ಶಿರೂರು ಬಳಿ ಮುಂದುವರಿದ ಕಾರ್ಯಾಚರಣೆ: ಲಾರಿ ಇಂಜಿನ್, ಕ್ಯಾಬಿನ್ ಪತ್ತೆ
ಕಾರವಾರ: ಅಂಕೋಲಾ ಶಿರೂರು ಗುಡ್ಡದ ಬಳಿ ಗಂಗಾವಳಿ ನದಿಯಲ್ಲಿ ಮೂರನೇ ದಿನದ ಕಾರ್ಯಾಚರಣೆ ವೇಳೆ ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿದ್ದ ಲಾರಿ ಇಂಜಿನ್, ಕ್ಯಾಬಿನ್ ಪತ್ತೆ ಮಾಡಲಾಗಿದೆ.
ಗುಡ್ಡ ಕುಸಿತವಾದ ಪ್ರದೇಶದ ಬಳಿ ಗಂಗಾವಳಿ ನದಿ ತೀರದಲ್ಲಿ ಮೂರನೇ ಹಂತದ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಭಾನುವಾರ ಮುಂಜಾನೆಯಿಂದಲೇ ಆರಂಭವಾದ ಕಾರ್ಯಾಚರಣೆ ವೇಳೆ ಲಾರಿ ಇಂಜಿನ್, ಕ್ಯಾಬಿನ್ ಪತ್ತೆಮಾಡಿ ಅದನ್ನು ಕ್ರೇನ್ ಮೂಲಕ ಕಾರ್ಮಿಕರು ಮೇಲಕ್ಕೆ ಎತ್ತಿದ್ದಾರೆ.
ಸದ್ಯ ಇಂಜಿನ್ ಗ್ಯಾಸ್ ಟ್ಯಾಂಕರ್ ಇಂಜಿನ್ ಇರಬಹುದು ಎನ್ನುವ ಶಂಕಿಸಲಾಗಿದೆ. ಕಾರ್ಯಾಚರಣೆ ಮುಂದುವರಿಸಲಾಗಿದೆ. ನದಿಯಲ್ಲಿ ಮಣ್ಣಿನ ಅಡಿ ಹುದುಗಿರುವ ಲಾರಿ ಭಾಗಗಳು ಒಂದೊಂದಾಗಿ ಪತ್ತೆಯಾಗುತ್ತಿದೆ.
ಜುಲೈ 16ರಂದು ಅಂಕೋಲಾದ ಶಿರೂರು ಬಳಿ ಹೆದ್ದಾರಿಗೆ ಕುಸಿದು 11ಮಂದಿ ನಾಪತ್ತೆಯಾಗಿದ್ದರು. ಈ ಪೈಕಿ 8 ಮಂದಿ ಶವ ಪತ್ತೆಯಾಗಿತ್ತು. ಸ್ಥಳೀಯರಾದ ಜಗನ್ನಾಥ ನಾಯ್ಕ, ಲೋಕೇಶ, ಕೇರಳದ ಅರ್ಜುನ್‌ಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಅಲ್ಲದೆ ಅರ್ಜುನ್ ಚಾಲನೆ ಮಾಡುತ್ತಿದ್ದ ಕಟ್ಟಿಗೆ ತುಂಬಿದ ಬೆಂಜ್ ಲಾರಿ ಕೂಡ ನಾಪತ್ತೆಯಾಗಿದ್ದು ಹುಡುಕಾಟ ನಡೆಸಲಾಗುತ್ತಿದೆ.