶಿಕ್ಷಣಕ್ಕೆ ಆಸರೆಯಾಗುವುದಕ್ಕೂ ಗತಿ ಇಲ್ಲದ ಸ್ಥಿತಿ. ವಿವಿಯಲ್ಲಿ ಆರ್ಥಿಕ ದುಸ್ಥಿತಿಯಿಂದಾಗಿ ಸಿಬ್ಬಂದಿ ವೇತನಕ್ಕೂ ಪರದಾಡುವ ಸ್ಥಿತಿಯಾಗಿದೆ. ಇದಲ್ಲದೆ, ಮಂಗಳೂರು ವಿವಿಯ ಆಡಳಿತ ಸಂಧ್ಯಾ ಕಾಲೇಜು ಸೇರಿದಂತೆ ಕೆಲವು ವಿಭಾಗಗಳನ್ನೇ ಮುಚ್ಚುವುದಕ್ಕೆ ಮುಂದಾಗಿದ್ದು ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಕನ್ನಡಿ ಹಿಡಿಯುತ್ತದೆ ಎಂದು ಶಾಸಕ ವೇದವ್ಯಾಸ ಕಾಮತ್ ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ. ‌

ಮಂಗಳೂರು ವಿವಿಯಲ್ಲಿ ಮಿತಿಮೀರಿದ ಭ್ರಷ್ಟಾಚಾರದಿಂದಾಗಿಯೇ ಇಂತಹ ಸ್ಥಿತಿ ಬಂದೊದಗಿದೆ ಎಂದು ಅಲ್ಲಿನ ನಿವೃತ್ತ ಪ್ರಾಧ್ಯಾಪಕರೇ ಹೇಳುತ್ತಿದ್ದಾರೆ. ವಿವಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಅತಿಥಿ ಉಪನ್ಯಾಸಕರಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಒಂದು ತಿಂಗಳು ವೇತನ ವಿಳಂಬವಾದರೂ ಜೀವನ ನಡೆಸುವುದು ಕಷ್ಟಕರವಾಗಿರುವ ಇಂದಿನ ದಿನಗಳಲ್ಲಿ ನಾಲ್ಕೈದು ತಿಂಗಳ ಕಾಲ ವೇತನ ಬಾಕಿ ಉಳಿಸಿಕೊಂಡರೆ ಅವರ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಒಂದು ಕಾಲದಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಎಂಬ ಹೆಸರು ಪಡೆದುಕೊಂಡಿದ್ದ ಮಂಗಳೂರು ವಿವಿ ಭ್ರಷ್ಟಾಚಾರದಿಂದಾಗಿ ಅಕ್ಷರಶಃ ತನ್ನ ಘನತೆಯನ್ನು ಹಾಳು ಮಾಡಿಕೊಂಡಿದೆ.

ವಿವಿಯ ಆಡಳಿತದ ನಿರ್ಲಕ್ಷ್ಯದಿಂದಾಗಿ ಯುಜಿಸಿ ಮಾನ್ಯತೆ ಬಿ ಗ್ರೇಡ್‌ಗೆ ಇಳಿದಿದೆ. ಇದರ ನಡುವೆ, ವಿದ್ಯಾರ್ಥಿಗಳ ಅಡ್ಮಿಶನ್ ಕಡಿಮೆಯಾದ ನೆಪದಲ್ಲಿ ಅನೇಕ ಪದವಿ, ಸ್ನಾತಕೋತ್ತರ ವಿಭಾಗಗಳನ್ನು ಮುಚ್ಚಲಾಗುತ್ತಿದೆ. ಮಂಗಳೂರಿನ ಸಂಧ್ಯಾ ಕಾಲೇಜಿನಲ್ಲಿ ಪದವಿ ವಿಭಾಗಕ್ಕೆ ಅಡ್ಮಿಷನ್ ನಿಲ್ಲಿಸಿದ್ದು ಇದಕ್ಕೆ ಸಾಕ್ಷಿ. ಹಗಲಿನಲ್ಲಿ ಕೆಲಸ ನಿರ್ವಹಿಸುತ್ತ ಸಂಜೆಯ ವೇಳೆ ಶಿಕ್ಷಣ ಪಡೆಯುತ್ತಿದ್ದ ಬಡ ವಿದ್ಯಾರ್ಥಿಗಳ ಹೊಟ್ಟೆಗೆ ಬಡಿದಂತಾಗಿದೆ. ಖಾಸಗಿ ಕಾಲೇಜುಗಳ ಭರಾಟೆ ನಡುವೆ ಸರ್ಕಾರದ ಶಿಕ್ಷಣ ವ್ಯವಸ್ಥೆಯನ್ನು ಚೆನ್ನಾಗಿಟ್ಟುಕೊಂಡರೆ, ವಿದ್ಯಾರ್ಥಿಗಳಿಗೆ ಕೊರತೆಯಾಗಲ್ಲ. ಕಡಿಮೆ ಶುಲ್ಕದಲ್ಲಿ ಶಿಕ್ಷಣ ಸಿಗುತ್ತೆ ಎನ್ನುವ ಕನಸಿನೊಂದಿಗೆ ಬರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವೇ ಬಾಗಿಲು ಮುಚ್ಚಿದಂತಾಗಿದ್ದು ನಗರದ ಹೃದಯಭಾಗದಲ್ಲಿರುವ ಏಕೈಕ ಸರ್ಕಾರಿ ಕಾಲೇಜನ್ನೇ ಮುಚ್ಚುವ ಹುನ್ನಾರದಂತೆ ಕಾಣುತ್ತಿದೆ. ಸಂಧ್ಯಾ ಕಾಲೇಜಿನಲ್ಲಿ ಪದವಿ ಪ್ರವೇಶ ನಿಲ್ಲಿಸಿದ್ದರಿಂದ ಹಲವಾರು ಮಂದಿ ಉಪನ್ಯಾಸಕರು, ಸಿಬ್ಬಂದಿಯ ಉದ್ಯೋಗಕ್ಕೂ ಕತ್ತರಿ ಹಾಕಿದಂತಾಗಿದೆ.

ಇದಕ್ಕೆಲ್ಲ ರಾಜ್ಯ ಸರ್ಕಾರ ತನ್ನ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಶಿಕ್ಷಣದ ಉನ್ನತೀಕರಣಕ್ಕೂ ಅನುದಾನವನ್ನು ಒದಗಿಸಲಾಗದೆ, ಕೈಲಾಗದಿದ್ದರೆ ಮುಚ್ಚಿಬಿಡಿ ಎನ್ನುವ ಮನಸ್ಥಿತಿಗೆ ಬಂದಿರುವುದನ್ನು ತೋರಿಸುತ್ತಿದೆ. ಗ್ಯಾರಂಟಿ ಯೋಜನೆ ಹೆಸರಲ್ಲಿ ರಾಜ್ಯ ಸರ್ಕಾರವೇ ಮಂಗಳೂರು ವಿವಿಯನ್ನು ಅಧೋಗತಿಗೆ ತಳ್ಳಿದ್ದು ಸಾವಿರಾರು ಬಡವರ ಮಕ್ಕಳಿಗೆ ಅನ್ಯಾಯ ಮಾಡಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags :