ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಶಕ್ತ್ಯಾನುಸಾರ ಸತ್ಪಾತ್ರರಿಗೆ ದಾನ ಮಾಡಿ…

04:57 AM Nov 20, 2024 IST | Samyukta Karnataka

ಭಗವಂತನ ತತ್ವಗಳನ್ನು ನಾವು ತಿಳಿಯೋದಕ್ಕೆ ಅನಂತ ಕಾಲದ ಸಾಧನೆ ಅಗತ್ಯವಾಗಿಬೇಕು. ಅವನ ಇರುವಿಕೆ ಬಗ್ಗೆ ನಂಬಿಕೆ ಇರಬೇಕು. ಜಿಜ್ಞಾಸೆ ಅನಗತ್ಯ. ಜಡಗಳಲ್ಲಿ ದೇವರಿಲ್ಲ ಎಂಬುದು ತಪ್ಪು ಹಾಗೂ ಜೀವರಲ್ಲಿಯೂ ಬಿಂಬರೂಪಿಯಾಗಿ ಪರಮಾತ್ಮನಿದ್ದಾನೆ. ದೇವರು ಒಳಗೂ, ಹೊರಗೂ ಇದ್ದಾನೆ. ಅವನನ್ನು ಅರಿಯಲು ಮಾತ್ರ ಒಳಗಿನ ಕಣ್ಣುಗಳೇ ಬೇಕು.
ನಮ್ಮ ಹೃದಯದೊಳಗೂ ಇದ್ದ ಭಗವಂತನು ಅಖಿಲಾಂಡಕೋಟಿ ಬ್ರಹ್ಮಾಂಡ ವ್ಯಾಪ್ತನೂ ಆಗಿದ್ದಾನೆ. ಆತ ಸರ್ವತ್ರ ವ್ಯಾಪ್ತ. ಅಂಥ ಸರ್ವೋತ್ತಮನಾದ ಭಗವಂತನ ಅದ್ಭುತ ಸಂದೇಶಗಳನ್ನು ಜೀವನದಲ್ಲಿ ನಾವು ಚಿಂತನೆ ಮಾಡಬೇಕು.
`ಯಜ್ಞೋ ದಾನಂ ತಪಶ್ಚೇವ' ಎಂಬ ಸಂದೇಶವನ್ನು ಕೃಷ್ಣ ಪರಮಾತ್ಮ ನೀಡಿದ್ದಾನೆ. ಭಗವದ್ಗೀತೆಯಲ್ಲಿ ಮನುಜ ಕುಲಕ್ಕೆ ಹೇಗೆ ಜೀವನ ಮಾಡಬೇಕು ಎಂದು ಹೇಳಿದ್ದಾನೆ. ಯಜ್ಞ, ಧ್ಯಾನ ಹಾಗೂ ತಪಸ್ಸನ್ನು ಮಾಡುವಾಗ ಆತನ ಯೋಗ್ಯತೆ ಹೇಗಿರಬೇಕು ಎಂಬುದನ್ನೂ ವಿವರಿಸಲಾಗಿದೆ. ದಾನಾದಿಗಳನ್ನು ಮಾಡುವಾಗ ಯೋಗ್ಯತೆ ಮತ್ತು ಯೋಗ್ಯರಿಗೆ ತಕ್ಕಂತೆ ದಾನ ಮಾಡಬೇಕು ಎಂದು ಕಂಚಿ ಮಹಾತ್ಮೆಯಲ್ಲಿ ವಶಿಷ್ಠರು ಹೇಳುತ್ತಾರೆ.
೧೦೦೦ ರೂ. ಆಕಳ ಇದ್ದವನು ನೂರು ವರಹ(ಈಗಿನ ರೂಪಾಯಿ ಎನ್ನೋಣ)ದಾನ ಕೊಡುವದು. ನೂರು ಆಕಳು ಇದ್ದವನು ೧೦ ಆಕಳನ್ನು ದಾನ ಮಾಡುವುದು. ೧೦ ಇದ್ದವನು ಒಂದು ದಾನವನ್ನು ಕೊಡುವುದು ಅಷ್ಟೇ ಎಲ್ಲ ಸಮಾನ. ಈ ಎರಡರ ಪುಣ್ಯವೂ ಒಂದೇ.
ಹಾಗೆಂದ ಮಾತ್ರಕ್ಕೆ ಯೋಗ್ಯತೆ ಇದ್ದೂ ಕಡಿಮೆ ದಾನ ಮಾಡುವದು ಸರಿಯಲ್ಲ. ಉತ್ಕಟ ಭಕ್ತಿ ಬಹುಮುಖ್ಯವೆಂದು ಶ್ರೀಮದಾಚಾರ್ಯರು ತಾತ್ಪರ್ಯ ನಿರ್ಣಯದಲ್ಲಿ ನಿರ್ಣಯವನ್ನು ಹೇಳುತ್ತಾರೆ. ಸ್ವಲ್ಪ ಹಣವಿದ್ದಾಗ ಕೊಡುವ ಹಣಕ್ಕೆ ಬೆಲೆ ಬಹಳ. ಆದರೂ ಕರ್ತೃವಿನಲ್ಲಿರುವ ಮಹಾಜ್ಞಾನ ಭಕ್ತಿ ತ್ಯಾಗ, ಕಾಮಕ್ರೋಧಾದಿ ಗುಣಗಳಿದ್ದು ಸಾತ್ವಿಕತೆ ಇರದೇ ಹೋದಲ್ಲಿ ಮಾಡುವ ಕರ್ಮಗಳಲ್ಲಿ ವಿಶೇಷ ಫಲ ಲಭಿಸದು.
ಲೋಭ ರಹಿತವಾಗಿ ಮಾಡುವ ಕರ್ಮಗಳು ವಿಶೇಷ ಫಲಗಳನ್ನು ನೀಡುತ್ತವೆ ಎಂದು ತಿಳಿಸುತ್ತಾರೆ. ಆ ದೃಷ್ಟಿಯಲ್ಲಿ ಶುದ್ಧ ಮನಸ್ಥಿತಿಯಿಂದ ವೈರಾಗ್ಯದಿಂದ ವಿಷ್ಣುಭಕ್ತಿಯಿಂದ ಜ್ಞಾನಪೂರ್ವಕವಾಗಿ ಅನುಸಂಧಾನ ಪೂರ್ವಕವಾಗಿ ಭಗವಂತನನ್ನು ಆರಾಧಿಸಬೇಕು.
ಯಥಾಶಕ್ತಿಯಿಂದ ಮತ್ತು ಯಥೋಚಿತವಾಗಿ ದಾನ ಮಾಡಿ ಶ್ರೀ ಕೃಷ್ಣನ ಅನುಗ್ರಹಕ್ಕೆ ಪಾತ್ರವಾಗಬೇಕು ಎಂದು ತಿಳಿಸುತ್ತಾರೆ. ಶ್ರೀಕೃಷ್ಣಾವತಾರ ಸಂದರ್ಭದಲ್ಲಿ ನಂದ ಯಥೋಚಿತವಾಗಿ ಗೋದಾನ ಮಾಡಿದ್ದಾನೆ. ವಸುದೇವ ಮನಸ್ಸಿನಿಂದ ಸಂಕಲ್ಪ ಮಾಡಿದ್ದಾನೆ. ನಂದ ಸಾಕಷ್ಟು ಗೋದಾನ ಮಾಡಿದ. ಯಥಾಶಕ್ತಿ ದಾನವನ್ನು ಮಾಡಿದ ನಮ್ಮ ಯೋಗ್ಯತೆಗೆ ಎಷ್ಟು ಸಾಧ್ಯವೊ ಅಷ್ಟು ಅಭಯದಾನ, ವಿದ್ಯಾದಾನ, ಜ್ಞಾನದಾನ ವಿದ್ಯೆದಾನ ಮಾಡಲು ಸಾಧ್ಯವಿದೆಯೋ ಅಷ್ಟು ದ್ರವ್ಯದಾನ, ಭೂದಾನ, ಗೃಹದಾನ ಹೀಗೆ ಯಥಾಶಕ್ತಿ ದಾನವನ್ನು ಮಾಡಿ ಅದನ್ನು ಭಗವಂತನಿಗೆ ಅರ್ಪಣೆ ಮಾಡಬೇಕು. ಯಜ್ಞ ಮತ್ತು ತಪಸ್ಸುಗಳನ್ನು ದೇವರಿಗೆ ಅರ್ಪಣೆ ಮಾಡಬೇಕು ಎಂಬ ಸಂದೇಶವನ್ನು ಶ್ರೀ ಕೃಷ್ಣ ಪರಮಾತ್ಮ ನೀಡಿದ್ದಾರೆ.

Next Article