ವೀರನಗೌಡರ ಮನೆ ಮೇಲೆ ಐಟಿ ದಾಳಿ
ಕೊಪ್ಪಳ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಈಚೆಗೆ ಭೇಟಿ ನೀಡಿದ್ದ ಕಿಡದಾಳದ ಶಾರದಾ ಇಂಟರ್ ನ್ಯಾಷನಲ್ ಸ್ಕೂಲ್ ಮಾಲೀಕ, ವಿದ್ಯುತ್ ಗುತ್ತಿಗೆದಾರ ವೀರನಗೌಡ ಪಾಟೀಲ ಅವರ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿನ ನಿವಾಸದ ಮೇಲೆ ಬುಧವಾರ ಬೆಳಗ್ಗೆಯೇ ಐಟಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ಮಾಡುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಗವಿಸಿದ್ಧೇಶ್ವರ ಮಹಾ ರಥೋತ್ಸವಕ್ಕೆ ಆಗಮಿಸಿದ್ದ ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ದಾಳಿಗೊಳಗಾದ ವೀರನಗೌಡ ಪಾಟೀಲರ ತಾಲ್ಲೂಕಿನ ಕಿಡದಾಳ ಗ್ರಾಮದ ಶಾರದಾ ಇಂಟರ್ ನ್ಯಾಷನಲ್ ಶಾಲೆಗೆ ಭೇಟಿ ನೀಡಿದ್ದರು. ಇದಾದ ಕೆಲವೇ ದಿನಗಳ ಹಿಂದೆಯಷ್ಟೇ ಐಟಿ ದಾಳಿ ನಡೆದಿರುವುದು ಅನುಮಾನ ಹುಟ್ಟು ಹಾಕಿದೆ.
ಕೊಪ್ಪಳ, ಹುಬ್ಬಳ್ಳಿ ಹಾಗೂ ಗೋವಾ ಮೂಲದ ಅಧಿಕಾರಿಗಳಿಂದ ದಾಳಿ ನಡೆದಿದ್ದು, ಮಂಗಳವಾರವೇ ಹೊಸಪೇಟೆಯಲ್ಲಿ ಠಿಕಾಣಿ ಹೂಡಿದ್ದ ಅಧಿಕಾರಿಗಳು ಬೆಳಗ್ಗೆ ೯ಕ್ಕೆ ವೇಳೆಗೆ ವೀರನಗೌಡ ಪಾಟೀಲ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಪಾಟೀಲ ಮನೆಯಲ್ಲಿ ಇದ್ದರು ಎನ್ನಲಾಗಿದ್ದು, ಅವರಿಗೆ ಸಂಬಂಧಿಸಿದ ವಿವಿಧ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ, ನಡೆಸಿದರು. ವಿದ್ಯುತ್ ಗುತ್ತಿಗೆದಾರರಾಗಿದ್ದು, ಹಲವೆಡೆ ಕಾಮಗಾರಿ ನಡೆಸುತ್ತಿದ್ದಾರೆ. ಆದಾಯ ಮೀರಿ ಆಸ್ತಿ ಹೊಂದಿದ್ದರಿಂದ ದಾಳಿ ನಡೆದಿದೆ ಎಂಬ ಗುಮಾನಿ ಎದ್ದಿದೆ.