ಶಾಂತಿ ಅರಳಲಿ ವಿಶ್ವ ನಗಲಿ
ನಾವು ವಾಸ ಮಾಡುತ್ತಿರುವ ಭೂಮಿ ಆಶ್ಚರ್ಯಕರವಾಗಿದೆ. ನದಿ-ಸಮುದ್ರ, ಗುಡ್ಡ-ಬೆಟ್ಟ, ಅನೇಕ ತರಹದ ಜೀವರಾಶಿಗಳು, ವಿಭಿನ್ನ ಪ್ರಾಣಿ-ಪಕ್ಷಿಗಳು, ಕ್ರಿಮಿಕೀಟಗಳು, ಬಗೆಬಗೆಯ ಮರ-ಗಿಡಗಳು, ಗಾತ್ರ, ಆಕಾರ, ಬಣ್ಣ ಮುಂತಾದವುಗಳಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ಈ ಎಲ್ಲ ಜೀವರಾಶಿಗಳಲ್ಲಿ ಅತಿಶಯನಾದವ ಮನುಷ್ಯ. ಇವನಿಗೆ ಯಾಕೆ ಹೆಚ್ಚುಗಾರಿಕೆ ಎಂದರೆ ಇವನು ವಿಚಾರಶೀಲ ಹಾಗಾಗಿ ಮನುಷ್ಯನಿಗೆ ಮಣೆ ಹಾಕಲಾಗುತ್ತದೆ.
ಆದರೆ ಇವನಿಗೆ ಶಾಂತಿ, ನೆಮ್ಮದಿ, ಸಮಾಧಾನವಿಲ್ಲ. ಆದೇಶ-ಈದೇಶ, ಆಧರ್ಮ_ಈಧರ್ಮ, ಆಜಾತಿ-ಈಜಾತಿ, ಆಬಣ್ಣ-ಈಬಣ್ಣ ಸಂಪ್ರದಾಯಗಳು, ದೇವರುಗಳ ತೊಡಕುಗಳಿಗೆ ಸಿಕ್ಕಿಹಾಕಿಕೊಂಡು ವಿಲವಿಲ ಒದ್ದಾಡುವಂತಾಗಿದೆ.
ಈ ಜಗತ್ತಿನಲ್ಲಿ ಒಬ್ಬ ಮುಸ್ಲಿಂನಾಗಿ ಸುಲಭವಾಗಿ ಬದುಕಬಹುದು, ಒಬ್ಬ ಹಿಂದುವಾಗಿ ಸುಲಭವಾಗಿ ಬದುಕಬಹುದು, ಒಬ್ಬ ಕ್ರಿಶ್ಚಿಯನ್ನಾಗಿ ಸುಲಭವಾಗಿ ಬದುಕಬಹುದು. ಆದರೆ ಒಬ್ಬ ಧರ್ಮರಹಿತವಾಗಿ, ಒಬ್ಬ ಜಾತಿರಹಿತವಾಗಿ ಈ ಸಮಾಜದಲ್ಲಿ ಒಬ್ಬ ಮನುಷ್ಯನಾಗಿ ಸುಲಭವಾಗಿ ಶಾಂತಿ, ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಪ್ರತಿಯೊಬ್ಬರನ್ನು ನೀವು ಯಾರು, ನಿಮ್ಮ ಜಾತಿ ಯಾವುದು, ನಿಮ್ಮ ಊರು ಯಾವುದು, ನಿಮ್ಮ ಭಾಷೆ ಯಾವುದು, ನಿಮ್ಮ ಆಹಾರ ಯಾವುದು ಎಂದು ಪ್ರಶ್ನಿಸಿದರೆ, ಪ್ರತಿಯೊಬ್ಬರೂ ತಮ್ಮ ಹಾಗೂ ಸಮಾಜದೆಡೆಗೆ ಇರುವ ವೈಯಕ್ತಿಕ ಮೌಲ್ಯದ ಮೂಲಕ ತಮ್ಮ ಉದ್ಯೋಗ, ತಮ್ಮ ವ್ಯವಹಾರ, ತಮ್ಮ ಕುಟುಂಬ, ತಮ್ಮ ಬಣ್ಣ, ತಮ್ಮ ಅರ್ಹತೆ, ಸಿರಿವಂತನಾಗಿರೋದು, ಬುದ್ಧಿವಂತನಾಗಿರೋದು, ಖ್ಯಾತಿವಂತನಾಗಿರೋದು ಎಂದು ಅವರ ತಲೆಯಲ್ಲಿ ಬರುವ ಉತ್ತರವಾಗಿರುತ್ತದೆ.
ಆದರೆ ಇವು ಯಾವುವು ಅಲ್ಲ. ನಾನು ಎಂದರೆ ನನ್ನ ಬದುಕು, ನಾನು ಎಂದರೆ ಜೀವಂತವಾಗಿರೋದು, ಜೀವಿಸೋದು, ನಾನು ಎಂದರೆ ನೈಜತೆಯಿಂದ, ಸರಳತೆಯಿಂದ ಬದುಕೋದು. ಇತರರಿಗಾಗಿ ತನ್ನನ್ನೇ ತಾನು ಮುಡುಪಾಗಿಟ್ಟುಕೊಳ್ಳೋದು. ಬದುಕು ನಾವೆಣಿಸಿದಂತೆ ನಮ್ಮ ಆಯ್ಕೆಯಲ್ಲ. ಬದುಕುವ ರೀತಿ ನಮ್ಮದು. ಬದುಕು ನಾವು ಹೇಳಿದಂತೆ ಕೇಳಬೇಕು. ಬಾಲವು ನಾಯಿಯನ್ನು ಅಲ್ಲಾಡಿಸಿದಂತಾಗಬಾರದು.
ಬದುಕು ಎಂದರೆ ಹುಟ್ಟು-ಸಾವಿನ ನಡುವಿನದು. ಆ ಬದುಕಿನ ಕುರಿತು ಅನೇಕರ ಅಭಿಪ್ರಾಯಗಳು ಭಿನ್ನವಾಗಿವೆ. ಬುದ್ಧ-ಬದುಕು ಎಂದರೆ ಪ್ರೀತಿ ಮತ್ತು ಶಾಂತಿ ಎಂದರೆ, ದುರ್ಯೋಧನ-ಬದುಕು ಎಂದರೆ ಹಠ ಮತ್ತು ಛಲ ಎನ್ನುವನು, ಯುಧಿಷ್ಠಿರ-ಬದುಕು ಎಂದರೆ ಧರ್ಮ ಎನ್ನುವನು. ಅಲೆಕ್ಸಾಂಡರ್-ಬದುಕು ಎಂದರೆ ಯುದ್ಧ ಎನ್ನುವನು. ಹಸಿದವ ಬದುಕು ಎಂದರೆ ರೊಟ್ಟಿ. ಅದು ಅವನ ಬದುಕಾಗಿರುತ್ತದೆ. ಹೀಗೆ ಬದುಕು ಏನೂ ಅಲ್ಲ ಅವನ ಮನಸ್ಸಿನಲ್ಲಿ ಏನಿದೆ ಅದು ಆಗಿರುತ್ತದೆ. ಬದುಕು ಎಂದರೆ ಅದೊಂದು ಸುಂದರ ಅನುಭವ. ಪ್ರತಿದಿನ, ಪ್ರತಿ ಗಳಿಗೆ, ಪ್ರತಿ ನಿಮಿಷ ಎಲ್ಲವೂ ಅಮೂಲ್ಯ. ಬದುಕಿನಲ್ಲಿ ಶಾಂತಿ ನೆಮ್ಮದಿಯಿಂದಿರಬೇಕು. ಬದುಕಿನಲ್ಲಿ ಶಾಂತಿ ಹುಡುಕೋದು, ಎಲ್ಲಿ ಬೆಳಕಿದೆ ಅಲ್ಲಿ ಸೂಜಿ ಹುಡುಕಿದಂತೆ ಆದೀತು, ಹಾಗಲ್ಲ.
ಮನುಷ್ಯರ ಬದುಕಿನಲ್ಲಿ ಶಾಂತಿ ಎಂಬುವದು ಕೇಂದ್ರದಲ್ಲಿರುತ್ತದೆ. ತನ್ನೊಳಗೆ ಶಾಂತಿ ಇದ್ದರೆ ಮಾತ್ರ ತನಗೂ ಶಾಂತಿ, ತನ್ನ ಸುತ್ತಲೂ ಶಾಂತಿ, ತನ್ನ ಪರಿಸರದಲ್ಲಿ, ಶಾಂತಿ ಪಸರಿಸಲು ಸಾಧ್ಯ. ಶಾಂತಿ ಹರಡುವುದು ಮುಖ್ಯ ಹೀಗೆ ಗಾಂಧೀಜಿಯವರು ಹೇಳುತ್ತಾರೆ.
ಶಾಂತಿ ನಿಸರ್ಗದ ಅವಿಭಾಜ್ಯ ಅಂಗ. ನಿಸರ್ಗದ ಎಲ್ಲ ಕಡೆಗಳಲ್ಲಿ ತುಂಬಿ ಹರಿದ ಈ ಶಾಂತಿಯ ಅನುಭವವಾಗಬೇಕಾದರೆ ಅದರೊಳಗೆ ಮುಳುಗಬೇಕು. ವ್ಯಕ್ತಿಗಳು ಒಬ್ಬರಿಗೊಬ್ಬರು ಓದದೇ ದೀಪಗಳಾಗಿದ್ದಾರೆ, ತಮ್ಮ ನಡುವೆ ಬೇಲಿ ಹಚ್ಚಿಕೊಂಡಿದ್ದಾರೆ. ಮನುಷ್ಯರು ಕುರುಚಲು ಗಿಡಗಳಂತೆ ಬಾಳೋದು, ಮನುಷ್ಯ ಸಂಬಂಧಗಳು ದಟ್ಟಾರಣ್ಯವಾಗಬೇಕು. ಆದರೆ ವ್ಯಕ್ತಿ-ವ್ಯಕ್ತಿಗಳ ನಡುವೆ ಭಿನ್ನಾಭಿಪ್ರಾಯ, ಹೊಂದಾಣಿಕೆ ಕೊರತೆ, ಮಾನವೀಯತೆ ಜೀವದಯೆ ಇಲ್ಲದಿರುವುದರಿಂದ ಸಂಘರ್ಷಗಳು ಹೆಚ್ಚಾಗಿ ಜರುಗುತ್ತಿವೆ.
ಡಿವಿಜಿ ಹೀಗೆ ಹೇಳ್ತಾರೆ-ನಿನ್ನ ಜೀವನವನ್ನು ಗೌರವಿಸು, ಆ ಜೀವಕ್ಕೆ ಮೂಲವಾದ ಚೇತನವನ್ನು ಗೌರವಿಸು. ಇದು ಯಾರದೋ ಜಗತ್ತು, ನಾನೇನೋ ಇಲ್ಲಿ ಶಾಶ್ವತವಾಗಿ ಇರುವುದಿಲ್ಲವಲ್ಲ ಎಂದು ಬದುಕನ್ನು ಗೌಣವೆಂದೆನಿಸಬೇಡ. ಈ ಬದುಕಿನಲ್ಲಿ ಹೋರಾಟ ನಮಗೆ ಆತ್ಮೋನ್ನತಿಗೆ ದಾರಿಯಾಗಿದೆ.
ಮದರ ಥೆರೆಸಾ ತಾಯಿ ಎನಿಸಿದ್ದು ಒಂದೇ ಕಾರಣ ಪ್ರತಿಯೊಬ್ಬರನ್ನು ಗೌರವಿಸಿದ್ದು. ಬದುಕಿನ ನಾನಾಚಿತ್ರ ಸ್ಥಿತಿಗಳನ್ನು ಅನುಭವಿಸಿ, ನೋಡಿದ್ದನ್ನು ನೋಡಿ, ಮತ್ತೆ ಮತ್ತೆ ನೋಡಿ, ಮತ್ತೆ ಸವಿದು, ಕಾಫಿಯಂತೆ ಗುಟುಕುರಿಸಿ ಪುನಃ ಪುನಃ ಮೆಲುಕು ಹಾಕಿ ಅದಕ್ಕೆ ಉಸಿರು ನೀಡಿ ಜೀವ ತುಂಬಿದಾಗ ಬದುಕು ಸುಂದರ.
ಈ ಜಗತ್ತಿನಲ್ಲಿ ನಾನೊಬ್ಬನೇ ಜೀವಂತನಿದ್ದೇನೆ, ಎಲ್ಲರೂ ನನ್ನ ಸಲುವಾಗಿದ್ದಾರೆ ಎಂಬುದು ಬೆಳೆಯುತ್ತಿದೆ. ನಿನಗಿರಲಿ ಎಂದು ಒಬ್ಬರು ಹೇಳುವಂತೆ, ನನಗೇ ಇರಲಿ ಎಂದು ಹೇಳುವ ಮತ್ತೊಬ್ಬನ ಮನೋಭಾವ ಜನರಲ್ಲಿ ಹುಡುಕಬೇಕಾಗಿದೆ. ಕೌಟುಂಬಿಕ ಮೌಲ್ಯಗಳು ಹಾಳಾಗುತ್ತಿವೆ. ಸಮಾಜ ಜೀವನ ಶುದ್ಧವಾಗಬೇಕು. ನಮ್ಮ ಜೀವನಶೈಲಿ ಬದಲಾಯಿಸಿಕೊಳ್ಳಬೇಕು. ಜೀವನಗಳನ್ನು ಕೂಡಿಸಬೇಕಾಗಿದೆ. ವಿಶ್ವದ ಮುಖ್ಯ ಗುರಿ ಇತರರೊಡನೆ ಶಾಂತಿಯಿಂದ ಕೂಡಿ ಬಾಳಬೇಕು ಆಗ ವ್ಯಕ್ತಿ ಮತ್ತು ಸಮಾಜದಲ್ಲಿ ಶಾಂತಿ ಅರಳುತ್ತದೆ. ವಿಶ್ವ ನಗುತ್ತದೆ.