ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವೀರವನಿತೆಗೆ ತೂಕ ತಪ್ಪಿಸಿದ ಒಲಿಂಪಿಕ್ಸ್

02:30 AM Aug 08, 2024 IST | Samyukta Karnataka

ಹರಿಯಾಣ ಮೂಲದ ವಿನೇಶ್ ಪೋಗಟ್ ಭಾರತದ ವೀರ ವನಿತೆ ಎನ್ನಲು ಸಕಾರಣಗಳು ಹಲವಾರು. ಮಹಿಳಾ ಕುಸ್ತಿ ಪಟುಗಳ ಪೈಕಿ ಈಕೆಯ ವಿರುದ್ಧ ಸೆಣೆಸುವ ಎದುರಾಳಿಗಳೇ ಕಡಿಮೆ. ಇದ್ದವರು ಕೂಡಾ ಶರಣಾಗತಿ ಜಪ ಪಠಿಸಿ ಹೋದವರೆ. ಇನ್ನು ಅನ್ಯಾಯದ ವಿರುದ್ಧ ಸಿಡಿದೇಳುವುದಂತೂ ಈಕೆಗೆ ರಕ್ತಕ್ಕೆ ಅಂಟಿದ ಗುಣ. ಕೇವಲ ವರ್ಷದ ಹಿಂದೆ ನವದೆಹಲಿಯ ಜಂತರ್‌ಮಂತರ್‌ನಲ್ಲಿ ಪೊಲೀಸರ ದೌರ್ಜನ್ಯಕ್ಕೆ ಒಳಗಾಗಿ ನಜ್ಜುಗುಜ್ಜಾಗಿದ್ದನ್ನು ದೇಶವೇ ಮರೆತಿಲ್ಲ. ಭಾರತೀಯ ಕುಸ್ತಿ ಪಟುಗಳ ಮಹಾಮಂಡಳಿ ಅಧ್ಯಕ್ಷ ಬ್ರಿಜ್‌ಭೂಷಣ್ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಕೃತ್ಯವನ್ನು ಸಹಿಸಲಾಗದೇ ಸಮಾನಮನಸ್ಕರ ಜೊತೆ ಬೀದಿ ಹೋರಾಟಕ್ಕೆ ಇಳಿದ ಮಹಿಳೆ. ದೇಶ ವಿದೇಶಗಳಲ್ಲಿ ಜಯಭೇರಿ ಸಾಧಿಸಿ ಪಡೆದಿದ್ದ ನಾನಾ ಪದಕಗಳನ್ನು ಪ್ರತಿಭಟನೆಯ ಸಲುವಾಗಿ ವಾಪಸ್ ಕೊಡಲು ಮುಂದಾದ ದಿಟ್ಟಗಿತ್ತಿ. ಇಷ್ಟೆಲ್ಲಾ ಮಾನಸಿಕ ಕ್ಲೇಶದ ನಡುವೆಯೂ ಪ್ಯಾರಿಸ್ ಒಲಿಂಪಿಕ್ಸ್ ಪಂದ್ಯಾವಳಿಯ ಕುಸ್ತಿ ಸ್ಪರ್ಧೆಗೆ ಸಜ್ಜಾಗಿದ್ದು ಈಕೆಯ ಏಕಾಗ್ರತೆಗೆ ಹಿಡಿದ ಕೈಗನ್ನಡಿ. ಒಲಿಂಪಿಕ್ಸ್ ಅಂಕಣದಲ್ಲಿ ಈಕೆಯನ್ನು ಸೋಲಿಸಲು ಅರ್ಹರಾದ ಕುಸ್ತಿಪಟುವೇ ಕಾಣಸಿಗಲಿಲ್ಲ. ಒಬ್ಬರ ನಂತರ ಒಬ್ಬರಂತೆ ವಿದೇಶಿ ಪಟುಗಳು ಮಣ್ಣುಮುಕ್ಕಿದ ಮೇಲೆ ಇನ್ನೇನು ಭಾರತಕ್ಕೆ ಒಲಿಂಪಿಕ್ಸ್ ಬಂಗಾರದ ಪದಕ ಸಿಕ್ಕೇ ಬಿಟ್ಟಿತು ಎಂದು ದೇಶಕ್ಕೆ ದೇಶವೇ ಉದ್ಘಾರವೆತ್ತುವ ಸನ್ನಿವೇಶದಲ್ಲಿ ಮುಳುಗಿರುವಾಗ ಕನಸಿನಲ್ಲೂ ಎಣಿಸಲಾರದ ಘಟನೆಯೊಂದು ಜರುಗಿ ಪೋಗಟ್‌ಗೆ ಗಗನವೂ ಎಲ್ಲೋ ಭೂಮಿಯೋ ಎಲ್ಲೋ ಎಂಬ ಸ್ಥಿತಿ ಸೃಷ್ಟಿಯಾಗಿ ಒಲಿಂಪಿಕ್ಸ್ ಪಂದ್ಯಾವಳಿಯಿಂದಲೇ ನಿರ್ಗಮಿಸಬೇಕಾಗಿ ಬಂದದ್ದು ಪರಿಸ್ಥಿತಿಯ ಕ್ರೂರ ವಿಡಂಬನೆ.
ಪೋಗಟ್ ಈ ಪಂದ್ಯಾವಳಿಯಲ್ಲಿ ತಪ್ಪು ಮಾಡಿದ ಕುಸ್ತಿಪಟುವಲ್ಲ. ಐವತ್ತು ಕೆಜಿ ತೂಕದ ಶ್ರೇಣಿಯ ಪಂದ್ಯಾವಳಿಗೆ ಮುನ್ನ ಒಲಿಂಪಿಕ್ಸ್ ನಿಯಮಾವಳಿಯಂತೆ ಆಟಗಾರರ ದೇಹದ ತೂಕ ಪರೀಕ್ಷೆಯ ಸಮಯದಲ್ಲಿ ಅಗ್ನಿಪರೀಕ್ಷೆಯಂತಹ ಘಟನೆಗೆ ಗುರಿಯಾಗಬೇಕಾದದ್ದು, ಈ ಘಟನಾವಳಿಯ ದಾರುಣ ಮುಖ. ಐವತ್ತು ಕೆಜಿ ತೂಗಬೇಕಾಗಿದ್ದ ಪೋಗಟ್ ಸರಿಸುಮಾರು ನೂರು ಗ್ರಾಂ ಹೆಚ್ಚಿಗೆ ತೂಕವಿದ್ದದ್ದನ್ನು ವಿದ್ಯುನ್ಮಾನ ಯಂತ್ರಗಳು ದಾಖಲಿಸಿದ ನಂತರ ಇದೇನಿದು ವಿಧಿಯ ವಿಚಿತ್ರ ಆಟ ಎಂದು ಮೂಗಿನ ಮೇಲೆ ಬೆರಳಿಡುವಂತಹ ಸನ್ನಿವೇಶ ಸೃಷ್ಟಿಯಾಯಿತು. ಕ್ರೀಡಾಪಟುಗಳಿಗೆ ದೇಹದ ತೂಕ ದೈಹಿಕ ಸಾಮರ್ಥ್ಯ ಯಾವತ್ತಿಗೂ ನಿರ್ಣಾಯಕ. ಹೀಗಾಗಿಯೇ ಆಟಗಾರರಿಗೆ ವಿಚಿತ್ರ ರೀತಿಯ ಪಥ್ಯ. ಪಂದ್ಯಾವಳಿಯ ಹಿಂದಿನ ದಿನ ಐವತ್ತರ ಮೇಲೆ ಎರಡು ಕೆಜಿ ಹೆಚ್ಚು ತೂಗುತ್ತಿದ್ದ ಅಂಶ ಪೋಗಟ್‌ಗೆ ತಿಳಿದ ಮೇಲೆ ರಾತ್ರಿಯೆಲ್ಲಾ ಜಾಗರಣೆ ಮಾಡಿ ಸೈಕಲ್ ತುಳಿದು, ಅಂಗಾಂಗ ಕಸರತ್ತು ಮಾಡಿ, ಓಡಿ ಓಡಿ ಸುಸ್ತಾದರೂ ನೀರು ಕುಡಿಯದೇ, ಆಹಾರ ಸೇವಿಸದೇ, ಮೈಯೆಲ್ಲಾ ಕಣ್ಣಾದ ಪರಿಣಾಮವೇ ಸುಮಾರು ಒಂದು ಕೆ.ಜಿ. ಒಂಬೈನೂರು ಗ್ರಾಂ ತೂಕ ಇಳಿಸಲು ಸಾಧ್ಯವಾಯಿತು. ಜೊತೆಗೆ ತಲೆಕೂದಲನ್ನು ಕತ್ತರಿಸಿ ಇನ್ನಷ್ಟು ತೂಕವನ್ನು ಕಡಿಮೆ ಮಾಡಿಕೊಳ್ಳುವ ಕಸರತ್ತು ನಡೆಯಿತು. ಆದರೂ ತಕ್ಕಡಿಯಲ್ಲಿ ಪೋಗಟ್ ತೂಕ ಐವತ್ತು ಕೆಜಿಯ ಮೇಲೆ ಇತ್ತು. ಇದರ ಪರಿಣಾಮ ಒಲಿಂಪಿಕ್ಸ್ ಅಧಿಕಾರಿಗಳ ನಿರ್ದಾಕ್ಷಿಣ್ಯ ತೀರ್ಮಾನ. ತೂಕ ಹೆಚ್ಚಿರುವ ಪರಿಣಾಮವಾಗಿ ಕುಸ್ತಿ ಪಂದ್ಯದಲ್ಲಿ ಪಾಲ್ಗೊಳ್ಳಲು ಪೋಗಟ್ ಅನರ್ಹ ಎಂದು ಘೋಷಿಸುತ್ತಿದ್ದಂತೆಯೇ ಭಾರತದಲ್ಲಿ ಕರಾಳ ಸನ್ನಿವೇಶ ನಿರ್ಮಾಣವಾಗಿ ಒಲಿಂಪಿಕ್ ಕ್ರೀಡಾಕೂಟದ ಆಡಳಿತ ವ್ಯವಸ್ಥೆಯ ಬಗ್ಗೆಯೇ ಆಕ್ರೋಶ.
ನಿಜ, ನೂರು ಗ್ರಾಂ ತೂಕ ಹೆಚ್ಚಿರಲಿ ಅಥವಾ ಕಡಿಮೆಯೇ ಇರಲಿ ಮನುಷ್ಯನ ದೇಹಕ್ಕೆ ಅದೇನೂ ನಿರ್ಣಾಯಕವಾಗಲಾರದು ಎಂಬುದು ಸಾಮಾನ್ಯರ ತಿಳಿವಳಿಕೆ. ಗುಲಗಂಜಿ ತೂಕ ಜನ ಭಾವಿಸುವ ಈ ಅಂಶವನ್ನು ಕ್ರೀಡಾಕೂಟದ ಅಧಿಕಾರಿಗಳು ಪರಿಗಣಿಸುವುದಿಲ್ಲ. ಒಲಿಂಪಿಕ್ಸ್ ನಿಯಮಾವಳಿಯೇ ಹಾಗೆ. ಇಂತಹ ಕ್ರೀಡಾಕೂಟಗಳಲ್ಲಿ ಸ್ವಜನಪಕ್ಷಪಾತ, ವರ್ಣಭೇದ ಧೋರಣೆ, ನಾವು ಮತ್ತು ನಮ್ಮವರು ಎಂಬ ಸಂಸ್ಕೃತಿಯ ಪೋಷಣೆ ಇಲ್ಲವೇ ರಾಗದ್ವೇಷಗಳನ್ನು ಆಧರಿಸಿದ ನಿರ್ಣಯಗಳಿಗೆ ಅವಕಾಶವಾಗುವ ಸಾಧ್ಯತೆಗಳು ಕಡಿಮೆ. ಏಕೆಂದರೆ ಒಲಿಂಪಿಕ್ಸ್ ಎಲ್ಲಾ ದೇಶಗಳವರು ಪಾಲ್ಗೊಂಡು ಸಂಘಟಿಸುವ ಆಟ. ಫ್ರಾನ್ಸ್ ದೇಶದವರೇ ಈ ಕೂಟದ ಅಭ್ಯಾಗತರಾಗಿದ್ದರೂ, ಅವರ ನಿರ್ಣಯವೇ ಅಂತಿಮವಾಗಲಾರದು ಎಂಬುದು ಜನ ಜಗತ್ತಿನಾದ್ಯಂತ ಇಟ್ಟಿರುವ ನಂಬಿಕೆ. ಈ ನಂಬಿಕೆ ಹುಸಿಯಾಗುವಂತಹ ಬೆಳವಣಿಗೆಗಳು ನಡೆದಿದ್ದರೆ ಆ ಮಾತು ಬೇರೆ. ಇದಕ್ಕೆ ಸಮಾನಾಂತರವಾಗಿ ಭಾರತದ ಲೋಕಸಭೆಯಲ್ಲಿ ಪಕ್ಷಭೇದ ಮರೆತು ಪೋಗಟ್ ಸಾಧನೆಯನ್ನು ಗುರುತಿಸಿದ ಸಂಸದರು ಪೋಗಟ್ ಪರವಾಗಿ ದೇಶ ನಿಲ್ಲಬೇಕು ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದು ನಿಜಕ್ಕೂ ಭಾರತೀಯರ ಒಮ್ಮತದ ಉದ್ಘಾರದಂತಿತ್ತು.
ಇದರ ಮಕುಟ ಮಣಿಯಂತೆ ಪ್ರಧಾನಿ ನರೇಂದ್ರ ಮೋದಿಯವರು `ಪೋಗಟ್ ನೀನು ವೀರವನಿತೆ ಸೋಲರಿಯದ ಸಾಹಸಿ ಭಾರತದ ಹೆಮ್ಮೆ, ಭಾರತೀಯರು ನಿನ್ನ ಶ್ರೀಮುಡಿಯ ಪ್ರತೀಕ. ಪ್ಯಾರಿಸ್‌ನ ಘಟನೆಯಿಂದ ಧೃತಿಗೆಡುವುದು ಬೇಡ. ನೀನು ಸಾಮ್ರಾಜ್ಞಿಗಳಿಗೆ ಸಾಮ್ರಾಜ್ಞಿ. ಅಗ್ರ ವೀರಾಗ್ರಣಿ' ಎಂಬ ಸಂದೇಶವನ್ನು ಹಂಚಿಕೊಂಡು ಬೆನ್ನುತಟ್ಟಿರುವುದು ನಿಜಕ್ಕೂ ಭಾರತೀಯರ ಮಟ್ಟಿಗೆ ಸಮಾಧಾನದ ಸಂಗತಿ.
ಪೋಗಟ್ ಪ್ರಶ್ನಾತೀತ ವೀರವನಿತೆ ಎಂಬ ಬಗ್ಗೆ ಈಗ ವಿವರಣೆಗಳು ಅನಗತ್ಯ. ಪೋಗಟ್ ಕಹಿ ಅನುಭವದಿಂದ ಕಲಿಯಬೇಕಾದ ಪಾಠಗಳು ಮಾತ್ರ ಹಲವಾರು. ಆಟದ ಮುಂಚೆ ಕ್ರೀಡಾಪಟುಗಳು ವಹಿಸಬೇಕಾದ ಎಚ್ಚರ, ಕ್ರೀಡಾ ಮೇಲ್ವಿಚಾರಕರ ಕಣ್ಗಾವಲು, ಇಂತಹ ಪರಿಶ್ರಮಕ್ಕೆ ಬೇಕಾದಂತಹ ಪೂರ್ವ ಸಿದ್ಧತೆಗೆ ಸರ್ಕಾರದ ಮಟ್ಟದಲ್ಲಿ ಒದಗಿಸಬೇಕಾದ ಸೌಕರ್ಯಗಳು ಬಹಳ ಮುಖ್ಯ. ಇದಕ್ಕಿಂತಲೂ ಮುಖ್ಯವಾಗಿ ಸರ್ಕಾರದ ಮೂಲಕ ಕಾರ್ಯನಿರ್ವಹಿಸುವ ಕುಸ್ತಿಪಟುಗಳ ಮಹಾಸಂಘಟನೆಯಂತಹ ಸಂಘಸಂಸ್ಥೆಗಳಲ್ಲಿ ಕ್ರೀಡಾ ಸ್ಫೂರ್ತಿಗೆ ಪೂರಕವಾದ ವಾತಾವರಣವನ್ನು ಪಾರದರ್ಶಕ ರೀತಿಯಲ್ಲಿ ಏರ್ಪಡಿಸಬೇಕಾದ ವ್ಯವಸ್ಥೆ ಬಹಳ ಮುಖ್ಯವೆಂಬುದನ್ನು ಗಮನಿಸಬೇಕು.
ರಾಜಕೀಯ ಹಸ್ತಕ್ಷೇಪದಿಂದಾಗಿ ಆರು ಬಾರಿ ಸಂಸದರಾಗಿದ್ದ ಕಾರಣಕ್ಕಾಗಿ ನಿರೀಕ್ಷೆಗೂ ಮೀರಿದ ಪ್ರಭಾವ ಬೆಳೆಸಿಕೊಂಡಿದ್ದ ಬ್ರಿಜ್ ಭೂಷಣ್ ಎಂಬ ಕುಸ್ತಿಪಟುವಿನ ಕೈಯಲ್ಲಿ ನರಳಿದ್ದ ಪೋಗಟ್ ಹಾಗೂ ಇನ್ನಿತರ ಮಹಿಳಾ ಪಟುಗಳು ಕೈತಪ್ಪಿ ಹೋಗಿದ್ದ ಏಕಾಗ್ರತೆಯನ್ನು ರೂಢಿಸಿಕೊಂಡು ಒಲಿಂಪಿಕ್ಸ್‌ನಲ್ಲಿ ಸಿಂಹನಾದಗೈದಿರುವುದನ್ನು ಪರಿಗಣಿಸಿ ಭಾರತ ಸರ್ಕಾರ ದೇಶದ ಪ್ರತಿಷ್ಠಿತ ಪುರಸ್ಕಾರಗಳನ್ನು ಕೊಡುವ ಮೂಲಕ ಯುವಜನರಲ್ಲಿ ಆತ್ಮವಿಶ್ವಾಸ ಹಾಗೂ ಆತ್ಮಸ್ಥೈರ್ಯ ಹೆಚ್ಚುವಂತೆ ಮಾಡುವುದು ಸರ್ವತೋಮುಖ ದೃಷ್ಟಿಕೋನದಿಂದ ಆಗಲೇಬೇಕಾದ ಕೆಲಸ. ಇಂತಹ ಕಾಯಕಗಳು ಜನಾದೇಶಕ್ಕಿಂತಲೂ ಮಿಗಿಲು ಹಾಗೂ ದೇಶ ಮೊದಲು ಎಂದು ನಂಬಿರುವವರಿಗೆ ಒಂದು ರೀತಿಯ ಗೌರವ ಪುರಸ್ಕಾರವೂ ಹೌದು. ಒಟ್ಟಾರೆ ಪೋಗಟ್ ಭಾರತದ ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ ಮೊದಲಾದ ವೀರಾಗ್ರಣಿಗಳ ಅಪರಾವತಾರ.

Next Article