ಶತಮಾನೋತ್ಸವ ಸಮಾರಂಭ ಕಾಂಗ್ರೆಸ್‌ಗೆ ಸೀಮಿತ: 27ರಂದು ಗಾಂಧಿ ಪ್ರತಿಮೆ ಬಳಿ ಧರಣಿ
ಮಂಗಳೂರು: ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭವನ್ನು ಕಾಂಗ್ರೆಸ್‌ಗೆ ಸೀಮಿತಗೊಳಿಸಿರುವುದನ್ನು ವಿರೋಧಿಸಿ ರಾಜ್ಯ ಬಿಜೆಪಿ ವತಿಯಿಂದ ಡಿ. 27ರಂದು ಬೆಂಗಳೂರಿನ ವಿಧಾನಸೌಧ ಬಳಿಯ ಗಾಂಧಿ ಪ್ರತಿಮೆ ಬಳಿ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ತಿಳಿಸಿದರು.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧಿ ವಿಚಾರಕ್ಕೂ ಈ ಅಧಿವೇಶನಕ್ಕೂ ಯಾವುದೇ ಸಂಬಂಧವೇ ಇಲ್ಲ. ಕಾಂಗ್ರೆಸ್ ತನ್ನ ಅಸ್ತಿತ್ವಕ್ಕಾಗಿ ಅಧಿವೇಶನ ನಡೆಸುತ್ತಿದೆ ಎಂದು ಆರೋಪಿಸಿದರು.
ಈಗಿನದ್ದು ನಕಲಿ ಗಾಂಧಿಯಾದರೆ, ಈಗಿನವರು ನಕಲಿ ವಿಚಾರವಾದಿಗಳು, ಆಗ ಅಸಲಿ ವಿಚಾರವಾದಿಗಳು. ಇದರ ಬಗ್ಗೆ ಚರ್ಚಿಸಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ. ಅಹಿಂಸೆ, ಸ್ವದೇಶಿ, ಗೋಹತ್ಯೆ ನಿಷೇಧ, ಸ್ವಚ್ಛ ಭಾರತ ಮುಂತಾದ ಗಾಂಧಿ ವಿಚಾರಗಳನ್ನು ಗಾಳಿಗೆ ತೂರಿದ ಕಾಂಗ್ರೆಸ್‌ಗೆ ಅವುಗಳ ಬಗ್ಗೆ ಚರ್ಚಿಸಲು ನೈತಿಕತೆ ಇಲ್ಲ. ಬೆಳಗಾವಿಯ ಆಗಿನ ಕಾಂಗ್ರೆಸ್ ಅಧಿವೇಶನಕ್ಕೆ ಕಾಂಗ್ರೆಸೇತರರೂ ಆಗಮಿಸಿದ್ದರು. ಅದು ಕಾಂಗ್ರೆಸ್ ಪಕ್ಷದ ಸ್ವತ್ತಲ್ಲದ ಕಾರಣ ಈ ಬಗ್ಗೆ ಸರ್ವಪಕ್ಷಗಳ ಸಭೆ ಕರೆದು ಚರ್ಚೆ ನಡೆಸಬೇಕಿತ್ತು. ಅದು ಬಿಟ್ಟು ಕಾಂಗ್ರೆಸ್ ಶತಮಾನೋತ್ಸವ ಸಂಭ್ರಮ ಎಂದು ಹೇಳುತ್ತಿರುವುದು ಸರಿಯಲ್ಲ ಎಂದರು.
ಪ್ರಿಯಾಂಕ್ ಖರ್ಗೆ ರಾಜಿನಾಮೆ ನೀಡಲಿ:
1 ಕೋಟಿ ರೂ. ಮೊತ್ತಕ್ಕೆ ಬೇಡಿಕೆ ಇರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತನ ಅಪರಾವತಾರ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಬೇಕು. ಹಾಗಾದಾಗ ಮಾತ್ರ ಗಾಂಧಿ ಚಿಂತನೆಯ ಕಾಂಗ್ರೆಸ್ ಅಧಿವೇಶನಕ್ಕೆ ಅರ್ಥ ಬರುತ್ತದೆ ಎಂದರು.
ಸರ್ಕಾರದ ನಡೆ ನೋಡಿ ನಿರ್ಧಾರ:
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಬಿಜೆಪಿ ಕೂಡ ರಾಜ್ಯಪಾಲರನ್ನು ಭೇಟಿ ಮಾಡಿ ನ್ಯಾಯಾಂಗ ತನಿಖೆಗೆ ಮನವಿ
ಮಾಡಿದೆ. ಹೀಗಾಗಿ ಸರ್ಕಾರದ ನಡೆ ನೋಡಿಕೊಂಡು ಬಿಜೆಪಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದರು.
ಬಿಜೆಪಿಯಲ್ಲಿ ಎರಡು ಬಣಗಳು ಪ್ರತ್ಯೇಕವಾಗಿ ವಕ್ಫ್ ಹೋರಾಟ ಕೈಗೊತ್ತಿಕೊಳ್ಳುವ ಬಗ್ಗೆ ಸಭೆ ನಡೆಸಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರವಿ ಕುಮಾರ್, ಈ
ವಿಚಾರವನ್ನು ಕೆಲವೇ ದಿನಗಳಲ್ಲಿ ವರಿಷ್ಠರು ಬಗೆಹರಿಸುತ್ತಾರೆ. ಮುಂದೆ ಎಲ್ಲವೂ ಸರಿಯಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮುಖಂಡರಾದ ಸತೀಶ್, ಮಹೇಶ್ ಜೋಗಿ, ರಾಜೇಶ್ ಕೊಟ್ಟಾರಿ, ವಸಂತ್ ಜೆ.ಪೂಜಾರಿ
ಇದ್ದರು.