ವಿಶೇಷ ಸ್ಥಾನಮಾನ ಜಟಾಪಟಿ ಸಂಸದೀಯ ನಡವಳಿಕೆಗೆ ಕುಂದು
ಕಾಶ್ಮೀರದ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಪಿಡಿಪಿ ಶಾಸಕರ ನಡುವೆ ಕಾದಾಟ ನಡೆದಿದ್ದರಿಂದ ಮಾರ್ಷಲ್‌ಗಳು ಸ್ಪೀಕರ್ ಆದೇಶದಂತೆ ಬಿಜೆಪಿ ಸದಸ್ಯರನ್ನು ಹೊರಹಾಕಿದ ಘಟನೆ ನೋಡಿದರೆ ಎಲ್ಲ ಸದಸ್ಯರು ತಮ್ಮ ತಮ್ಮ ಮತದಾರರನ್ನು ಮೆಚ್ಚಿಸಲು ಮುಂದಾಗಿದ್ದಾರೆ ಎಂಬುದು ಸ್ಪಷ್ಟ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ವಿಧಿ ೩೭೦ ಮತ್ತು ೩೫ಎ ರದ್ದುಪಡಿಸಿರುವುದು ಸಂಸತ್ತು. ಅದರಿಂದ ವಿಶೇಷ ಸ್ಥಾನಮಾನ ಮತ್ತೆ ಪಡೆಯಬೇಕು ಎಂದರೆ ಸಂಸತ್ತಿನಲ್ಲೇ ಮತ್ತೆ ಅನುಮೋದನೆ ಪಡೆಯಬೇಕು. ಕಾಶ್ಮೀರದ ವಿಧಾನಸಭೆಗೆ ಯಾವ ಅಧಿಕಾರವೂ ಇಲ್ಲ. ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಬಹುದು ಅಷ್ಟೆ. ಸಂಸತ್ತಿಗೆ ಇರುವ ಅಧಿಕಾರವನ್ನು ಯಾವುದೇ ರಾಜ್ಯ ಪ್ರಶ್ನಿಸಲು ಬರುವುದಿಲ್ಲ.
ಆಡಳಿತದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ ತನ್ನ ಇತಿಮಿತಿ ಗೊತ್ತಿದೆ. ಅದರಿಂದ ಸರ್ಕಾರ ಕೈಗೊಂಡ ನಿರ್ಣಯದಲ್ಲಿ ಸಂಯಮ ಸ್ಪಷ್ಟವಾಗಿ ಗೋಚರವಾಗುತ್ತದೆ. ಕೇಂದ್ರ ಸರ್ಕಾರ ರಾಜ್ಯ ಶಾಸಕರೊಂದಿಗೆ ಮಾತುಕತೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸುವುದಕ್ಕೆ ಅವಕಾಶವಿದೆ. ಆದರೆ ಕಾಶ್ಮೀರದ ಇತರೆ ಪಕ್ಷಗಳಿಗೆ ಶಾಂತಿಯುತ ನಿರ್ಣಯಗಳು ಬೇಕಿಲ್ಲ. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವವನ್ನು ವಿಧಾನಸಭೆಯಲ್ಲಿ ತೋರಿಸಬೇಕು. ಅವರನ್ನು ಆಯ್ಕೆ ಮಾಡಿದವರಿಗೆ ತಮ್ಮ ಜನಪ್ರತಿನಿಧಿ ಏನೂ ಮಾಡಲಿಲ್ಲ ಎಂಬ ಭಾವನೆ ಬರಬಾರದು. ಹೀಗಾಗಿ ಕೂಗಾಟ-ಕಿರುಚಾಟ ಅನಿವಾರ್ಯ. ಇವುಗಳೆಲ್ಲ ಸಂಸದೀಯ ನಡವಳಿಕೆಯಿಂದ ದೂರ ಎಂಬುದು ಸ್ಪಷ್ಟ. ಸೌಮ್ಯವಾಗಿ ತಮ್ಮ ಪಕ್ಷದ ನಿಲುವನ್ನು ಹೇಳಿದರೆ ಯಾರ ಗಮನವನ್ನೂ ಸೆಳೆಯಲು ಸಾಧ್ಯವಿಲ್ಲ. ಹೀಗಾಗಿ ಸದನದಲ್ಲಿ ನಡವಳಿಕೆ ಮೀರಿ ವರ್ತಿಸುವುದು ಅನಿವಾರ್ಯ ಎನ್ನುವಂತಾಗಿದೆ. ಎಲ್ಲ ರಾಜ್ಯಗಳಲ್ಲಿ ಕೆಲವು ಪಕ್ಷಗಳು ಇದನ್ನೇ ತಂತ್ರವಾಗಿ ಬಳಸುತ್ತಿವೆ. ಕಾಶ್ಮೀರ ವಿಧಾನಸಭೆಯಲ್ಲಿ ನಡೆದಿರುವ ಘಟನೆಗಳನ್ನು ನೋಡಿದರೆ ಬೇರೆ ರಾಜ್ಯಕ್ಕಿಂತ ಭಿನ್ನವಾಗಿಲ್ಲ. ಎಲ್ಲ ರಾಜ್ಯಗಳ ಸಭಾಧ್ಯಕ್ಷರಿಗೆ ಸಭೆಯನ್ನು ಶಾಂತಿಯುತವಾಗಿ ನಡೆಸುವುದೇ ದುಸ್ತರ. ಎಲೆಕ್ಟ್ರಾನಿಕ್ ಮಾಧ್ಯಮಗಳು ಸಭೆಯ ಕಲಾಪವನ್ನು ನೇರವಾಗಿ ಪ್ರಸಾರ ಮಾಡಲು ಆರಂಭಿಸಿದ ಮೇಲೂ ಪರಿಸ್ಥಿತಿ ಏನೂ ಸುಧಾರಿಸಲಿಲ್ಲ. ಕ್ಯಾಮೆರಾ ಮುಂದೆ ಜನಪ್ರತಿನಿಧಿಗಳ ವರ್ತನೆ ನೋಡಿದರೆ ಇವೆಲ್ಲ ಪೂರ್ವ ನಿಯೋಜಿತ ಎಂದೆನಿಸಿದರೆ ಆಚ್ಚರಿ ಏನಿಲ್ಲ. ಸದಸ್ಯರು ಪ್ರತಿಭಟನೆ ನಡೆಸಿದರೆ ಅಧ್ಯಕ್ಷರು ಸಭೆಯನ್ನು ಸ್ವಲ್ಪ ಕಾಲ ಮುಂದೂಡುತ್ತಿದ್ದರು. ಪಕ್ಷದ ಮುಖಂಡರನ್ನು ಕಚೇರಿಗೆ ಕರೆಸಿಕೊಂಡು ಸಭೆ ಶಾಂತಿಯುತವಾಗಿ ನಡೆಸಲು ವ್ಯವಸ್ಥೆ ಮಾಡುತ್ತಿದ್ದರು. ಪಕ್ಷೇತರರು ಮಾತ್ರ ಪ್ರತಿಭಟಿಸಿ ಸಭಾತ್ಯಾಗ ಮಾಡುತ್ತಿದ್ದರು. ಈಗ ಪ್ರಮುಖ ರಾಜಕೀಯ ಪಕ್ಷಗಳ ಸದಸ್ಯರೇ ಪ್ರತಿಭಟನೆ, ಭಿತ್ತಪತ್ರ, ಧರಣೆಗೆ ಇಳಿಯುತ್ತಿರುವುದು ಸಂಸದೀಯ ನಡವಳಿಕೆಗೆ ಧಕ್ಕೆ ಒದಗಿದಂತಾಗಿದೆ.
ಕಾಶ್ಮೀರದ ವಿಧಾನಸಭೆಯಲ್ಲೂ ಇದೇ ನಡೆದಿದೆ. ರಶೀದ್ ಎಂಜಿನಿಯರ್ ಸಹೋದರ ಖುರ್ಷಿದ್ ಅಹಮದ್ ಶೇಖ್ ಭಿತ್ತಪತ್ರ ಹಿಡಿದು ಘೋಷಣೆ ಕೂಗಿದ್ದು ಕೋಲಾಹಲಕ್ಕೆ ಕಾರಣವಾಯಿತು. ಬಿಜೆಪಿ ಮತ್ತು ಪಿಡಿಪಿ ಸದಸ್ಯರ ನಡುವೆ ಕೈ ಕೈ ಮಿಲಾಯಿಸುವ ಹಂತ ತಲುಪಿದಾಗ ಸ್ಪೀಕರ್ ಅವರು ಬಿಜೆಪಿ ಸದಸ್ಯರನ್ನು ಮಾರ್ಷಲ್ ಮೂಲಕ ಹೊರಹಾಕಬೇಕಾಯಿತು. ಮಹಿಳಾ ಸದಸ್ಯೆ ಟೇಬಲ್ ಮೇಲೆ ನಿಂತಿದ್ದರಿಂದ ಮಹಿಳಾ ಮಾರ್ಷಲ್ ಬರಬೇಕಾಯಿತು.
ಇವೆಲ್ಲ ಸಂಸತ್ ನಿಯಮಗಳಿಗೆ ವಿರುದ್ಧ ಎಂದು ಕಂಡರೂ ಮತದಾರರನ್ನು ತೃಪ್ತಿ ಪಡಿಸಲು ಎಲ್ಲ ರಾಜಕೀಯ ಪಕ್ಷಗಳು ಪ್ರತಿಭಟನಾ ಮಾರ್ಗವನ್ನು ಅನುಸರಿಸುತ್ತಿದೆ. ಸಂಸತ್ತು ಮತ್ತು ವಿಧಾನಮಂಡಲಗಳು ಹಿಂದೆ ಮಾತಿನ ಅನುಭವ ಮಂಟಪಗಳಾಗಿದ್ದವು. ಈಗ ಮಾತುಗಳು ಮಹತ್ವ ಕಳೆದುಕೊಳ್ಳುತ್ತಿವೆ. ಹೀಗಾಗಿ ಅಧಿವೇಶನಗಳು ಹೆಚ್ಚು ದಿನ ನಡೆಯುವುದಿಲ್ಲ. ಸ್ಪೀಕರ್‌ಗೆ ಸಭೆಯನ್ನು ನಿಯಂತ್ರಿಸುವುದೇ ದೊಡ್ಡ ಕೆಲಸ. ಅರ್ಥಪೂರ್ಣ ಚರ್ಚೆ ನಡೆಯಬೇಕೆಂದು ಬಯಸಿದರೂ ಅದು ಕೈಗೂಡುತ್ತಿಲ್ಲ. ನಾವು ಜನಪ್ರತಿನಿಧಿಗಳಿಗೆ ಸಂಪೂರ್ಣ ವಾಕ್ ಸ್ವಾತಂತ್ರ್ಯ ನೀಡಿದ್ದೇವೆ. ಮುಕ್ತವಾಗಿ ಅವರು ಚರ್ಚೆ ನಡೆಸಬೇಕೆಂದು ಬಯಸುತ್ತೇವೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಕೈಕೈ ಮಿಲಾಯಿಸುವ ಹಂತ ತಲುಪಿದರೆ ಮಾತಿನ ಮಂಟಪ ಹೋಗಿ ಅಖಾಡಗಳಾಗಿ ಪರಿವರ್ತನೆಗೊಳ್ಳುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಕಾಶ್ಮೀರದಲ್ಲಿ ಇತ್ತೀಚೆಗೆ ಚುನಾವಣೆ ನಡೆದು ಹೊಸ ಸರ್ಕಾರ ಬಂದಿದೆ. ರಾಜ್ಯದ ಪ್ರಗತಿ ಯಾವ ದಿಕ್ಕಿನಲ್ಲಿರಬೇಕು ಎಂಬುದನ್ನು ಜನಪ್ರತಿನಿಧಿಗಳು ಚರ್ಚಿಸಬೇಕಿತ್ತು. ಅಭಿವೃದ್ಧಿಗೆ ಹೆಚ್ಚಿನ ನೆರವು ಕೋರಿ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸ ಕೈಗೊಳ್ಳಬೇಕಿತ್ತು. ಹಿಂದೆ ಇದ್ದ ಪ್ರೇಮ ಕಾಶ್ಮೀರ ಮತ್ತೆ ನನಸಾಗಬೇಕು ಎಂದರೆ ಜನಪ್ರತಿನಿಧಿಗಳ ಮನೋಧರ್ಮ ಬದಲಾಗಬೇಕು. ದೇಶದ ಎಲ್ಲ ರಾಜ್ಯಗಳ ಜನ ಕಾಶ್ಮೀರಕ್ಕೆ ಬಂದು ಹೋಗುವ ಹಾಗೆ ಶಾಂತಿಯುತ ವಾತಾವರಣ ಕಲ್ಪಿಸುವತ್ತ ಚರ್ಚೆಗಳು ನಡೆಯಬೇಕಿತ್ತು. ಭಾರತದ ಜನಮಾನಸದಲ್ಲಿ ಕಾಶ್ಮೀರ ವಿಶೇಷ ಸ್ಥಾನಮಾನ ಪಡೆದುಕೊಂಡಿದೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿಲ್ಲ. ಭಾರತ ಎಂದ ಕೂಡಲೇ ನೆನಪಿಗೆ ಬರುವುದು ಕಾಶ್ಮೀರವೇ ಹೊರತು ಬೇರೆ ಯಾವ ರಾಜ್ಯವೂ ಅಲ್ಲ.
ಈಗಲೂ ಕಾಲ ಮಿಂಚಿಲ್ಲ. ಶಾಸಕರು ಶಾಂತಚಿತ್ತದಿಂದ ಸದನದಲ್ಲಿ ಪಾಲ್ಗೊಂಡು ಕಾಶ್ಮೀರ ಕಣಿವೆಯಲ್ಲಿ ಜನ ಪ್ರಗತಿಯ ಹಾದಿಯಲ್ಲಿ ಸಾಗುವಂತೆ ಮಾಡುವುದು ಹೇಗೆ ಎಂಬುದರ ಬಗ್ಗೆ ಚಿಂತಿಸಬೇಕು. ಯಾವುದೇ ಹಿಂಸಾಕೃತ್ಯ ನಡೆಯದಂತೆ ಎಚ್ಚರವಹಿಸಬೇಕು. ಹೊರಗಿನ ಶಕ್ತಿಗಳು ರಾಜ್ಯ ಆಗುಹೋಗುಗಳಲ್ಲಿ ತಲೆಹಾಕದಂತೆ ಕ್ರಮ ಕೈಗೊಳ್ಳಬೇಕು.