ಶಿಕ್ಷಣ ತಜ್ಞರ ಸಭೆ ಕರೆಯಲು ಆಗ್ರಹ
ಬೆಂಗಳೂರು: ಗರಿಷ್ಠ ಸಂಖ್ಯೆಯ ಪರೀಕ್ಷೆಗಳು, ಸ್ಪಷ್ಟ ನೀತಿ ಇಲ್ಲದೆ ಇರುವುದನ್ನು ಚರ್ಚೆ ಮಾಡಲು ಶಿಕ್ಷಣ ತಜ್ಞರ ಸಭೆ ಕರೆಯಬೇಕೆಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರಂದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷೆಗೆ ಉತ್ತರ ಪತ್ರಿಕೆ ಕೊಡಲಾಗದಷ್ಟು ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗಿದೆಯೇ? ಎಂದು ರಾಜ್ಯ ಶಿಕ್ಷಣ ಸಚಿವರಿಗೆ ಪ್ರಶ್ನಿಸಿದ್ದಾರೆ. 8ರಿಂದ 8.5 ಲಕ್ಷ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ನೀವು ಪ್ರಿಪರೇಟರಿ ಪರೀಕ್ಷೆ ನಡೆಸಲು 50 ರೂ. ಸಂಗ್ರಹಿಸಿ ಪ್ರಶ್ನೆಪತ್ರಿಕೆ ನೀಡುವುದಾದರೆ, ಉತ್ತರ ಪತ್ರಿಕೆ ನೀವೇ ತರಬೇಕು ಎನ್ನುವುದಾದರೆ ಸರ್ಕಾರ ಯಾವ ಅಧೋಗತಿಗೆ ತಲುಪಿದೆ? ಇದು ಬಹಳ ನೋವಿನ ವಿಚಾರ ಎಂದರು.
11 ಮತ್ತು 12ನೇ ತರಗತಿಗೆ ಎರಡೆರಡು ಸಪ್ಲಿಮೆಂಟರಿ ಪರೀಕ್ಷೆ ನಡೆಸಲು ಸರ್ಕಾರ ಅಸ್ತು ಎಂದಿದೆ. ಎಸ್‍ಎಸ್‍ಎಲ್‍ಸಿ ಪ್ರಿಪರೇಟರಿ ಪರೀಕ್ಷೆ ನಡೆಸಲು ಸರ್ಕಾರ ಹಣ ಕೊಡುತ್ತಿಲ್ಲ. ವಿದ್ಯಾರ್ಥಿಗಳ ಬಳಿ ಹಣ ಸಂಗ್ರಹಿಸಿ, ಕೇವಲ ಪ್ರಶ್ನೆಪತ್ರಿಕೆ ಕೊಡುವುದಾಗಿ ಹೇಳುತ್ತಾರೆ. ಉತ್ತರ ಪತ್ರಿಕೆ ನೀಡುವುದಿಲ್ಲ ಎಂದಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.