ಶೀಲ ಶಂಕಿಸಿ ಪತ್ನಿಯನ್ನೇ ಕೊಲೆಗೈದ ಪತಿ
ಕೊಪ್ಪಳ: ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಪತ್ನಿಯನ್ನು ಪತಿಯೇ ಕೊಲೆಗೈದ ಘಟನೆ ನಗರದ ಗವಿಮಠದ ಆವರಣದಲ್ಲಿ ಭಾನುವಾರ ನಡೆದಿದೆ.
ಮೃತಳನ್ನು ಗೀತಾ ರಾಜೇಶ(೨೫) ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿಯನ್ನು ತುಮಕೂರು ಜಿಲ್ಲೆಯ ತುರ್ವಿಕೆರೆಯ ಭೂವನಹಳ್ಳಿಯ ರಾಜೇಶ ಎನ್ನಲಾಗಿದೆ. ಈ ದಂಪತಿಗಳಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದೆ. ಇವರು ಕಳೆದ ಆರು ವರ್ಷಗಳ ಹಿಂದೆಯೇ ಪ್ರೀತಿಸಿ ಮದುವೆಯಾಗಿದ್ದರು.
ಗವಿಸಿದ್ಧೇಶ್ವರ ಜಾತ್ರೆಗೆ ಬಾಂಡೆ ಸಾಮಾನು ವ್ಯಾಪಾರ ಮಾಡಲು ಬಂದಿದ್ದ ದಂಪತಿ ಕಳೆದ ನಾಲ್ಕು ದಿನಗಳಿಂದಲೂ ಕುಡಿದು ಬಂದು, ಅಕ್ರಮ ಸಂಬಂಧ ಹೊಂದಿದ್ದೀಯಾ ಎಂದು ಜಗಳವಾಡುತ್ತಿದ್ದರು. ಇದರಿಂದ ಬೇಸತ್ತು ಊರಿಗೆ ಹೋಗಲು ಮುಂದಾದ ಪತ್ನಿ ಗೀತಾಳ ಜಡೆ ಹಿಡಿದು, ಕುತ್ತಿಗೆಗೆ ಚಾಕುವಿನಿಂದ ಇರಿದ್ದಾನೆ. ಕೂಡಲೇ ಹಲ್ಲೆಗೊಳಗಾದ ಯುವತಿಯನ್ನು ನಗರದ ಸರ್ಕಾರಿ ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಚಿಕಿತ್ಸೆ ಫಲಿಸದೇ ಗೀತಾ ಕೊನೆಯುಸಿರೆಳೆದಿದ್ದಾಳೆ. ಮೃತಳ ದೇಹವನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಾಜೇಶನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.