ವ್ರತಾನುಷ್ಠಾನದಿಂದ ಸಾತ್ವಿಕ ಆನಂದ..
ಎಲ್ಲ ಕಡೆ ಶರನ್ನವರಾತ್ರಿಯ ಉತ್ಸವಗಳಾಗುತ್ತಿವೆ. ಈ ಉತ್ಸವದ ಹಿನ್ನೆಲೆಯಲ್ಲಿ ಶರನ್ನವರಾತ್ರಿಯ ಒಂದು ವ್ರತವಿದೆ. ವ್ರತವೆಂದರೆ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆಹಾರ-ನಿದ್ರೆಗಳಲ್ಲಿ ನಿಯಮ, ಜಪ-ಪೂಜೆಗಳಲ್ಲಿ ನಿಯಮ ಮುಂತಾದವುಗಳಿರುತ್ತವೆ. ಇತ್ತೀಚಿಗೆ ಈ ವ್ರತ ಕಡಿಮೆಯಾಗುತ್ತಿದೆ. ಉತ್ಸವ ಜಾಸ್ತಿ ಆಗುತ್ತಿದೆ. ಶರನ್ನವರಾತ್ರಿಯು ಒಂಭತ್ತು ರಾತ್ರಿಗಳ ಪರ್ಯಂತ ನಡೆಯುವ ವ್ರತ. ಇಷ್ಟು ದೀರ್ಘಕಾಲ ನಡೆಯುವ ವ್ರತ ಇತ್ತೀಚೆಗೆ ಯಾವುದೂ ಇರಲಾರದು. ಹಳೆಯ ಕಾಲಗಳಲ್ಲಿ ವರ್ಷಗಟ್ಟಲೆ ನಡೆಯುವ ದೀರ್ಘಸತ್ರ (ಯಾಗ) ಗಳು ಇರುತ್ತಿದ್ದವು. ದೀರ್ಘಕಾಲ ವ್ರತ ನಿಯಮಗಳೊಂದಿಗೆ ಶರನ್ನವರಾತ್ರಿ ನಡೆದರೆ ನಿಜಕ್ಕೂ ಅರ್ಥಪೂರ್ಣ.
ವ್ರತವನ್ನು ಆಚರಿಸುವಾಗ ಸ್ವಲ್ಪ ಕಷ್ಟಪಡಬೇಕಾಗುತ್ತದೆ. ಆದರೆ ಆ ಕಷ್ಟದಿಂದ ಸಾತ್ವಿಕವಾದ ಆನಂದ ದೊರೆಯುತ್ತದೆ. ಆನಂದದಲ್ಲಿ ಮೂರು ಪ್ರಕಾರ ಸಾತ್ವಿಕ ರಾಜಸ ಮತ್ತು ತಾಮಸ.
`ಯತ್ತದಗ್ರೇ ವಿಷಮಿವ ಪರಿಣಾಮೇಯಮೃತೋಪಮಮ್ |
ತತ್ಸುಖಂ ಸಾತ್ವಿಕಂ ಪ್ರೋಕ್ತಮಾತ್ಮಬುದ್ಧಿಪ್ರಸಾದಜಮ್ || '
ಆರೋಗ್ಯದಲ್ಲಿ ಕಷ್ಟದ ಕಹಿ ಇದ್ದರೂ ಪರಿಣಾಮದಲ್ಲಿ ಅಮೃತದಂತಹ ಸಿಹಿಯ ಅನುಭವ ಸತ್ವಿಕವಾದ ಆನಂದದಲ್ಲಿ ಇರುತ್ತದೆ. ಅಲ್ಲದೇ ಬುದ್ಧಿಯ ಪ್ರಸನ್ನತೆಯಿಂದ ಸಾತ್ವಿಕ ಆನಂದವು ಹುಟ್ಟುತ್ತದೆ. ಬುದ್ಧಿಯ ಪ್ರಸನ್ನತೆಯು ದೇವರ ಚಿಂತನೆಯಿಂದ ಉಂಟಾಗುತ್ತದೆ. ವ್ರತಗಳ ಅನುಷ್ಠಾನದಿಂದ ಇಂತಹ ಆನಂದ ಅನುಭವಕ್ಕೆ ಬರುತ್ತದೆ. ಮೇಲ್ನೋಟಕ್ಕೆ ಕಷ್ಟವೆನಿಸಿದರೂ ವ್ರತಗಳಲ್ಲಿ ಇಂತಹ ಆನಂದದ ಅನುಭವವು ಒಳಗಡೆ ಇದೆ.
ಇಂತಹ ಸಾತ್ವಿಕವಾದ ಆನಂದದ ಅನುಭವದ ರುಚಿ ಗೊತ್ತಾದರೆ ಮನುಷ್ಯನು ಇಂದ್ರಿಯ ಭೋಗಗಳ ದಾಸನಾಗುವುದು ಕಡಿಮೆಯಾಗುತ್ತದೆ ಮತ್ತು ವ್ಯಸನಗಳ ಕಡೆಗೆ ಆಕರ್ಷಿತಾನಾಗುವುದು ಕಡಿಮೆಯಾಗುತ್ತದೆ. ಮನುಷ್ಯನು ಸದಾ ಆನಂದವನ್ನು ಅಪೇಕ್ಷಿಸುತ್ತಾನೆ. ಸಾತ್ವಿಕ ಆನಂದದ ಅನುಭವವಾಗದಿದ್ದರೆ ರಾಜಸ, ತಾಮಸ ಆನಂದದ ಕಡೆಗೆ ಅವನು ಆಕರ್ಷಿತನಾಗುತ್ತಾನೆ. ವ್ರತಗಳ ಅನುಷ್ಠಾನದ ಸಾತ್ವಿಕ ಆನಂದದ ಅನುಭವ ಕಡಿಮೆ ಆಯಿತೆಂದರೆ ಭೋಗ ವಿಷಯದ ಆಕರ್ಷಣೆ ಮತ್ತು ವ್ಯಸನಗಳಿಗೆ ಬಲಿಯಾಗುವಿಕೆ ಹೆಚ್ಚುತ್ತದೆ.
ವ್ಯಸನಗಳಲ್ಲಿ ಒಂದು ರೀತಿಯ ಉನ್ಮಾದದ ಸುಖ ಇರುವುದರಿಂದ ಅನೇಕರು ಅವುಗಳನ್ನು ಬಯಸುತ್ತಾರೆ. ವ್ಯಸನಗಳಿಗೆ ಒಳಗಾಗುವುದರಿಂದ ಆರೋಗ್ಯ, ಕೌಟುಂಬಿಕ ಪರಿಸ್ಥಿತಿ ಮತ್ತು ಆರ್ಥಿಕ ಪರಿಸ್ಥಿತಿಗಳು ಹದಗೆಡುತ್ತವೆ. ವ್ಯಸನಗಳಿಗೆ ಒಳಗಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿವೆ. ಗಣೇಶನ ಹಬ್ಬ, ಶರನ್ನವರಾತ್ರಿ, ಶಿವರಾತ್ರಿ ಮುಂತಾದ ಅನೇಕ ಹಬ್ಬಗಳು ಮೂಲತಃ ವ್ರತಗಳು. ಆದರೆ ಇವುಗಳನ್ನು ವ್ರತಗಳ ರೂಪದಲ್ಲಿ ಆಚರಿಸದೇ ಉತ್ಸವಗಳ ರೂಪಗಳಲ್ಲಿ ಆಚರಿಸುವಿಕೆ ಈಗ ತುಂಬಾ ಕಂಡು ಬರುತ್ತದೆ. ಉತ್ಸವಗಳ ಆಚರಣೆ ತಪ್ಪಲ್ಲ. ಆದರೆ ವ್ರತಗಳ ಸ್ವರೂಪದಲ್ಲಿ ಆಚರಣೆ ಕಡಿಮೆಯಾಗಿರುವುದು ದೋಷವಾಗಿದೆ.