For the best experience, open
https://m.samyuktakarnataka.in
on your mobile browser.

ವ್ಯಕ್ತಿತ್ವವನ್ನು ಮೀರಿದ ಸ್ಥಿತಿಯೇ ಸಮಗ್ರತೆ

03:30 AM Oct 22, 2024 IST | Samyukta Karnataka
ವ್ಯಕ್ತಿತ್ವವನ್ನು ಮೀರಿದ ಸ್ಥಿತಿಯೇ ಸಮಗ್ರತೆ

ಸಮತೋಲನವು ಭಾರತೀಯ ಮೌಲ್ಯಗಳ ಮತ್ತೊಂದು ಪ್ರಮುಖ ಗುಣ. ಆದರ್ಶವಾದ ಹಾಗೂ ವಾಸ್ತವ ವಾದಗಳ ಸಮತೋಲನ, ಆಂತರಿಕ-ಬಾಹ್ಯಗಳ ಸಮತೋಲನ, ಬುದ್ಧಿ ಹಾಗೂ ಭಾವನೆಗಳ ಸಮತೋಲನ, ಸನ್ಮಾರ್ಗ ಹಾಗೂ ಕ್ರಿಯೆಗಳ ಸಮತೋಲನ, ಭೋಗ ಹಾಗೂ ತ್ಯಾಗಗಳ ಸಮತೋಲನ, ಇಹಲೋಕ ಹಾಗೂ ಪರಲೋಕದ ಸಮತೋಲನ, ಚಿಂತನೆ ಹಾಗೂ ಭಾವಪರವಶತೆಗಳ ಸಮತೋಲನ, ಸತ್ಯ ಹಾಗೂ ವಾಸ್ತವಿಕತೆಯ ಸಮತೋಲನ, ಹಕ್ಕು ಹಾಗೂ ಕರ್ತವ್ಯಗಳ ಸಮತೋಲನ, ಪರಿವಾರ ಮತ್ತು ಸಮಾಜದ ಸಮತೋಲನ, ಕಲೆ ಹಾಗೂ ಸಾಹಿತ್ಯಗಳ ಸಮತೋಲನ, ಸಮುದಾಯ ಹಾಗೂ ದೇಶಗಳ ಸಮತೋಲನ, ತಾಯ್ನಾಡು ಪರದೇಶಗಳ ಸಮತೋಲನ, ಹಣ ಹಾಗೂ ಭೋಗಗಳ ಸಮತೋಲನ, ಮಾನವ ಹಾಗೂ ಪ್ರಕೃತಿಯ ಸಮತೋಲನ-ಹೀಗೆ. ಆದ್ದರಿಂದ ಸಮತೋಲನವು ಮಾನವನ ಪ್ರತಿಯೊಂದು ಹಂತದಲ್ಲಿಯೂ ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ಈ ಸಮತೋಲನವೇ ಸರಿಯಾದ ಸಂಯೋಜನೆಯಿಂದ ಜೀವಿತದ ಸಾರ್ಥಕತೆಯನ್ನು ನಿರ್ಧರಿಸುತ್ತದೆ. ಸರಿಯಾದ ಸಮತೋಲನವನ್ನು ನಿಭಾಯಿಸುವುದರಲ್ಲಿಯೇ ಭಾರತೀಯ ಕಲೆಯ ಹೆಗ್ಗುರುತಿದೆ.
ದೇಹ-ಮನಸ್ಸು-ಭಾವನೆಗಳ ನಡುವಿನ ಸಮತೋಲನ ಹಳಿ ತಪ್ಪಿದಾಗ "ಮಲ್ಟಿಪಲ್ ಸ್ಕೆಲರೋಸಿಸ್" ಸಮಸ್ಯೆ ತಲೆಯೆತ್ತುತ್ತದೆ. ಇದು ಕೇಂದ್ರ ನರಮಂಡಲದ ದೀರ್ಘಕಾಲೀನ ಕಾಯಿಲೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ 'ಆಟೋ ಇಮ್ಯೂನ್ ಡಿಸಾರ್ಡರ್' ಎಂಬುದಾಗಿ ಪರಿಗಣಿಸಲಾಗಿದ್ದು, ದೇಹವು ತಪ್ಪಾಗಿ ತನ್ನ ಮೇಲೆ ತಾನೇ ಆಕ್ರಮಣ ಮಾಡುವಂತಹ ಸ್ಥಿತಿಯಾಗಿದೆ. ಇದೊಂದು ಅನಿರೀಕ್ಷಿತ ಮತ್ತು ಅಸಹಜ ಕಾಯಿಲೆಯಾಗಿದ್ದು ದೇಹ ಮತ್ತು ಮನಸ್ಸಿನ ನಡುವಿನ ಸಂಬಂಧದ ಬಗ್ಗೆ ತಪ್ಪು ಕಲ್ಪನೆಗಳನ್ನು ಸ್ಥಾಪಿಸಿದಾಗ ಈ ಸಮಸ್ಯೆ ತಲೆಯೆತ್ತುತ್ತದೆ ಮತ್ತು ವ್ಯಕ್ತಿಯ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ. ಇತರರ ಸಂತೋಷಕ್ಕಾಗಿ ತಾನು ಅನಿವಾರ್ಯವಾಗಿ ಬಲಿ ಕೊಟ್ಟುಕೊಳ್ಳುವ ಮತ್ತು ಆ ಮೂಲಕ ತನ್ನ ಅವಶ್ಯಕತೆಗಳನ್ನು ಪ್ರಜ್ಞಾಪೂರ್ವಕವಾಗಿ ನಗಣ್ಯವಾಗಿ ಪರಿಗಣಿಸುವ ಮನಃಸ್ಥಿತಿ ಇದರ ಮುಖ್ಯ ಲಕ್ಷಣ. ಕೆಲವು ತಿಂಗಳುಗಳ ನಂತರ ಕಾಲುಗಳಲ್ಲಿ ಸೂಕ್ಷ್ಮವಾಗಿ ಸೂಜಿಯಿಂದ ಚುಚ್ಚಿದಂತಹ ಮತ್ತು ಒಂದೇ ದೃಷ್ಟಿಯಲ್ಲಿ ಎರಡೆರಡು ದೃಶ್ಯಗಳನ್ನು ಕಂಡಂತಹ ಅನುಭವವಾಗುವುದು ಇದರ ಸೂಚನೆ. ಹಣಕಾಸಿನ ಬಗ್ಗೆ ಅಭದ್ರತಾ ಭಾವನೆ, ಕೌಟುಂಬಿಕ ಸಂಬಂಧದಲ್ಲಿ ಭಿನ್ನಾಭಿಪ್ರಾಯ, ಪೋಷಕರೊಂದಿಗೆ ಅತಿಯಾದ ಭಾವನಾತ್ಮಕ ಸಂಬಂಧ, ಬಾಲ್ಯ ಮತ್ತು ಯೌವನಾವಸ್ಥೆಯ ದಿನಗಳಲ್ಲಿ ಮಾನಸಿಕ ಸ್ವಾತಂತ್ರ್ಯದ ಕೊರತೆ, ಪ್ರೀತಿ ಮತ್ತು ವಾತ್ಸಲ್ಯದ ಅಗಾಧ ಅಗತ್ಯತೆ, ಕೋಪವನ್ನು ಅನುಭವಿಸಲು ಅಥವಾ ವ್ಯಕ್ತಪಡಿಸಲು ಅಸಮರ್ಥತೆಗಳಂತಹ ವಿದ್ಯಮಾನಗಳು ಈ ಸಮಸ್ಯೆಯ ನೈಸರ್ಗಿಕ ಬೆಳವಣಿಗೆಯಲ್ಲಿ ಸಹಕರಿಸುವ ಅಂಶಗಳಾಗಿವೆ. ರೋಗಲಕ್ಷಣಗಳು ಪ್ರಾರಂಭವಾಗುವ ಮೊದಲು ಈ ಸಮಸ್ಯೆಗೆ ಒಳಗಾದವರು ತಮ್ಮ ಭದ್ರತಾ ವ್ಯವಸ್ಥೆಗೆ ಬೆದರಿಕೆಯೊಡ್ಡುವ ಜೀವನೋಪಾಯದ ದಾರಿಗಳು ಹಠಾತ್ತಾಗಿ ಇಲ್ಲದಂತಾಗುವ ಅಥವಾ ವ್ಯಕ್ತಿಯ ಜೀವನದಲ್ಲಿ ಶಾಶ್ವತ ಬದಲಾವಣೆಗೆ ಕಾರಣವಾಗುವ ಕೌಟುಂಬಿಕ ವಿದ್ಯಮಾನಗಳಂತಹ (ಪ್ರೀತಿ ಪಾತ್ರರ ಕಣ್ಮರೆ ಅಥವಾ ಸಾವಿನಂತಹದ್ದು) ಆಘಾತಕಾರಿ ಜೀವನ ಘಟನೆಗಳು ವ್ಯಕ್ತಿಯ ನಿರ್ವಹಣಾ ಸಾಮರ್ಥ್ಯವನ್ನು ಮೀರಿ ಆತನನ್ನು ಅನಿವಾರ್ಯ ಹೊಂದಾಣಿಕೆಗೆ ತಳ್ಳುತ್ತವೆ. ಇದು ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿನ ತನ್ನ ಅಸಮರ್ಥತೆಯ ಅರಿವನ್ನು ನಿಧಾನವಾಗಿ ವ್ಯಕ್ತಿಯಲ್ಲಿ ಬಲಗೊಳಿಸುತ್ತಾ ಸಾಗುವ ಮೂಲಕ ಸಮಸ್ಯೆಯನ್ನು ಸಂಕೀರ್ಣ ಸ್ಥಿತಿಗೆ ಕೊಂಡೊಯ್ಯುತ್ತದೆ.
ಒಬ್ಬನ ಅಂತರಾತ್ಮವನ್ನು ಯಾವುದು ಬೆಳೆಸುವುದಿಲ್ಲವೋ ಅದಕ್ಕೆ ಮೌಲ್ಯವೆಂದು ಹೇಳಲಾಗುವುದಿಲ್ಲ. ಈ ಕೆಳಗಿನ ಅಂಶಗಳು ಭಾರತೀಯ ಮೌಲ್ಯಗಳ ಆಧಾರವನ್ನು ಒಳಗೊಂಡಿರುತ್ತದೆ: ಬದುಕಿನಲ್ಲಿ ಶ್ರದ್ಧೆ; ಬುದ್ಧಿಶಕ್ತಿಯ ಪ್ರತಿಫಲನ; ಪ್ರಕೃತಿಯ ಬಗ್ಗೆ ಬೆಳಕು ಚೆಲ್ಲುವುದು; ಸಮಾಜಕಲ್ಯಾಣ ಕಾರ್ಯಗಳು; ವ್ಯಕ್ತಿಯ ಉದಾತ್ತತೆ ಅಥವಾ ಆಂತರಿಕ ವಿಕಾಸ. ಅನುಕಂಪ, ಕರುಣೆ ಮೊದಲಾದ ಮೌಲ್ಯಗಳು ಮಾನವೀಯತೆಯೊಂದಿಗೆ ಹೋಗುತ್ತದೆ. ಈ ಗುಣಗಳಿಲ್ಲದಿದ್ದರೆ ವಿಶ್ವವೇ ಕ್ರೂರವಾಗಿರುತ್ತಿತ್ತು. ಅವುಗಳು ವಿಶ್ವವನ್ನು ಉದಾತ್ತೀಕರಿಸುತ್ತವೆ ಮತ್ತು ಗೌರವಯುತವನ್ನಾಗಿ ಮಾಡುತ್ತದೆ. ವಾಲ್ಮೀಕಿ ರಾಮಾಯಣವು ಕ್ರೌಂಚಪಕ್ಷಿಯ ದಯನೀಯ ಕೂಗಿನಿಂದ ಕರಗಿದ ಹೃದಯವುಳ್ಳ ನಿದರ್ಶನವೇ ಆಗಿದೆ.
ನಮ್ಮ ಚಿಂತನೆಯಲ್ಲಿನ ಒಂದು ಸಣ್ಣ ಬದಲಾವಣೆ ಅಥವಾ ತಿರುವು ಹೊರಹೊಮ್ಮಿಸುವ ಈ ಅಧ್ಯಾತ್ಮಿಕ ಗುಣಲಕ್ಷಣಗಳನ್ನು ಕಾಣಬಹುದು: ಅರಿವಿನ ಸ್ಪಷ್ಟತೆ, ತಿಳಿವಳಿಕೆ, ಜೀವನದ ಬಗ್ಗೆ ಗೌರವ, ಹಿಂಸೆಯ ಅನುಪಸ್ಥಿತಿ, ಬದುಕಿನ ಬಗ್ಗೆ ನಿರ್ಭಯತೆ, ವ್ಯಾಮೋಹ ಕಳೆದುಕೊಳ್ಳುವಿಕೆ, ಸಂಪೂರ್ಣತೆ. ಇವುಗಳು ಅಧ್ಯಾತ್ಮಿಕ ರೂಪಾಂತರಗಳಾಗಿ ಅರ್ಹತೆ ಪಡೆಯುತ್ತವೆ ಏಕೆಂದರೆ; ಇವಾವುದೂ ಪದಾರ್ಥಗಳ ಮರು ಸಂಯೋಜನೆಯಲ್ಲ. ಸ್ಪಷ್ಟತೆ ಎಂದರೆ ಗಡಿಯಾರದ ಮುಳ್ಳಿನಂತೆ ಎಚ್ಚರದ ಸ್ಥಿತಿಯಲ್ಲಿ, ನಿದ್ದೆಯಲ್ಲಿ, ಕನಸು ಕಾಣುವಲ್ಲಿ ಹೀಗೆ ಸದಾ ಎಚ್ಚರವಾಗಿರುವುದು. ಬಾಹ್ಯವಸ್ತುಗಳಲ್ಲಿ ಕಳೆದುಹೋಗುವ ಬದಲು ಅರಿವು ಸದಾ ತೆರೆದಿರಬೇಕು. ತಿಳಿವಳಿಕೆ ಎಂದರೆ; ಪ್ರತಿ ಪ್ರಶ್ನೆಗೆ ಉತ್ತರಿಸುವ ಮನಸ್ಸಿನ ಮಟ್ಟದೊಂದಿಗೆ ಸಂಪರ್ಕದಲ್ಲಿರುವುದು. ಜ್ಞಾನವು ಸಂಗೀತ, ಗಣಿತ ಅಥವಾ ಇತರ ನಿರ್ಧಿಷ್ಟ ವಿಷಯಗಳ ಮೇಲೆ ಕೇಂದ್ರೀಕರಿಸದಿದ್ದರೂ ಇದು ಪ್ರತಿಭೆಗೆ ಸಂಬಂಧಿಸಿದೆ. ನಿಮ್ಮ ಜ್ಞಾನದ ಕ್ಷೇತ್ರವು ಜೀವನ ಮತ್ತು ಪ್ರತಿ ಹಂತದಲ್ಲೂ ಪ್ರಜ್ಞೆಯ ಚಲನೆಯಾಗಿದೆ. ತಿಳಿವಳಿಕೆಯು ಬುದ್ಧಿವಂತ, ಆತ್ಮವಿಶ್ವಾಸ, ಅಚಲ ಮತ್ತು ವಿನಮ್ರತೆಯನ್ನು ಅನುಭವಿಸುತ್ತದೆ. ಜೀವನದ ಬಗ್ಗೆ ಗೌರವ ಎಂದರೆ; ಜೀವಶಕ್ತಿಯೊಂದಿಗೆ ಸಂಪರ್ಕದಲ್ಲಿರುವುದು. ಪ್ರತಿಯೊಂದರಲ್ಲೂ ಚೈತನ್ಯವಿದೆ. ಹಿಂಸೆಯ ಅನುಪಸ್ಥಿತಿ ಅಥವಾ ಅಹಿಂಸೆ ಎಂದರೆ; ಪ್ರತಿಯೊಂದು ಕ್ರಿಯೆಯೊಂದಿಗೂ ಸಾಮರಸ್ಯ ಹೊಂದಿರುವುದು. ನಿಮ್ಮ ಆಸೆಗಳು ಇನ್ನೊಬ್ಬ ವ್ಯಕ್ತಿಯ ಯೋಗಕ್ಷೇಮದೊಂದಿಗೆ ಘರ್ಷಣೆಯಲ್ಲಿರುವುದಿಲ್ಲ. ನಿಮ್ಮ ಸುತ್ತಲಿನ ಜಗತ್ತಿನಲ್ಲಿ ಸಂಘರ್ಷವನ್ನು ನೋಡುತ್ತಿದ್ದರೂ ನಿಮ್ಮೊಳಗೆ ಘರ್ಷಣೆಯಿಲ್ಲದೆ ಇರುವುದರಿಂದ ನಿಮ್ಮ ಸುತ್ತಲೂ ಶಾಂತಿಯನ್ನು ಹೊರಸೂಸುತ್ತೀರಿ. ಬದುಕಿನ ಬಗ್ಗೆ ನಿರ್ಭಯತೆ ಎಂದರೆ; ಸಂಪೂರ್ಣ ಭದ್ರತಾ ಭಾವನೆ. ಭಯವೆನ್ನುವುದು ಭೂತಕಾಲದ ಪ್ರಭಾವವಾಗಿದ್ದು ನಮ್ಮ ದುರ್ಬಲತೆಯ ಕ್ಷಣಗಳನ್ನು ನೆನಪಿಸುವಂಥದ್ದು. "ಪ್ರತ್ಯೇಕತೆಯಿಂದ ಭಯ ಹುಟ್ಟುತ್ತದೆ; ಭಯದ ಮೂಲ ಏಕತೆಯ ನಷ್ಟ" ಎಂಬುದಾಗಿ ಭಗವದ್ಗೀತೆ ಹೇಳುತ್ತದೆ. ಸಂಪೂರ್ಣತೆ ಅಥವಾ ಸಮಗ್ರತೆ ಎಂಬುದನ್ನೂ ಬಿಡದೆ ಎಲ್ಲವನ್ನೂ ಒಳಗೊಂಡಿರುವುದನ್ನು ಸೂಚಿಸುತ್ತದೆ. ಪ್ರಸ್ತುತ ನಾವು ಬದುಕುತ್ತಿರುವ ಜೀವನ ವಿಧಾನವು ಸಮಯ, ಅನುಭವ, ಚಟುವಟಿಕೆಗಳನ್ನು ತುಣುಕುಗಳಲ್ಲಿ ಕತ್ತರಿಸಿದಂತಿದೆ. ಈ ಪ್ರತಿಯೊಂದು ತುಣುಕಿನ ಸಂರಕ್ಷಣೆಯಲ್ಲಿ ನಾವು ನಮ್ಮ ಸೀಮಿತ ಸ್ವಯಂ-ಪ್ರಜ್ಞೆಗೆ ಜೋತುಬಿದ್ದಿದ್ದೇವೆ. ಈ ವಿಧಾನದ ಜೀವನದಲ್ಲಿ ನಿರಂತರತೆಯನ್ನು ಕಂಡುಕೊಳ್ಳುವುದು ಕಷ್ಟಸಾಧ್ಯವೇ. ಸಮಗ್ರತೆಯೆಂಬುದು ವ್ಯಕ್ತಿತ್ವವನ್ನು ಮೀರಿದ ಸ್ಥಿತಿ. ನಿಜವಾದ ರೂಪಾಂತರವು ನಿಮ್ಮ ವೈಯಕ್ತಿಕ ಅನುಭವವಾಗಿ ಈ ಗುಣಲಕ್ಷಣಗಳ ಹೊರಹೊಮ್ಮುವಿಕೆಯನ್ನು ಅವಲಂಭಿಸಿರುತ್ತದೆ. ಇವು ಕೊರತೆ, ಅಗತ್ಯತೆ ಅಥವಾ ಹಸಿವಿನ ಕಾರಣಕ್ಕಾಗಿ ಮನುಷ್ಯರಿಂದ ಕಂಡುಹಿಡಿದಿಲ್ಪಟ್ಟಿಲ್ಲ ಬದಲಿಗೆ, ಮೂಲ ಅರಿವಿನಲ್ಲಿ ಹುದುಗಿರುವ ಪ್ರಾಥಮಿಕ ಗುಣಗಳು.