ಶೀಘ್ರದಲ್ಲೇ ಕೆಎಎಸ್ ಹುದ್ದೆಗಳ ನೇಮಕಾತಿ
ಪದವೀಧರರಿಗೆ ಸಿಹಿ ಸುದ್ದಿ ಹೊರಬಿದ್ದಿದ್ದು, ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ (ಕೆಎಎಸ್) ಅಧಿಸೂಚನೆಗೆ ತಯಾರಿ ನಡೆದಿದ್ದು, ಶೀಘ್ರದಲ್ಲೇ ಅಧಿಸೂಚನೆ ಹೊರಬಿಳಲಿದೆ. ಉದ್ಯೋಗಾಕಾಂಕ್ಷಿಗಳು ಈಗಿಂದಲೇ ಕೆಎಎಸ್ ಹುದ್ದೆಗೆ ತಯಾರಿ ನಡೆಸಬಹುದಾಗಿದೆ. ಉನ್ನತ ಮೂಲಗಳ ಪ್ರಕಾರ ಈ ವರ್ಷ ೩೨೫ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ನಡೆಯಲಿದೆ. ಪ್ರೋಬೇಷನರಿ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಉಳಿಕೆ ಮೂಲ ವೃಂದದ ಮತ್ತು ಕಲ್ಯಾಣ ಕರ್ನಾಟಕ ವೃಂದದಲ್ಲಿ ಖಾಲಿ ಇರುವ ಸ್ಥಾನಗಳ ವರ್ಗಿಕರಣ ವಿವರಗಳನ್ನು ಅನಧಿಕೃತ ಟಿಪ್ಪಣಿಯೊಂದಿಗೆ ಲಗತ್ತಿಸಿರುವ ನಿಗದಿತ ನಮೂನೆಯಲ್ಲಿರುವಂತೆ ಸಿದ್ದಪಡಿಸಿ ಅಗತ್ಯ ಮಾಹಿತಿ, ಸೂಕ್ತ ಆದೇಶಗಳೊಂದಿಗೆ ಒದಗಿಸುವಂತೆ ಸರ್ಕಾರದ ಅಧೀನ ಕಾರ್ಯದರ್ಶಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅವರು ಆದೇಶ ಹೊರಡಿಸಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಪ್ರಸ್ತುತ ೦೫ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹುದ್ದೆಗಳು ಖಾಲಿ ಇರುತ್ತವೆ. ಇವುಗಳಲ್ಲಿ ೦೩ ಉಳಿಕೆ ಮೂಲ ವೃಂದ ಹಾಗೂ ೦೨ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಾಗಿರುತ್ತವೆ.
ಈ ಹಿಂದೆ ನಡೆದ ಕೆಎಎಸ್ ನೇಮಕಾತಿಗೆ ಮೀಸಲಿಟ್ಟ ಹುದ್ದೆಗಳು: ೨೦೧೧ರಲ್ಲಿ ೩೬೨, ೨೦೧೪ರಲ್ಲಿ ೪೬೪, ೨೦೧೫ರಲ್ಲಿ ೪೨೮ ಹಾಗೂ ೨೦೧೭ರಲ್ಲಿ ೧೦೬ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು.