ಶರಾವತಿ ತುಂಬಿದೆ ವಿದ್ಯುತ್ ದರ ಏರಿಕೆ ಬೇಡ
ಕಳೆದ ವರ್ಷ ಇದೇ ಕಾಲದಲ್ಲಿ ರಾಜ್ಯ ವಿದ್ಯುತ್ ಕೊರತೆ ಎದುರಿಸುತ್ತಿತ್ತು. ಅದರಿಂದ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಬೇಕಿತ್ತು. ಈ ವರ್ಷ ಪರಿಸ್ಥಿತಿ ಬದಲಾಗಿದೆ. ಶರಾವತಿ, ಕಾಳಿ ತುಂಬಿ ಹರಿದಿದೆ. ಜಲವಿದ್ಯುತ್‌ಗೆ ಕೊರತೆ ಇಲ್ಲ. ನಮ್ಮ ರಾಜ್ಯದ ಲಿಂಗನಮಕ್ಕಿ, ಸೂಪಾ ಮತ್ತು ಮಾಣೆ ಜಲಾಶಯಗಳಲ್ಲಿ ತುಂಬಿವೆ. ಇವುಗಳ ವಿದ್ಯುತ್ ಖರೀದಿ ದರ ಕೂಡ ಕಡಿಮೆ ಇರುವುದರಿಂದ ರಾಜ್ಯದ ೫ ವಿತರಣ ಕಂಪನಿಗಳು ನವೆಂಬರ್-ಡಿಸೆಂಬರ್‌ನಲ್ಲಿ ಕೆಇಆರ್‌ಸಿ ದರ ಪರಿಷ್ಕರಣೆಗೆ ಅರ್ಜಿ ಸಲ್ಲಿಸುವಾಗ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಬಾರದು. ಎಲ್ಲ ವಿದ್ಯುತ್ ಕಂಪನಿಗಳಿಗೆ ವಿದ್ಯುತ್ ದರ ಖರೀದಿಯೇ ದೊಡ್ಡ ಮೊತ್ತ. ಈ ಬಾರಿ ಜಲ ವಿದ್ಯುತ್ ಹೆಚ್ಚಾಗಿ ಲಭ್ಯವಿರುವುದರಿಂದ ಖರೀದಿ ದರ ಇಳಿಮುಖಗೊಳ್ಳುತ್ತದೆ. ಅದಕ್ಕೆ ಅನುಗುಣವಾಗಿ ಗ್ರಾಹಕರ ತಲೆ ಮೇಲೆ ಹೆಚ್ಚಿನ ಹೊರೆ ಹಾಕುವುದನ್ನು ಕೈಬಿಡುವುದು ಒಳ್ಳೆಯದು.
ಜಲ ವಿದ್ಯುತ್ ವರ
ನಮ್ಮಲ್ಲಿ ಮೊದಲಿನಿಂದಲೂ ಜಲ ವಿದ್ಯುತ್‌ಗೆ ಆದ್ಯತೆ ನೀಡುತ್ತ ಬರಲಾಗಿದೆ. ೧೨೦ ವರ್ಷಗಳ ಹಿಂದೆಯೇ ಜಲ ವಿದ್ಯುತ್ ಆರಂಭಿಸಿದ ನಮಗೆ ವಿದ್ಯುತ್ ಉತ್ಪಾದನೆ-ವಿತರಣೆ ಕಷ್ಟದ ಕೆಲಸವೇನಲ್ಲ. ಶಿವನಸಮುದ್ರ ಮೈಸೂರು ಅರಸರ ಕಾಲದಲ್ಲಿ ಆರಂಭವಾಗಿದ್ದು ಈಗಲೂ ಉತ್ಪಾದನೆಯಲ್ಲಿದೆ. ಅದರಲ್ಲೂ ಶರಾವತಿಯ ಲಿಂಗನಮಕ್ಕಿ ಅಣೆಕಟ್ಟು ನಮ್ಮ ರಾಜ್ಯಕ್ಕೆ ನಿಸರ್ಗ ನೀಡಿದ ಕೊಡುಗೆ. ಶರಾವತಿ ಕಣಿವೆಯಲ್ಲೇ ಮಹಾತ್ಮ ಗಾಂಧಿ, ಗೇರುಸೊಪ್ಪ ಜಲ ವಿದ್ಯುತ್ ಕೇಂದ್ರಗಳಿವೆ. ಇದಲ್ಲದೆ ಕಾಳಿ ನದಿಗೆ ಸೂಪಾ ಅಣೆಕಟ್ಟು ನಿರ್ಮಿಸಲಾಗಿದೆ. ಅಲ್ಲದೆ ಕದ್ರಾ ಕೊಡಸಳ್ಳಿ ಜಲ ವಿದ್ಯುತ್ ಯೋಜನೆಗಳಿವೆ. ಇಲ್ಲಿ ಸಾಕಷ್ಟು ಜಲ ವಿದ್ಯುತ್ ಯೋಜನೆ ಕೈಗೊಂಡಿರುವುದರಿಂದ ಹೊಸ ಯೋಜನೆ ಕೈಗೊಳ್ಳುವುದಕ್ಕೆ ಸ್ಥಳೀಯರ ವಿರೋಧ ಇರುವುದು ಸಹಜ.ಈಗ ಸರ್ಕಾರ ಶರಾವತಿ ಪಂಪ್‌ಡ್ ಸ್ಟೋರೇಜ್ ಯೋಜನೆ ನಿರ್ಮಿಸಲು ಹೊರಟಿದೆ. ಇದಕ್ಕೆ ಕೇಂದ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಸಿಗುವುದು ಕಷ್ಟ.
ಈಗ ಇರುವ ಜಲ ವಿದ್ಯುತ್ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ವಿದ್ಯುತ್ ಕೊರತೆ ಬರುವುದಿಲ್ಲ. ಜಲ ವಿದ್ಯುತ್‌ಗೆ ಆದ್ಯತೆ ಕೊಡುವ ಮೂಲ ಉದ್ದೇಶ ಕಡಿಮೆ ದರದಲ್ಲಿ ವಿದ್ಯುತ್ ಲಭಿಸುವುದು ಹಾಗೂ ಪೀಕ್ ಲೋಡ್ ಕೂಡಲೇ ಜಲ ವಿದ್ಯುತ್ ಬಳಸಿಕೊಳ್ಳಬಹುದು. ಕಳೆದ ಏಪ್ರಿಲ್‌ನಲ್ಲಿ ಕೆಇಆರ್‌ಸಿ ನೀಡಿದ ದರದಂತೆ ಜಲ ವಿದ್ಯುತ್ ಕೆಪಿಸಿ ಮೂಲಕ ಲಭಿಸುವುದಕ್ಕೆ ಪ್ರತಿ ಯೂನಿಟ್‌ಗೆ ಸರಾಸರಿ ೩.೬೭ ರೂ, ನೀಡುತ್ತಿದ್ದೇವೆ. ಇತರೆ ಜಲ ವಿದ್ಯುತ್ ಕೇಂದ್ರಗಳಿಂದ ಬರುವ ವಿದ್ಯುತ್‌ಗೆ ಪ್ರತಿಯೂನಿಟ್‌ಗೆ ಸರಾಸರಿ ೨.೦೫ ರೂ. ನೀಡುತ್ತಿದ್ದೇವೆ. ಇದಕ್ಕಿಂತ ಕಡಿಮೆ ದರದಲ್ಲಿ ಸೋಲಾರ್ ಕೂಡ ಬರುವುದಿಲ್ಲ.
ಶಾಖೋತ್ಪನ್ನ
ಇನ್ನು ನಾವು ನಂಬಿಕೊಂಡಿರುವುದು ಕಲ್ಲಿದ್ದಲು ಆಧರಿತ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು. ಇವುಗಳ ಸರಾಸರಿ ದರ ಪ್ರತಿ ಯೂನಿಟ್‌ಗೆ ೭.೮೮ ರೂ. ಇದಕ್ಕೆ ಕಲ್ಲಿದ್ದಲು ಹೊರ ರಾಜ್ಯದಿಂದ ಬರಬೇಕು. ಅಲ್ಲದೆ ಕೇಂದ್ರ ಸರ್ಕಾರ ಈಗ ಕಲ್ಲಿದ್ದಲು ಆಧರಿತ ವಿದ್ಯುತ್ ಯೋಜನೆಗಳಿಗೆ ಉತ್ತೇಜನ ನೀಡುತ್ತಿಲ್ಲ. ಕೃಷಿ ತ್ಯಾಜ್ಯವನ್ನು ಕಲ್ಲಿದ್ದಲು ಜತೆ ಬಳಸಿದಲ್ಲಿ ಮಾತ್ರ ಅದಕ್ಕೆ ಭವಿಷ್ಯವಿದೆ. ಕೇಂದ್ರೀಯ ವಿದ್ಯುತ್ ಜಾಲದಿಂದ ಬರುವ ವಿದ್ಯುತ್‌ಗೆ ಸರಾಸರಿ ಪ್ರತಿ ಯೂನಿಟ್‌ಗೆ ೫.೦೩ ರೂ ಕೊಡುತ್ತಿದ್ದೇವೆ. ಖಾಸಗಿ ಕಂಪನಿಯಿಂದ ಖರೀದಿ ಮಾಡುವ ವಿದ್ಯುತ್ ಮಾತ್ರ ದುಬಾರಿ. ಅದರ ದರ ಪ್ರತಿ ಯೂನಿಟ್‌ಗೆ ೯.೧೭ ರೂ. ಸೋಲಾರ್ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ ೪.೫೭ ರೂ. ಕೊಡುತ್ತಿದ್ದೇವೆ. ಇವೆಲ್ಲವನ್ನೂ ನೋಡಿದಾಗ ಜಲ ವಿದ್ಯುತ್ ಅತ್ಯಂತ ಸೋವಿ ಎಂಬುದು ಸ್ಪಷ್ಟ. ಅದನ್ನು ಜಾಣ್ಮೆಯಿಂದ ಬಳಸಿಕೊಳ್ಳುವುದು ಮುಖ್ಯ.
ಈಗ ಲಿಂಗನಮಕ್ಕಿ ಶೇ. ೯೫.೧೭. ಸೂಪಾ ಶೇ. ೯೫.೯೫ ಮತ್ತು ಮಾಣೆಯಲ್ಲಿ ಶೇ. ೯೧.೯೨ ರಷ್ಟು ನೀರಿನ ಸಂಗ್ರಹ ಇದೆ. ಇದರಿಂದ ಒಟ್ಟು ೭೧೫೩.೫೬ ದಶಲಕ್ಷ ಯೂನಿಟ್ ಲಭಿಸಲಿದೆ. ಈಗ ನಾವು ಪ್ರತಿದಿನ ೨೨೦ ದಶಲಕ್ಷ ಯೂನಿಟ್ ಬಳಸುತ್ತಿದ್ದೇವೆ. ಇದರಲ್ಲಿ ಜಲ ವಿದ್ಯುತ್ ಕೊಡುಗೆ ೩೫.೩೦ ದಶಲಕ್ಷ ಯೂನಿಟ್. ಇದೇ ರೀತಿ ಮಿತವ್ಯಯದಲ್ಲಿ ಬಳಸಿದರೆ ೩೬೧ ದಿನಗಳು ಸುಲಭವಾಗಿ ಬರಲಿದೆ. ಅಂದರೆ ಮುಂದಿನ ಮಳೆಗಾಲದವರೆಗೆ ವಿದ್ಯುತ್ ಕೊರತೆ ಬರುವುದಿಲ್ಲ.
ಸರ್ಕಾರದ ಸಹಾಯಧನ
ರೈತರ ೧೦ ಅಶ್ವಶಕ್ತಿಗಿಂತ ಕಡಿಮೆ ಇರುವ ಪಂಪ್‌ಸೆಟ್‌ಗೆ ಹಾಗೂ ಗೃಹ ಜ್ಯೋತಿ ಬಳಕೆದಾರರಿಗೆ ಮಾಸಿಕ ೨೦೦ ಯೂನಿಟ್ ಉಚಿತ ವಿದ್ಯುತ್ ಕೊಡುವುದರಿಂದ ಅದಕ್ಕೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಅದರಿಂದ ಆ ವೆಚ್ಚವನ್ನು ವಿದ್ಯುತ್ ದರದ ಪರಿಷ್ಕರಣೆಯಲ್ಲಿ ಸೇರ್ಪಡೆ ಮಾಡುವ ಅಗತ್ಯವಿಲ್ಲ. ಇದನ್ನು ಹೊರತುಪಡಿಸಿದರೆ ಇತರೆ ವೆಚ್ಚಗಳು ಗ್ರಾಹಕರ ಮೇಲೆ ಬೀಳುವ ಅಪಾಯವಿದೆ. ಮೂಗಿಗೆ ಮೂಗುತಿ ಭಾರ ಎನ್ನುವಂತೆ ವಿದ್ಯುತ್ ಕಂಪನಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಂಬಳ ಸಾರಿಗೆ ಭತ್ಯೆಯೇ ಹೊರಲಾಗದ ಹೊರೆಯಾಗಿದೆ. ವಿದ್ಯುತ್ ಕಂಪನಿಗಳ ಆದಾಯ ಅಧಿಕಗೊಂಡಿಲ್ಲ. ಸ್ಮಾರ್ಟಿ್ ಮೀಟರ್ ಬಳಸಿದರೆ ವಿದ್ಯುತ್ ಸೋರಿಕೆಯನ್ನು ಕಡಿಮೆ ಮಾಡಬಹುದು. ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಹಿಂಜರಿಕೆ ಕಂಡುಬಂದಿದೆ.
ಸೋಲಾರ್‌ಗೆ ಸಹಾಯಧನ
ಕೇಂದ್ರ ಸರ್ಕಾರ ಸೋಲಾರ್ ವಿದ್ಯುತ್ ಬಳಕೆಗೆ ಹೆಚ್ಚಿನ ಸಹಾಯಧನ ನೀಡುತ್ತಿದೆ. ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರು ಸೋಲಾರ್ ವಿದ್ಯುತ್ ಬಳಕೆ ಅಥವ ಮುಕ್ತ ಬಳಕೆ (ಓಪನ್ ಆಕ್ಸೆಸ್)ಗೆ ಹೋಗುತ್ತಿರುವುದರಿಂದ ವಿದ್ಯುತ್ ಕಂಪನಿಗಳ ಆದಾಯ ಕಡಿಮೆಯಾಗುತ್ತಿದೆ. ಕೆಇಆರ್‌ಸಿ ಕಳೆದ ವರ್ಷವೇ ಕ್ರಾಸ್ ಸಬ್ಸಿಡಿ ಕಡಿಮೆ ಮಾಡಿದ್ದು ರಾಜ್ಯ ಸರ್ಕಾರಕ್ಕೆ ಬಿಸಿತುಪ್ಪವಾಗಿದೆ. ಕ್ರಾಸ್ ಸಬ್ಸಿಡಿ ಕಡಿಮೆ ಮಾಡುವುದು ರಾಜ್ಯ ಸರ್ಕಾರಕ್ಕೆ ಸುತರಾಂ ಇಷ್ಟವಿಲ್ಲ. ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ಹೆಚ್ಚಿನ ಹೊರೆ ವಿಧಿಸಬೇಕು.
ಕೃಷಿ ಪಂಪ್ ಸೆಟ್ ಮತ್ತು ಗೃಹ ಬಳಕೆದಾರರಿಗೆ ಉಚಿತ ವಿದ್ಯುತ್ ನೀಡಬೇಕು. ಅದರಿಂದ ಮತ ಬ್ಯಾಂಕ್ ಗಟ್ಟಿಯಾಗಿರುತ್ತದೆ. ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರು ಹೆಚ್ಚಿನ ದರ ಕೊಡುತ್ತಾರೆ. ಅವರು ಏನೇ ಆಗಲಿ ರಾಜ್ಯ ಬಿಟ್ಟು ಹೋಗಲು ಆಗುವುದಿಲ್ಲ. ಅಲ್ಲದೆ ಅವರು ರೈತರ ರೀತಿ ಸಂಘಟಿತರಾಗಿ ಹೋರಾಟ ಮಾಡುವವರಲ್ಲ ಹೀಗಾಗಿ ರಾಜ್ಯ ಸರ್ಕಾರ ವಿದ್ಯುತ್ ವಿತರಣ ಕಂಪನಿಗಳ ಹಣಕಾಸಿನ ಪರಿಸ್ಥಿತಿ ಉತ್ತಮಪಡಿಸಲು ಹೋಗುವುದಿಲ್ಲ.