ಶತಮಾನೋತ್ಸವ ಹೊಸ್ತಿಲಲ್ಲಿ ಆರ್‌ಎಸ್‌ಎಸ್
ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕನಸು ನನಸಾಗಿರುವ ಸಂಭ್ರಮದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಶತಮಾನೋತ್ಸವದ ಹೊಸ್ತಿಲಲ್ಲಿದ್ದು, ಮಾರ್ಚ್ ೧೫ರಿಂದ ೧೭ರವರೆಗೆ ಮಹಾರಾಷ್ಟ್ರದ ವಿದರ್ಭದಲ್ಲಿರುವ ನಾಗ್ಪುರದಲ್ಲಿ ನಡೆಯಲಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ (ಎಬಿಪಿಎಸ್) ಶತಮಾನೋತ್ಸವ ಆಚರಣೆಯ ರೂಪುರೇಷೆ ನಿರ್ಧರಿಸಲಿದೆ.
ಪ್ರತಿ ಮೂರು ವರ್ಷಕ್ಕೊಮ್ಮೆ ಆರ್‌ಎಸ್‌ಎಸ್ ಕೇಂದ್ರ ಕಚೇರಿ ನಾಗ್ಪುರದಲ್ಲಿ ನಡೆಯುವ ಎಬಿಪಿಎಸ್‌ನಲ್ಲಿ ಸಂಘದ ಚಟುವಟಿಕೆಗಳ ಆತ್ಮಾವಲೋಕನ ಹಾಗೂ ಭವಿಷ್ಯದ ಕುರಿತು ಯೋಜನೆ ರೂಪುಗೊಳ್ಳಲಿದೆ. ಬರುವ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಎಬಿಪಿಎಸ್ ಈ ಬಾರಿ ವಿಶೇಷವಾಗಿದ್ದು, ೨೦೨೫ರ ಆರ್‌ಎಸ್‌ಎಸ್ ಶತಮಾನೋತ್ಸವ ವರ್ಷಾಚರಣೆ ಕುರಿತು ಯಾವ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆಗೊಳ್ಳಬೇಕು ಎಂಬುದರ ನಿರ್ಧಾರವಾಗಲಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹೋರಾಟದ ತಾರ್ಕಿಕ ಅಂತ್ಯ ಕಂಡು ಮಂದಿರವೂ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ಹಿಂದೂ ರಾಷ್ಟ್ರ ನಿರ್ಮಾಣದ ಪರಿಕಲ್ಪನೆಯ ಭಾಗವಾಗಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಹೋರಾಟ ಕೈಗೆತ್ತಿಕೊಳ್ಳಬೇಕು ಎಂಬುದರ ಕುರಿತು ಮಹತ್ವದ ನಿರ್ಧಾರವನ್ನೂ ಎಬಿಪಿಎಸ್‌ನಲ್ಲಿ ಕೈಗೊಳ್ಳುವ ನಿರೀಕ್ಷೆ ಇದೆ.
ಎಬಿಪಿಎಸ್‌ನಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕಾರ್ಯಕಾರಿಣಿ ಮಂಡಳದ ಸದಸ್ಯರು, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಇನ್ನಿತರ ಸಂಘದ ಇತರ ಸಂಘಟನೆಗಳ ರಾಷ್ಟ್ರೀಯ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರ ಹಾಗೂ ಹೊರರಾಷ್ಟ್ರದ ಒಟ್ಟು ಸಂಘಟನಾತ್ಮಕ ೪೫ ಪ್ರಾಂತಗಳ ೧,೫೦೦ ಪ್ರತಿನಿಧಿಗಳು ಎಬಿಪಿಎಸ್‌ಗೆ ಅಪೇಕ್ಷಿತರಾಗಿದ್ದಾರೆ. ಪ್ರಸಕ್ತ ವರ್ಷ ಲೋಕಸಭಾ ಚುನಾವಣೆ ಕೂಡ ನಡೆಯುತ್ತಿರುವುದರಿಂದ ಅಖಿಲ ಭಾರತ ಮಟ್ಟದಲ್ಲಿ ಸಂಘದ ಕಾರ್ಯಕರ್ತರು ಯಾವ ನಡೆ ಅನುಸರಿಸಬೇಕು ಹಾಗೂ ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ ಹೇಗೆ ಇರಬೇಕು ಎಂಬುದರ ಬಗೆಗೂ ಪ್ರಮುಖರು ವಿಸ್ತೃತ ಚರ್ಚೆ ಮತ್ತು ಮಾರ್ಗದರ್ಶನ ನೀಡಲಿದ್ದಾರೆ.
ಆರ್‌ಎಸ್‌ಎಸ್ ವಿಸ್ತರಣೆ ಗುರಿ
ಆರ್‌ಎಸ್‌ಎಸ್ ಶತಮಾನೋತ್ಸವದ ಸಂದರ್ಭದಲ್ಲಿ ಸಂಘದ ಶಿಕ್ಷಾ ವರ್ಗದ ಯೋಜನೆಗಳನ್ನು ಹಮ್ಮಿಕೊಳ್ಳುವುದು ಮತ್ತು ದೇಶಾದ್ಯಂತ ಸ್ವಯಂಸೇವಕರ ತರಬೇತಿ ಕಾರ್ಯಕ್ರಮಗಳ ಆಯೋಜನೆ ಬಗೆಗೂ ಎಬಿಪಿಎಸ್‌ನಲ್ಲಿ ರೂಪುರೇಷೆ ಸಿದ್ಧವಾಗಲಿದೆ. ಸಂಘದ ಶತಮಾನೋತ್ಸವದ ಸಂದರ್ಭದಲ್ಲಿ ರಾಷ್ಟ್ರದಾದ್ಯಂತ ಸ್ವಯಂಸೇವಕ ಸಂಖ್ಯೆಯನ್ನು ದೊಡ್ಡಪ್ರಮಾಣದಲ್ಲಿ ವಿಸ್ತರಿಸಬೇಕೆಂಬ ಬಗೆಗೆ ವ್ಯಾಪಕ ಚಿಂತನೆ ನಡೆದಿದೆ. ಸದ್ಯ ಸರಿಸುಮಾರು ೬ ಸಾವಿರ ಪೂರ್ಣಾವಧಿ ಕಾರ್ಯಕರ್ತರನ್ನು ಸಂಘವು ಹೊಂದಿದ್ದು, ಇದನ್ನು ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ. ಅಲ್ಲದೇ ರಾಷ್ಟ್ರಾದ್ಯಂತ ಹಾಲಿ ಇರುವ ೭೨ ಸಾವಿರ ಶಾಖೆಗಳನ್ನು ೧ ಲಕ್ಷಕ್ಕೆ ಏರಿಸುವ ಉದ್ದೇಶವಿದೆ. ಅದಕ್ಕಾಗಿ ಹೊಸ ಪೀಳಿಗೆಯವರನ್ನು ಹಿಂದೂ ರಾಷ್ಟ್ರ ಹಾಗೂ ಹಿಂದೂ ಧರ್ಮದ ಸಿದ್ಧಾಂತದ ಕಡೆಗೆ ಆಕರ್ಷಿಸಲು ಸುದೀರ್ಘ ಯೋಜನೆ ರೂಪಿಸಲಾಗುತ್ತಿದೆ.
ಕಾಶಿ, ಮಥುರಾ ಬಾಕಿ ಹೈ..!
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ರಾಜಕೀಯ, ಕಾನೂನಾತ್ಮಕ, ಸಾಮಾಜಿಕ ಹೋರಾಟದ ಮುಂಚೂಣಿಯಲ್ಲಿ ಭಾರತೀಯ ಜನತಾ ಪಕ್ಷವಿದ್ದರೂ, ಬಿಜಪಿಗೆ ಸೈದ್ಧಾಂತಿಕ ಹಿನ್ನೆಲೆ ಮತ್ತು ಮಾನವ ಸಂಪನ್ಮೂಲವನ್ನು ಒದಗಿಸಿದ್ದ ಆರ್‌ಎಸ್‌ಎಸ್ ಇದೀಗ ಮುಂದಿನ ಒಂದು ಶತಮಾನದವರೆಗೆ ಹಿಂದೂ ರಾಷ್ಟ್ರ ಪರಿಕಲ್ಪನೆಯಲ್ಲಿ ಯಾವ ಯೋಜನೆಗಳನ್ನು ರೂಪಿಸಬೇಕು ಎಂಬ ಸವಾಲನ್ನು ಕೂಡ ಎದುರಿಸುತ್ತಿದೆ. ರಾಷ್ಟ್ರ ಹಾಗೂ ಹೊರರಾಷ್ಟ್ರಗಳಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ವಿಚಾರಗಳಲ್ಲಿ ಸೇವೆ ಹಾಗೂ ಶಿಕ್ಷಣದ ಕಾರ್ಯಕ್ರಮಗಳನ್ನು ಆರ್‌ಎಸ್‌ಎಸ್ ರೂಪಿಸುತ್ತಿದೆಯಾದರೂ ರಾಜಕೀಯ ಸಿದ್ಧಾಂತವನ್ನು ಸದಾ ಆಕ್ರಮಣಕಾರಿಯಾಗಿ ಪ್ರತಿಪಾದಿಸಲೇಬೇಕಾದ ಒತ್ತಡವೂ ಇದೆ. ಹೀಗಾಗಿ ಸದ್ಯಕ್ಕೆ ಕಾಶಿ ಹಾಗೂ ಮಥುರಾ ಹೋರಾಟಗಳು ತತ್‌ಕ್ಷಣಕ್ಕೆ ಆರ್‌ಎಸ್‌ಎಸ್ ಅಜೆಂಡಾದಲ್ಲಿ ಎದ್ದು ಕಾಣುತ್ತಿರುವ ವಿಷಯಗಳು. ಇದನ್ನು ಹೊರತುಪಡಿಸಿ ಮುಂದಿನ ಹಲವು ದಶಕಗಳ ಕಾಲ ಸಂಘದ ಚಟುವಟಿಕೆಗಳಿಗೆ ಮಾರ್ಗಸೂಚಿ ರೂಪಿಸುವ ಪ್ರಕ್ರಿಯೆಗೂ ಕೂಡ ಈಗ ಚಾಲನೆ ಸಿಗಲಿದೆ.