ಶಾಸಕ ಮುನಿರತ್ನನನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಬೇಕು
ಬೆಂಗಳೂರು: ಒಕ್ಕಲಿಗ ಸಮುದಾಯದ ವಿರುದ್ಧ ಬಿಜೆಪಿ ಶಾಸಕ ಮುನಿರತ್ನ ಜಾತಿ ನಿಂದನೆ ಮಾಡಿರುವುದು ಈಗ SITಗೆ ದೊರಕಿರುವ ಎಫ್‌ಎಸ್‌ಎಲ್ ವರದಿಯಲ್ಲಿ ಸಾಬೀತಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಮುನಿರತ್ನ ಒಕ್ಕಲಿಗ ಸಮುದಾಯದ ಕುರಿತು ಕೀಳಾಗಿ ಮಾತನಾಡಿರುವುದಷ್ಟೇ ಅಲ್ಲ, ಆ ಸಮುದಾಯದ ಹೆಣ್ಣುಮಕ್ಕಳ ಬಗ್ಗೆಯೂ ನಾಲಿಗೆ ಹರಿಬಿಟ್ಟಿದ್ದಾರೆ. ಬಿಜೆಪಿ ಶಾಸಕ ಮುನಿರತ್ನ ಜಾತಿ ನಿಂದಕರಷ್ಟೇ ಅಲ್ಲ ಮಹಿಳಾ ಪೀಡಕರೂ ಹೌದು ಎಂಬುದು ಈಗ ಸಾಬೀತಾಗಿದೆ. ಈ ಸತ್ಯ ಗೊತ್ತಿದ್ದರೂ ಬಿಜೆಪಿ ಪಕ್ಷ ಮುನಿರತ್ನ ಅವರ ಬೆನ್ನಿಗೆ ನಿಂತಿದೆ. ಈ ಮೂಲಕ ಬಿಜೆಪಿಯು ಸ್ವಭಾವತಃ ಮಹಿಳಾ ವಿರೋಧಿ ಪಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಹಿಂದೂ ನಾವೆಲ್ಲ ಒಂದು ಎನ್ನುವ ಬಿಜೆಪಿ ನಾಯಕರು ಇತರ ಜಾತಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದಕ್ಕೆ ಮುನಿರತ್ನ ಪ್ರಕರಣವೇ ಸಾಕ್ಷಿ. ಇನ್ನು ಅತ್ಯಾಚಾರಿಗಳನ್ನು, ಮಹಿಳಾ ಪೀಡಕರನ್ನು ತಮ್ಮ ಪಕ್ಷದಲ್ಲಿಯೇ ಇಟ್ಟುಕೊಂಡು 'ಭೇಟಿ ಬಚಾವೋ, ಭೇಟಿ ಪಡಾವೋ' ಎನ್ನುವ ನರೇಂದ್ರ ಮೋದಿಯವರ ಘೋಷಣೆ ಹಾಸ್ಯಾಸ್ಪದವಾಗಿ ಕಾಣುತ್ತದೆ. ವಾಸ್ತವವಾಗಿ ಬಿಜೆಪಿ ಮತ್ತು ಬಿಜೆಪಿ ನಾಯಕರಿಂದ ರಾಜ್ಯದ ಹೆಣ್ಣುಮಕ್ಕಳಿಗೆ ರಕ್ಷಣೆ ಸಿಗಬೇಕಿದೆ. ಮುನಿರತ್ನ ಕುರಿತು ಕರ್ನಾಟಕ ಬಿಜೆಪಿ ನಾಯಕರು ತುಟಿ ಬಿಚ್ಚಬೇಕು. ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಈ ಮೂಲಕ ತಮ್ಮ ಬಿಜೆಪಿ ಪಕ್ಷದ ನಿಲುವನ್ನು ಕರ್ನಾಟಕದ ಜನತೆಗೆ ತೋರ್ಪಡಿಸಬೇಕು. ಈ ದಮ್ಮು, ತಾಕತ್ತು ರಾಜ್ಯ ಬಿಜೆಪಿ ಪಕ್ಷಕ್ಕಿದೆಯೇ? ಎಂದು ಪ್ರಶ್ನಿಸಿದ್ದಾರೆ.