ವಿಶ್ವಪಾರಂಪರಿಕ ಪಟ್ಟಿಗೆ ಲಕ್ಕುಂಡಿ ಸೇರಿಸಲು ಯತ್ನ
ಬೆಂಗಳೂರು: ವಿಶ್ವವಿಖ್ಯಾತ ಹಂಪಿಗೆ ಹೋಲಿಸಲಾಗುವ ಗದಗ ಜಿಲ್ಲೆಯ ಲಕ್ಕುಂಡಿಯನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸುವ ಗಂಭೀರ ಪ್ರಯತ್ನ ನಡೆದಿದೆ. ಇದಕ್ಕೆಂದೇ ನ. ೨೪ರಿಂದ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ವಿನಾಶದತ್ತ ಜಾರುತ್ತಿರುವ ಪ್ರಾಚ್ಯವಸ್ತು ಅವಶೇಷಗಳನ್ನು ಸಂಗ್ರಹಿಸುವ ಪ್ರಯತ್ನಕ್ಕೆ ಕೈ ಹಾಕಲಾಗಿದೆ. ಪ್ರತಿಮೆಗಳು ಶಿಲ್ಪಗಳು, ಕೆತ್ತನೆಯಿಂದ ಕೂಡಿದ ಶಿಲಾ ಕಂಬಗಳು, ಶಾಸನಗಳು, ಪುರಾತನ ನಾಣ್ಯಗಳನ್ನು ಕಳೆದುಕೊಂಡಿದ್ದೇವೆ. ಕೆಲವು ಬಟ್ಟೆ ಒಗೆಯುವ ಕಲ್ಲಾಗಿದ್ದರೆ, ಕೆಲವೆಡೆ ಜಾನುವಾರು ಕಟ್ಟುವ ಸ್ಥಳವಾಗಿವೆ. ಹಾಗಾಗಿ ಈ ಎಲ್ಲದರ ಬಗ್ಗೆ ಸ್ಥಳೀಯರಿಗೆ ಮಹತ್ವದ ಕುರಿತು ಮನವರಿಕೆ ಮಾಡಿಕೊಟ್ಟು ಅವರಲ್ಲಿರುವ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಲಾಗುವುದು ಎಂದರು.
ಪಲ್ಲಕ್ಕಿ ಹೊತ್ತು ಮನೆಮನೆಗೆ ತೆರಳಿ ಅವರಲ್ಲಿರುವ ಪ್ರಾಚ್ಯವಸ್ತುಗಳನ್ನು ಸರ್ಕಾರಕ್ಕೆ ನೀಡುವಂತೆ ಮನವಿ ಮಾಡಲಾಗುವುದು. ಕೆಲವು ಗುಡಿಗಳು ಹಾಗೂ ದೇವಾಲಯಗಳು ಒತ್ತುವರಿಯಾಗಿವೆ. ಅವುಗಳನ್ನು ಬಿಡಿಸಿಕೊಂಡು ಅಲ್ಲಿದ್ದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಸಚಿವರು ಹೇಳಿದರು. ಲಕ್ಕುಂಡಿಯಲ್ಲಿ ೧೦೧ ಗುಡಿಗಳು ಹಾಗೂ ೧೦೧ ಬಾವಿಗಳು, ಟಂಕಸಾಲೆ ಇರುವುದು ಇಲಾಖೆ ಗಮನಕ್ಕೆ ಬಂದಿದೆ. ಅತಿಕ್ರಮಣ, ನಿರ್ಲಕ್ಷ್ಯದಿಂದ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡಿದ್ದೇವೆ. ಅವೆಲ್ಲವನ್ನೂ ಪಡೆದು ಅಭಿವೃದ್ಧಿಪಡಿಸಿದರೆ ಮಾತ್ರ ಲಕ್ಕುಂಡಿ ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯ ಎಂದೂ ಪಾಟೀಲ್ ವಿವರಿಸಿದರು.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ ಐಹೊಳೆಯಲ್ಲಿ ಒತ್ತುವರಿಯಾಗಿದ್ದ ಎಂಟು ದೇವಾಲಯಗಳನ್ನು ಬಿಡಿಸಿಕೊಳ್ಳಲು ಅಲ್ಲಿದ್ದವರಿಗೆ ಪರ್ಯಾಯವಾಗಿ ೧೩ ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಎಷ್ಟೋ ಶಾಸನಗಳು ಇಂದಿಗೂ ತಿಪ್ಪೆಗುಂಡಿಯಲ್ಲಿವೆ. ಇವೆಲ್ಲದರ ಐತಿಹಾಸಿಕ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸಕ್ಕೆ ಪ್ರವಾಸೋದ್ಯಮ ಮತ್ತು ಪ್ರಾಚ್ಯವಸ್ತು ಇಲಾಖೆ ಜತೆಗೂಡಿ ಮಾಡುತ್ತಿವೆ ಎಂದರು.