For the best experience, open
https://m.samyuktakarnataka.in
on your mobile browser.

ಶುಲ್ಕ ಪಾವತಿಗೆ ವಿದ್ಯಾರ್ಥಿಗಳ ಕೂಡಿಹಾಕಿದ ಶಾಲಾ ಮಂಡಳಿ

10:43 PM Sep 12, 2024 IST | Samyukta Karnataka
ಶುಲ್ಕ ಪಾವತಿಗೆ ವಿದ್ಯಾರ್ಥಿಗಳ ಕೂಡಿಹಾಕಿದ ಶಾಲಾ ಮಂಡಳಿ

ಕೊಪ್ಪಳ: ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಆರೋಪಿಸಿ ಸುಮಾರು ೨೦ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸದೇ ಶಾಲಾ ಕೊಠಡಿಯೊಂದಲ್ಲಿಯೇ ಕೂಡಿ ಹಾಕಿದ ಘಟನೆ ನಗರದ ಖಾಸಗಿ ಶಾಲೆಯೊಂದರಲ್ಲಿ ಗುರುವಾರ ನಡೆದಿದೆ.
ನಗರದ ನಿವೇದಿತಾ ಶಾಲೆಯ ಆಡಳಿತ ಮಂಡಳಿಯವರು ಶುಲ್ಕ ಪಾವತಿಸದಿರುವುದಕ್ಕೆ ವಿದ್ಯಾರ್ಥಿಗಳನ್ನು ಕೂಡಿಹಾಕಿದ್ದು, ಪಾಲಕರು ಬಂದ ಮೇಲೆ ಶುಲ್ಕ ಪಾವತಿಸುವಂತೆ ಕೇಳುವ ಉದ್ದೇಶ ಹೊಂದಿದ್ದರು. ಬಳಿಕ ಸಮಯವಾದರೂ ಮಕ್ಕಳು ಬರದಿರುವುದಕ್ಕೆ ಆತಂಕಗೊಂಡ ಪಾಲಕರು ಶಾಲೆಗೆ ಬಂದಿದ್ದಾರೆ. ಆಗ ಶುಲ್ಕಕ್ಕಾಗಿ ಪಾಲಕರನ್ನು ಕರೆಯಿಸಲು ಮಕ್ಕಳನ್ನು ಕೊಠಡಿಯಲ್ಲಿ ಕೂಡಿ ಹಾಕಿರುವ ವಿಷಯ ಬಹಿರಂಗವಾಗಿದೆ ಎನ್ನಲಾಗಿದೆ.
ಪಾಲಕರಿಗೆ ಶುಲ್ಕ ಪಾವತಿಸುವಂತೆ ಹೇಳಿದ್ದೇವೆ. ಅಲ್ಲದೇ ನಮ್ಮನ್ನು ಬಂದೂ ಭೇಟಿ ಮಾಡುವಂತೆ ಮಕ್ಕಳಿಗೂ ಹೇಳಿ, ಕಳುಹಿಸಿದ್ದೇವೆ. ದೂರವಾಣಿ ಕರೆ ಮಾಡಿ, ಮಾತನಾಡಿದ್ದೇವೆ. ಆದರೂ ಕೂಡಾ ನಮ್ಮನ್ನು ಬಂದು ಭೇಟಿ ಮಾಡಿಲ್ಲ. ಹಾಗಾಗಿ ಶಾಲೆಯಲ್ಲಿಯೇ ಮಕ್ಕಳನ್ನು ಇರಿಸಿಕೊಂಡಿದ್ದು, ಮಕ್ಕಳನ್ನು ಕರೆದುಕೊಂಡು ಹೋಗಲು ಪಾಲಕರು ಬಂದಾಗ ಶುಲ್ಕ ಪಾವತಿ ಬಗ್ಗೆ ಮಾತನಾಡುತ್ತೇವೆ ಎನ್ನುತ್ತಾರೆ ಪಾಲಕರೊಂದಿಗೆ ಶಾಲೆಯ ಮುಖ್ಯಸ್ಥರು.
ಶಾಲೆಯಲ್ಲಿ ಕೂಡಿ ಹಾಕಿದ ಬಗ್ಗೆ ಮಾಹಿತಿ ಬಂದಿದ್ದು, ಸಿ.ಆರ್.ಪಿಯನ್ನು ಶಾಲೆಯಲ್ಲಿ ನಡೆದ ಘಟನೆಯ ಬಗ್ಗೆ ಮಾಹಿತಿ ಪಡೆದು, ನನಗೆ ವರದಿ ಮಾಡುವಂತೆ ಸೂಚಿಸಿದ್ದೇನೆ. ನಾನೂ ಬೆಳಿಗ್ಗೆಯಿಂದ ರಾತ್ರಿಯವರೆಗೂ ಜಿಲ್ಲಾಧಿಕಾರಿಗಳ ಸಭೆಯಲ್ಲಿದ್ದೆ. ಹಾಗಾಗಿ ಮಾಹಿತಿ ಪಡೆದು, ಕ್ರಮ ವಹಿಸುತ್ತೇನೆ. ಶಾಲಾಗೆ ಭೇಟಿ ನೀಡುತ್ತೇನೆ ಎಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ. ಶಂಕರಯ್ಯ ತಿಳಿಸಿದರು.