For the best experience, open
https://m.samyuktakarnataka.in
on your mobile browser.

ಶಹಜಹಾನ್ ಹಸ್ತಾಂತರಕ್ಕೆ ನಕಾರ

04:00 AM Mar 06, 2024 IST | Samyukta Karnataka
ಶಹಜಹಾನ್ ಹಸ್ತಾಂತರಕ್ಕೆ ನಕಾರ

ಕೋಲ್ಕತಾ: ಪಶ್ಚಿಮಬಂಗಾಳದ ಸಂದೇಶಖಾಲಿಯಲ್ಲಿ ಭೂಕಬಳಿಕೆ, ಸುಲಿಗೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಶಾಸಕ ಶೇಖ್ ಶಹಜಹಾನ್‌ನನ್ನು ಸಿಬಿಐಗೆ ಹಸ್ತಾಂತರಿಸಲು ರಾಜ್ಯಸರ್ಕಾರ ಮಂಗಳವಾರ ನಿರಾಕರಿಸಿದೆ. ಜ. ೫ರಂದು ಇಡಿ ಅಧಿಕಾರಿಗಳ ಮೇಲೆ ನಡೆದಿರುವ ದಾಳಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿ ಈತನನ್ನು ಈ ತನಿಖಾ ಸಂಸ್ಥೆ ವಶಕ್ಕೆ ಒಪ್ಪಿಸಬೇಕೆಂದು ರಾಜ್ಯ ಸಿಐಡಿ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ಈ ದಿನ ಮಧ್ಯಾಹ್ನ ಸ್ಪಷ್ಟ ಆದೇಶ ಹೊರಡಿಸಿದ್ದರೂ ಅದನ್ನು ಪಾಲಿಸಲು ರಾಜ್ಯಸರ್ಕಾರ ನಿರಾಕರಿಸಿದೆ.
ಕಲ್ಕತ್ತಾ ಹೈಕೋರ್ಟ್ ಆದೇಶ ವಿರುದ್ಧ ರಾಜ್ಯಸರ್ಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು ಈ ತೀರ್ಪು ಹೊರಬೀಳುವವರೆಗೆ ಶೇಖ್ ಶಹಜಹಾನ್‌ನನ್ನು ಸಿಬಿಐಗೆ ಒಪ್ಪಿಸುವುದಿಲ್ಲ ಎಂದು ಸರ್ಕಾರ ಹಠಮಾರಿತನ ತೋರಿಸಿದೆ.
ಪೊಲೀಸರಿಂದ ಪಕ್ಷಪಾತ
ಈ ಶಾಸಕನನ್ನು ಸಂಜೆ ೪.೩೦ರೊಳಗೆ ಸಿಬಿಐಗೆ ಒಪ್ಪಿಸಬೇಕೆಂದು ಹೈಕೋರ್ಟ್ ಸೂಚಿಸಿದೆ. ಹೀಗಾಗಿ ಕೋಲ್ಕತ್ತಾದ ಪೊಲೀಸ್ ಕೇಂದ್ರಕಚೇರಿಗೆ ಸಿಬಿಐ ಅಧಿಕಾರಿಗಳು ತೆರಳಿದ್ದರು. ಆದರೆ ಪೊಲೀಸರು ಸಿಬಿಐ ವಶಕ್ಕೆ ನೀಡಲು ಒಪ್ಪಲಿಲ್ಲ. ಆದ್ದರಿಂದ ರಾತ್ರಿ ೭.೩೦ರ ವೇಳೆ ಸಿಬಿಐ ಅಧಿಕಾರಿಗಳು ಅಲ್ಲಿಂದ ನಿಗರ್ಮಿಸಿದರು.
ಪೊಲೀಸರು ಶಹಜಹಾನ್ ವಿಷಯದಲ್ಲಿ ಪಕ್ಷಪಾತ ತೋರಿಸುತ್ತಿದ್ದಾರೆ. ಆದ್ದರಿಂದ ಮುಕ್ತ ಹಾಗೂ ನ್ಯಾಯೋಚಿತ ರೀತಿಯಲ್ಲಿ ತನಿಖೆ ನಡೆಸುವಂತಾಗಲು ಪ್ರಕರಣವನ್ನು ಸಿಬಿಐಗೆ ಒಪ್ಪಿಸದೇ ಗತ್ಯಂತರ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸುಪ್ರೀಂಗೆ ಮೊರೆ
ಈ ಹಿನ್ನಲೆಯಲ್ಲಿ ಪಶ್ಚಿಮಬಂಗಾಳ ಸರ್ಕಾರವು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರೂ ತಕ್ಷಣವೇ ವಿಚಾರಣೆ ನಡೆಸಲು ನ್ಯಾಯಾಲಯ ಒಪ್ಪಲಿಲ್ಲ. ಆದರೆ ಈ ಮನವಿಯನ್ನು ಸುಪ್ರೀಂಕೋರ್ಟ್ನ ರಿಜಿಸ್ಟಾರ್ ಜನರಲ್ ಕಚೇರಿಯಲ್ಲಿ ನೋಂದಾಯಿಸುವಂತೆ ಸೂಚಿಸಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶಿವಜ್ಞಾನಂ ಅವರು ಈ ಮೊದಲು ರಾಜ್ಯಪೊಲೀಸರು ಹಾಗೂ ಸಿಬಿಐ ಜೊತೆಗೂಡಿ ವಿಶೇಷ ತನಿಖಾ ತಂಡ ರಚಿಸಿಕೊಂಡು ಈ ಪ್ರಕರಣದ ವಿಚಾರಣೆ ನಡೆಸಬೇಕೆಂದು ಆದೇಶಿಸಿದ್ದರು. ಆದರೆ ಮಂಗಳವಾರ ಈ ಹಿಂದಿನ ಆದೇಶವನ್ನು ರದ್ದುಪಡಿಸಿ ಸಿಬಿಐಗೆ ಹಸ್ತಾಂತರಿಸುವ ಆದೇಶ ಹೊರಡಿಸಿದರು.