ವೃದ್ಧವೀರ ಕುವರಸಿಂಹ
ಓ ಬ್ರಿಟಿಷರೇ, ಓಡಿ ಹೋಗಿ ಲಂಡನ್ನಿಗೆ. ಲೂಟಿ ಮಾಡಿದಿರಿ, ಅನ್ಯಾಯ ಮೆರೆದಿರಿ, ಅಕ್ರಮವೆಸಗಿ ನಕ್ಕಿರಲ್ಲವೇ? ನಿಮ್ಮ ದುಷ್ಟತನಕ್ಕೆ ಉತ್ತರಿಸುವ ಕಾಲ ಬಂದಿದೆ. ಎದೆಯಲ್ಲಿ ಉರಿಯುತ್ತಿರುವ ಬೆಂಕಿಯ ಲೆಕ್ಕ ತೀರಿಸಲು ನಮ್ಮ ದೊರೆ ಕುವರ ಸಿಂಹ ಬರುತ್ತಿದ್ದಾರೆ. ಓಡಿ ಬ್ರಿಟಿಷರೇ, ಓಡಿ' ಎಂಬ ಗೀತೆಗೆ ದನಿಗೂಡಿಸಿದ್ದ ಬಿಹಾರದ ಜಗದೀಶಪುರ ಆಂಗ್ಲರ ಪಾಲಿಗೆ ಕಬ್ಬಿಣದ ಕಡಲೆ. ಸ್ವಾತಂತ್ರ‍್ಯ ಸಂಗ್ರಾಮದ ನಿರ್ಣಾಯಕ ಘಟ್ಟವೆಂದೇ ಹೆಸರಾಗಿರುವ ೧೮೫೭ರ ಹೋರಾಟದಲ್ಲಿ ಜಗದೀಶಪುರದ ಕೆಚ್ಚು ಕ್ರಾಂತಿಯ ಔನ್ನತ್ಯಕ್ಕೆ ಸಾಕ್ಷಿ. ಸರ್ವಾಧಿಕಾರಿಗಳಂತೆ ಮೆರೆದಾಡಿ ದೇಸೀ ಸಂಸ್ಕೃತಿಯ ನಾಶ ಬಯಸಿದ್ದ ಆಂಗ್ಲರನ್ನು ಹೊರದಬ್ಬಲು ನಡೆದ ಸಂಘಟಿತ ಪ್ರಯತ್ನ ಮುಗಿಲು ಮುಟ್ಟಿದ್ದ ಕಾಲದಲ್ಲಿ ವೃದ್ಧವೀರ ಕುವರ ಸಿಂಹರ ಸಾಹಸ ಚೇತೋಹಾರಿ.
ಕುದುರೆಯೇರಿ ಸಾಕ್ಷಾತ್ ಮೃತ್ಯುವಿನಂತೆ ಮೇಲೆರಗಿ ಬಂದ ವಯೋವೃದ್ಧನ ತೇಜಸ್ವಿ ಪರಾಕ್ರಮದೆದುರು ನಮ್ಮ ಸೈನ್ಯ ಕ್ಷೀಣವಾಯಿತು. ಎಂಬತ್ತರ ಹರೆಯದಲ್ಲೂ ರಣಾಂಗಣದಲ್ಲಿ ದಿನಪೂರ್ತಿ ಓಡಾಡಿ ಶತ್ರುಗಳನ್ನು ಚೆಂಡಾಡಿದ ಈತ ಯುವಕನಾಗಿದ್ದರೆ ೧೮೫೭ಕ್ಕೆ ನಮ್ಮನ್ನು ಲಂಡನ್ನಿಗಟ್ಟಿ, ಸ್ವಯಂ ಇಂಗ್ಲೆಂಡಿನ ರಾಜನಾಗಿ ಮೆರೆದಾಡುತ್ತಿದ್ದ' ಎಂಬ ಬ್ರಿಟಿಷ್ ಇತಿಹಾಸಕಾರ ಜಾರ್ಜ್ ಟ್ರೆವೆಲ್ಯನ್ ಅಭಿಮಾನದ ಮಾತುಗಳಿಗೆ ಭಾಜನರಾದ ವಿಶ್ವದ ಸರ್ವಶ್ರೇಷ್ಠ ಹೋರಾಟಗಾರ ರಾಜಾ ಕುವರಸಿಂಹ, ಯೂನಿಯನ್ ಜ್ಯಾಕ್ ಧ್ವಜವನ್ನು ಕೆಳಗಿಳಿಸಿ ಸ್ವಾತಂತ್ರ‍್ಯ ಘೋಷಿಸಿದ ಮಹಾಪರಾಕ್ರಮಿ ಅರಸ. ಪ್ರಜಾವತ್ಸಲ ರಾಜಾ ಸಾಹಬಜಾದಾ - ಪಂಚರತ್ನ ದೇವಿಗೆ ಬಿಹಾರದ ಜಗದೀಶಪುರದಲ್ಲಿ ಜನಿಸಿದ ಕುವರಸಿಂಹ ಬಾಲ್ಯದಿಂದಲೇ ಅನ್ಯಾಯದ ವಿರುದ್ಧ ಸಿಡಿದೇಳುವ ಸ್ವಭಾವದ ವ್ಯಕ್ತಿ. ತಕ್ಕಡಿ ಹಿಡಿದು ವ್ಯಾಪಾರಕ್ಕೆಂದು ಬಂದು ಆಡಳಿತಾತ್ಮಕ ವಿಷಯಗಳಲ್ಲಿ ಮೂಗುತೂರಿಸಿ ಒಂದೊಂದೇ ರಾಜ್ಯಗಳನ್ನು ವಶಪಡಿಸಿ ಭಾರತವನ್ನು ಗುಲಾಮಗಿರಿಗೆ ತಳ್ಳುವ ಯೋಜಿತ ಪ್ರಯತ್ನವನ್ನು ತಾರುಣ್ಯಾವಸ್ಥೆಯಲ್ಲಿ ಪ್ರಶ್ನಿಸಿದ ಕುವರಸಿಂಹ, ಮುಂದೊಮ್ಮೆ ಬ್ರಿಟಿಷರ ವಿರುದ್ಧ ಹೋರಾಟ ಅನಿವಾರ್ಯವೆಂದು ಮನಗಂಡು ಸೈನ್ಯ ತರಬೇತಿಯಲ್ಲಿ ತೊಡಗಿಸಿದರು. ಕತ್ತಿವರಸೆ ಮತ್ತು ಕುದುರೆ ಸವಾರಿಯಲ್ಲಿ ಪ್ರಾವೀಣ್ಯ ಸಾಧಿಸಿ ರಾಜ್ಯದ ಆಡಳಿತ ಸೂತ್ರದ ಬಗ್ಗೆ ಅರಿಯುವ ಹೊತ್ತಲ್ಲಿ ತಂದೆಯನ್ನು ಕಳೆದುಕೊಂಡ ಕುವರಸಿಂಹ, ನಾಡಿನ ಸರ್ವತೋಮುಖ ಅಭಿವೃದ್ಧಿಯ ನೀಲನಕಾಶೆ ಬರೆದಾಗ ಬ್ರಿಟಿಷರ ಕತ್ತಿ ನೆತ್ತಿಯ ಮೇಲಿತ್ತು.
ಬ್ರಿಟಿಷರೊಡನೆ ಸ್ನೇಹ ಕಳೆದುಕೊಳ್ಳದೆ ಒಳಗಿಂದೊಳಗೆ ಸಂಘಟನೆಯಲ್ಲಿ ತೊಡಗಿಸಿದ ಕುವರಸಿಂಹ ಸೈನ್ಯವಿಸ್ತಾರದಲ್ಲಿ ಹಿಂದೆ ಬೀಳಲಿಲ್ಲ. ತನ್ನ ನಂಬಿಕೆಯ ಭಂಟರೊಂದಿಗೆ ಸೇರಿ ಯುವಕರಲ್ಲಿ ದೇಶಭಕ್ತಿ ಜಾಗೃತಗೊಳಿಸಿ ಶಿವಾಜಿ ಮಹಾರಾಜರ ಗೆರಿಲ್ಲಾ ಯುದ್ಧತಂತ್ರವನ್ನು ಬೋಧಿಸಿದರು. ಬಯಲಲ್ಲೂ, ಕಾಡುಮೇಡುಗಳಲ್ಲೂ ಎದುರಾಗುವ ಶಸ್ತ್ರಸಜ್ಜಿತ ಬ್ರಿಟಿಷ್ ಅಧಿಕಾರಿಗಳನ್ನೆದುರಿಸಲು ಮಾನಸಿಕವಾಗಿ ತನ್ನ ತಂಡವನ್ನು ಸಿದ್ಧಗೊಳಿಸಿದ ಕುವರಸಿಂಹರು ವಾಸ್ತವದಲ್ಲಿ ಸವಾಲೆದುರಿಸಿದ್ದು ತನ್ನ ಜೀವನದ ಸಂಧ್ಯಾಕಾಲದಲ್ಲಿ. ಡಾಲ್ ಹೌಸಿಯ ತಲೆಬುಡವಿಲ್ಲದ ನಿರ್ಣಯದ ವಿರುದ್ಧ ತಿರುಗಿಬಿದ್ದ ಸಂಸ್ಥಾನಗಳ ಮುಖ್ಯಸ್ಥರು, ಭಾರತೀಯ ಶಾಸ್ತ್ರನಂಬಿಕೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ತರುವ ಬ್ರಿಟಿಷರ ಯೋಜನೆಯನ್ನು ಮಾನ್ಯಮಾಡಲಿಲ್ಲ. ನಾನಾಸಾಹೇಬರ ನೇತೃತ್ವದಲ್ಲಿ ರಾಷ್ಟçವ್ಯಾಪಿ ಆಂದೋಲನದ ಸಿದ್ಧತೆಗಳು ನಡೆದಾಗ ಜೊತೆಯಾದ ಕುವರಸಿಂಹ ಸ್ವರಾಜ್ಯದ ಶಪಥಗೈದರು. ವಯಸ್ಸು ಅದಾಗಲೇ ಎಂಭತ್ತು ಸಮೀಪಿಸಿದ್ದರೂ ರಾಷ್ಟ್ರರಕ್ಷಣೆಯ ಪ್ರಶ್ನೆ ಬಂದಾಗ ಎದೆಗೊಟ್ಟು ನಿಲ್ಲಬಲ್ಲ ಛಾತಿ ಬೆಳೆಸಿದ ವೃದ್ಧವೀರನಿಗೆ ಸದಾ ಸ್ವಾತಂತ್ರ‍್ಯದ ಕನವರಿಕೆ. ಮಂಗಲಪಾಂಡೆಯಿಂದ ಆರಂಭವಾದ ಕ್ರಾಂತಿ ದೇಶದೆಲ್ಲೆಡೆ ವ್ಯಾಪಿಸಿ ಜಗದೀಶಪುರದಲ್ಲೂ ವಿಜೃಂಭಿಸಿತು. ಕ್ರಾಂತಿಯನ್ನು ಹತ್ತಿಕ್ಕಲು ಶತಪ್ರಯತ್ನ ನಡೆಸಿದ ಸರಕಾರ ಮೂವರು ಅಧಿಕಾರಗಳನ್ನು ಕಳುಹಿಸಿದರೂ ಕುವರಸಿಂಹರ ಸೈನ್ಯವನ್ನು ಗೆಲ್ಲುವುದು ಕನಸಿನ ಮಾತಾಗಿತ್ತು. ಯಾವ ದಿಕ್ಕಿನಿಂದ ದಾಳಿ ನಡೆಸಿದರೂ ಪ್ರತಿದಾಳಿ ನಡೆಸುವ ಸಾಮರ್ಥ್ಯಶಾಲಿ ಯುವಕರ ಸಮೂಹ ಆಂಗ್ಲರಿಗೆ ಅಭೇದ್ಯ ಕೋಟೆಯಾಯಿತು. ಅಶ್ವಾರೋಹಿ ನಾಯಕನ ಮಿಂಚಿನ ದಾಳಿಗೆ ಬ್ರಿಟಿಷ್ ಸೈನ್ಯ ಬಳಲಿತು. ಖಡ್ಗದ ಏಟು, ಬಂದೂಕಿನ ಪ್ರಖರತೆಗೆ ಒಬ್ಬೊಬ್ಬರೇ ಬಲಿಯಾದರೂ ಹಠಬಿಡದ ಬ್ರಿಟಿಷರು ಪೂಜಾಮಂದಿರಗಳನ್ನು, ಹೊಲಗದ್ದೆಗಳನ್ನು ನಾಶಪಡಿಸಿದರು. ಅದುವರೆಗೆ ಈ ಹೋರಾಟವನ್ನು ರಾಜರ ಅಸ್ತಿತ್ವದ ಪ್ರಶ್ನೆಯೆಂದೇ ಭಾವಿಸಿದ್ದ ಜನಸಾಮಾನ್ಯರು ದೇವಾಲಯಗಳ ಧ್ವಂಸದಿಂದ ರೊಚ್ಚಿಗೆದ್ದು ಲಂಡನ್ ಗದ್ದುಗೆಯ ವಿರುದ್ಧ ಗುಡುಗಿದರು. ಸಂಸ್ಕೃತಿ ಮತ್ತು ಧರ್ಮವೇ ಉಸಿರಾಗಿದ್ದ ಹಳ್ಳಿಜನರ ಸ್ವಾಭಿಮಾನದ ಬುಡ ಅಲ್ಲಾಡಿದಾಗ ಅವರೂ ಮನೆಯಿಂದ ಹೊರಬಂದು ದಾಸ್ಯದ ವಿರುದ್ಧ ಧ್ವನಿಯೆತ್ತಿದ್ದು ಕುವರಸಿಂಹರಿಗೆ ಆನೆಬಲ ಬಂದಂತಾಯಿತು.
ಆರಾದಲ್ಲಿ ಬ್ರಿಟಿಷ್ ಖಜಾನೆ ಲೂಟಿಗೈದು ಚಾಣಾಕ್ಷ ಯುದ್ಧತಂತ್ರ ಹೂಡಿದ ಕುವರಸಿಂಹ, ಸ್ವಾಭಿಮಾನ ಜಾಗೃತಿಗಾಗಿ ಕೃತಪರಿಶ್ರಮರಾದರು. ಆಂಗ್ಲರ ಪರವಾಗಿ ಹೋರಾಡುತ್ತಿದ್ದ ವೀರ ಸಿಖ್ ಸೈನಿಕರಿಗೆ ಗುರುಗೋವಿಂದ ಸಿಂಹರ ತ್ಯಾಗ, ಬಲಿದಾನ, ದೇಶಭಕ್ತಿಗಳನ್ನು ಪರಿಚಯಿಸುವ ಪ್ರಯತ್ನ ಅಸಫಲವಾಯಿತು. ಆದಾಗ್ಯೂ ಆ ವೀರರನ್ನು ಗುಪ್ತವಾಗಿ ಸಂಧಿಸಿ ವೀರಪರಂಪರೆಯನ್ನು ನೆನಪಿಸಿ ಹಲವರ ಮನ ಬದಲಿಸಿದರು. ಶಸ್ತçಸಮೇತ ಕ್ರಾಂತಿ ಘೋಷಿಸಲು ಪ್ರಯತ್ನಿಸಿದ ಸಿಖ್ ಯೋಧರು ಸಂಘಟಿತರಾಗದಿದ್ದುದು ಕೊಂಚ ಹಿನ್ನೆಡೆಯಾಯಿತು. ತನ್ನ ತಲೆಗೆ ಐದುಸಾವಿರ ಬಹುಮಾನ ಘೋಷಿಸಿದ ಸರಕಾರದ ಪ್ರಯತ್ನಕ್ಕೆ ನಸುನಕ್ಕ ಕುವರಸಿಂಹ, `ಮುದುಕನ ತಲೆಗೂ ಬೆಲೆ ಬಂತು' ಎಂದು ಸರಕಾರವನ್ನು ಛೇಡಿಸಿ ಸ್ಫೂರ್ತಿಗಾಥೆಗೆ ಬಲ ತುಂಬಿದರು. ಸಂಧಿಪತ್ರಕ್ಕೆ ಕತ್ತಿಯ ಉತ್ತರವಿತ್ತ ವೃದ್ಧನನ್ನು ಹೆಡೆಮುರಿಕಟ್ಟಲು ಬಂದ ಐರ್ ಒಂದು ಹಂತದಲ್ಲಿ ಯಶಸ್ವಿಯಾದರೂ ಬಿಹಾರದ ಗಹನಾರಣ್ಯದಲ್ಲಿ ಮರೆಯಾದ ಕುವರಸಿಂಹ ಕಾಡಲ್ಲಿ ಅಲೆದಾಡಿ, ಗೆರಿಲ್ಲಾ ಯುದ್ಧತಂತ್ರ ಅನುಸರಿಸಿ ಮತ್ತೆ ಸೈನ್ಯ ವಿಸ್ತರಿಸಿ ಯುದ್ಧಕ್ಕೆ ಅಣಿಯಾದರು.
ದೇಶದೆಲ್ಲೆಡೆ ವ್ಯಾಪಿಸಿದ್ದ ಕ್ರಾಂತಿಯ ಕಿಚ್ಚನ್ನು ಹಂತಹಂತವಾಗಿ ಆರಿಸಲು ಯಶಸ್ವಿಯಾದ ಸರಕಾರ ಅನೇಕರನ್ನು ಬಂಧಿಸಿ ಗಲ್ಲಿಗೇರಿಸುವಲ್ಲಿ ಆಸಕ್ತಿ ವಹಿಸಿತು. ತಮ್ಮವರ ಅನ್ಯಾಯದ ಸಾವಿಗೆ ಪ್ರತೀಕಾರ ತೀರಿಸಲು ಕಾತರರಾದ ಯೋಧರಿಗೆ ತಾಳ್ಮೆ ವಹಿಸಲು ಸೂಚಿಸಿದ ಕುವರಸಿಂಹ ಸುಭದ್ರ ಆಡಳಿತ ನೀಡಲು ಅನುಕೂಲವಾಗುವಂತೆ ಯೋಜನೆ ರೂಪಿಸಿ ವಿದೇಶೀ ಆಡಳಿತದ ವಿರುದ್ಧ ಏಕಾಏಕಿ ದಾಳಿ ನಡೆಸಿದ ಪರಿಣಾಮ ಬ್ರಿಟಿಷರಿಗೆ ಸೋಲಾಯಿತು. ಗಂಗಾನದಿ ದಾಟುವ ವೇಳೆ ಕೈಮಣಿಕಟ್ಟಿಗೆ ಗುಂಡೇಟು ತಗುಲಿದಾಗ ಕ್ಷಣಕಾಲವೂ ಯೋಚಿಸದೆ ಕೈಕತ್ತರಿಸಿ ಗಂಗೆಗೆ ಸಮರ್ಪಿಸಿದ ಕುವರಸಿಂಹ ಜಗದೀಶಪುರ ಪ್ರವೇಶಿಸುವ ಹೊತ್ತಿಗೆ ಸೈನ್ಯ ತೀವ್ರವಾಗಿ ಬಳಲಿತ್ತು. ಮತ್ತೆ ಆಕ್ರಮಿಸಿದ ಶಸ್ತ್ರಸಜ್ಜಿತ ಬ್ರಿಟಿಷರನ್ನೆದುರಿಸಿದ ಸಾಮಾನ್ಯ ರೈತಾಪಿ ಜನರ ಪರಾಕ್ರಮದಿಂದ ಆಶ್ಚರ್ಯಕರ ರೀತಿಯಲ್ಲಿ ಗೆದ್ದ ಕುವರಸಿಂಹ ಸಂಪೂರ್ಣ ವಿಜಯಿಯಾಗಿ ಸ್ವಾತಂತ್ರ‍್ಯಧ್ವಜ ಹಾರಾಡಿಸಿದರು. ದೇಶದೆಲ್ಲೆಡೆ ಕ್ರಾಂತಿಗೆ ಸೋಲೆದುರಾದಾಗಲೂ ಜಗದೀಶಪುರದ ವೃದ್ಧವೀರನನ್ನು ವಿಜಯಲಕ್ಷ್ಮಿ ಅಭಿನಂದಿಸಿದ್ದಳು. ಸಾವಿನ ಬಾಗಿಲಲ್ಲಿ ನಿಂತಿರುವ ವೃದ್ಧ ಏನು ತಾನೇ ಮಾಡಬಲ್ಲ ಎಂಬ ಅವಜ್ಞೆಗೆ ತಕ್ಕ ಪ್ರತ್ಯುತ್ತರ ನೀಡಿ ಅವಿನಾಶಿಯೆಂದು ಬೀಗಿದ ಬ್ರಿಟಿಷ್ ಸಾಮ್ರಾಜ್ಯದ ಶವಪೆಟ್ಟಿಗೆಗೆ ಮೊಳೆ ಹೊಡೆದೇ ಅಸ್ತಂಗತರಾದ ಕುವರಸಿಂಹರ ಸಾಹಸಗಾಥೆ ಮುಂದಿನ ಒಂಭತ್ತು ದಶಕಗಳ ಸ್ವಾತಂತ್ರ‍್ಯ ಹೋರಾಟಕ್ಕೂ ಛಲಬಲ ತುಂಬಿತು. ಶತ್ರುಗಳನ್ನು ಗೆದ್ದು, ಕೊನೆಯುಸಿರಿರುವವರೆಗೂ ದೇಶಹಿತವನ್ನೇ ಬಯಸಿದ ಆ ಅಮರಸೇನಾನಿಗೆ ನವಂಬರ್ ಹದಿಮೂರಕ್ಕೆ ಜನ್ಮೋತ್ಸವ ಸಂಭ್ರಮ. ತನ್ನ ಕ್ಷಾತ್ರಪೂರ್ಣ ಬದುಕಿನಿಂದ ನಾಡಿಗೆ ನಿತ್ಯಸ್ಫೂರ್ತಿಯಾಗಿ ಅಜೇಯ ಭಾರತದ ಓಟಕ್ಕೆ ರಕ್ತತರ್ಪಣದ ಆರಂಭವಿತ್ತ ಪುಣ್ಯಾತ್ಮನ ಸ್ಮರಣೆಯೇ ಚೇತೋಹಾರಿ.