ವ್ಯಕ್ತಿತ್ವ ಪರೀಕ್ಷೆಗೊಂದು ಔಚಿತ್ಯ ಪ್ರಜ್ಞೆ ಬೇಡವೇ..?
ತಪ್ಪು ಹುಡುಕುವುದಷ್ಟೇ ಪರೀಕ್ಷೆಗಳ ಗುರಿ ಯಾಗಬಾರದು-ತಪ್ಪು ಹುಡುಕುವ ಬದಲಿಗೆ ಅದನ್ನು ಯಾವ ರೀತಿ ಸುಧಾರಿಸಿ ಉತ್ತರಿಸಬಹುದಾಗಿತ್ತು ಎಂದು ಪರೀಕ್ಷಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದು ಪರೀಕ್ಷಕರ ಸದಾಶಯವಾಗುವುದಾದರೆ ನಿಜಕ್ಕೂ ಇಂತಹ ಪರೀಕ್ಷೆಗಳಿಂದ ಅಭ್ಯರ್ಥಿಗಳ ಬಹುಮುಖ ವ್ಯಕ್ತಿತ್ವ ಅನಾವರಣಗೊಳ್ಳುವ ಅವಕಾಶಗಳು ಹೆಚ್ಚು. ಆದರೆ ಈಗಿನ ಪರೀಕ್ಷೆಗಳು ಹಳೇ ಕಾಲದ ತಥಾಕಥಿತ ಪ್ರಸಂಗಗಳನ್ನು ಇಲ್ಲವೇ ವ್ಯಕ್ತಿ ಆಧರಿತ ಪ್ರಕರಣಗಳನ್ನು ತಿರುಗುಮುರುಗು ಮಾಡಿ ಕೇಳಿ ಪರೀಕ್ಷಾರ್ಥಿಗಳನ್ನು ಗೊಂದಲಕ್ಕೆ ಬೀಳಿಸುವುದೇ ಹೆಚ್ಚು. ವಿಶ್ವವಿದ್ಯಾಲಯದ ಪರೀಕ್ಷೆಗಳಿಂದ ಹಿಡಿದು ವಿವಿಧ ನೇಮಕಾತಿ ಪರೀಕ್ಷೆಗಳ ಹಣೆ ಬರಹವು ಕೂಡ ಬಹುತೇಕ ಇಷ್ಟೇ.
ಕೆಎಎಸ್ ಗೆಜೆಟೆಡ್ ಅಧಿಕಾರಿಗಳ ನೇಮ ಕಾತಿಗೆ ಸಂಬಂಧಿಸಿದಂತೆ ಕಳೆದ ವಾರ ನಡೆದ ಪ್ರಿಲಿಮಿನರಿ ಪರೀಕ್ಷೆಯ ಪಶ್ನೆ ಪತ್ರಿಕೆಯ ಮಾದರಿಯನ್ನು ಗಮನಿಸಿದರೆ ಸಾಕು ಅಬ್ಬಾ ಇದೇನು ಪರೀಕ್ಷೆಯೋ ಇಲ್ಲವೇ ಹುಚ್ಚಾಸ್ಪತ್ರೆಗೆ ಕಳುಹಿಸಲು ತರಬೇತಿಯೋ ಎಂಬ ಗೊಂದಲಕ್ಕೆ ಬೀಳುವುದು ಸಹಜ. ಕೆಪಿಎಸ್ಸಿ ಸಂಘಟಿಸಿದ್ದ ಈ ಪರೀಕ್ಷೆಗಳ ಕನ್ನಡ ಅನುವಾದದ ಪ್ರಶ್ನೆ ಪತ್ರಿಕೆಯನ್ನು ಕಂಡು ಅಭ್ಯರ್ಥಿಗಳು ಬೆಚ್ಚಿಬಿದ್ದರೇ ಅಚ್ಚರಿಯೇನು ಇಲ್ಲ. ಮೂಲ ಇಂಗ್ಲಿಷ್ ಪತ್ರಿಕೆಯನ್ನು ಅಧರಿಸಿ ಕನ್ನಡದಲ್ಲಿ ರೂಪಿಸಿರುವ ಈ ಪತ್ರಿಕೆಯಲ್ಲಿ "ಗುಟೇಶನ್ ಟ್ರಾನ್ಸ್ಫಿರೇಷನ್ ಪುಲ್‌ಗೇ ಕಾರಣ" ಎಂಬ ವಾಕ್ಯದ ಅರ್ಥವೇನು ಎಂಬುದು ಎಲ್ಲರಿಗೂ ದೊಡ್ಡ ಒಗಟು ಬಹುಶಃ ಇದು ಸಸ್ಯಗಳು ಉಸಿರಾಡುವ ದ್ಯುತಿಸಂಶ್ಲೇಷಣಾ ಕ್ರಿಯೆಗೆ (ಫೋಟೋಸಿಂಥಿಸಿಸ್) ಸಂಬಂಧಿಸಿದ ಶಬ್ದ ಪ್ರಯೋಗ ಇರಬೇಕು ಎಂಬುದು ಒಂದು ಅಂದಾಜು. ಇಂತಹ ಪ್ರಶ್ನೆ ಪತ್ರಿಕೆಯಲ್ಲಿ ನುಸುಳಿದ್ದು ಹೇಗೆ ಎಂಬುದು ದೊಡ್ಡ ಪ್ರಶ್ನೆ. ಇದೊಂದೆ ಪ್ರಶ್ನೆ ಅಲ್ಲ. ಒಂದೇ ಪತ್ರಿಕೆಯಲ್ಲಿ ಸುಮಾರು ಐದಾರು ಪ್ರಶ್ನೆಗಳು ಇದೇ ನಮೂನೆಯಲ್ಲಿ ಇದ್ದದ್ದು ಕಂಡು ಇದೇನು ಕನ್ನಡ ಪರೀಕ್ಷೆಯೋ ಅಥವಾ ಯಾವುದಾದರೂ ಪರ ಭಾಷಾ ಪತ್ರಿಕೆಯೋ ಎಂಬ ಅನುಮಾನ ಅಭ್ಯರ್ಥಿಗಳಿಗೆ ಕಾಡಿರಲೂಬಹುದು.
ಇಂತಹ ಪ್ರಮಾದ ಬೆಳಕಿಗೆ ಬಂದ ನಂತರ ಅದರ ಬಗ್ಗೆ ವಿಷಾದ ಸೂಚಿಸಿ ತಪ್ಪಿ ತಿದ್ದಿಕೊಳ್ಳುವ ದಾರಿಗೆ ಕೆಪಿಎಸ್ಸಿ ಬರಬೇಕಿತ್ತು. ಅದರ ಬದಲಿಗೆ "ಈ ತಪ್ಪು ನಮ್ಮದಲ್ಲ, ಭಾಷಾಂತರ ಇಲಾಖೆಯವರು ಸಿದ್ಧಪಡಿಸಿಕೊಟ್ಟ ಪತ್ರಿಕೆ ಇದು" ಎಂದು ಹೇಳಿ ಕೈತೊಳೆದುಕೊಂಡದ್ದು ಮಾತ್ರ ಅಚ್ಚರಿಯ ಸಂಗತಿ. ತದನಂತರ ಸಾರ್ವಜನಿಕ ಒತ್ತಡಕ್ಕೆ ಮಣಿದು ಲೋಪದೋಷ ಪತ್ತೆ ಹಚ್ಚಲು ತಜ್ಞರ ಸಮಿತಿಯೊಂದನ್ನ ರಚಿಸಿಲು ಮುಂದಾ ದದ್ದು ಮಾತ್ರ ಸಾಧುವಾದ ಕ್ರಮ.
ಇಂತಹ ಪ್ರಮಾದಗಳಿಂದ ಕಲಿಯಬೇಕಾದ ಪಾಠವೆಂದರೇ ಪರೀಕ್ಷೆಗಳನ್ನು ಕೆಪಿಎಸ್ಸಿಯೇ ನೇರವಾಗಿ ನಡೆಸುವ ಬದಲು ವಿಷಯ ತಜ್ಞರ ಕಣ್ಗಾವಲಿನಲ್ಲಿ ನಡೆಸುವುದು ಎಲ್ಲ ದೃಷ್ಟಿಯಿಂದಲೂ ಸೂಕ್ತ ಎಂಬುದು. ಯಾಕೆಂ ದರೆ ಆಡಳಿತಾಧಿಕಾರಿಗಳಿಗೆ ಇಂತಹ ವಿಷಯಗಳ ಜ್ಞಾನ ಇರುವುದು ಅಪರೂಪ. ಭವಿಷ್ಯದಲ್ಲಿ ನಾಡಿನ ಆಡಳಿತದ ಸೂತ್ರ ನಿರ್ವಹಿಸಬೇಕಾದವರನ್ನು ಆಯ್ಕೆ ಮಾಡುವ ಈ ಪರೀಕ್ಷೆಗಳಲ್ಲಿ ಅಮೂಲಾಗ್ರವಾಗಿ ವ್ಯಕ್ತಿತ್ವ ಪರೀಕ್ಷೆಗೆ ಅವಕಾಶವಾಗುವಂತಿರಬೇಕು. ಈಚೀನ ಪರೀಕ್ಷೆಗಳಲ್ಲಿ ಯಾವ ಮಾದರಿ ಅನುಸರಿಸ ಬೇಕೆಂಬ ಖಚಿತ ನಿಲುವು ಇದ್ದಂತಿಲ್ಲ. ನವೀನ ಮಾದರಿ ಎಂದು ಹೇಳುವುದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ. ಅಭ್ಯರ್ಥಿಗಳಿಗೆ ನವೀನ ಮಾದರಿ ಏನೆಂಬುದನ್ನು ತಿಳಿ ಹೇಳಲು ಮಾದರಿ ಪ್ರಶ್ನೆಪತ್ರಿಕೆಗಳು ಮೊದಲೇ ಎಲ್ಲರಿಗೂ ಲಭ್ಯವಾಗುವಂತಿರಬೇಕು. ಕೇಂದ್ರದ ಯುಪಿಎಸ್ಸಿ ಮಾದರಿ ಪರೀಕ್ಷೆ ನಡೆಸುವ ಉದ್ದೇಶಕ್ಕೆ ಕೆಪಿಎಸ್ಸಿ ಬಂದರೇ ಇದರ ಬಗ್ಗೆ ತರಬೇತಿಗಳು ನಡೆದು ಪ್ರಶ್ನೆ ಪತ್ರಿಕೆಗಳು ಹಾಗೆಯೇ ರೂಪುಗೊಳ್ಳಬೇಕು. ಹಲವಾರು ಸಂದರ್ಭಗಳಲ್ಲಿ ೬೦ ಶಬ್ದಗಳ ಪ್ರಶ್ನೆಗೆ ಕೇವಲ ೧೦ ಶಬ್ದಗಳ ಉತ್ತರ ಸಾಕಾಗುತ್ತದೆ. ಪ್ರಶ್ನೆಗಳಲ್ಲಿಯೇ ಗೊಂದಲ ಇರುವಾಗ ಅಭ್ಯರ್ಥಿ ಗಳು ಖಚಿತವಾಗಿ ಉತ್ತರ ಬರೆಯುವುದು ಕಷ್ಟ. ಉದಾಹರಣೆಗೆ "ಕಾವೇರಿ ನದಿಯೂ---" ಎಂಬ ಖಾಲಿ ಇದ್ದ ಜಾಗದಲ್ಲಿ ಭರ್ತಿ ಮಾಡಿ ಎಂಬ ಶಬ್ದಕ್ಕೆ ಉತ್ತರ ಏನು ಬೇಕಾದರೂ ಆಗಬಹುದು. ಕಾವೇರಿ ನದಿಯೂ ಹರಿಯುತ್ತಿದೆ. "ಕಾವೇರಿ ನದಿಯೂ ಕರ್ನಾಟಕದಲ್ಲಿದೆ. ಕಾವೇರಿ ನದಿಯೂ ವಿವಾದದ ನದಿಯಾಗಿದೆ. ಕಾವೇರಿ ನದಿ ಬತ್ತಿ ಹೋಗಿದೆ." ಇಂತಹ ಉತ್ತರಗಳು ಬಂದಾಗ ಪರೀಕ್ಷಕರು ಯಾವ ಉತ್ತರ ಖಚಿತ ಎಂದು ನಿರ್ಣಯ ಮಾಡಬಲ್ಲರು. ಹೀಗಾಗಿ ವಿಷಯ ತಜ್ಞರ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸುವ ವಿಧಾನವೇ ಹೆಚ್ಚು ಪರಿಪಕ್ವ.
ಇನ್ನು ಈ ಬಾರಿ ಜರುಗಿರುವ ಪ್ರಮಾದದಿಂದ ಆಗಿರುವ ತೊಂದರೆಗೆ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಬೇಕಾದದ್ದು ಕೆಪಿಎಸ್ಸಿ ಕರ್ತವ್ಯ. ಪ್ರಶ್ನೆ ಗಳಲ್ಲಿ ದೋಷ ಇದ್ದಾಗ ಅಭ್ಯರ್ಥಿಗಳನ್ನು ಶಿಕ್ಷೆಗೆ ಗುರಿಪಡಿಸುವುದು ಸಾಧುವಾಗಲಾರದು. ಇದಕ್ಕೆ ಕನಿಷ್ಠ ಪಕ್ಷ ಉದಾರ ಬುದ್ಧಿಯಿಂದ ಎಲ್ಲ ಅಭ್ಯರ್ಥಿಗಳಿಗೆ ಕೃಪಾಂಕ ನೀಡುವುದು, ಇಲ್ಲವೇ ಸಾಧಕ ಬಾಧಕಗಳನ್ನು ಪರಿಗಣಿಸಿ ಮರುಪರೀಕ್ಷೆ ನಡೆಸುವ ಬಗ್ಗೆ ತೀರ್ಮಾನ ಕೈ ಗೊಳ್ಳುವುದು ಆದಷ್ಟು ಬೇಗ ಆಗಬೇಕು. ಇಂತಹ ಅವಾಂತರಗಳು ಮತ್ತೆ ನುಸುಳದಂತೆ ನೋಡಿ ಕೊಳ್ಳಲು ತಪ್ಪಿಗೆ ಕಾರಣರಾಗಿರುವವರನ್ನು ಗುರು ತಿಸಿ ತಕ್ಕ ಕ್ರಮ ಜರುಗಿಸುವುದು ಆಗಲೇಬೇಕಾದ ಕೆಲಸ. ಸರ್ಕಾರದ ಆಡಳಿತ ಮುಂದಾದರೂ ಸುಧಾರಣೆಯಾಗಬೇಕಾದರೆ ಅಭ್ಯರ್ಥಿಗಳ ಅರ್ಹತೆ ಮತ್ತು ಯೋಗ್ಯತೆ ನಿಖರವಾಗಿ ಪರೀಕ್ಷಿಸುವ ರೀತಿ ಯಲ್ಲಿ ಪರೀಕ್ಷೆ ನಡೆಸುವುದು ಕೆಪಿಎಸ್ಸಿ, ಇನ್ನಿತರ ಎಲ್ಲ ನೇಮಕಾತಿ ಹೊಣೆ ಹೊತ್ತಿರುವ ಸಕ್ಷಮ ಪ್ರಾಧಿಕಾರಗಳ ಜವಾಬ್ದಾರಿ ಮತ್ತು ಕರ್ತವ್ಯವಾಗಿರಬೇಕು.