ಶರಾವತಿ ಯೋಜನೆ: ಮತ್ತೆ ಸಂತ್ರಸ್ತರ ಹೋರಾಟ ಕೂಗು
ಮಹೇಶ್ ಹೆಗಡೆ
ಸಾಗರ: ಕಳೆದ ಹತ್ತು ವರ್ಷಗಳಿಂದ ಶರಾವತಿ ನದಿಯ ನೀರಿನ ಮೇಲೆ ಆಳುವ ಸರ್ಕಾರದ ಕಣ್ಣು ಬೀಳುತ್ತಲೇ ಇದೆ. ಶರಾವತಿ ಅಣೆಕಟ್ಟು ಕಟ್ಟಿದ ಸರ್ ಎಂ. ವಿಶ್ವೇಶ್ವರಯ್ಯ ಅವರ ಉದ್ದೇಶ ವಿದ್ಯುತ್ ಉತ್ಪಾದನೆ ಮಾತ್ರವಾಗಿತ್ತು. ಆದರೆ ಈಗಿನ ಸರ್ಕಾರಗಳು ವಿದ್ಯುತ್ ಉತ್ಪಾದನೆಯನ್ನು ಮಾಡುವ ಜೊತೆಯಲ್ಲಿ ಬೇರೆ ಬೇರೆ ಉದ್ದೇಶಗಳಿಗೂ ಈ ನೀರನ್ನು ಬಳಸಬೇಕು ಎಂದು ಸಾವಿರಾರು ಕೋಟಿ ರೂ. ವೆಚ್ಚ ಮಾಡಲು ಮುಂದಾಗುತ್ತಿವೆ. ಇದು ಸ್ಥಳೀಯ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಹೋರಾಟ ಮಾಡುವ ಅನಿವಾರ್ಯತೆ ಸ್ಥಳೀಯರಿಗೆ ಎದುರಾಗಿದೆ.
ಮರುಜೀವ: ಶರಾವತಿ ನದಿ ಅಣೆಕಟ್ಟಿನಿಂದ ದೂರದ ರಾಜಧಾನಿ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಯೋಜನೆಯೊಂದು ಈಗ ಸಿದ್ಧವಾಗಿದೆ. ಅಲ್ಲದೆ ಇದರ ಜೊತೆಯಲ್ಲಿ ಶರಾವತಿ ನೀರಿನಿಂದ ವಿದ್ಯುತ್ ಉತ್ಪಾದನೆಯಾಗಿ ಹೊರ ಹೋಗುವ ನೀರನ್ನು ಪುನರ್ ಬಳಕೆ ಮಾಡಿಕೂಂಡು ಕೋಲ್ಡ್ ಸ್ಟೋರೇಜ್ ಪಂಪ್ ಮಾಡುವ ಯೋಜನೆಯೊಂದು ಸಿದ್ಧವಾಗುತ್ತಿದೆ. ಇದಕ್ಕೂ ಸಹ ಸಾವಿರಾರು ಕೋಟಿ ಹಣವನ್ನು ಸರ್ಕಾರ ಹೂಡಿಕೆ ಮಾಡಲು ಮುಂದಾಗುತ್ತಿದೆ. ಈ ಎರಡೂ ಯೋಜನೆಗೆ ಸ್ಥಳೀಯರು ವಿರೋಧ ಮಾಡುತ್ತಿದ್ದಾರೆ.
ಶರಾವತಿ ನದಿ ನೀರನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲು ವಿರೋಧ ಮಾಡುತ್ತಿರುವುದಕ್ಕೆ ಅನೇಕ ಕಾರಣಗಳಿವೆ. ಶಿವಮೊಗ್ಗ, ಸಾಗರ, ಹೊಸನಗರ, ಉತ್ತರಕನ್ನಡ ಜಿಲ್ಲೆಯ ಹೊನ್ನಾವರ, ಶಿರಸಿ, ಗೇರುಸೊಪ್ಪ ಹೀಗೆ ಇಲ್ಲಿ ವಾಸ ಮಾಡುವ ಸ್ಥಳೀಯರು ಶರಾವತಿ ನದಿ ನೀರಿನ ಮುಳುಗಡೆ ಸಂತ್ರಸ್ತರಾಗಿದ್ದಾರೆ. ಅವರ ಜಮೀನು, ಮನೆ, ಆಸ್ತಿಪಾಸ್ತಿಗಳು ಮುಳುಗಡೆಯಾಗಿ, ಸರ್ವಸ್ವವನ್ನು ಕಳೆದುಕೊಂಡು ಬೇರೆ ಬೇರೆ ಕಡೆ ವಾಸ ಮಾಡುತ್ತಿದ್ದಾರೆ. ಅಣೆಕಟ್ಟು ಕಟ್ಟಿ ದಶಕಗಳು ಕಳೆದರೂ ಇಂದಿಗೂ ಸಂತ್ರಸ್ತರಾಗಿ ಹೀನಾಯ ಸ್ಥಿತಿಯಲ್ಲಿ ಬದುಕು ನಡೆಸುವಂತಾಗಿದೆ ಎನ್ನುವ ನೋವು ಅವರಿಗೆ ಕಾಡುತ್ತಿದೆ. ಅವರ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೆ, ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಹೋರಾಟ: ೨೦೧೯ರ ಸಮ್ಮಿಶ್ರ ಸರ್ಕಾರದಲ್ಲಿ ಮೊದಲ ಬಾರಿ ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆಯೊಂದು ಸಿದ್ಧವಾಗಿ ಅಂದಿನ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಡಿಪಿಆರ್ ತಯಾರಿಸಲು ಮುಂದಾಗಿರುವ ಬಗ್ಗೆ ಮಾಧ್ಯಮದಲ್ಲಿ ಪ್ರಕಟವಾದಾಗ ಸ್ಥಳೀಯರು ಭಾರಿ ವಿರೋಧವನ್ನು ಮಾಡಿ `ಶರಾವತಿ ಉಳಿಸಿ' ಹೋರಾಟವನ್ನು ಬೃಹತ್ ಮಟ್ಟದಲ್ಲಿ ನಡೆಸಿದರು. ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಾದ್ಯಂತ ಹೋರಾಟ ಆರಂಭವಾಯಿತು. ಎರಡೂ ಜಿಲ್ಲೆಗಳ ಬಂದ್ ನಡೆಯಿತು. ಸಾಹಿತಿಗಳು, ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಶಾಸಕರು ಇದಕ್ಕೆ ಬೆಂಬಲ ನೀಡಿದರು. ಸಾವಿರಾರು ಮಂದಿ ರಸ್ತೆಗೆ ಇಳಿದರು. ಸರ್ಕಾರ ಎಚ್ಚೆತ್ತುಕೊಂಡು ಪ್ರಸ್ತಾಪವನ್ನು ಕೈಬಿಟ್ಟಿತು. ಅದೇ ಸಮಯಕ್ಕೆ ಬದಲಾದ ರಾಜಕೀಯದಿಂದಾಗಿ ಸಮ್ಮಿಶ್ರ ಸರ್ಕಾರ ಉರುಳಿಬಿದ್ದು ಹೊಸ ಸರ್ಕಾರ ರಚನೆಯಾಯಿತು. ಆಗ ಸಿಎಂ ಆದ ಯಡಿಯೂರಪ್ಪ ಅವರು, ಈ ಯೋಜನೆಯನ್ನು ಕೈಬಿಡುವುದಾಗಿ ಅಧಿಕೃತ ಹೇಳಿಕೆಯನ್ನು ನೀಡಿದರು. ಅಲ್ಲದೆ ಶರಾವತಿ ನದಿ ನೀರು ಪುನರ್ ಬಳಕೆ ಮಾಡಿಕೂಂಡು ಕೋಲ್ಡ್ ಸ್ಟೋರೇಜ್ ಪಂಪ್ ಮಾಡುವ ಯೋಜನೆಯನ್ನೂ ಮುಂದುವರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಹೋರಾಟ ನಿಂತಿತ್ತು.
ಈಗಿನ ಸರ್ಕಾರ ಮತ್ತೆ ಶರಾವತಿ ನದಿ ನೀರು ಬೆಂಗಳೂರಿಗೆ ತೆಗೆದುಕೂಂಡು ಹೋಗುವ ಯೋಜನೆಗೆ ಜೀವ ತಂದಿದೆ. ಸಮಗ್ರ ಯೋಜನಾ ವರದಿ ರೆಡಿಯಾಗಿ ಟೆಂಡರ್ ಕರೆಯುವ ಹಂತಕ್ಕೆ ಹೋಗಿದೆ. ಹೀಗಾಗಿ ಹೋರಾಟದ ಕೂಗು ಕೇಳಿ ಬರುತ್ತಿದೆ.
ನಿಜ, ಶರಾವತಿ ನದಿ ನೀರು ಬೇರೆ ಉದ್ದೇಶಕ್ಕೆ ಬಳಸಲು ಸ್ಥಳೀಯರು ವಿರೋಧ ಮಾಡುತ್ತಿರುವುದಕ್ಕೆ ಬೇರೆ ಕಾರಣವೇ ಇದೆ. ಶರಾವತಿ ನದಿ ಅಣೆಕಟ್ಟು ಕಟ್ಟುವ ಪೂರ್ವದಲ್ಲಿ ಮಲೆನಾಡಿನ ಭಾಗದಲ್ಲಿ ಹಿರೇಭಾಸ್ಕರ ಮಡೇನೂರು ಅಣೆಕಟ್ಟು ಕಟ್ಟಲಾಗಿತ್ತು. ಈ ಸಂದರ್ಭದಲ್ಲಿ ಅನೇಕರು ತಮ್ಮ ಜಮೀನು, ಮನೆಯನ್ನು ಕಳೆದುಕೊಂಡು ಮುಳುಗಡೆಯಾಗಿ ಬೇರೆ ಜೀವನದ ಬದುಕನ್ನು ಕಟ್ಟಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಮತ್ತೆ ೧೯೬೨ರಲ್ಲಿ ಲಿಂಗನಮಕ್ಕಿ ಅಣೆಕಟ್ಟು ಕಟ್ಟಲಾಯಿತು. ಈ ಸಂದರ್ಭದಲ್ಲಿ ಹಿರೇಭಾಸ್ಕರ ಮಡೇನೂರು ಅಣೆಕಟ್ಟು ಸಮೇತ ಅನೇಕರು ಮತ್ತೆ ಬದುಕು ಕಳೆದುಕೊಂಡು ಮುಳುಗಡೆಯಾದರು. ಈ ಸಂದರ್ಭದಲ್ಲಿ ಮುಳುಗಡೆಯಾದ ಸಂತ್ರಸ್ತರಿಗೆ ಪುನರ್ ವಸತಿ ಮಾಡುವ ಭರವಸೆಯನ್ನು ಅಂದಿನ ಸರ್ಕಾರ ನೀಡಿದೆಯಾದರೂ ಈವರೆಗೆ ಮುಳುಗಡೆಯಾದ ಸಂತ್ರಸ್ತರಿಗೆ ಸರಿಯಾದ ಮೂಲ ಸೌಕರ್ಯವನ್ನು ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಮುಳುಗಡೆಯಾದವರಿಗೆ ಭೂಮಿಹಕ್ಕು ಸಿಗದೆ ಇಂದಿಗೂ ಹೋರಾಟವನ್ನು ಮಾಡುತ್ತಲೇ ಇದ್ದಾರೆ.
ಏಷ್ಯಾದಲ್ಲೆ ಅತಿ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಕೇಂದ್ರ ಶರಾವತಿ ವಿದ್ಯುತ್ ಕೇಂದ್ರವಾಗಿದೆ. ಸ್ಥಳೀಯರ ಬದುಕನ್ನು ಕತ್ತಲಿಗೆ ದೂಡಿ ದೂರದ ಬೆಂಗಳೂರು ಹಾಗೂ ಇನ್ನಿತರೆ ಮಾಯಾನಗರಿಗಳಿಗೆ ಬೆಳಕನ್ನು ಕೊಡುವ ಯೋಜನೆಯಿದು ಎನ್ನುವುದು ಪ್ರಮುಖ ದೂರು. ಈ ವಿದ್ಯುತ್ ತಯಾರಿಕೆಯನ್ನು ನಡೆಸುವ ಕರ್ನಾಟಕ ವಿದ್ಯುತ್ ಕಾರ್ಪೊರೇಷನ್(ಕೆಪಿಸಿ) ಕೋಟ್ಯಂತರ ರೂಪಾಯಿ ಲಾಭವನ್ನು ಪ್ರತಿವರ್ಷವೂ ಪಡೆಯುತ್ತಿದ್ದರೂ, ಮೂರಾಬಟ್ಟೆಯಾಗಿರುವ ಸಂತ್ರಸ್ತರ ಬದುಕು ಸರಿಪಡಿಸುವಲ್ಲಿ ಯಾವುದೇ ಆಸಕ್ತಿ ತೋರುತ್ತಿಲ್ಲ ಎನ್ನುವುದು ಅವರ ನೋವು. ಸಂತ್ರಸ್ತರ ಬಗ್ಗೆ ಎಷ್ಟರ ಮಟ್ಟಿಗೆ ನಿರ್ಲಕ್ಷ್ಯ ಎಂದರೆ, ಶರಾವತಿ ಯೋಜನೆ ನಾಡಿಗೇ ಬೆಳಕನ್ನು ನೀಡಿದರೂ, ಅದಕ್ಕಾಗಿ ಮನೆಮಠ ಕಳೆದುಕೊಂಡವರು ವಾಸಿಸುತ್ತಿರುವ ಎಷ್ಟೋ ಹಳ್ಳಿಗಳು ಇಂದಿಗೂ ಕತ್ತಲೆಯಲ್ಲೇ ಮುಳುಗಿವೆ.
ಸಾಗರ ತಾಲೂಕಿನ ಉರುಳುಗಲ್ಲು ಎನ್ನುವ ಗ್ರಾಮಕ್ಕೆ ಇಂದಿಗೂ ವಿದ್ಯುತ್, ರಸ್ತೆ ಸಂಪರ್ಕವಿಲ್ಲದೆ ಜನರು ಗ್ರಾಮ ತೊರೆಯುವ ಹಂತಕ್ಕೆ ಹೋಗಿದ್ದಾರೆ. ಅದಲ್ಲದೆ ಹಲವು ರೀತಿಯಲ್ಲಿ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಕಾನೂನುಗಳು ಇಲ್ಲಿಯ ಜನರ ಬದುಕು ಅಸಹನೀಯವಾಗುವಂತೆ ಮಾಡಿವೆ. ಡೀಮ್ಡ್ ಅರಣ್ಯ, ಶರಾವತಿ ಅಭಯಾರಣ್ಯ, ಅತೀ ಸೂಕ್ಷ್ಮವಲಯ, ಜೀವವೈವಿಧ್ಯ. ಹೀಗಾಗಿ ಹಲವು ಕಾನೂನುಗಳ ವ್ಯಾಪ್ತಿಗೆ ಒಳಪಟ್ಟು, ಅನೇಕ ನಿರ್ಬಂಧಗಳಿವೆ.