ವಿವಿ ನೇಮಕಾತಿ ರದ್ದು
ಮೈಸೂರು: ಬಿಜೆಪಿ ಪರ ಅಭಿಯಾನದಲ್ಲಿ ಭಾಗಿಯಾಗಿದ್ದ ಸಂಘ ಪರಿವಾರದ ಕರ‍್ಯಕರ್ತರನ್ನು ಕಾಂಗ್ರೆಸ್ ಸರ್ಕಾರ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ (ಬಿಓಎಂ) ಸದಸ್ಯರಾಗಿ ಕಳೆದ ದಿನ (ಫೆ. ೨೬) ನೇಮಿಸಿದ್ದು, ಇದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಜಾಲತಾಣಗಳಲ್ಲಿ ಈ ವಿಷಯ ದೊಡ್ಡ ಪ್ರಮಾಣದಲ್ಲಿ ಚರ್ಚೆಗೆ ಬಂದ ಬಳಿಕ ಎಚ್ಚೆತ್ತ ಸರ್ಕಾರ, ನೇಮಕ ಆದೇಶವನ್ನು ಇದೇ ದಿನದಿಂದ ಜಾರಿಗೆ ಬರುವಂತೆ ವಾಪಸ್ ಪಡೆದಿದ್ದು ಈ ಕುರಿತು ಮತ್ತೊಂದು ಆದೇಶ ಹೊರಡಿಸಿ ವಿವಾದ ತಣ್ಣಗಾಗಿಸುವ ಪ್ರಯತ್ನ ನಡೆಸಿದೆ. ಆದರೆ ಸಿಎಂ ತವರು ಜಿಲ್ಲೆಯ ವಿಶ್ವವಿದ್ಯಾನಿಲಯವೊಂದಕ್ಕೆ ಆಗಿರುವ ನೇಮಕ ಮತ್ತು ಈ ಕುರಿತು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿ ವರ್ಗದವರು ನಡೆದುಕೊಂಡಿರುವ ರೀತಿ ಈಗ ಚರ್ಚೆಗೆ ಕಾರಣವಾಗಿದೆ.
ಏನಾಗಿತ್ತು ಕಳೆದ ದಿನ
ಕಳೆದ ದಿನ ಹೊರಬಿದ್ದಿದ್ದ ಆದೇಶ (೨೬.೦೨.೨೦೨೪ ಇಡಿ ೪೬ ಯುಓವಿ ೨೦೨೩) ದಲ್ಲಿ ಮುಕ್ತ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾಗಿ ಮಹೇಶ್ ಸೋಸಲೆ, ರಮೇಶ್ ಕಾಳಪ್ಪ, ಸಿದ್ದಯ್ಯ ಅವರೊಟ್ಟಿಗೆ ದಕ್ಷಿಣ ಕನ್ನಡದ ಗೀತಾ ಕಂದಡ್ಕ, ಬೆಂಗಳೂರಿನ ಪ್ರಾಚಿಗೌಡ ಅವರನ್ನು ನೇಮಿಸಲಾಗಿತ್ತು.
ಮಹಿಳಾ ಕೋಟಾದಲ್ಲಿ ನೇಮಕಗೊಂಡಿದ್ದ ಗೀತಾ ಮತ್ತು ಮೂಲತಃ ಪ್ರಾಚೀ ಸಂಘ ಪರಿವಾರದ ಕರ‍್ಯಕರ್ತರಾಗಿದ್ದು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಇವರಲ್ಲಿ ಗೀತಾ ಈ ಹಿಂದೆ ದಾವಣಗೆರೆ ವಿವಿಯ ಸಿಂಡಿಕೇಟ್ ಸದಸ್ಯರಾಗಿದ್ದರು.
ಈ ಸಮಯ ಮುಕ್ತ ವಿವಿಯ ಈಗಿನ ಕುಲಪತಿ ಶರಣಪ್ಪ ಅಲ್ಲಿಯೂ ಕುಲಪತಿಯಾಗಿದ್ದರು ಎನ್ನುವುದು ಗಮನಾರ್ಹ. ಪ್ರಾಚಿಗೌಡ ಯುವ ಬಲ ಜಾಗೃತಿ ಪರಿಷತ್ ಎಂಬ ಸಂಘಟನೆಯ ರಾಜ್ಯಾಧ್ಯಕ್ಷೆ. ಇವರಿಬ್ಬರೂ ಜಾಲತಾಣಗಳಲ್ಲಿಯೂ ಮೋದಿ, ಬಿಜೆಪಿ ಮತ್ತು ಹಿಂದುತ್ವ ರಾಜಕೀಯದ ಪರ ಸಾಕಷ್ಟು ಬರೆದುಕೊಂಡಿದ್ದಾರೆ. ಇದು ಸದ್ಯ ರಾಜ್ಯ ಸರ್ಕಾರವನ್ನು ಸದ್ಯ ಇಕ್ಕಟ್ಟಿಗೆ ಸಿಲುಕಿಸಿದೆ. ಈ ಎಲ್ಲಾ ಕಾರಣಗಳಿಂದ ಸರ್ಕಾರ ನೇಮಕ ಆದೇಶ ವಾಪಸ್ ಪಡೆದುಕೊಂಡಿದೆ ಎಂದು ಬಿಂಬಿಸಲಾಗುತ್ತಿದೆ.