For the best experience, open
https://m.samyuktakarnataka.in
on your mobile browser.

ಶಿಕ್ಷಣ ಇಲಾಖೆಗೆ ಸುಪ್ರೀಂ ತಪರಾಕಿ

02:30 AM Oct 23, 2024 IST | Samyukta Karnataka
ಶಿಕ್ಷಣ ಇಲಾಖೆಗೆ ಸುಪ್ರೀಂ ತಪರಾಕಿ

ಶಿಕ್ಷಣ ಇಲಾಖೆ ೫,೮.೯.೧೦ ತರಗತಿಗಳ ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಪರೀಕ್ಷೆ ನಡೆಸಲು ಪಟ್ಟು ಹಿಡಿದಿರುವುದಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದಲ್ಲದೆ ಮಕ್ಕಳಿಗೆ ಏಕೆ ಹಿಂಸೆ ಕೊಡುತ್ತೀರಿ ಎಂದು ಹೇಳಿ ಅರ್ಧ ವಾರ್ಷಿಕ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಪಡಿಸಿದೆ. ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಂಘ ಇದನ್ನು ಪ್ರಶ್ನಿಸಿತ್ತು.
ಮಾರ್ಚ್ ೬ರಂದು ಪರೀಕ್ಷೆ ನಡೆಸುವ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತು. ಇದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಒಪ್ಪಲಿಲ್ಲ. ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು. ಏಕ ಸದಸ್ಯ ಪೀಠ ಸರ್ಕಾರದ ಆದೇಶವನ್ನು ರದ್ದುಪಡಿಸಿತು. ಮಕ್ಕಳು ಖುಷಿಯಾಗಿದ್ದರು. ಆದರೆ ಹೈಕೋರ್ಟ್ ವಿಭಾಗೀಯ ಪೀಠ ಪರೀಕ್ಷೆ ನಡೆಸಲು ಅನುಮತಿ ನೀಡಿತು. ಮತ್ತೆ ಮಕ್ಕಳಿಗೆ ಪರೀಕ್ಷೆ ನಡೆಸುವ ಕೆಲಸ ಆರಂಭವಾಯಿತು. ಮಕ್ಕಳು ಮತ್ತು ಪೋಷಕರು ಗೊಂದಲಕ್ಕೆ ಸಿಲುಕಿದರು. ಶಿಕ್ಷಣ ಸಂಸ್ಥೆಗಳಿಗೂ ಏನು ಮಾಡಬೇಕೆಂದು ತಿಳಿಯಲಿಲ್ಲ. ಕೆಲವು ಶಾಲೆಗಳಲ್ಲಿ ಪರೀಕ್ಷೆ ನಡೆದರೆ ಮತ್ತೆ ಕೆಲವು ಶಾಲೆಗಳಲ್ಲಿ ಪರೀಕ್ಷೆ ನಡೆಯೋಲ್ಲ ಎಂದರು. ಈ ಗೊಂದಲದಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಅಲ್ಲಿ ನ್ಯಾಯಾಲಯ ಸರ್ಕಾರಕ್ಕೆ ಛೀಮಾರಿ ಹಾಕಿ ಯಾವುದೇ ಅರ್ಧವಾರ್ಷಿಕ ಪರೀಕ್ಷೆ ನಡೆಸುವಂತಿಲ್ಲ ಎಂದು ತಾಕೀತು ಮಾಡಿದೆ.
ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಕಲಂ ೩೦ರಂತೆ ಮಾಧ್ಯಮಿಕ ಶಿಕ್ಷಣ ಮುಕ್ತಾಯಗೊಳ್ಳುವವರೆಗೆ ಯಾವುದೇ ಬೋರ್ಡ್ ಪರೀಕ್ಷೆ ನಡೆಸುವಂತಿಲ್ಲ. ಅಲ್ಲದೆ ಪರೀಕ್ಷೆ ಆಯಾ ತರಗತಿಯಲ್ಲಿ ನಡೆಯಬೇಕೆ ಹೊರತು ಯಾವುದೇ ಮಗುವನ್ನು ಫೇಲ್ ಮಾಡಲು ಬರುವುದಿಲ್ಲ. ತರಗತಿಯಲ್ಲಿ ಹಿಂದೆ ಬಿದ್ದ ಮಗುವಿಗೆ ವಿಶೇಷ ತರಬೇತಿ ನೀಡಬಹುದೇ ಹೊರತು ಶಾಲೆಯಿಂದ ಹೊರ ಹಾಕಲು ಬರುವುದಿಲ್ಲ. ಇದನ್ನು ಶಿಕ್ಷಣ ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಿದೆ. ಇದನ್ನು ಶಿಕ್ಷಣ ಇಲಾಖೆ ಒಂದು ಸುತ್ತೋಲೆಯಿಂದ ಕೈಬಿಡಲು ಬರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಶಿಕ್ಷಣ ಇಲಾಖೆ ಪಟ್ಟು ಹಿಡಿದು ಪರೀಕ್ಷೆ ನಡೆಸಲು ಹೊರಟಿದೆ ಎಂದು ನ್ಯಾಯಾಲಯ ಟೀಕಿಸಿದೆ.
ನಾವು ಮೊದಲಿನಿಂದಲೂ ಶಿಕ್ಷಣ ಇಲಾಖೆಯ ಪಾತ್ರವನ್ನು ಸೀಮಿತಗೊಳಿಸಿದ್ದೇವೆ. ಶಾಲೆಗಳ ಆಡಳಿತ ನೋಡಿಕೊಳ್ಳುವುದಷ್ಟೇ ಸರ್ಕಾರ ಕೆಲಸ. ಶಿಕ್ಷಣದ ಕ್ರಮ, ಪಠ್ಯ, ಪರೀಕ್ಷೆ ಸೇರಿದಂತೆ ಎಲ್ಲವನ್ನೂ ಶಿಕ್ಷಣ ತಜ್ಞರು ನೋಡಿಕೊಳ್ಳಬೇಕು. ಅದರಲ್ಲಿ ಶಿಕ್ಷಣ ಇಲಾಖೆ ಮೂಗು ತೂರಿಸಬಾರದು. ಶಿಕ್ಷಣ ತಜ್ಞರು ಈ ವಿಷಯದಲ್ಲಿ ಬೇಕಾದಷ್ಟು ಚರ್ಚಿಸಿ ವರದಿಗಳನ್ನು ನೀಡಿದ್ದಾರೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಬೇಕಾದ ಶೈಕ್ಷಣಿಕ ವಾತಾವರಣ ಕಲ್ಪಿಸಿಕೊಡುವುದಷ್ಟೇ ಸರ್ಕಾರ ಕರ್ತವ್ಯ. ಉಳಿದ ವಿಚಾರದಲ್ಲಿ ಹಸ್ತಕ್ಷೇಪ ಮಾಡಕೂಡದು. ಹಿಂದೆ ಶಿಕ್ಷಣ ಸಚಿವರಾಗಿದ್ದವರು ಈ ನಿಯಮವನ್ನು ಪಾಲಿಸಿಕೊಂಡು ಬಂದಿದ್ದರು. ಸರ್ಕಾರ ಕೆಲಸ ನೀತಿ ರೂಪಿಸುವುದಷ್ಟೆ. ಮಕ್ಕಳಿಗೆ ಏನು ಕಲಿಸಬೇಕು, ಪರೀಕ್ಷೆ ಯಾವಾಗ ನಡೆಸಬೇಕು ಸೇರಿದಂತೆ ಎಲ್ಲ ವಿಚಾರವನ್ನು ಶಿಕ್ಷಕರು ತೀರ್ಮಾನಿಸುವ ವಿಷಯವೇ ಹೊರತು ಅಧಿಕಾರಿಗಳ ಕೆಲಸವಲ್ಲ. ಹಿಂದೆ ಇದನ್ನು ಹಲವು ಬಾರಿ ಸ್ಪಷ್ಟಪಡಿಸಲಾಗಿದೆ. ಆದರೂ ಆಗಾಗ್ಗೆ ಸರ್ಕಾರ ಹಸ್ತಕ್ಷೇಪ ಕಂಡು ಬಂದಿದೆ. ನ್ಯಾಯಾಲಯಗಳು ಕೂಡ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತ ಬಂದಿದೆ. ಚುನಾಯಿತ ಸದಸ್ಯರು ತಮಗೆ ಎಲ್ಲ ವಿಷಯದಲ್ಲೂ ತೀರ್ಮಾನ ಕೈಗೊಳ್ಳುವ ಅಧಿಕಾರವಿದೆ ಎಂದು ಭಾವಿಸುವುದು ಸಹಜ. ಆದರೆ ಸಂವಿಧಾನ ಬದ್ಧವಾಗಿ ಕೆಲವು ವಿಷಯಗಳನ್ನು ಶಾಸಕರ ವ್ಯಾಪ್ತಿಯಿಂದ ದೂರ ಇಡಲಾಗಿದೆ. ಶಿಕ್ಷಣ ರಂಗಕ್ಕೆ ಸಂಬಂಧಿಸಿದಂತೆ ಮತ್ತೆ ಮತ್ತೆ ಕಾಯ್ದೆಗಳಿಗೆ ತಿದ್ದುಪಡಿ ತರುವುದು ಸರಿಯಾದ ಕ್ರಮವಲ್ಲ ಎಂಬುದನ್ನು ಸಂಸದೀಯ ವ್ಯವಸ್ಥೆಯಲ್ಲಿ ಇರುವವರೆಲ್ಲ ಒಪ್ಪಿಕೊಂಡಿದ್ದಾರೆ. ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಸಂಬಳ ನೀಡುವುದರಿಂದ ಆದೇಶ ನೀಡಲು ಅಧಿಕಾರವಿದೆ ಎಂಬ ಭಾವನೆ ಸರಿಯಲ್ಲ. ಶಿಕ್ಷಣ ರಂಗದಲ್ಲಿ ಸರ್ಕಾರ ಹಸ್ತಕ್ಷೇಪ ಅತಿ ಕಡಿಮೆ ಇರಬೇಕೆಂದನ್ನು ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ. ಸಾಮಾನ್ಯವಾಗಿ ೧ರಿಂದ ೧೦ನೇ ತರಗತಿಯವರೆಗೆ ಎಲ್ಲ ರಾಜ್ಯಗಳಲ್ಲೂ ವಾರ್ಷಿಕ ಪರೀಕ್ಷೆಗಳಿವೆಯೇ ಹೊರತು ಅರ್ಧವಾರ್ಷಿಕ ಪರೀಕ್ಷೆ ವ್ಯವಸ್ಥೆ ಇಲ್ಲ. ಮಕ್ಕಳಿಗೆ ಕಲಿಯುವಾಗ ಉತ್ಸಾಹ ಮೂಡಿಸುವ ವಾತಾವರಣ ರೂಪಿಸಬೇಕೇ ಹೊರತು ಪರೀಕ್ಷೆಯ ಭಯ ಹುಟ್ಟಿಸಬಾರದು. ಅದರಿಂದ ಅರಳುವ ಪ್ರತಿಭೆ ಮುದುಡಿ ಹೋಗುವ ಅಪಾಯವಿದೆ. ೧ರಿಂದ ೧೦ ತರಗತಿಯವರೆಗೆ ಕ್ಲಾಸ್ ಪರೀಕ್ಷೆ ನಡೆಯಬೇಕು. ಯಾವ ಮಗುವನ್ನೂ ಫೇಲ್ ಮಾಡುವಂತಿಲ್ಲ ಎಂದು ನಿಯಮ ಮಾಡಿರುವಾಗ ಅರ್ಧ ವಾರ್ಷಿಕ ಪರೀಕ್ಷೆಗೆ ಅರ್ಥವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ವಿಷಯದಲ್ಲಿ ಕರ್ನಾಟಕ ಕೂಡ ಎಲ್ಲ ರಾಜ್ಯಗಳಂತೆ ವಿವೇಕಯುತವಾಗಿ ವರ್ತಿಸುವುದು ಸೂಕ್ತ. ಉತ್ತಮ ಶಾಲೆ ಎಂದರೆ ಉತ್ತಮ ಶಿಕ್ಷಕವರ್ಗವೇ ಹೊರತು ಪರೀಕ್ಷಾ ಪದ್ಧತಿಗಳಲ್ಲ.