ಶರಾವತಿ ಗರ್ಭಕ್ಕೆ ಮತ್ತೆ ಇರಿಯುವಿರೇಕೆ?
ಬೆಂಗಳೂರಿನ ಬಕಾಸುರ ಹೊಟ್ಟೆ ತುಂಬಿಸಲು ನೀರು ಬೇಕಿದೆ. ಇದಕ್ಕಾಗಿ ಶರಾವತಿಯನ್ನು ಬೆಂಗಳೂರಿಗೆ ಕರೆತರಬೇಕಾಗಿದೆ.
ಬೆಂಗಳೂರಿನ ವಿದ್ಯುತ್ ಕೊರತೆ ನೀಗಿಸಲು ಶರಾವತಿ ಮತ್ತಷ್ಟು ವಿದ್ಯುತ್ ಉತ್ಪಾದಿಸಬೇಕಾಗಿದೆ. ಇದಕ್ಕಾಗಿ ತನ್ನ ಗರ್ಭ ಬಗೆದುಕೊಂಡು ವಿದ್ಯುತ್ ಉತ್ಪಾದಿಸಲು ಅಣಿಯಾಗಬೇಕಾಗಿದೆ…!!
ಕೇರಳದ ವಯನಾಡು ದುರಂತ, ಕೊಡಗು, ಚಿಕ್ಕಮಗಳೂರು, ಕಳಚೆ, ಶಿರೂರು, ಪುತ್ತೂರು ಭೂಕುಸಿತ ನಮ್ಮ ಕಣ್ಮುಂದೆ ನಡೆದರೂ ಆಳುವ ಪ್ರಭುಗಳು, ಯೋಜಕರು ಪಾಠ ಕಲಿತಂತಿಲ್ಲ. ಮತ್ತೆ ಮತ್ತೆ ಕಾಡು ನಾಶ ಮಾಡಿ, ಗುಡ್ಡ ಕೊರೆದು, ನದಿ ತಿರುಗಿಸಿ ಪ್ರಕೃತಿಯ ವಿರುದ್ಧ ಸೊಕ್ಕು ತೋರಿಸುವ ಹಠಕ್ಕೆ ಬಿದ್ದಂತಿದೆ.
ಶರಾವತಿ ನೀರನ್ನು ಲಿಂಗನಮಕ್ಕಿಯಿಂದ ಪಂಪ್ ಮಾಡಿ ಬೆಂಗಳೂರಿಗೆ ತಂದು ನೀರುಣಿಸುವ ಸುಮಾರು ೧೨ ಸಾವಿರ ಕೋಟಿ ರೂಪಾಯಿ ಯೋಜನೆ ಸಂಬಂಧ ವರದಿ ನೀಡಲು ತಾಂತ್ರಿಕ ಸಮಿತಿಯನ್ನು ಸರ್ಕಾರ ರಚಿಸಿ ಖಾಸಗಿ ಕಂಪನಿಯೊಂದಕ್ಕೆ ೭೪ ಲಕ್ಷ ರೂಪಾಯಿಗೆ ವಹಿಸಿದೆ.
ಇನ್ನೊಂದು ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಶರಾವತಿ ಪಂಪ್‌ಸ್ಟೋರೇಜ್ ಪವರ್ ಯೋಜನೆ! ಗೇರುಸೊಪ್ಪೆ ಟೇಲ್‌ರೇಸ್‌ನಲ್ಲಿ ವಿದ್ಯುತ್ ಉತ್ಪಾದಿಸಿ ಹರಿವ ನೀರನ್ನು ಮತ್ತೆ ತಡೆಗಟ್ಟಿ ಅದನ್ನು ಅಂತರ್ಗತ ವಿದ್ಯುತ್ ಯೋಜನೆ ರೂಪಿಸಿ ಮತ್ತೆ ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು.
ಒಂದು ರೀತಿ ಎರಡೂ ಯೋಜನೆಗಳು ಸ್ವಮೂತ್ರ ಪಾನ' ತತ್ವದಂತಿದೆ...!! ಶರಾವತಿ ಆಣೆಕಟ್ಟೆಯಿಂದ ಕಡೂರು, ಬಿರೂರು, ಬಾಣಾವರ, ಅರಸೀಕೆರೆ, ತಿಪಟೂರು, ಗುಬ್ಬಿ, ತುಮಕೂರು ಮಾರ್ಗವಾಗಿ ಬೆಂಗಳೂರು ಮಹಾನಗರಕ್ಕೆ ಪೈಪ್‌ಲೈನ್ ಮೂಲಕ ತರುವ ಯೋಜನೆ ಇಂದು ನಿನ್ನೆಯದ್ದಲ್ಲ. ಕಳೆದ ಹತ್ತು ವರ್ಷಗಳಿಂದ ಚಾಲ್ತಿಯಲ್ಲಿದೆ. ಹಿಂದೆ ಈ ಸಂಬಂಧ ಡಿಪಿಆರ್ ಕೂಡ ಸಿದ್ಧವಾಗಿ ಸಲ್ಲಿಕೆಯಾದ ನಂತರ ನಡೆದ ಪ್ರತಿಭಟನೆಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಂಗಾಲಾಗಿದ್ದರು. ಪರಿಸರ ತಜ್ಞರು ಮತ್ತು ಹಲವು ಸಂಘಟನೆಗಳು ಈ ಯೋಜನೆ ಸಾಧುವಲ್ಲ ಎಂದೇ ಸ್ಪಷ್ಟವಾಗಿ ಹೇಳಿದ್ದರು. ಅವರದ್ದೇ ಕ್ಷೇತ್ರದ ಜನರ ಆಕ್ರೋಶ ಭುಗಿಲೆದ್ದಾಗ, ಯೋಜನೆ ಕೈಬಿಟ್ಟಿದ್ದರು. ಆರವತ್ತು ವರ್ಷಗಳ ಲಿಂಗನಮಕ್ಕಿ ಜಲಾಶಯ ತುಂಬಿದ್ದು ಕೇವಲ ಹದಿನೈದು ಸಾರೆ ಮಾತ್ರ. ಹಾಗೇ ಕಳೆದ ಬೇಸಿಗೆಯಲ್ಲಿಯೇ ಲಿಂಗನಮಕ್ಕಿ ಪರಿಸರದಲ್ಲೇ ಕುಡಿಯುವ ನೀರಿನ ತತ್ವಾರ ಎದುರಾಗಿತ್ತು. ಅಲ್ಲಿನ ಶರಾವತಿ ಯೋಜನೆಗಾಗಿ ಸರ್ವಸ್ವ ತ್ಯಾಗ ಮಾಡಿದವರಿಗೆ ಇನ್ನೂ ನೀರು, ಭೂಮಿ, ವಿದ್ಯುತ್ ಯಾವುದೂ ಇಲ್ಲ. ಕಳೆದ ಮೇ ತಿಂಗಳಲ್ಲಿ ಶರಾವತಿ ಡೆಡ್‌ಸ್ಟೋರೇಜ್‌ಗಿಂತಲೂ ಕೆಳಗೆ ಕುಸಿದಿತ್ತು. ಈಗ ಅಲ್ಲಿಂದಲೇ ಬೆಂಗಳೂರಿಗೆ ಹದಿನೈದು ಟಿಎಂಸಿಎಫ್‌ಟಿಯಷ್ಟು ನೀರನ್ನು ಸಾಗಿಸುವ ಯೋಚನೆ ಸರ್ಕಾರದ್ದು. ಇದಕ್ಕಾಗಿ ಪೈಪ್‌ಲೈನ್ ಎಳೆಯಲು ಐದಾರು ನೂರು ಹೆಕ್ಟೇರ್ ಭೂಮಿ, ಅಡವಿ ಮಧ್ಯೆಯೂ ಗುಡ್ಡ ಕೊರೆಯಬೇಕಾಗುತ್ತದೆ. ಸರ್ಕಾರ ಹೇಳುವುದು ಮಳೆಗಾಲದಲ್ಲಿ ಈ ನೀರನ್ನು ಎತ್ತುತ್ತೇವೆ ಎಂದು. ಎಷ್ಟು ಅಪಹಾಸ್ಯ ಮತ್ತು ಬಾಲಿಶ ನೋಡಿ. ಶರಾವತಿ ನೀರನ್ನು ವಾಣಿವಿಲಾಸಕ್ಕೆ ತಂದು, ಅಲ್ಲಿಂದ ಬೆಂಗಳೂರಿಗೆ ಒಯ್ಯುತ್ತೇವೆ ಎನ್ನುತ್ತಾರೆ. ಹಾಗೆಯೇ ನೇರವಾಗಿ ಶರಾವತಿಯಿಂದಲೇ ಪಂಪ್ ಮಾಡಿ ಹೆಚ್ಚುವರಿ ನೀರನ್ನು ಬೆಂಗಳೂರಿಗೆ ಕೊಡುತ್ತೇವೆ ಎಂದೂ ಹೇಳುತ್ತಾರೆ! ಹತ್ತು ಟಿಎಂಸಿ ಬೆಂಗಳೂರು ಹಾಗೂ ಐದು ಟಿಎಂಸಿ ನೀರನ್ನು ಪೈಪ್ ಲೈನ್ ಹಾದು ಹೋಗುವ ಊರುಗಳಿಗೆ ಕೊಡುತ್ತಾರಂತೆ. ೨೦೪೦ರ ಸುಮಾರು ಬೆಂಗಳೂರಿಗೆ ನೀರಿನ ಕ್ಷಾಮ ಬರಲಿದೆಯಂತೆ. ಇದಕ್ಕಾಗಿಯೇ ಎತ್ತಿನ ಹೊಳೆ, ಮೇಕೆದಾಟು, ಈಗ ಶರಾವತಿ ಪೈಪ್‌ಲೈನ್ ಯೋಜನೆ! ಇದಕ್ಕೆ ಪ್ರತಿಸ್ಪರ್ಧಿ ಎನ್ನುವಂತೆಯೋ, ಪೂರಕವೋ ಗೊತ್ತಿಲ್ಲ. ಸುಮಾರು ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಶರಾವತಿ ಪಂಪ್‌ಸ್ಟೋರೇಜ್ ಪವರ್ ಯೋಜನೆ. ಗೇರುಸೊಪ್ಪೆಯಲ್ಲಿ ವಿದ್ಯುತ್ ಉತ್ಪಾದಿಸಿ ಹರಿವ ನೀರನ್ನು ಮತ್ತೆ ತಡೆಗಟ್ಟಿ ಅದನ್ನು ಅಂತರ್ಗತ ವಿದ್ಯುತ್ ಯೋಜನೆ ರೂಪಿಸಿ ಮತ್ತೆ ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು ಎನ್ನುವ
ಸ್ವಮೂತ್ರ ಪಾನ' ರೀತಿಯ ಯೋಜನೆಯಿದು!!
ತಜ್ಞರ ಲೆಕ್ಕದಲ್ಲಿ ಸಮುದ್ರಕ್ಕೆ ನೀರು ಹೋಗುವುದು ವ್ಯರ್ಥ. ಆದ್ದರಿಂದ ಅದನ್ನು ಮತ್ತೆ ಬಳಸಿ ವಿದ್ಯುತ್ ಉತ್ಪಾದನೆ ಮಾಡಬಹುದಂತೆ. ಹಾಗಾಗಿಯೇ ಪುನರಪಿ ನೀರು ಬಳಕೆ ಸ್ವಮೂತ್ರ ಪಾನ'ದಂತಲ್ಲದೇ ಇನ್ನೇನು? ಗೇರುಸೊಪ್ಪೆಯ ಅಣೆಕಟ್ಟೆಯಿಂದ ವಿದ್ಯುತ್ ಉತ್ಪಾದಿಸಿ, ಹರಿವ ನೀರನ್ನು ಮತ್ತೆ ತಡೆದು ಅಲ್ಲಿಂದ ತಳಕಳಲೆ ಡ್ಯಾಮ್‌ಗೆ ನೀರು ಪಂಪ್ ಮಾಡಿ ಅಲ್ಲಿ ಅಂತರ್ಗತ ವಿದ್ಯುತ್ ಸ್ಥಾವರ ನಿರ್ಮಿಸಬೇಕು. ೫೫೦ ಮೀಟರ್‌ನಷ್ಟು ಎತ್ತರ ನೀರನ್ನು ಪಂಪ್ ಮಾಡಿ, ೨ ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಾರಂತೆ! ವಾರಾಹಿಯಲ್ಲಿ ಗುಡ್ಡದ ಒಳಗೆ ವಿದ್ಯುತ್ ಉತ್ಪಾದನೆ ಮಾಡುವ ತಂತ್ರಜ್ಞಾನ ನಮ್ಮಲ್ಲಿದೆ. ಅಂತೆಯೇ ಇಲ್ಲೂ ಮಾಡಿದರಾಯಿತಲ್ಲ ಎನ್ನುವುದು ಆಲೋಚನೆ. ಇದು ಸುಮಾರು ೧೦ ಸಾವಿರ ಕೋಟಿಯ ಯೋಜನೆ. ೨೦೧೭ರಲ್ಲೇ ಈ ಯೋಜನೆ ಬಂದಾಗ ೪೯೦೦ ಕೋಟಿ ರೂಪಾಯಿ ಅಂದಾಜು ವೆಚ್ಚ ಆಗಿತ್ತು. ಇದಕ್ಕೆ ೧೫೩ ಹೆಕ್ಟೇರ್ ಪ್ರದೇಶಗಳಲ್ಲಿ ಸುರಂಗ ಮತ್ತು ವಿದ್ಯುತ್ ಸ್ಥಾವರ ನಿರ್ಮಾಣ, ಹಾಗೆಯೇ ೮೭೭ ಅರಣ್ಯ ಪ್ರದೇಶದಲ್ಲಿ ಸ್ಥಾವರ ನಿರ್ಮಿಸುವ ಪ್ರಸ್ತಾಪ. ಇನ್ನು ಉತ್ಪಾದಿಸಿದ ವಿದ್ಯುತ್‌ನ್ನು ಬೆಂಗಳೂರಿಗೆ ಸಾಗಿಸಲು ಹೈಟೆನ್ಷನ್ ವಿದ್ಯುತ್ ಕಂಬಕ್ಕಾಗಿ ಪ್ರಸ್ತಾವನೆ. ಮತ್ತಷ್ಟು ಅರಣ್ಯ-ಮರಗಿಡಗಳು ಕಡಿತ. ಅಂದರೆ ಗೇರುಸೊಪ್ಪ ನೀರು ಸಮುದ್ರ ಮಟ್ಟದ ಸಮೀಪವಿದೆ. ಸಮುದ್ರಕ್ಕೂ ಗೇರುಸೊಪ್ಪ ನೀರಿಗೂ ಅಂತಹ ಅಂತರವಿಲ್ಲ. ಅಲ್ಲಿಂದ ೫೫೦ ಮೀಟರ್ ಪಂಪ್ ಮಾಡಲು ವಿದ್ಯುತ್ ಎಷ್ಟು ಬೇಕಾದೀತು? ಆ ನಂತರ ತಳಕಳಲೆಯಲ್ಲಿ ವಿದ್ಯುತ್ ಉತ್ಪಾದಿಸಬೇಕು. ಒಟ್ಟಾರೆ ಯೋಜನೆ ಉತ್ಪಾದನೆಗೂ ಮತ್ತು ವೆಚ್ಚಕ್ಕೂ ಸಮಸಮ ಎನ್ನುವ ತರ್ಕ ನಡೆದಿದೆ. ಇಷ್ಟಕ್ಕೂ ಮಳೆಗಾಲದಲ್ಲಿ ಮಾತ್ರ ಹೆಚ್ಚುವರಿ ನೀರು ಬಳಸಿ ವಿದ್ಯುತ್ ಉತ್ಪಾದಿಸುತ್ತೇವೆ ಎನ್ನುತ್ತಾರೆ. ಹಾಕಿರುವ ಯಂತ್ರೋಪಕರಣ, ಯೋಜಿಸಿರುವ ಸಾಮರ್ಥ್ಯ ಗಮನಿಸಿದರೆ ಮಳೆಗಾಲದಲ್ಲಷ್ಟೇ ಈ ಯೋಜನೆ ಕಾರ್ಯಗತವಾದರೆ, ಯೋಜಿತ ವಿದ್ಯುತ್ ಉತ್ಪಾದನೆಯ ಅರ್ಧದಷ್ಟೂ ಸಾಮರ್ಥ್ಯ ಸಾಧ್ಯವಿಲ್ಲ. ಹತ್ತಾರು ಸಾವಿರ ಕೋಟಿ ರೂಪಾಯಿಗಳ ಈ ಯೋಜನೆಯಲ್ಲಿ ತಿಂದವರೆಷ್ಟೋ, ಕದ್ದವರೆಷ್ಟೋ ಎನ್ನುವಂತಾಗುತ್ತದೆ. ನಾಶವಾಗುವುದು ಮಾತ್ರ ಅಲ್ಲಿಯ ಪರಿಸರ, ಪ್ರಕೃತಿ ಮತ್ತು ಸ್ಥಳೀಯ ಜನ. ಇಷ್ಟಕ್ಕೂ ಶರಾವತಿ ಸೊರಗಿದರೆ.... ಇದಕ್ಕೆ ಉತ್ತರವಿಲ್ಲ. ಹೇಗಿದೆ ನೋಡಿ. ಒಮ್ಮೆ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ೧೫ ಟಿಎಂಸಿ ನೀರು ಪೂರೈಕೆ. ಹಾಗೇ ಶರಾವತಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆ ಎನ್ನುವ ತರ್ಕ ಮಾಡಿ ಅಲ್ಲಿ ಮತ್ತೆ ವಿದ್ಯುತ್ ಉತ್ಪಾದನೆಯ ಆಲೋಚನೆ! ಪಶ್ಚಿಮಮುಖವಾಗಿ ಹರಿಯುತ್ತಿರುವ ಶರಾವತಿ ಸೊರಗಿದರೆ? ಈಗಲೇ ಮಲೆನಾಡು ಬಸವಳಿದಿದೆ. ಶರಾವತಿ ಕೊಳ್ಳದಲ್ಲಿ ಡಿಸೆಂಬರ್ ನಂತರ ರಣಬಿಸಿಲು... ಬರ... ಅನಾವೃಷ್ಟಿ. ಆರವತ್ತು ವರ್ಷಗಳ ಹಿಂದಿನ ಶರಾವತಿ ವಿದ್ಯುತ್ ಯೋಜನೆಯಿಂದ ಸಂತ್ರಸ್ತರಾದವರಿಗೆ ಇನ್ನೂ ಬದುಕಿಲ್ಲ. ಉದ್ಯೋಗವಿಲ್ಲ. ನೆಲೆಯಿಲ್ಲ. ಆದರೆ ಬೆಂಗಳೂರಿನ ದಾಹಕ್ಕೆ ಐದು ನೂರು ಕಿಲೋ ಮೀಟರ್ ದೂರದ ಈ ನದಿ, ಈ ಜನ ತ್ಯಾಗ ಮಾಡಬೇಕಾಗಿದೆ. ಇಷ್ಟಕ್ಕೇ ಬೆಂಗಳೂರಿನ ದಾಹ ಮುಗಿಯುತ್ತದೆ ಎನ್ನುವಂತಿಲ್ಲ. ಹುಬ್ಬಳ್ಳಿ-ಧಾರವಾಡ, ವಿಜಯಪುರ, ಬೆಳಗಾವಿ ಮಂದಿಯ ಕಣ್ಣು ಈಗಲೇ ಕಾಳಿ ನದಿ ಮೇಲೆ ಬಿದ್ದಿದೆ. ಅಲ್ಲಿಗಷ್ಟೇ ಏಕೆ? ಬೆಂಗಳೂರಿಗೂ ಕೊಡಿ, ಅಘನಾಶಿನಿ, ಬೇಡ್ತಿ, ಕಾಳಿ, ತುಂಗಭದ್ರಾ ನೀರನ್ನು ಎಂಬ ಬೇಡಿಕೆ ಭವಿಷ್ಯತ್ತಿನಲ್ಲಿ ಬರುವುದು ಸಹಜ. ಒಂದು ಕೆಆರ್‌ಎಸ್ ಡ್ಯಾಮ್, ಒಂದು ಕಾವೇರಿ ತಣಿಸಲಾಗದ ದಾಹವನ್ನು ಉಳಿದ ಜಲಮೂಲಗಳಿಂದಲೂ ತಣಿಸೋಣ ಎನ್ನುವ ಧಾಷ್ಟ್ಯ ಧೋರಣೆ ಢಾಳಾಗಿ ಕಂಡುಬರುತ್ತಿರುವುದು ದುರಂತ. ಶರಾವತಿ ನೀರನ್ನು ಬೆಂಗಳೂರಿಗೆ ಒಯ್ದು ಎಲ್ಲಿ ಸಂಗ್ರಹಿಸುತ್ತೀರಿ? ಗೊತ್ತಿಲ್ಲ... ನೇತ್ರಾವತಿ ನದಿಯಿಂದ ಎತ್ತಿನ ಹೊಳೆ ಮೂಲಕ ತಿಪ್ಪಗೊಂಡನಹಳ್ಳಿ ಡ್ಯಾಮ್‌ಗೆ ೧.೭ ಟಿಎಂಸಿ ನೀರು ತಂದು ಪಶ್ಚಿಮ ಭಾಗಕ್ಕೆ ೧೧೦ ಎಂಎಲ್‌ಡಿ ನೀರು ಪೂರೈಸುವ ಕಾರ್ಯ ಈಗಾಗಲೇ ಅನುಷ್ಠಾನದಲ್ಲಿದೆ. ನೇತ್ರಾವತಿ ನದಿಗೆ ಜಲಾಶಯ ನಿರ್ಮಿಸಿ ೨೦ ಟಿಎಂಸಿ ನೀರು ಸಂಗ್ರಹಿಸಬಹುದು ಎನ್ನುವ ಪ್ರಸ್ತಾವನೆಯನ್ನು ೨೦೧೭ರಲ್ಲೇ ಮಂಡಿಸಲಾಗಿತ್ತು. ಜನರ ವಿರೋಧದಿಂದ ಕೈಬಿಡಲಾಗಿತ್ತು. ಮತ್ತೊಮ್ಮೆ ಈ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬೆಂಗಳೂರಿನಲ್ಲಿ ಸಾವಿರಾರು ಕೆರೆಗಳಿದ್ದವು. ಅವೆಲ್ಲ ಈಗ ಮುಚ್ಚಿ ಹೋಗಿವೆ. ನೀರು ಸಂಗ್ರಹಿಸಿಟ್ಟುಕೊಳ್ಳಲೂ ಜಾಗವಿಲ್ಲ. ಹಾಗೆಯೇ ಬಿದ್ದ ಮಳೆ ನೀರೇ ವ್ಯರ್ಥವಾಗಿ ಹೋಗುತ್ತಿದೆ. ಕಳೆದ ಎರಡೂವರೆ ತಿಂಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಸಾರೆ ಇಡೀ ಬೆಂಗಳೂರು ನಗರ ಅಸ್ತವ್ಯಸ್ತ ಆಗುವ ರೀತಿ, ಇನ್ನೇನು ಜಲಪ್ರಳಯವೇ ಆದೀತೇನೋ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಅಷ್ಟು ಬಿದ್ದ ನೀರನ್ನು ಸರಿಯಾಗಿ ಸಂಗ್ರಹಿಸಿಡುವ ವ್ಯವಸ್ಥೆ ಇದ್ದಿದ್ದರೆ ಕನಿಷ್ಠ ಒಂದು ವರ್ಷಗಳ ಕಾಲ ಬೆಂಗಳೂರು ನಗರ ನೀರಿನ ತುಟಾಗ್ರತೆ ಎದುರಿಸುತ್ತಿರಲಿಲ್ಲ. ಇಂತಹ ಪರ್ಯಾಯ ವ್ಯವಸ್ಥೆಯನ್ನೇ ಮಾಡಿಲ್ಲ. ಸರಿ. ನೀರು ಬಳಕೆಯ ಇತಿ ಮಿತಿ, ಸದ್ವಿನಿಯೋಗ, ಕಟ್ಟುನಿಟ್ಟು ನಡೆದಿದೆಯೇ? ಅದೂ ಇಲ್ಲ. ಬೆಂಗಳೂರಿನಲ್ಲಿರುವ ೬೦ ಲಕ್ಷಕ್ಕೂ ಹೆಚ್ಚು ವಾಹನಗಳನ್ನು ತೊಳೆಯಲು ದಿನಕ್ಕೆ ಎಷ್ಟು ನೀರು ಬೇಕು? ಯಾರಾದರೂ ಅಂದಾಜಿಸಿದ್ದಾರಾ? ಮನುಷ್ಯ ಬಳಕೆಗಿಂತ ಹತ್ತು ಪಟ್ಟು ಹೆಚ್ಚು ನೀರನ್ನು ದುರ್ಬಳಕೆ ಮಾಡಲೇ ವ್ಯಯಿಸುತ್ತಿದ್ದಾನೆ ಎನ್ನುವುದು ಬೆಂಗಳೂರಿನಲ್ಲೊಮ್ಮೆ ಸುತ್ತಾಡಿದರೆ ಗೊತ್ತಾಗುತ್ತದೆ. ಕೇಳಿದಾಗೆಲ್ಲ ಬೆಂಗಳೂರಿಗೆ ನೀರು ಪೂರೈಸಿದರೆ ರಾಜಧಾನಿಗೆ ಬರುವ ವಲಸಿಗರೂ ಹೆಚ್ಚುತ್ತಾರೆ. ಮತ್ತೆ ನೀರಿನ ದಾಹ ಶುರುವಾಗುತ್ತೆ. ಇರಲಿ. ಶರಾವತಿ ಕೊಳ್ಳಕ್ಕೇ ಬರೋಣ. ಈ ಕೊಳ್ಳ ಈಗಾಗಲೇ ಬಗೆದ ಬಸವಳಿದ ಬೆಂಗಾಡಾಗಿದೆ. ಈ ಸ್ಥಿತಿಯಲ್ಲಿ ಒಂದು ಬೆಂಗಳೂರಿಗೆ ನೀರೊಯ್ಯುವ ಯೋಜನೆ. ಮತ್ತೊಂದು ಕೇಂದ್ರ ಸರ್ಕಾರ ಎಂಟೂವರೆ ಸಾವಿರ ಕೋಟಿ ರೂಪಾಯಿ ಕೊಡುತ್ತದೆ ಎನ್ನುವ ಕಾರಣಕ್ಕೆ ೨ ಸಾವಿರ ಮೆ.ವ್ಯಾ ವಿದ್ಯುತ್ ಯೋಜನೆ. ವಯನಾಡು ದುರಂತ ಏಕಾಯ್ತು? ಅಲ್ಲಿಯ ಅರಣ್ಯ ಬಗೆದು, ಮರ ಗಿಡಗಳನ್ನು ನಾಶ ಮಾಡಿ ಪ್ಲಾಂಟೇಶನ್, ರೆಸಾರ್ಟ್ ಇತ್ಯಾದಿ ಯೋಜನೆಗಳಿಂದ ಭೂಮಿ ಸಡಿಲಾಗಿ ಧರೆಗೆ ಧರೆಯೇ ಕುಸಿಯಿತು. ಅದೇ ರೀತಿ ಶಿರೂರು, ಸುಳ್ಯ... ಸರ್ಕಾರದ ಭೂಗರ್ಭ ಇಲಾಖೆಯೇ ಸಲ್ಲಿಸಿದ ವರದಿ ಪ್ರಕಾರ ೨೦೧೮ರಿಂದ ಈಚೆಗೆ ಇಡೀ ರಾಜ್ಯದಲ್ಲಿ ೭೦೦ಕ್ಕೂ ಹೆಚ್ಚು ಕಡೆ ಭಾರೀ ಭೂಕುಸಿತ ಸಂಭವಿಸಿದೆ. ಭೂಮಿ ಅಲುಗಾಡಿದೆ, ಅವಘಡ ತಂದಿದೆ... ಎಲ್ಲವೂ. ಸುದ್ದಿಯಾಗದೇ ಇರಬಹುದು. ಸುದ್ದಿಯಾಗದೇ ಇರಬಹುದು. ಅಲ್ಲಲ್ಲಿಯ ಜನ ಅನುಭವಿಸಿದ್ದಾರೆ. ಅಕಾಲಿಕ ಮಳೆ-ಅನಾವೃಷ್ಟಿ ಎಲ್ಲಕ್ಕೂ ಇದೇ ಕಾರಣ. ಸ್ವಲ್ಪ ತ್ಯಾಗ ಮಾಡಿದರೂ ಸರಿ, ವಿದ್ಯುತ್ ಯೋಜನೆ ಮಾಡಿಯೇ ಸಿದ್ಧ ಎನ್ನುತ್ತಾರೆ ನಮ್ಮ ರಾಜ್ಯದ ವಿದ್ಯುತ್ ಹಾಗೂ ಅರಣ್ಯ ಸಚಿವರುಗಳು. ಶರಾವತಿ ಟೂ ಬೆಂಗಳೂರು ನೀರು ತೆಗೆದುಕೊಂಡು ಹೋಗುವ ಯೋಜನೆಗೆ
ಇಐ ಟೆಕ್ನಾಲಾಜೀಸ್ ಪ್ರೈ ಲಿ' ಸಂಸ್ಥೆಗೆ ಕಾರ್ಯಸಾಧ್ಯತೆ ವರದಿ ನೀಡುವ ಟೆಂಡರ್ ನೀಡಲಾಗಿದೆ ಎಂದು ಬಹಿರಂಗವಾಗಿಯೇ ಘೋಷಿಸಲಾಗಿದೆ. ಹಾಗೆಯೇ ಶರಾವತಿ ಪಂಪ್ ಸ್ಟೋರೇಜ್ ವಿದ್ಯುತ್ ಯೋಜನೆಗೆ ಅರಣ್ಯ ಬಿಟ್ಟುಕೊಡಲು ಸಮ್ಮತಿಸುವ ಪ್ರಸ್ತಾವನೆಯನ್ನು ಕಳಿಸಿಕೊಡಲಾಗುತ್ತದೆ ಎನ್ನುತ್ತಾರೆ ಅರಣ್ಯ ಸಚಿವರು.ಅರಣ್ಯ ಬಿಟ್ಟುಕೊಡುವುದು ಎಷ್ಟು ಖುಷಿ! ಅತ್ತ, ವಯನಾಡು ದುರಂತದ ನಂತರ ಕೃಷಿಕರಿಂದ ಅರಣ್ಯ ತೆರವುಗೊಳಿಸಲು ಉತ್ಸಾಹ ತೋರುತ್ತಾರೆ… ಇತ್ತ ವಿನಾಶಕಾರಿ ಅರಣ್ಯನಾಶ ಯೋಜನೆಗಳಿಗೆ ಅನುಮತಿ ನೀಡುವ ಮನಸ್ಸು ಮಾಡುತ್ತಾರೆ… ಅರಣ್ಯದಂಚಿನ ಕೃಷಿಕ ಮರಗಿಡ ಬೆಳೆಸುತ್ತಾನೆ. ಹಸಿರು ಕಾಪಾಡಿಕೊಳ್ಳುತ್ತಾನೆ. ಇವರು ಇಲ್ಲಿ ಕಡಿದು ಹಾಕುತ್ತಾರೆ. ಹೇಗಿದೆ ನೋಡಿ ನಮ್ಮ ಯೋಜಕರ ಕರಾಮತ್ತು, ಹೇಗಿದೆ ನೋಡಿ ವಿಪರ್ಯಾಸ?
ತುಂಗಭದ್ರಾ ಜಲಾಶಯದ ಗೇಟ್ ಕುಸಿದು ೫೬ ಟಿಎಂಸಿ ನೀರು ವ್ಯರ್ಥವಾಗಿ ಹೋಗುತ್ತದೆ. ಒಂದು ಅಂದಾಜಿನ ಪ್ರಕಾರ ೧.೨೦ ಲಕ್ಷದಷ್ಟು ಬೆಳೆ ಹಾನಿಯಾಗುತ್ತವೆ. ಅಂದರೆ ಅಷ್ಟು ಮೌಲ್ಯದ ಪೀಕು ಬರುವುದೇ ಇಲ್ಲ. ಇವೆಲ್ಲ ಕಣ್ಣ ಮುಂದೆಯೇ ಇದ್ದರೂ ಮತ್ತಷ್ಟು ಪ್ರಕೃತಿ ವಿರೋಧಿ ಯೋಜನೆಗಳಿಗೆ ಸರ್ಕಾರ ಅನುಮತಿ ನೀಡುತ್ತಲೇ ಇರುತ್ತದೆ.
ಇದಕ್ಕೇ ಅಲ್ಲವೇ ನಾವು ತಂತ್ರಜ್ಞರು ಮತ್ತು ಯೋಜಕರನ್ನು ಈ ದೇಶದಲ್ಲಿ ಸೃಷ್ಟಿಸಿದ್ದು?!