ಶಾಲೆ ಗೋಡೆ ಕೆಡವಿದ ಪ್ರಕರಣ: ಮೂವರ ಬಂಧನ
ಹುಬ್ಬಳ್ಳಿ: ಕಾರವಾರ ರಸ್ತೆಯ ಗಿರಿಣಿಚಾಳದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಗೋಡೆಯ ಕೆಡವಿದ ಪ್ರಕರಣದಲ್ಲಿ ಮೂವರು ದುಷ್ಕರ್ಮಿಗಳನ್ನು ಉಪನಗರ ಠಾಣೆ ಪೊಲೀಸರು ಬಂಸಿದ್ದಾರೆ.
ದಾಜೀಬಾನಪೇಟೆ ನಿವಾಸಿಗಳಾದ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಶಾಲೆಯ ಗೋಡೆ ಕೆಡವಿ ದುಷ್ಕೃತ್ಯ ಮೆರೆದಿದ್ದ ಹಿನ್ನೆಲೆ ಕ್ಷೇತ್ರ ಶಿಕ್ಷಣಾಧಿಕಾರಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ ಉಪನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂ.ಎಸ್. ಹೂಗಾರ ನೇತೃತ್ವದ ತಂಡ ಮೂವರನ್ನು ಬಂಧಿಸಿದೆ.
ಸೋಮವಾರ ತಡರಾತ್ರಿ ಈ ಮೂವರು ಕಾರ ಡ್ರೈವಿಂಗ್ ಕಲಿಯಲು ಶಾಲೆ ಮುಂದಿರುವ ಮೈದಾನಕ್ಕೆ ಬಂದಿದ್ದರು. ಅದರಲ್ಲಿರುವ ಒಬ್ಬ ಡ್ರೈವಿಂಗ್ ಮಾಡುವ ಸಂದರ್ಭದಲ್ಲಿ ಏಕಾಏಕಿ ಶಾಲೆಯ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಅವರು ಮೈದಾನಕ್ಕೆ ಬರುವ ದೃಶ್ಯಗಳು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು. ಅಷ್ಟೇ ಅಲ್ಲದೇ ಕಾರಿನ ಲೈಟ್ ಹಾಗೂ ಇತರ ವಸ್ತುಗಳು ಸ್ಥಳದಲ್ಲಿ ಬಿದ್ದಿದ್ದವು. ಈ ಆಧಾರ ಮೇಲೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪು ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾರೆ ಎಂದು ಉಪನಗರ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಎಸ್. ಹೂಗಾರ ತಿಳಿಸಿದ್ದಾರೆ.