ಶಸ್ತ್ರ ಚಿಕಿತ್ಸೆ, ಹಾವಿಗೆ ಮರು ಜೀವ
ಬೆಳಗಾವಿ: ಜೆಸಿಬಿ ಕೆಳಗೆ ಸಿಕ್ಕು ಗಾಯಗೊಂಡು ಸಾವು ಬದುಕಿನ ಮಧ್ಯ ಒದ್ದಾಡುತ್ತಿದ್ದ ನಾಗರಹಾವೊಂದನ್ನು ಉರಗ ರಕ್ಷಕ ಕೇತನ ರಕ್ಷಿಸಿ ಯಶಸ್ವಿ ಶಸ್ತ್ರ ಚಿಕಿತ್ಸೆ ಕೊಡಿಸಿ ಬದುಕಿಸಿರುವ ಘಟನೆ ನಡೆದಿದೆ.
ಕೇದ್ನೂರು ಗ್ರಾಮದ ಹೊರ ವಲಯದ ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ನಾಗರಹಾವಿನ ಕತ್ತಿನ ಕೆಳಗೆ ಮತ್ತು ಹೊಟ್ಟೆಗೆ ಜೆಸಿಬಿ ಬಕೆಟ್ ತಾಗಿ ತೀವ್ರ ಪೆಟ್ಟಾಗಿ ನರಳಾಡುತ್ತಿತ್ತು. ಹಾವಿನ ದೇಹದ ಒಳಗಿನ ಭಾಗ ಹೊರಗೆ ಬಂದು, ಇನ್ನೇನು ಬದುಕುವುದಿಲ್ಲ ಎಂಬ ಸ್ಥಿತಿಯಿತ್ತು.
ಕೂಡಲೇ ಜಮೀನಿನ ಮಾಲಿಕ ಉರಗ ತಜ್ಞ ಕೇತನ್ ಅವರಿಗೆ ಕರೆ ಮಾಡಿ ಹಾವನ್ನು ರಕ್ಷಿಸುವಂತೆ ಕೋರಿದರು. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಕೇತನ್ ಕೂಡಲೇ ಬೆಳಗಾವಿ ಮಹಾಂತೇಶ ನಗರದಲ್ಲಿರುವ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಪಶುವೈದ್ಯಕೀಯ ಆಸ್ಪತ್ರೆಗೆ ಸುರಕ್ಷಿತ ಪೆಟ್ಟಿಗೆಯಲ್ಲಿ ತೆಗೆದುಕೊಂಡು ಬಂದಿದ್ದರು. ತಕ್ಷಣ ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಚ್.ಬಿ.ಸಣ್ಣಕ್ಕಿ, ಡಾ. ಮಹಾದೇವ ಮುಲ್ಲಾಟಿ ನೇತೃತ್ವದಲ್ಲಿ ವೈದ್ಯರ ತಂಡ ನಾಗರಹಾವಿಗೆ ಅರವಳಿಕೆ ಇಂಜಕ್ಷನ್ ನೀಡಿ ಕುತ್ತಿಗೆಯ ಕೆಳಭಾಗದಲ್ಲಿರುನ ಒಳ ಅಂಗಾಂಗ ಹೊರತೆಗೆಯುವಿಕೆ, ಸೀಳುವಿಕೆ ಮತ್ತು ಮರು ಜೋಡಣೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿದ್ದಾರೆ. ಹಾವಿನ ದೇಹವನ್ನು ಪುನಃ ಜೋಡಿಸಲು ವೈದ್ಯರು ೪೦ಕ್ಕೂ ಹೆಚ್ಚು ಹೊಲಿಗೆ ಹಾಕಿದ್ದಾರೆ. ಹಾವು ಪ್ರಾಣಾಪಾಯದಿಂದ ಪಾರಾಗಿದೆ. ವೈದ್ಯರ ಯಶಸ್ವಿ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.