For the best experience, open
https://m.samyuktakarnataka.in
on your mobile browser.

ಶಾಶ್ವತ ಮೌನಕ್ಕೆ ಜಾರಿದ ಮಲೆನಾಡಿನ ಮಾತುಗಾರ

02:45 AM Aug 31, 2024 IST | Samyukta Karnataka
ಶಾಶ್ವತ ಮೌನಕ್ಕೆ ಜಾರಿದ ಮಲೆನಾಡಿನ ಮಾತುಗಾರ

ಶ್ರೀಯುತ ಕೆ.ಎಚ್.ಶ್ರೀನಿವಾಸ್ ಎಂದಾಕ್ಷಣ ಕಣ್ಮುಂದೆ ಬರುವುದು ಕರ್ನಾಟಕ ಕಂಡಂತಹ ಒಬ್ಬ ಅಪರೂಪದ ವಾಗ್ನಿಯ, ಸ್ಫುರದ್ರೂಪಿಯ ಮತ್ತು ಅಧಿಕಾರಯುತವಾಗಿ, ವಿಷಯಾಧಾರಿತವಾಗಿ ನಿರರ್ಗಳವಾಗಿ ಮಾತನಾಡುವ ಮಲೆನಾಡಿನ ಮಾತುಗಾರನ ಚಿತ್ರಣ. ರಾಜಕೀಯ, ಸಾಹಿತ್ಯ, ಸಂಗೀತ, ರಂಗಭೂಮಿ ಮುಂತಾದ ಬಹುತೇಕ ಸಾಂಸ್ಕೃತಿಕ ವಲಯದಲ್ಲಿ ಚಿರಪರಿಚಿತವಾಗಿದ್ದ ಹೆಸರು.
ಮಲೆನಾಡಿನ ಜ್ವಲಂತ ಸಮಸ್ಯೆಗಳಾದ ಭೂಮಿಯ ಹಕ್ಕು, ರೈತರ ಸಂಕಷ್ಟ ಹಾಗೂ ನೀರಾವರಿ ಯೋಜನೆಗಳ ದುಷ್ಪರಿಣಾಮ ಮುಂತಾದ ವಿಚಾರಗಳ ಬಗ್ಗೆ ಅವಕಾಶ ಸಿಕ್ಕಿದಾಗಲೆಲ್ಲ ದನಿ ಎತ್ತುವ ಪ್ರಾಮಾಣಿಕತೆ ಮತ್ತು ಬದ್ಧತೆ ಅವರ ವ್ಯಕ್ತಿತ್ವದಲ್ಲಿ ಮೈಗೂಡಿತ್ತು. ಚಿಕ್ಕವಯಸ್ಸಿನಲ್ಲಿಯೇ ಸತ್ಯಾಗ್ರಹದ ತವರೂರಾದ ಶಿವಮೊಗ್ಗದ ಸಾಗರದಿಂದ ಶಾಸಕರಾಗಿ ಡಿ.ದೇವರಾಜ ಅರಸು ಅವರಂತಹ ದಿಗ್ಗಜ ನಾಯಕರಿಗೆ ಮೊದಲನೆ ರಾಜಕೀಯ ಕಾರ್ಯದರ್ಶಿ ಆಗಿದ್ದ ಗೌರವ ಶ್ರೀಯುತರದ್ದು. ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಅನೇಕ ಪ್ರಗತಿಪರ, ಜನಪರ ಕಾನೂನುಗಳ ಪರಿಣಾಮದಿಂದಾಗಿ ಭೂಮಾಲೀಕರು ಅಂದಿನ ಸರ್ಕಾರದ ವಿರುದ್ಧ ಸಿಡಿದೇಳುವ ಸಂದರ್ಭ ಇದ್ದರೂ, ಭೂಮಾಲೀಕರ ಕುಟುಂಬದ ಹಿನ್ನೆಲೆಯಿಂದ ಬಂದ, ಶ್ರೇಣಿಕೃತ ಸಮಾಜದ ವರ್ಗಕ್ಕೆ ಸೇರಿದ ಶ್ರೀಯುತರು, ಅರಸು ಅವರೊಂದಿಗೆ ಗಟ್ಟಿಯಾಗಿ ನಿಂತು ತಮ್ಮ ಕಾನೂನು ಪಾಂಡಿತ್ಯ ಬಳಸಿ, ಎಲ್ಲಾ ಜನಪರ ಕಾನೂನುಗಳು ಯಾವುದೇ ಪ್ರತಿರೋಧ ಇಲ್ಲದೆ ಜಾರಿಯಾಗುವಂತೆ ಶ್ರಮಿಸಿದರವರಲ್ಲಿ ಪ್ರಮುಖರು. ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನ ಸೇವೆ ಮಂತ್ರಿಯಾಗಿದ್ದ ಸಂದರ್ಭದಲ್ಲೂ ಕೂಡಾ ಕರ್ನಾಟಕದ ಅಭಿವೃದ್ಧಿ ಬಗ್ಗೆ ಅವರ ಕಳಕಳಿ, ಕಾಳಜಿ ನಿಸ್ಸಂದೇಹವಾಗಿತ್ತು.
ವಿಧಾನಪರಿಷತ್‌ನಲ್ಲಿ ಅವರು ಪ್ರತಿಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ, ಸಭಾಪತಿಯಾಗಿ ಕರ್ತವ್ಯ ನಿರ್ವಹಿಸುವ ಜವಾಬ್ದಾರಿ ನನ್ನ ಪಾಲಿಗೆ ಸಿಕ್ಕಿದ್ದು ಒಂದು ದೊಡ್ಡ ಅವಕಾಶ. ನನ್ನ ಸಭಾಪತಿ ಸ್ಥಾನದ ಹೊಣೆಗಾರಿಕೆ ನಿರ್ವಹಿಸುವಲ್ಲಿ ಪ್ರತಿಪಕ್ಷದ ನಾಯಕರಾಗಿ ಅವರು ನೀಡುತ್ತಿದ್ದ ಸಲಹೆಗಳು, ಸರ್ಕಾರದ ವಿರುದ್ಧ ಮಾಡುತ್ತಿದ್ದ ಸಕಾರಾತ್ಮಕ ಟೀಕೆಗಳು, ವಾದಮಂಡನೆ ಅನುಕರಣೀಯವಾಗಿತ್ತು. ಶ್ರೀಯುತರ ನಡೆನುಡಿ ಪ್ರಸ್ತುತ ಸಮಾಜಕ್ಕೆ ಬಹುದೊಡ್ಡ ಮಾರ್ಗದರ್ಶನ ಎಂದರೆ ಅತಿಶಯೋಕ್ತಿ ಆಗಲಾರದು. ಅವರ ಮಾತುಗಳಿಗೆ ಬಸವಣ್ಣನವರ ಈ ವಚನ ನೆನಪಾಗುತ್ತದೆ.
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗಮೆಚ್ಚಿ ಅಹುದೆನ್ನಬೇಕು
ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮ
ದೇವನೆಂತೊಲಿವನಯ್ಯ?

ಶ್ರೀನಿವಾಸ್ ಅವರ ಕಂಚಿನಕಂಠದ ಸ್ಪಷ್ಟ ಮತ್ತು ನಿಷ್ಠುರ ನುಡಿಗಳು ಇಂದಿಗೂ ಅನೇಕರ ಸ್ಮೃತಿಪಟಲದಲ್ಲಿ ಚಿರಸ್ಥಾಯಿಯಾಗಿದೆ.
ಅಂದಿನ ಮೇಲ್ಮನೆಯಲ್ಲಿದ್ದ ಕೆ.ಎಚ್.ಶ್ರೀನಿವಾಸ್, ಎಂ.ಸಿ.ನಾಣಯ್ಯ, ಡಾ.ವಿ.ಎಸ್.ಆಚಾರ್ಯ, ಡಾ.ಎಂ.ಆರ್.ತಂಗಾ, ಡಿ.ಹೆಚ್.ಶಂಕರಮೂರ್ತಿ, ಬಸವರಾಜ ಹೊರಟ್ಟಿ, ಬಸವರಾಜ ಬೊಮ್ಮಾಯಿ, ಡಾ.ಎಂ.ಪಿ.ನಾಡಗೌಡ ಇನ್ನು ಮುಂತಾದ ದಿಗ್ಗಜರು ಮೇಲ್ಮನೆಯ ಅಸ್ತಿತ್ವ ಮತ್ತು ವರ್ಚಸ್ಸನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ವಿಚಾರ ಮಂಡನೆ ಮಾಡುತ್ತಿದ್ದರು. ಎಸ್.ಎಂ.ಕೃಷ್ಣ ಅವರಂತಹ ಅನುಭವಿ, ಮುತ್ಸದ್ಧಿ ಮುಖ್ಯಮಂತ್ರಿಗೆ ಇವರೆಲ್ಲರ ಅಭಿಪ್ರಾಯ ಕೇಳುವುದೇ ಒಂದು ಅಪರೂಪದ ಅವಕಾಶವಾಗಿತ್ತು.
ಶಿಸ್ತುಬದ್ಧ ನಡೆನುಡಿಯ ನಾಯಕ
ಮೇಲ್ಮನೆಯಲ್ಲಿ ಪಕ್ಷಗಳ ಬಲಾಬಲದಲ್ಲಿ ಆದಂತಹ ಸ್ಥಿತ್ಯಂತರದಿಂದ ಒಂದು ವಿಶಿಷ್ಟ ಸಂದರ್ಭದಲ್ಲಿ, ಜನತಾಪರಿವಾರ ಮತ್ತು ಬಿಜೆಪಿ ಸಮಾನ ಸದಸ್ಯರನ್ನು ಹೊಂದುವ ಸ್ಥಿತಿ ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ಯಾರು ಪ್ರತಿಪಕ್ಷದ ನಾಯಕರಾಗಿರಬೇಕು ಎಂಬ ವಿಚಾರದಲ್ಲಿ ಉಂಟಾದ ಸಂದಿಗ್ಧತೆಯಿಂದ ಪಾರಾಗಲು, ಸಭಾಪತಿ ಸ್ಥಾನದಲ್ಲಿದ್ದ ನಾನು ಎರಡೂ ಪಕ್ಷಗಳು ಸಮಾನ ಸ್ಥಾನಗಳನ್ನು ಹೊಂದಿರುವುದರಿಂದ ಈಗಿರುವವರೇ(ಕೆ.ಎಚ್.ಶ್ರೀನಿವಾಸ್) ನಾಯಕರಾಗಿ ಮುಂದುವರಿಯಬೇಕೇ ಅಥವಾ ಹೊಸ ನಾಯಕರ ಆಯ್ಕೆಗೆ ಪರ್ಯಾಯ ಮಾರ್ಗ ಹುಡುಕಬೇಕೇ ಎಂಬ ಜಿಜ್ಞಾಸೆಯಲ್ಲಿ, ಕಾನೂನು ಪರಿಣತರ ಅಭಿಪ್ರಾಯದ ಆಧಾರದ ಮೇಲೆ, ಲಾಟರಿ ಮುಖಾಂತರ ಯಾರು ನಾಯಕರಾಗಬೇಕು ಎಂದು ತೀರ್ಮಾನಿಸುವ ಒಂದು ಕಠಿಣ ನಿರ್ಧಾರ ಮಾಡಬೇಕಾದ ಸಂದರ್ಭ ಒದಗಿಬಂದಿತ್ತು.
ನಂತರದಲ್ಲಿ ನಡೆದ ಲಾಟರಿ ಪ್ರಕ್ರಿಯೆಯಲ್ಲಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಲಾಟರಿ ಒಲಿದಾಗ, ಯಾವುದೇ ರೀತಿಯ ಮುನಿಸು ತೋರದೆ ಬಹಳ ತನ್ನ ಪ್ರತಿಪಕ್ಷ ನಾಯಕನ ಸ್ಥಾನವನ್ನು ಬಿಜೆಪಿಯ ಡಿ.ಎಚ್.ಶಂಕರಮೂರ್ತಿ ಅವರಿಗೆ ಬಿಟ್ಟುಕೊಟ್ಟ ಒಬ್ಬ ಸಜ್ಜನ, ಸಂಭಾವಿತ ಮತ್ತು ಸೌಜನ್ಯಮೂರ್ತಿವೆತ್ತ ನಾಯಕರಂತಿದ್ದವರು ಅವರು.
ಮಲೆನಾಡಿನ ರೈತರ ಪರವಾಗಿ ಅವಕಾಶ ಸಿಕ್ಕಿದ ಎಲ್ಲ ಸಂದರ್ಭಗಳಲ್ಲೂ, ಪ್ರಜಾಪ್ರಭುತ್ವ, ಸಮಾಜವಾದಿ, ಜಾತ್ಯತೀತ ತತ್ವಗಳ ಬಗ್ಗೆ ತಮ್ಮ ಸ್ಪಷ್ಟವಾದ ನಿಲುವನ್ನು ರಾಜಕೀಯ ಪರಿಣಾಮಗಳನ್ನೂ ಲೆಕ್ಕಿಸದೆ, ಅತ್ಯಂತ ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದ ವ್ಯಕ್ತಿತ್ವ ಅವರದ್ದು. ರಾಮಕೃಷ್ಣ ಹೆಗಡೆ, ಜೆ.ಹೆಚ್.ಪಟೇಲ್, ಎಸ್.ಎಂ,.ಕೃಷ್ಣ, ಎಂ.ಪಿ.ಪ್ರಕಾಶ್ ಮುಂತಾದ ಸಾಂಸ್ಕೃತಿಕ ವಲಯದ ನಿಕಟ ಸಂಬಂಧ ಹೊಂದಿದ್ದ ನಾಯಕರುಗಳ ಸಾಲಿಗೆ ಶ್ರೀಯುತರು ಸೇರುತ್ತಾರೆ. ಅವರ ಅಗಲಿಕೆಯಿಂದ ಕೇವಲ ರಾಜಕೀಯ ಕ್ಷೇತ್ರ ಮಾತ್ರವಲ್ಲದೆ ಸಾಂಸ್ಕೃತಿಕ ಲೋಕವೂ ಬಡವಾಗಿದೆ. ಇಂದಿನ ದಿನಮಾನದ ರಾಜಕಾರಣವನ್ನು ನೋಡಿದಾಗ, ಶ್ರೀನಿವಾಸ್ ಅವರು ಮಾದರಿಯಾಗಿ ಕಾಣುತ್ತಾರೆ. ಅವರ ದಿವ್ಯಾತ್ಮಕ್ಕೆ ಈ ನುಡಿನಮನದ ಮೂಲಕ ಶ್ರದ್ದಾಂಜಲಿ ಸಲ್ಲಿಸುತ್ತೇನೆ.