ವೇಗಕ್ಕೆ ಗೌರವ
ವೇಗವಾಗಿ ಬದಲಾಗುತ್ತಿರುವ ವಿಶ್ವದೊಂದಿಗೆ ಸರಿಸಮನಾಗಿ ಸಾಗುವುದು ಅಗಾಧ ಮತ್ತು ದಣಿವಾಗಿಸುವ ಸಂಗತಿ. ಈ ದಿಸೆಯಲ್ಲಿ ಸಹಜ ಉಸಿರಾಟವೂ ಪ್ರಯಾಸಕರವಾಗುತ್ತಿರುವುದನ್ನು ಬಹುತೇಕ ನಾವೆಲ್ಲಾ ಅನುಭವಿಸುತ್ತಿದ್ದೇವೆ. ಹಲವು ಹೊಸಹೊಸ ಉತ್ಪನ್ನಗಳು, ಹೊಸಹೊಸ ಮಾಹಿತಿಗಳು, ಹೊಸಹೊಸ ತಂತ್ರಜ್ಞಾನಗಳು ಹೊಸಹೊಸ ಮೂಲಗಳಿಂದ ಮೇಲೆದ್ದು ಬರುತ್ತಿರುವ ರಭಸ ಹಾಗೂ ಪ್ರಮಾಣವನ್ನು ನೋಡಿದರೆ ಪ್ರಯಾಸದ ಅರಿವಾದೀತು. ಎಲ್ಲಿಂದ ಆರಂಭಿಸಬೇಕೆಂದೇ ತಿಳಿಯದಂತಾಗಿದೆ ಪ್ರಸ್ತುತ ಪರಿಸ್ಥಿತಿ. ಬದಲಾವಣೆಯ ದರದ ವೇಗ ಇನ್ನೂ ಏರುಗತಿಯಲ್ಲೇ ಇದೆ. ನಾವು ವಾಸಿಸುತ್ತಿರುವ ಪ್ರಪಂಚದ ನಿತ್ಯಪದಗಳು "ವೇಗ, ಹೊಸತು, ಉತ್ತಮ" ಎಂಬುದಾಗಿದ್ದು ಯಾರೂ ಕೂಡಾ ಇವನ್ನು ಅರಗಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ! ಈ ವೇಗದ ಪರಿಣಾಮ ಏನಾಗಿದೆಯೆಂದರೆ; ತಂತ್ರಜ್ಞಾನದ ವಿಕಾಸದಿಂದಾಗಿ ಇಂದು ನಾವು ನಮಗೆ ಸಿಕ್ಕಿರುವ ಪ್ರತಿಯೊಂದು ವರವೂ ಅತ್ಯಲ್ಪ ಕಾಲದಕ್ಕಿಯೇ ಶಾಪವಾಗಿ ಪರಿವರ್ತನೆಯಾಗುತ್ತಿದೆ! ಚರಿತ್ರೆಯಲ್ಲಿ ಮೊಟ್ಟಮೊದಲ ಬಾರಿಗೆ ಪ್ರಸಕ್ತ ತಲೆಮಾರು ಅಸಂಖ್ಯ ಸುಖ-ಸವಲತ್ತುಗಳನ್ನು ಅನುಭವಿಸುತ್ತಿದೆಯಾದರೂ ಹಿಂದಿಗಿಂತಲೂ ಅತ್ಯಂತ ನೆಮ್ಮದಿಯ, ಶಾಂತಿಯ, ಆನಂದದ, ಪ್ರೀತಿ ತುಂಬಿದ ತಲೆಮಾರು ಎಂದು ಹೇಳಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಯಾಕೆ ಹೀಗೆ ಎಂದು ಒಮ್ಮೆ ಯೋಚಿಸಿನೋಡಿ.
ವಿಶ್ವವಿಂದು ವಿಷಯತಜ್ಞರ' (ಸ್ಪೆಷಿಯಲಿಸ್ಟ್) ಜಗತ್ತಾಗಿದ್ದು, ಪ್ರತಿಯೊಬ್ಬನೂ ಬ್ರಹ್ಮಾಂಡಜ್ಞಾನದ ಒಂದು ತುಣುಕನ್ನು ಕರಗತಮಾಡಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ. ಆದರೆ ಮನೋವಿಜ್ಞಾನದ ವಿಷಯಕ್ಕೆ ಬಂದಾಗ ಸಮಾಜದಲ್ಲಿ ತತ್ಕ್ಷಣದ ವಿರೋಧಾಭಾಸ ಕಂಡುಬರುತ್ತದೆ. ತ್ವರಿತ ಆಹಾರ, ತ್ವರಿತ ಪರಿಹಾರಗಳನ್ನು ನಿರೀಕ್ಷಿಸುವ ಈ ಕಾಲಘಟ್ಟದಲ್ಲಿ
ವೇಗಕ್ಕೆ' ಅಪಾರ ಗೌರವ ನೀಡುತ್ತೇವೆ! ಇಷ್ಟೆಲ್ಲಾ ಇದ್ದರೂ ಮಾನವಸಂಬಂಧ ಮತ್ತು ಭಾವನೆಗಳ ವಿಚಾರ ಬಂದಾಗ ವೇಗಕ್ಕೆ ಲಗಾಮು ಹಾಕುತ್ತೇವೆ. ಗುಣಪಡಿಸುವಿಕೆಯಲ್ಲಿ ಮನೋವಿಜ್ಞಾನ ತ್ವರಿತಗತಿಯನ್ನು ಅಪೇಕ್ಷಿಸುವ ಕ್ಷೇತ್ರವಂತೂ ಅಲ್ಲವೇ ಅಲ್ಲ. ನೂರುವರ್ಷಗಳ ಹಿಂದೆ ಒಂದೇಸ್ಥಳದಲ್ಲಿ ಅಂದರೆ ನಿಂತಲ್ಲೇ ಓಡುವುದು ಕಾರ್ಯಸಾಧುವಾಗಿತ್ತು. ಬದುಕಿಗೂ ನಿಧಾನಗತಿಯಿತ್ತು; ಜನರಿಗೂ ಹೊಸ ಕೌಶಲ್ಯಗಳನ್ನು ತಕ್ಷಣವೇ ಕರಗತಮಾಡಿಕೊಳ್ಳಬೇಕಾದ ಅನಿವಾರ್ಯತೆ ಇರಲಿಲ್ಲ; ಪ್ರಮುಖ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಬೇಕಾದ ಜರೂರತ್ತು ಇರಲಿಲ್ಲ.
ಹೊಸ ಮಾನಸಿಕ ಅಭ್ಯಾಸಗಳು ಮತ್ತು ಸಂಶೋಧನೆಗಳು ಯಾವಾಗಲೂ ಸಂದೇಹವಾದವನ್ನು ಎದುರಿಸುತ್ತವೆ. ಮಾನವನ ಚಿಂತನೆ, ಭಾವನೆ ಮತ್ತು ನಡವಳಿಕೆಯ ಅಧ್ಯಯನವನ್ನೊಳಗೊಂಡ ಮನಃಶಾಸ್ತ್ರದ ಒಂದು ಭಾಗವನ್ನು ಕಲೆಯೆಂದೂ, ಇನ್ನೊಂದು ಭಾಗವನ್ನು ವಿಜ್ಞಾನವೆಂದೂ ಪರಿಗಣಿಸಲಾಗುತ್ತದೆ. ಆದಾಗ್ಯೂ ಇದರಲ್ಲಿ ವಿಜ್ಞಾನದ ಭಾಗ ಬಹಳ ಕಡಿಮೆ ಎಂಬುದು ಕೆಲವರ ವಾದ. ಕಾನೂನುಬದ್ಧತೆ ಮತ್ತು ಗೌರವಕ್ಕಾಗಿ ಮನೋವಿಜ್ಞಾನದ ಹೋರಾಟ ಖಂಡಿತವಾಗಿಯೂ ಮಾನವಪ್ರಜ್ಞೆ'ಯನ್ನು ಅಳೆಯುವ ಸಮಸ್ಯೆಗೆ ಕಾರಣವಾಗಿದೆ. ಚಿಕಿತ್ಸೆಯ ಪ್ರಮಾಣವನ್ನು ನಿಖರವಾಗಿ ಅಳೆಯುವ ಮತ್ತು ಸುಲಭವಾಗಿ ಪುನರಾವರ್ತಿಸುವಂತಹ ಪ್ರಮಾಣೀಕೃತ ಕಾರ್ಯವಿಧಾನಗಳಿಗೆ ಬದ್ಧವಾಗಿರುವ ವೈದ್ಯವಿಜ್ಞಾನ ಅಥವಾ ಔಷಧಶಾಸ್ತ್ರದಂತೆ ಸಾಮಾನ್ಯ ಸಾಧನಗಳನ್ನು ಬಳಸಿಕೊಂಡು ಮನೋವಿಜ್ಞಾನವನ್ನು ಅಧ್ಯಯನಮಾಡುವುದು ಕಷ್ಟಕರ; ಸಾಧುವೂ ಅಲ್ಲ. ಮನುಷ್ಯಭಾವನೆಗಳ ಆಖಾಡದಲ್ಲಿ ಪ್ರಮಾಣೀಕೃತ ಚಿಕಿತ್ಸೆಯ ನಿಜವಾದ ಪ್ರಭಾವವನ್ನು ಪುಷ್ಟೀಕರಿಸುವುದು ಅಷ್ಟು ಸುಲಭವಲ್ಲ. ಒಬ್ಬನ ಮಾನಸಿಕ ಯಾತನೆಯ ಮೂಲವನ್ನು ಕಂಡುಹಿಡಿಯುವ ಹಲವಾರು ವರ್ಷಗಳ ಪ್ರಯತ್ನದ ಕಲ್ಪನೆ ಇಂದು ವಿಲಕ್ಷಣವಾಗಿ ಕಾಣಬಹುದು. ಆದರೆ ಶತಮಾನದ ತಿರುವಿನಲ್ಲಿ ಅದು ಸಂಪೂರ್ಣವಾಗಿ ಆಮೂಲಾಗ್ರವಾಗಿತ್ತು ಎಂಬುದನ್ನು ಕಡೆಗಣಿಸಲಾಗದು. ಸಿಗ್ಮಂಡ್ಫ್ರಾಯ್ಡ್ ಅವರ ವಿಧಾನಗಳು ಇಂದು ಕೆಲವು ರೀತಿಯಲ್ಲಿ ಹಳೆಯದೆನ್ನಿಸಬಹುದು; ಆದರೆ ಆತ ನಿಜವಾದ ಮನೋವಿಜ್ಞಾನದ ಪ್ರವರ್ತಕನಾಗಿರುವದಂತೂ ಸತ್ಯ. ಮಾನವ ನಡವಳಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಅಡೆತಡೆಗಳನ್ನು ಮುರಿಯಲು ತನ್ನ ಖ್ಯಾತಿಯನ್ನು ಆತ ಸಂಪೂರ್ಣವಾಗಿ ಅಪಾಯಕ್ಕೆ ಒಡ್ಡಿಕೊಂಡದ್ದಂತೂ ಸುಳ್ಳಲ್ಲ. ಆತ ದಿಟ್ಟ ಹಾಗೂ ವಿಶಾಲಮನಸ್ಸಿನ ಚಿಂತಕನಾಗಿದ್ದರಿಂದ ಈ ಒಡ್ಡಿಕೊಳ್ಳುವಿಕೆ ಸಾಧ್ಯವಾಯಿತೇನೋ. ಮಾನಸಿಕ ಸಮಸ್ಯೆಗಳನ್ನು ಎದುರಿಸುವ ತ್ವರಿತವಾದ ಮತ್ತು ಪ್ರಭಾವಶಾಲಿ ವಿಧಾನಗಳನ್ನು ಒಳಗೊಂಡಂತೆ ಅತ್ಯಾಧುನಿಕ ಔಷಧೀಯ ಪರಿಹಾರಗಳು ಕಳೆದ ಇಪ್ಪತ್ತು-ಮೂವತ್ತು ವರ್ಷಗಳಲ್ಲಿ ಅಭಿವೃದ್ಧಿಗೊಂಡಿವೆ. ಸಿಗ್ಮಂಡ್ಫ್ರಾಯ್ಡ್ ತನ್ನ ಸಂಶೋಧನಾ ಬರಹಗಳಲ್ಲಿ; "ಮುಂದೊಂದು ದಿನ ಮನಸ್ಸಿನ ಜ್ಞಾನ ಮತ್ತು ದೇಹದ ಕಾರ್ಯಚಟುವಟಿಕೆಗಳು ಮಾನಸಿಕ ಚಿಕಿತ್ಸಾಪದ್ಧತಿಯನ್ನು ಅಪ್ರಸ್ತುತಗೊಳಿಸುತ್ತದೆ" ಎಂಬುದಾಗಿ ಭವಿಷ್ಯ ನುಡಿದಿದ್ದ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ವಿಶಿಷ್ಟ ಮಸೂರದ ಮೂಲಕ ಜಗತ್ತನ್ನು ವೀಕ್ಷಿಸುತ್ತಾನೆ ಹಾಗೂ ಆ ಮಸೂರದ ಗುಣಲಕ್ಷಣಗಳು ಮತ್ತು ವ್ಯಾಪ್ತಿಯು ನಾವು ಪ್ರಪಂಚದ ಬಗ್ಗೆ ಏನನ್ನು ನೋಡಬಹುದು ಮತ್ತು ತಿಳಿದುಕೊಳ್ಳಬಹುದು ಎಂಬುದನ್ನು ನಿಯಂತ್ರಿಸುತ್ತದೆ. ಆ ಮಸೂರ ವ್ಯಕ್ತಿಯ ವೈಯಕ್ತಿಕ ದೃಷ್ಟಿಕೋನವಾಗಿರುತ್ತದೆ. ಈ ದೃಷ್ಟಿಕೋನಗಳು ತಾವಾಗಿಯೇ ಹುಟ್ಟುವುದಿಲ್ಲ; ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ನಾವು ಬದುಕುವ ಸಂಸೃತಿಯಿಂದ ರೂಪುಗೊಳ್ಳುತ್ತದೆ. ಅದು ಒಂದು
ಗುಂಪಿನ ಅಥವಾ ಸಮುದಾಯದ' ಸಂಗ್ರಹಿತ ವರ್ತನೆಗಳು ಮತ್ತು ನಂಬಿಕೆಗಳನ್ನು ಪ್ರತಿನಿಧಿಸುತ್ತದೆ. ಜಗತ್ತು ಹೇಗೆ ಕಾರ್ಯನಿರ್ವಹಿಸುತ್ತದೆ' ಎಂಬುದರ ಮೇಲಿನ ಒಬ್ಬನ ನಂಬಿಕೆ ತನ್ನದೇ ವಂಶದ ಹಿಂದಿನ ತಲೆಮಾರಿನ ವ್ಯಕ್ತಿಯ ನಂಬಿಕೆಗಿಂತ ಭಿನ್ನವಾಗಿರುತ್ತದೆ; ಮಳೆಕಾಡುಗಳಲ್ಲಿ ವಾಸಿಸುವ ವ್ಯಕ್ತಿಯ ಚಿಂತನೆಗಿಂತ ಸಂಪೂರ್ಣವಾಗಿ ವಿಭಿನ್ನ ವಿವರಣೆ ಹೊಂದಿರುತ್ತದೆ. ಆಳವಾದ ಧಾರ್ಮಿಕಾಚರಣೆಗಳ ಹಿನ್ನೆಲೆಯಲ್ಲಿ ಬೆಳೆದ ಮಗುವೊಂದು ನಾಸ್ತಿಕವಾದವನ್ನು ಹೊಂದಿರುವ ಮಗುವಿಗಿಂತ ಜಗತ್ತನ್ನು ಭಿನ್ನವಾಗಿ ಅರ್ಥೈಸುತ್ತದೆ. ಭಾರತೀಯ ಸಂಪ್ರದಾಯದಲ್ಲಿ ಅದರಲ್ಲಿಯೂ ಹಿಂದೂಗಳು ಪ್ರಪಂಚದ ಬಗೆಗೆ ಅಕ್ಷರಶಃ ವಿಭಿನ್ನ ದೃಷ್ಟಿಕೋನವನ್ನು ಹೊಂದಿರುತ್ತಾರೆ. ನಿಮ್ಮ ಸುತ್ತಲಿನ ಪ್ರಪಂಚವನ್ನು ನೀವು ನೋಡುವ ರೀತಿಯು
ನಿಮ್ಮ ಕುಟುಂಬವು ಏನು ನಂಬುತ್ತದೆ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ' ಎಂಬುದರಿಂದ ಗಾಢವಾಗಿ ಪ್ರಭಾವಿತವಾಗಿರುತ್ತದೆ. ನಿಮ್ಮ ಹೆತ್ತವರು ಅವರಿಗೆ ಅಥವಾ ನಿಮಗೆ ಮುಂದೇನಾಗಬಹುದು ಎಂಬುದರ ಕುರಿತು ಯಾವಾಗಲೂ ಚಿಂತಿತರಾಗಿದ್ದರೆ ಜಗತ್ತು ಅಸುರಕ್ಷಿತ ಅಥವಾ ಅನಿರೀಕ್ಷಿತ ಸ್ಥಳ ಎಂಬುದಾಗಿ ನೀವು ನಂಬಬಹುದು; ನಿರಂತರ ಭಯ ಮತ್ತು ಆತಂಕದ ಸ್ಥಿತಿಯಲ್ಲಿ ಬದುಕಬಹುದು. ಕೌಟುಂಬಿಕ ಘರ್ಷಣೆಗಳನ್ನು ಸಿಟ್ಟಿನಿಂದ ಪ್ರಭಾವಿತವಾದ ಏರುಸ್ವರದಲ್ಲೇ ಪರಿಹರಿಸಿದರೆ `ಕೋಪವು ಕೆಲಸಮಾಡುವ ಏಕೈಕ ತಂತ್ರ' ಎಂಬುದನ್ನೇ ನಂಬುವುದು ಮಗುವಿನ ಸ್ಥಿತಿಯಾಗಿರುತ್ತದೆ! ಮತ್ತೊಂದೆಡೆ; ಮಗುವಿನ ಬಾಲ್ಯವು ಸುಗಮ ಹಾಗೂ ಪ್ರಶಾಂತವಾಗಿದ್ದರೆ ಬದುಕಲು ಪ್ರಪಂಚವು ಸೂಕ್ತ ಹಾಗೂ ಸುರಕ್ಷತೆಯ ಸ್ಥಳವೆಂಬ ಭಾವನೆಯೇ ಮಗುವಿನಲ್ಲಿ ದಟ್ಟವಾಗಿ ಪಡಿಮೂಡುತ್ತದೆ.
ಸಹಜವಾಗಿ ಎಲ್ಲರೂ ಶಿಕ್ಷಣ, ನೆರೆಹೊರೆ, ವರ್ಗಪ್ರತಿಷ್ಠೆ ಬಗ್ಗೆ ಒಂದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ. ನಿಮ್ಮ ವೈಯಕ್ತಿಕ ಮಾದರಿಯು ನಿಮ್ಮ ಸಂಸ್ಕೃತಿ, ಕುಟುಂಬ, ಜೀವನಾನುಭವಗಳನ್ನು ಪ್ರತಿನಿಧಿಸುತ್ತದೆ. ಆದರೆ ನಿಮ್ಮ ಅನನ್ಯ ಮನೋಧರ್ಮದ ಕಾರಣದಿಂದಾಗಿ ನೀವು ನಿಮ್ಮ ಪರಿಸರವನ್ನು ಅರ್ಥೈಸಿಕೊಳ್ಳುವ ಮತ್ತು ಪ್ರತಿಕ್ರಿಯಿಸುವ ವಿಧಾನಗಳನ್ನು ಪ್ರತಿಬಿಂಬಿಸುತ್ತದೆ. ಹೊಸತಿನ ಬಗೆಗಿನ ನಮ್ಮ ಮುಕ್ತಮನಸ್ಸು ಪ್ರಪಂಚದ ಬಗೆಗಿನ ನಮ್ಮ ದೃಷ್ಟಿಕೋನದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಜನರು ಅಂತರ್ಗತವಾಗಿ ಹೆಚ್ಚು ಸಾಹಸಮಯ ಹಾಗೂ ಇತರರಿಗಿಂತ ಕಡಿಮೆ ಸಂಪ್ರದಾಯಶೀಲರಾಗಿದ್ದು ಹೊಸ ವಿಚಾರಗಳನ್ನು ಪ್ರಯತ್ನಿಸಲು ಹೆಚ್ಚು ಮುಕ್ತವಾಗಿರುತ್ತಾರೆ ಎಂಬುದನ್ನು ಸಂಶೋಧನೆಗಳು ಶ್ರುತಪಡಿಸಿವೆ.