For the best experience, open
https://m.samyuktakarnataka.in
on your mobile browser.

ಶರಾವತಿ ಉಳಿಸಿ ಹೊಸ ಯೋಜನೆ ಕೈಬಿಡಿ

02:20 AM Aug 30, 2024 IST | Samyukta Karnataka
ಶರಾವತಿ ಉಳಿಸಿ ಹೊಸ ಯೋಜನೆ ಕೈಬಿಡಿ

ಶರಾವತಿ ಕಣಿವೆಯಲ್ಲಿ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಕೈಗೊಂಡಾಗಿದೆ. ಇನ್ನು ಅಲ್ಲಿ ಹೊಸ ಯೋಜನೆ ಕೈಗೊಂಡರೆ ಮತ್ತೊಂದು ವೈನಾಡು ದುರಂತ ಆಗುತ್ತದೆ. ಅದಕ್ಕೆ ಇಂದಿನ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ಜನ ಮತ್ತು ಎಂಜಿನಿಯರ್‌ಗಳು ಇದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಆದರೂ ಸರ್ಕಾರ ಮೊಂಡುತನ ಮಾಡಿ ಯೋಜನೆ ಕೈಗೊಂಡಲ್ಲಿ ಅದರಿಂದಾಗುವ ದುಷ್ಪರಿಣಾಮಗಳಿಗೆ ಉತ್ತರ ಕೊಡುವವರು ಯಾರು? ಪ್ರತಿ ಯೋಜನೆಗೂ ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು ಎಂಬ ನಿಯಮ ಇದ್ದರೂ ಸರ್ಕಾರ ಅದನ್ನು ಕಡೆಗಣಿಸುತ್ತ ಬಂದಿದೆ. ಎಲ್ಲದ್ದಕ್ಕೂ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರಬೇಕು ಎಂದಾದರೆ ಜನರಿಂದ ಚುನಾಯಿತ ಸರ್ಕಾರ ಎಂದು ಏಕೆ ಕರೆಯಬೇಕು. ಲಿಂಗನಮಕ್ಕಿ ಮತ್ತಿತರ ಜಲಾಶಯಗಳನ್ನು ನಿರ್ಮಿಸಿದಾಗ ಅದರ ಅಗತ್ಯ ಇತ್ತು. ಈಗ ಬೇರೆ ಕಡೆ ಜಲಾಶಯಗಳನ್ನು ನಿರ್ಮಿಸಲಾಗಿದೆ. ಅಲ್ಲಿ ಪಂಪ್ಡ್ ಸ್ಟೋರೇಜ್ ವ್ಯವಸ್ಥೆ ಜಾರಿಗೆ ತರಬಹುದು. ಅಲ್ಲದೆ ಈಗ ಎಲ್ಲ ಕಡೆ ಬ್ಯಾಟರಿ ಸ್ಟೋರೇಜ್ ವ್ಯವಸ್ಥೆ ಜಾರಿಗೆ ಬಂದಿದೆ. ಕಡಿಮೆ ದರದಲ್ಲಿ ಅದನ್ನು ಎಲ್ಲಿ ಬೇಕಾದರೂ ಮಾಡಿಕೊಳ್ಳಬಹುದು. ವಿದ್ಯುತ್ ನಷ್ಟವೂ ಇರುವುದಿಲ್ಲ. ಹೀಗಿರುವಾಗ ಎಂದೋ ರೂಪಿಸಿದಾಗ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಈಗ ಕೈಗೆತ್ತಿಕೊಳ್ಳುವುದು ಮೂರ್ಖತನ. ಅಲ್ಲದೆ ೨ ಸಾವಿರ ಮೆಗಾವ್ಯಾಟ್ ಸಾಧ್ಯವಿಲ್ಲ ಎಂದು ಎಂಜಿನಿಯರ್‌ಗಳೇ ಹೇಳಿದ್ದಾರೆ. ಹೆಚ್ಚು ಎಂದರೆ ೫೦೦ ಮೆಗಾವ್ಯಾಟ್ ಬರಬಹುದು. ಅದಕ್ಕಾಗಿ ಪರಿಸರ ನಾಶ ಪಡಿಸುವುದು ವಿವೇಕತನವಲ್ಲ. ಈಗ ಎಲ್ಲ ಕಡೆ ಸೋಲಾರ್ ವಿದ್ಯುತ್‌ಗೆ ಬೇಡಿಕೆ ಅಧಿಕಗೊಂಡಿದೆ. ಅದು ಕಡಿಮೆ ದರದಲ್ಲಿ ಲಭಿಸುತ್ತಿದೆ. ಅಲ್ಲದೆ ಈಗ ಪೀಕ್ ಮತ್ತು ನಾನ್ ಪೀಕ್ ಲೋಡ್ ಎಂಬುದು ಇಲ್ಲ. ಸೌರ ವಿದ್ಯುತ್ ಬೆಳಗ್ಗೆ ಹೊತ್ತು ಲಭಿಸುತ್ತಿರುವುದರಿಂದ ಜಲ ವಿದ್ಯುತ್ ಬಳಸಬೇಕಾದ ಅನಿವಾರ್ಯತೆ ಬರುವುದಿಲ್ಲ. ಶರಾವತಿ ಜಲ ವಿದ್ಯುತ್ ಯೋಜನೆ ಕೈಗೊಂಡಾಗ ಅತಿ ಕಡಿಮೆವೆಚ್ಚ ಇತ್ತು. ಈಗ ಅದೇ ಯೋಜನೆ ಕೈಗೊಂಡರೆ ಮೂರು ಪಟ್ಟು ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ. ಸೌರ ವಿದ್ಯುತ್ ಯೋಜನೆ ೩ ತಿಂಗಳಲ್ಲಿ ಪೂರ್ಣಗೊಳ್ಳುತ್ತದೆ. ಅಲ್ಲದೆ ಹವಾಮಾನ ವೈಪರೀತ್ಯದಿಂದ ಉಷ್ಣಾಂಶ ಅಧಿಕಗೊಳ್ಳುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಸೌರ ವಿದ್ಯುತ್ ಉತ್ಪಾದನೆಗೆ ಅಡೆತಡೆ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಪಂಪ್ಡ್ ಸ್ಟೋರೇಜ್ ಬಗ್ಗೆ ಚಿಂತಿಸುವುದು ಅವಾಸ್ತವ ಕಲ್ಪನೆ.
ಇನ್ನು ಬೆಂಗಳೂರಿಗೆ ಶರಾವತಿ ನೀರನ್ನು ತೆಗೆದುಕೊಂಡು ಹೋಗುವುದು. ಇದಕ್ಕಿಂತ ಅವಾಸ್ತವ ಚಿಂತನೆ ಮತ್ತೊಂದು ಇಲ್ಲ. ಪಕ್ಕದಲ್ಲೇ ಇರುವ ಮೇಕೆದಾಟು ಬಿಟ್ಟು ದೂರದ ಶರಾವತಿಗೆ ಹೋಗುವುದು ಎಂದರೆ ನಮ್ಮ ರಾಜಕಾರಣಿಗಳು ಮತ್ತು ಅಧಿಕಾರಿಗಳು ಯಾವ ಲೋಕದಲ್ಲಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಕುಡಿಯುವ ನೀರಿಗೆ ಅಡ್ಡಿ ಪಡಿಸಬಾರದು ಎಂಬುದು ಅಂತಾರಾಷ್ಟ್ರೀಯ ನದಿ ವಿವಾದಗಳಲ್ಲೇ ಒಪ್ಪಿಕೊಂಡಿರುವ ನಿಯಮ ಕಾವೇರಿಗೆ ಅನ್ವಯವಾಗುವುದಿಲ್ಲವೆ? ತಮಿಳುನಾಡಿನ ಜನ ಬೆಂಗಳೂರಿನ ಕುಡಿಯುವ ನೀರಿಗೆ ಅಡ್ಡಿ ಪಡಿಸುವಷ್ಟು ಅನಾಗರಿಕರಲ್ಲ. ಅಲ್ಲದೆ ಅವರಿಗೂ ಬೆಂಗಳೂರು ಬೇಕು. ಹೀಗಿರುವಾಗ ಸರ್ಕಾರ ವಿದ್ಯುತ್ ಮತ್ತು ಕುಡಿಯುವ ನೀರಿಗೆ ಶರಾವತಿ ಕಡೆ ನೋಡುವುದನ್ನು ಬಿಟ್ಟು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದರತ್ತ ಗಮನ ಹರಿಸುವುದು ಒಳ್ಳೆಯದು.
ನಿಸರ್ಗ ಕೊಡುವ ಎಲ್ಲ ಸವಲತ್ತುಗಳನ್ನು ಮಿತವಾಗಿ ಬಳಸಿ ಅದು ಮರುಪೂರಣಗೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು. ಅದನ್ನು ಬಿಟ್ಟು ನಿಸರ್ಗವನ್ನು ಸಂಪೂರ್ಣವಾಗಿ ಶೋಷಣೆ ಮಾಡಿದಲ್ಲಿ ಅದು ಮನುಷ್ಯನ ವಿರುದ್ಧ ತಿರುಗಿ ಬೀಳುವುದು ಖಂಡಿತ. ಕಾಡು ನಿಸರ್ಗದ ಸೃಷ್ಟಿಯಾಗಿರುವ ಹಾಗೆ ಮರುಭೂಮಿ ಕೂಡ ಅದೇ ನಿಸರ್ಗದ ಕೊಡುಗೆ ಎಂಬುದನ್ನು ಮರೆಯಬಾರದು. ಪಶ್ಚಿಮ ಘಟ್ಟಗಳು ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಎಲ್ಲ ವಿಜ್ಞಾನಿಗಳು ಹೇಳಿದ್ದಾರೆ. ವಿ ಎನ್. ಗಾಡ್ಗೀಳ್, ಡಾ. ಕಸ್ತೂರಿರಂಗನ್ ವರದಿಗಳು ಸರ್ಕಾರದ ಮುಂದಿದ್ದರೂ ಅದನ್ನು ಕಡೆಗಣಿಸಿ ಹೊಸ ಯೋಜನೆಗಳಿಗೆ ಕೈಹಾಕುತ್ತಿರುವುದು ನಿಜಕ್ಕೂ ದುರ್ದೈವ. ಅರಣ್ಯ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದು ಅರಣ್ಯ ಸಚಿವರು ಹೇಳುತ್ತ ಬಂದಿದ್ದಾರೆ.. ಒತ್ತುವರಿ ಮಾಡಿಕೊಂಡವರು ಬಲಾಢ್ಯರೇ ಹೊರತು ಬಡವರಲ್ಲ. ಒಂದು ಕಡೆ ಒತ್ತುವರಿ ತೆರವು ಗೊಳಿಸುವ ನಾಟಕ ಮತ್ತೊಂದು ಕಡೆ ಅದೇ ಅರಣ್ಯದಲ್ಲಿ ಹೊಸ ಯೋಜನೆಗಳನ್ನು ಕೈಗೊಳ್ಳುವುದು ಸರ್ಕಾರದ ದ್ವಂದ್ವ ನಿಲುವನ್ನು ತೋರಿಸುತ್ತದೆ. ಈ ಬಾರಿ ಮಳೆ ಬಂದಾಗ ಶಿರೂರು, ಅಘನಾಶಿನಿಗಳಲ್ಲಿ ಭೂಕುಸಿತ ಉಂಟಾಗಿದೆ. ಇವುಗಳೆಲ್ಲ ನಿಸರ್ಗ ನೀಡುತ್ತಿರುವ ಎಚ್ಚರಿಕೆಯ ಗಂಟೆ . ವಿದ್ಯುತ್ ಉತ್ಪಾದನೆ ನಮಗೆ ಬಹಳ ಮುಖ್ಯ.. ಅದನ್ನು ಕೈಬಿಡಲು ಬರುವುದಿಲ್ಲ. ಬೇರೆ ಕಡೆಯಾದರೂ ಉತ್ಪಾದನೆ ಮಾಡಲೇಬೇಕು. ಅದರ ಬಗ್ಗೆ ಚಿಂತಿಸುವುದು ಅಗತ್ಯ.