For the best experience, open
https://m.samyuktakarnataka.in
on your mobile browser.

ವಿಶೇಷ ಪ್ಲಾಟ್ ಫಾರ್ಮ್ ನಲ್ಲಿ ಏಕಂ

10:18 AM Jun 18, 2024 IST | Samyukta Karnataka
ವಿಶೇಷ ಪ್ಲಾಟ್ ಫಾರ್ಮ್ ನಲ್ಲಿ ಏಕಂ

ಬೆಂಗಳೂರು: ನಮ್ಮ ಮಣ್ಣಿನ ಕಥೆಯನ್ನ ಹೊತ್ತು ಬರುತ್ತಿರುವ ಏಕಂ ಇದೀಗ ನಮ್ಮ ಮುಂದೆ ಬರಲು ಸಜ್ಜಾಗಿದೆ. ತನ್ನದೇ ವಿಶೇಷ ಪ್ಲಾಟ್ ಫಾರ್ಮ್ ನಲ್ಲಿ ಇದೇ ಜುಲೈ 13ರಂದು ಈ ಸರಣಿ ಬಿಡುಗಡೆಯಾಗಲಿದೆ.

 ರಾಜ್ ಬಿ ಶೆಟ್ಟಿ, ಶೈನ್ ಶೆಟ್ಟಿ, ಪ್ರಕಾಶ್ ರಾಜ್ ಮುಂತಾದವರ ನಟನೆಯ, ಪರಂವಃ ಸ್ಟುಡಿಯೋಸ್ ನಿರ್ಮಾಣದ ಏಕಂ ಎಂಬ ಕನ್ನಡದ ಹೊಸ ವೆಬ್ ಸೀರೀಸ್ ಇದೇ ಜುಲೈ 13ರಂದು ತನ್ನದೇ ವಿಶೇಷ ಪ್ಲಾಟ್ ಫಾರ್ಮ್ ನಲ್ಲಿ ಈ ವೆಬ್ ಸರಣಿ ಪ್ರದರ್ಶನ ಕಾಣಲಿದೆ.
ಇನ್ನು ಈ ಕುರಿತಂತೆ ನಟ ರಕ್ಷಿತ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಏಕಂ ವೆಬ್ ಸೀರೀಸ್ ಕುರಿತಂತೆ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.
2020 ಜನವರಿ, ಅಥವಾ ಫೆಬ್ರವರಿಯೇ? ನೆನಪು ಮಬ್ಬಾಗಿದೆ! ಇರಲಿ… ‘ಪರಂವಃ’ ಹಾಗು ‘ಜರ್ನಿಮ್ಯಾನ್ ಫಿಲ್ಮ್ಸ್’ ಒಟ್ಟಿಗೆ ‘ಏಕಂ’ ಮಾಡಲು ಹೊರಟಿದ್ದು ಅಂದು. ಏನೋ ಹೊಸತೊಂದನ್ನು ಮಾಡುವ ಉತ್ಸಾಹ ನಮ್ಮಲ್ಲಿ. ಕನ್ನಡದಲ್ಲೊಂದು ವೆಬ್ ಸೀರೀಸ್ ಹೊರಬರಲು ಇದೇ ಸೂಕ್ತ ಸಮಯ ಎಂದೆನಿಸಿತ್ತು. ಆದರೆ ಅದೇ ಸಮಯಕ್ಕೆ ಕೊವಿಡ್ ವಕ್ಕರಿಸಿತು. ಜಗತ್ತೇ ತಲೆ ಕೆಳಗಾದ ಸಮಯ. ನಮ್ಮಲ್ಲೂ ಆತಂಕ, ಅನಿಶ್ಚಿತತೆ. ಆದರೂ ಹಿಂದೆ ಸರಿಯದೆ ಮುನ್ನುಗ್ಗಿದೆವು, ಕಟ್ ಟು ಅಕ್ಟೋಬರ್ 2021. ‘ಏಕಂ’ನ ಫೈನಲ್ ಕಟ್ ನೋಡಿದೆ. ಖುಷಿ ಆಯಿತು. ಹೆಮ್ಮೆ ಎನಿಸಿತು. ಇದನ್ನ ಜಗತ್ತಿಗೆ ತೋರಿಸಬೇಕೆನಿಸಿತು. ಅದಾಗಿ ಇಂದಿಗೆ ಬರೋಬ್ಬರಿ ಎರಡೂವರೆ ವರ್ಷಗಳು! ‘ಏಕಂ’ ಅನ್ನು ಹೊರ ತರಲು ಪಟ್ಟ ಶ್ರಮ ಅಷ್ಟಿಷ್ಟಲ್ಲ! ಎಲ್ಲೆಡೆ ನಿರಾಸೆ, ಅದೇ ನೆಪ, ಅದೇ ಸಬೂಬು! ಯಾವುದೇ ಕೃತಿಯ ಅರ್ಹತೆಯನ್ನ ನಿರ್ಧರಿಸುವ ಅವಕಾಶ ಹಾಗು ಹಕ್ಕು ಪ್ರೇಕ್ಷಕರಿಗಿರಬೇಕು ಎಂದು ನಾನು ಭಾವಿಸುತ್ತೇನೆ, ಹಾಗಾಗಿ ಏಕಂ ಅನ್ನು ನಾವು ನಮ್ಮದೇ ಆದ ವೇದಿಕೆಯಲ್ಲಿ ನಿಮ್ಮ ಮುಂದೆ ತರಲು ನಿಶ್ಚಯಿಸಿದ್ದೇವೆ. ‘ಏಕಂ’ ನಿಮಗೆ ಇಷ್ಟವಾಗಬಹುದು, ಇಷ್ಟವಾಗದೇ ಇರಬಹುದು. ಆದರೆ ಈ ಪ್ರಯತ್ನವನ್ನು ನಿರ್ಲಕ್ಷಿಸುವಂತಿಲ್ಲ ಎಂಬುದನ್ನು ನಾನು ಬಲವಾಗಿ ನಂಬಿದ್ದೇನೆ. ‘ಏಕಂ’ ಒಂದು ಶ್ಲಾಘನೀಯ ಪ್ರಯತ್ನ. ಇದನ್ನು ನಾವು ಎಷ್ಟು ಪ್ರೀತಿಯಿಂದ ಮಾಡಿದ್ದೇವೋ, ಅಷ್ಟೇ ಪ್ರೀತಿಯಿಂದ ನೀವು ನಮ್ಮ ಈ ಪ್ರಯತ್ನವನ್ನು ಸ್ವೀಕರಿಸುತ್ತೀರಿ ಅಂತ ಆಶಿಸುತ್ತೇನೆ ಎಂದಿದ್ದಾರೆ.

ಏಕಂ ಜುಲೈ 13ರಂದು ಬಿಡುಗಡೆ ಆಗಲಿದ್ದು www.ekamtheseries.com ಮೂಲಕ ಈ ವೆಬ್ಸಿರೀಸ್ ವೀಕ್ಷಣೆಗೆ ಲಭ್ಯವಾಗಲಿದೆ. 149 ರೂಪಾಯಿಗೆ ಇದನ್ನು ವೀಕ್ಷಿಸಬಹುದು.