For the best experience, open
https://m.samyuktakarnataka.in
on your mobile browser.

ಶಾಸಕರ ಮೇಲೆ ಎಫ್‌ಐಆರ್ ಸಿಎಂ ಮಾತು: ಕೋಲಾಹಲ

11:17 PM Feb 15, 2024 IST | Samyukta Karnataka
ಶಾಸಕರ ಮೇಲೆ ಎಫ್‌ಐಆರ್ ಸಿಎಂ ಮಾತು  ಕೋಲಾಹಲ

ವಿಧಾನಸಭೆ: ಮಂಗಳೂರು ಹೈಸ್ಕೂಲಿನ ಶಿಕ್ಷಕಿಯೊಬ್ಬರು ಹಿಂದೂ ದೇವತೆಗಳ ನಿಂದನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಂಭವಿಸಿದ ಘಟನೆಯಲ್ಲಿ ಬಿಜೆಪಿ ಶಾಸಕ ಭರತ್ ಶೆಟ್ಟಿ ಹೆಸರು ಸೇರ್ಪಡೆ ಸಂಬಂಧ ರಾಜ್ಯ ಸರಕಾರ ಮುಜುಗರಕ್ಕೊಳಗಾದ ಪ್ರಸಂಗ ವಿಧಾನಸಭೆಯಲ್ಲಿ ಗುರುವಾರ ನಡೆಯಿತು.
ಇತ್ತ ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ಸದಸ್ಯರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸಿದ ಪದಗಳು ಕೋಲಾಹಲ ಸೃಷ್ಟಿಗೆ ಕಾರಣವಾಗಿ ಸಿಎಂ ಕ್ಷಮೆ ಕೋರಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದು ಸಭಾತ್ಯಾಗ ಮಾಡಿದವು.
ಶಿಕ್ಷಕಿ ವಿರುದ್ಧ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಪ್ರತಿಭಟನೆ ನಡೆದ ವೇಳೆ ಮತ್ತೊಬ್ಬ ಶಾಸಕ ಭರತ್ ಶೆಟ್ಟಿ ಹಾಜರಿರಲಿಲ್ಲ ಎಂದು ಸ್ವತಃ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಒಪ್ಪಿಕೊಂಡರು. ಶಿಕ್ಷಣಾಧಿಕಾರಿಗಳ ಕಚೇರಿ ಎದುರು ನಡೆದ ಧರಣಿಯಲ್ಲಿ ಶಾಸಕ ಭರತ್ ಹಾಜರಿದ್ದರು. ಹೀಗಾಗಿ ಪ್ರತ್ಯೇಕ ಘಟನೆಗಳ ಒಟ್ಟಾರೆ ತನಿಖೆ ಮುಂದುವರಿಯಲಿದೆ ಎಂದು ಹೇಳಿದರು.
ಶೂನ್ಯವೇಳೆಯಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಜೆ ಗೃಹ ಸಚಿವರು ನೀಡಿದ ಉತ್ತರಕ್ಕೆ ತೃಪ್ತರಾಗದ ಪ್ರತಿಪಕ್ಷ ಬಿಜೆಪಿ ನಾಯಕರು ಇಡೀ ಘಟನೆ ಕುರಿತಂತೆ ನ್ಯಾಯಾಂಗ ತನಿಖೆ ನಡೆಸುವಂತೆ ಒಕ್ಕೊರಲಿನ ಆಗ್ರಹ ಮಾಡಿದಾಗ, ಶಾಸಕ ಡಾ.ಭರತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿವಾದಾತ್ಮಕ ಹೇಳಿಕೆಯೊಂದನ್ನು ಗೃಹ ಸಚಿವರು ಸದನದಲ್ಲಿ ಯಥಾವತ್ತಾಗಿ ಓದಿದರು. ಇದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ವಾಗ್ದಾದ ನಡೆಯಿತು. ಆಗ ಸದನದ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.
ಪ್ರತಿಪಕ್ಷ ಸಭಾತ್ಯಾಗ: ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ಸದಸ್ಯರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸಿದ ಪದಗಳು ಕೋಲಾಹಲ ಸೃಷ್ಟಿಗೆ ಕಾರಣವಾಗಿ ಸಿಎಂ ಕ್ಷಮೆ ಕೋರಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದು ಸಭಾತ್ಯಾಗ ಮಾಡಿದವು.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಪ್ರಶ್ನೆಗೆ ಉತ್ತರ ನೀಡುವಾಗ ಕೇಂದ್ರ ನಮ್ಮ ಪಾಲನ್ನು ನೀಡುತ್ತಿಲ್ಲ. ರಾಜ್ಯದಿಂದ ಹೆಚ್ಚು ತೆರಿಗೆ ಹೋದರೂ ನಮಗೆ ಬರುತ್ತಿರುವ ಪಾಲು ಕಡಿಮೆ ಎಂದು ದೀರ್ಘ ಉತ್ತರ ನೀಡಿದರು.
ಈ ವೇಳೆ ಎರಡೂ ಕಡೆಯ ಸದಸ್ಯರು ವಾದ ವಿವಾದಕ್ಕೆ ಇಳಿದರು. ಕೆಲಕಾಲ ಮಾತಿನ ಚಕಮಕಿಯೂ ನಡೆಯಿತು. ಈ ವೇಳೆ ಸಭಾಪತಿ ಮಧ್ಯ ಪ್ರವೇಶಿಸಿ ಎರಡೂ ಕಡೆಯವರನ್ನು ಕುಳಿತುಕೊಳ್ಳುವಂತೆ ಕೋರಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಬೇಸತ್ತ ಸಭಾಪತಿ ಬಸವರಾಜ ಹೊರಟ್ಟಿ ಸದನವನ್ನು ಕೆಲಕಾಲ ಮುಂದೂಡಿದರು. ನಂತರ ಕಲಾಪ ಆರಂಭಗೊAಡಾಗ ಗದ್ದಲ ಮುಂದುವರಿದು ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.