For the best experience, open
https://m.samyuktakarnataka.in
on your mobile browser.

ಶಾಸಕರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ…

11:37 AM Oct 12, 2024 IST | Samyukta Karnataka
ಶಾಸಕರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ…

ಅನೈತಿಕ ಹಾಗೂ ಅರಾಜಕತೆ ಸ್ಥಿತಿಯ ನಡುವೆ ರಾಜ್ಯದ ಆಡಳಿತ ಸಿಲುಕಿಕೊಂಡು ನರಳುತ್ತಿದೆ. ಶಾಸಕರೊಬ್ಬರ ತಾಳ್ಮೆಯ ಸಹನೆ ಒಡೆದಿರುವುದು ಆರಂಭವಷ್ಟೆ,

ಬೆಂಗಳೂರು: ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಆಡಳಿತ ಪಕ್ಷದ ಶಾಸಕರೇ ಹತಾಶೆಯ ಅಂಚಿಗೆ ತಲುಪಿರುವುದನ್ನು ಶಾಸಕ ರಾಜು ಕಾಗೆ ಪ್ರತಿನಿಧಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಅಭಿವೃದ್ಧಿ ಶೂನ್ಯ ಆಡಳಿತದಿಂದ ಕಂಗೆಟ್ಟ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸುದ್ದಿಯನ್ನಷ್ಟೇ ಇದುವರೆಗೂ ನಾವು ಕೇಳುತ್ತಿದ್ದೆವು. ಆಡಳಿತ ಪಕ್ಷದ ಶಾಸಕರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿರುವುದು ಈ ಸರ್ಕಾರದ ದಿವಾಳಿ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಕಾಗವಾಡ ಶಾಸಕ ರಾಜು ಕಾಗೆ ಅವರು ವಸ್ತು ಸ್ಥಿತಿಯನ್ನು ಬಿಚ್ಚಿಟ್ಟು, ಕಾಂಗ್ರೆಸ್ ಸರ್ಕಾರದ ದುಸ್ಥಿತಿಯನ್ನು ಅನಾವರಣ ಮಾಡಿದ್ದಾರೆ. ಜಲಸಂಪನ್ಮೂಲ, ಉದ್ಯೋಗ ಸೃಷ್ಠಿ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಯೋಜನೆಗಳು ಸಂಪೂರ್ಣ ನೆನೆಗುದಿಗೆ ಬಿದ್ದಿವೆ.
ನಡೆಯುತ್ತಿರುವಾಗ ಬಿದ್ದರೆ ಏಳಿಸ ಬಹುದು ಆದರೆ ಕಳ್ಳ ನಿದ್ರೆಗೆ ಜಾರಿರುವ ಸರ್ಕಾರವನ್ನು ಎದ್ದು ನಿಲ್ಲಿಸುವುದು ಹೇಗೆ ಸಾಧ್ಯ? ಎಂಬ ಪರಿಸ್ಥಿತಿ ರಾಜ್ಯದಲ್ಲಿ ಉದ್ಭವಿಸಿರುವುದನ್ನು ರಾಜು ಕಾಗೆಯವರ ಮಾತುಗಳು ಸಾಕ್ಷೀಕರಿಸುತ್ತಿವೆ. ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳದೆಯೂ ಸರಣೀ ಭ್ರಷ್ಟಾಚಾರಗಳನ್ನು ಹೇಗೆ ನಡೆಸಬಹುದು ಎಂಬುದರ ನಿಪುಣತೆಯನ್ನು ಕಾಂಗ್ರೆಸ್ ಕರಗತ ಮಾಡಿಕೊಂಡಿದೆ. ಅನೈತಿಕ ಹಾಗೂ ಅರಾಜಕತೆ ಸ್ಥಿತಿಯ ನಡುವೆ ರಾಜ್ಯದ ಆಡಳಿತ ಸಿಲುಕಿಕೊಂಡು ನರಳುತ್ತಿದೆ. ಶಾಸಕರೊಬ್ಬರ ತಾಳ್ಮೆಯ ಸಹನೆ ಒಡೆದಿರುವುದು ಆರಂಭವಷ್ಟೆ, ಜನಾಕ್ರೋಶದ ಪ್ರವಾಹಕ್ಕೆ ಸಿಲುಕಿ ಕಾಂಗ್ರೆಸ್ ಸರ್ಕಾರ ಧೂಳಿಪಟ ಆಗುವುದಕ್ಕೆ ಮುನ್ನ ಅಧಿಕಾರ ಬಿಟ್ಟು ತೊಲಗಿ, ಜನವಿರೋಧಿ ಹಾಗೂ ಅಭಿವೃದ್ಧಿ ಶೂನ್ಯ ಆಡಳಿತಕ್ಕೆ ತಿಲಾಂಜಲಿ ನೀಡಬೇಕು ಎನ್ನುವುದು ರಾಜ್ಯದ ಜನತೆಯ ಆಗ್ರಹವಾಗಿದೆ. ಕಾಂಗ್ರೆಸ್ ಸರ್ಕಾರದ ದಿವಾಳಿ ಪರಿಸ್ಥಿತಿಯ ಹೂರಣವನ್ನು ಶಾಸಕ ರಾಜು ಕಾಗೆ ಬಯಲಿಗೆಳೆದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ ಎಂದಿದ್ದಾರೆ.

Tags :