For the best experience, open
https://m.samyuktakarnataka.in
on your mobile browser.

ವ್ಯಕ್ತಿಗತ ನಂಬಿಕೆ ಗೌರವಿಸುವ ಕೆಲಸವಾಗಬೇಕು; ಇಸ್ರೋ ಸಹನಿರ್ದೇಶಕ ಡಾ. ಹೆಚ್.ಎಂ. ದಾರುಕೇಶ್

06:14 PM Sep 23, 2023 IST | Samyukta Karnataka
ವ್ಯಕ್ತಿಗತ ನಂಬಿಕೆ ಗೌರವಿಸುವ ಕೆಲಸವಾಗಬೇಕು  ಇಸ್ರೋ ಸಹನಿರ್ದೇಶಕ ಡಾ  ಹೆಚ್ ಎಂ  ದಾರುಕೇಶ್

ದಾವಣಗೆರೆ: ವಿಜ್ಞಾನಿಗಳಾಗಲೀ ಅಥವಾ ಇಂಜಿನಿಯರ್‌ಗಳಾಗಲೀ ಅವರವರಿಗೆ ವ್ಯಕ್ತಿಗತವಾದ ಕೆಲವು ನಂಬಿಕೆಗಳಿರುತ್ತವೆ. ಅಂತಹ ನಂಬಿಕೆಗಳನ್ನು ಗೌರವಿಸುವ ಕೆಲಸವಾಗಬೇಕು ಎಂದು ಇಸ್ರೋ ಸಹನಿರ್ದೇಶಕ ಡಾ. ಹೆಚ್.ಎಂ. ದಾರುಕೇಶ್ ಹೇಳಿದರು.
ಚಂದ್ರಯಾನ-೩ ಉಡಾವಣೆಯ ಸಂದರ್ಭದಲ್ಲಿ ವಿಜ್ಞಾನಿಗಳು ಮತ್ತು ತಂತ್ರಜ್ಞರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಉಡಾವಣೆಗೆ ಚಾಲನೆ ಕೊಟ್ಟಿರುವ ಪ್ರಸಂಗಕ್ಕೆ ಕೆಲವು ಪ್ರಗತಿಪರರು ಟೀಕಿಸಿರುವ ಬಗ್ಗೆ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದರು.
ದೇವಸ್ಥಾನಕ್ಕೆ ಹೋಗಿದ್ದಕ್ಕೆ ಕೆಲವು ಟೀಕೆಗಳು ಬಂದವು. ನಮ್ಮ ವೃತ್ತಿ ಏನೇ ಆಗಿರಬಹುದು ಆದರೆ ಪರೀಕ್ಷೆಗೂ ಮೊದಲು ನಾವು ಅಪ್ಪ-ಅಮ್ಮನಿಗೆ ನಮಸ್ಕಾರ ಮಾಡುವ ಸಂಸ್ಕೃತಿಯಲ್ಲಿ ಬೆಳೆದು ಬಂದವರು. ಭಕ್ತಿ ಎಂಬುದು ನಮ್ಮ ನಂಬಿಕೆ. ಇದರಿಂದ ಅನಿಷ್ಟ ಎಂಬುದು ಹೋಗಬಹುದೆಂಬ ನಂಬಿಕೆ. ಜತೆಗೆ ಏಕಾಗ್ರತೆ ಹಾಗೂ ದೃಢ ನಿರ್ಣಯ ತೆಗೆದುಕೊಳ್ಳಬಹುದೆಂಬ ನಿಲುವು. ವ್ಯಕ್ತಿಗತ ನಂಬಿಕೆಗಳಿಗೆ ಗೌರವಿಸಬೇಕು ಎಂದರು.
ಚಂದ್ರಯಾನ ಒಂದು ಅಂತರಾಷ್ಟ್ರೀಯ ಪ್ರಾಜೆಕ್ಟ್. ಅಲ್ಲಿ ನಾನು ಸ್ಯಾಟಲೈಟ್ ಮತ್ತು ಗ್ರೌಂಡ್ ಸ್ಟೇಷನ್‌ಗೆ ಮೈಕ್ರೋವೇವ್ ಸೀಕ್ವೇನ್ಸ್ ಕೆಲಸ ಮಾಡುವ ಮಾಡ್ಯುಲೇಟ್ಸ್, ಅಂಕ್ಯುಲ್ಪೆಯರ‍್ಸ್ ಮಾಡಿಕೊಡುವ ಅವಕಾಶ ನನಗೆ ಸಿಕ್ಕಿತ್ತು. ಇದು ನನಗೆ ಅತ್ಯಂತ ಸಂತಸದ ಸಂಗತಿ ಎಂದರು.
ಸೂರ್ಯಯಾನವು ಆರಂಭವಾಗಿದೆ. ಸೂರ್ಯಯಾನಕ್ಕೆ ೨೪*೭ ಸೂರ್ಯನನ್ನೇ ಗಮನಿಸಬೇಕಿದೆ. ಅದು ಕೂಡ ಯಶಸ್ಸು ಕಾಣುವುದೆಂಬ ಆಶಾಭಾವದಲ್ಲಿ ನಾವಿದ್ದೇವೆ. ಹಿಂದೆಲ್ಲಾ ಇತರೆ ಮುಂದುವರೆದ ರಾಷ್ಟ್ರಗಳು ವಿಜ್ಞಾನ ಕ್ಷೇತ್ರದಲ್ಲಿ ಸಆಧನೆ ಮಾಡಿವೆ. ಈಗ ಚಂದ್ರಯಾನದ ಯಶಸ್ಸಿನಿಂದ ಭಾರತವು ಆ ಸಾಲಿನಲ್ಲಿದೆ ಎಂದು ಹರುಷ ವ್ಯಕ್ತಪಡಿಸಿದರು.
ವಿಕ್ರಂ ಲ್ಯಾಂಡರ್ ಚಂದ್ರನ ಸರ್‌ಫೇಸ್ ಮೇಲೆ ೧೦ ಸೆಮೀ ಆಳಕ್ಕೆ ರಂಧ್ರವನ್ನು ಕೊರೆದಿದೆ. ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ತಾಪಮಾನ ಸರ್‌ಫೇಸ್ ನಲ್ಲಿದೆ. ಪ್ಲಾಸ್ಮಾ ಸ್ಥಿತಿ ಅಳತೆಯಾಗುತ್ತದೆ. ಚಂದ್ರನ ಅಂಗಳದಲ್ಲಿ ಕ್ಯಾಲ್ಸಿಯಂ, ಮೆಘ್ನೇಶಿಯಂ, ಮ್ಯಾಂಗನೀಸ್, ಆಕ್ಸಿಜನ್ ಜತೆಗೆ ಸೆಲ್ಫರ್ ಸಿಕ್ಕಿರುವುದು ವಿಶೇಷ ಎಂದು ಹೇಳಿದರು.
ವಿಜ್ಞಾನಿಗಳಿಗೆ ವೇತನ ಮತ್ತು ಅಗತ್ಯ ಹಣಕಾಸಿನ ನೆರವು ದೊರೆತಿಲ್ಲ ಎಂಬುದೆಲ್ಲಾ ಸತ್ಯಕ್ಕೆ ದೂರವಾದ ಮಾತು. ಶ್ರೀಹರಿಕೋಟದಲ್ಲಿ ಲಾಂಚಿಂಗ್ ಮಾಡುವ ಸಮಯ ಸಿವಿಲ್ ವರ್ಕ್‌ನ್ನು ಸರ್ಕಾರಿ ಸಂಸ್ಥೆ ಇನ್ನೊಂದು ಸಂಸ್ಥೆಗೆ ಉಪ ಗುತ್ತಿಗೆ ಕೊಟ್ಟಿತ್ತು. ಉಪ ಗುತ್ತಿಗೆಕಾರರಿಗೆ ತೊಂದರೆಯಾಗಿರಬಹುದೆಂಬುದು ಯಾವುದು ಸತ್ಯವಲ್ಲ. ಇಸ್ರೋದ ವಿಜ್ಞಾನಿಗಳನ್ನು, ತಂತ್ರಜ್ಞರನ್ನು ಭಾರತ ಸರ್ಕಾರ ಚೆನ್ನಾಗಿಯೇ ನೋಡಿಕೊಳ್ಳುತ್ತಿದೆ. ಅವರಿಗೆ ವೇತನ ಸಿಕ್ಕಿಲ್ಲ ಅಥವಾ ಹಣಕಾಸಿನ ತೊಂದರೆ ಆಗುವಂತೆ ಮಾಡಿದೆ ಎಂಬುದು ಸುಳ್ಳು ಎಂದು ಆರೋಪ ತಳ್ಳಿಹಾಕಿದರು. ಕೇಂದ್ರ ಸರ್ಕಾರ ಸೇರಿದಂತೆ ಎಲ್ಲಾ ಸರ್ಕಾರಗಳು ಇಸ್ರೋಮಟ್ಟಿಗೆ ಎಲ್ಲಾ ಪ್ರಯೋಗ ಮಾಡಲು ಸಹಕಾರ ಕೊಟ್ಟಿವೆ. ಪ್ರಯೋಗಗಳಿಗೆ ಬೇಕಾದ ಹಣಕಾಸಿನ ಸಹಾಯವನ್ನು ಕೊಟ್ಟಿದೆ. ಆದ್ದರಿಂದ ವಿಜ್ಞಾನಿಗಳ ಹುಮ್ಮಸ್ಸು ಇನ್ನೂ ಅಧಿಕವಾಗಿದೆ ಎಂದರು.