ಶ್ರಮಕ್ಕೆ ಬೇಕಿಲ್ಲವೇ ಮೌಲ್ಯ ಮರ್ಯಾದೆ?
ದೇಶದ ಯುವ ಜನತೆ ವಾರದಲ್ಲಿ ಎಪ್ಪತ್ತು ತಾಸು ದುಡಿಯಬೇಕು, ಉತ್ಪಾದನೆ ಹೆಚ್ಚಿಸಬೇಕು… ಇನ್‌ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರ ಈ ಹೇಳಿಕೆ ವಾರದಿಂದ ಈಚೆಗೆ ವ್ಯಾಪಕ ಚರ್ಚೆಗೆ ಆಸ್ಪದ ನೀಡಿದೆ.
ಮೂರ್ತಿಯವರ ಆಶಯ, ಮಾತು, ಬದ್ಧತೆಯಲ್ಲಿ ನಂಬಿಕೆಯುಳ್ಳವರು ಹಾಗೂ ಉತ್ಪಾದನಾ ಕ್ಷೇತ್ರವನ್ನು ನಿರ್ವಹಿಸುತ್ತಿರುವವರು ಇದನ್ನು ಬೆಂಬಲಿಸಿದ್ದಾರೆ. ಆದರೆ ಅದೇ ಶ್ರಮಿಕ ವರ್ಗ, ವಿಶೇಷವಾಗಿ ಉದ್ಯೋಗಿಗಳ ವರ್ಗ ತೀವ್ರ ಟೀಕೆ ಮಾಡುತ್ತಿದೆ.
ಮೂರ್ತಿಯವರ ಹೇಳಿಕೆ ಇಷ್ಟೇ. ಭಾರತ ಬಲಾಢ್ಯ ರಾಷ್ಟ್ರವಾಗಬೇಕು. ಆರ್ಥಿಕ ಮತ್ತು ಜಾಗತಿಕ ರಂಗದಲ್ಲಿ ಬಲಿಷ್ಠಗೊಳ್ಳಲು ಉತ್ಪಾದನೆ ಹೆಚ್ಚಬೇಕು. ಇದಕ್ಕಾಗಿ ಯುವ ಜನತೆ ವಾರದಲ್ಲಿ ಎಪ್ಪತ್ತು ತಾಸು ಕೆಲಸ ನಿರ್ವಹಿಸಿ ಬದ್ಧತೆ ತೋರಬೇಕು ಎನ್ನುವುದು.
ಶ್ರಮಿಕ ವರ್ಗ, ವಿಶೇಷವಾಗಿ ನಗರದ ಉದ್ಯಮಗಳಲ್ಲಿ ಕೆಲಸ ಮಾಡುತ್ತಿರುವವರು ಮೂರ್ತಿಯವರನ್ನು ಬಂಡವಾಳಶಾಹಿ, ಉದ್ಯಮ ಬೆಳವಣಿಗೆ ಮತ್ತು ಲಾಭದಾಯಕ ದೃಷ್ಟಿಕೋನದಿಂದ ಈ ಮಾತನ್ನಾಡಿದ್ದಾರೆ; ಶ್ರಮಿಕ ವರ್ಗದ ಆರೋಗ್ಯ, ಸ್ವಾಸ್ಥ್ಯ, ಅವರ ಕೌಟುಂಬಿಕ ಮತ್ತು ಸಾಮಾಜಿಕ ಬದ್ಧತೆ-ಕಾಳಜಿ ಇವ್ಯಾವುವೂ ಇಲ್ಲ; ಇದೊಂದು ಶೋಷಣೆಯ ಧ್ವನಿ ಎನ್ನುವಂತೆ ಟೀಕಿಸುತ್ತಿದ್ದಾರೆ.
ವಿಷಯದ ಗಂಭೀರತೆ ಮರೆತು ಮಾಧ್ಯಮಗಳಲ್ಲಿ ಮೂರ್ತಿ ಸುತ್ತಮುತ್ತ ನಡೆಯುತ್ತಿರುವ ಟೀಕೆ ಟಿಪ್ಪಣೆ, ಜಾಲತಾಣದ ಚರ್ಚೆ, ಕುಹಕ ಮಾತು ಕೇಳಿದ ಹಳ್ಳಿಯ ರೈತ, ಕೃಷಿಕೂಲಿ, ಹೊಟ್ಟೆಪಾಡಿಗಾಗಿ ದಿನದ ೧೬-೧೮ ತಾಸು ದುಡಿಯುವ ಮಂದಿ ತಮಗೆ ಸಮಯವೇ ಸಾಕಾಗದು… ನಮ್ಮ ಶ್ರಮಕ್ಕೆಲ್ಲಿಯ ಬೆಲೆ? ಎಂದು ಕೇಳುತ್ತಿದ್ದಾರೆ!
ನಾರಾಯಣ ಮೂರ್ತಿ ಜರ್ಮನಿ, ಜಪಾನ್ ಇತ್ಯಾದಿ ದೇಶಗಳನ್ನು, ಅಲ್ಲಿಯ ನಾಗರಿಕರು ಹೆಚ್ಚಿಗೆ ದುಡಿದು ಕಟ್ಟಿದ ಬಗೆಯನ್ನು ಉದಾಹರಿಸಿದ್ದಾರೆ. ಕೆಲ ಕಾಲ ಯುವ ಜನತೆ ಹೆಚ್ಚು ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲಿ ಎನ್ನುವ ಆಶಯ ಅವರದ್ದು. ಇದಕ್ಕೆ ಸ್ವತಃ ತಾವೂ ಹಿಂದೆ ದಿನಕ್ಕೆ ಹನ್ನೆರಡು ತಾಸಿನವರೆಗೆ ಕಾರ್ಯನಿರ್ವಹಿಸಿದ್ದಾಗಿ ಹೇಳಿದ್ದಾರೆ.
ಹೇಗೆ ಸಾಧ್ಯ? ಈಗಿನ ದಿನಮಾನಗಳಲ್ಲಿ? ಅದೂ ಕುಟುಂಬಕ್ಕೆ, ಸಮಾಜಕ್ಕೆ ಸಮಯ ನೀಡಬೇಕಲ್ಲ? ಆರೋಗ್ಯದ ಮೇಲೆ ದುಷ್ಪರಿಣಾಮ ಆದೀತು ಎಂದು ವೈದ್ಯಕೀಯ ಕ್ಷೇತ್ರವೇ ಮೂರ್ತಿ ಮಾತಿಗೆ ಎದಿರು ಬಿದ್ದಿದೆ.
ವಾರದ ವಿದ್ಯಮಾನಗಳನ್ನು ಅವಲೋಕಿಸಿದರೆ ಕೇವಲ ಐಟಿ-ಬಿಟಿ ಹಾಗೂ ಸರ್ಕಾರಿ ನೌಕರಿ ಮಂದಿಯೇ ಮೂರ್ತಿ ಮಾತಿನ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ತಾಸಿನ ಲೆಕ್ಕದಲ್ಲಿ ಸಂಬಳ ಕೊಡುತ್ತೀರಾ? ಓಟಿ ನೀಡುತ್ತೀರಾ? ಕಾರ್ಮಿಕ ಕಾಯ್ದೆ ಏಕೆ ಬೇಕು ಎಂದು ಪ್ರಶ್ನಿಸುತ್ತಿದ್ದಾರೆ.
ಸುಮ್ಮನೇ ಗಮನಿಸಿ. ದೇಶದ ದುಡಿಮೆಯ ಸಂಸ್ಕೃತಿ, ದುಡಿಮೆಯಲ್ಲಿನ ತೊಡಕುಗಳು, ಇವತ್ತಿನ ಸ್ಥಿತಿಗತಿ ಇವೆಲ್ಲಗಳ ಬಗ್ಗೆ ಮೂರ್ತಿ ಹೇಳಿಕೆ ನಂತರ ಈಗ ಚರ್ಚೆ ನಡೆಯುತ್ತಿದೆಯಷ್ಟೇ.
ನಾರಾಯಣಮೂರ್ತಿ ಅವರ ಹೇಳಿಕೆಯನ್ನು ಅಕ್ಷರಶಃ ಪರಿಗಣಿಸುವ ಅಗತ್ಯವಿದೆಯೇ? ನಿರ್ಲಿಪ್ತವಾಗಿ, ಪಾರದರ್ಶಕ ಮನಸ್ಸಿನಿಂದ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪ್ರಶ್ನೆ ಇದು.
ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ರೀತಿ ಪ್ರಕಾರ ವಾರವೊಂದರಲ್ಲಿ ದುಡಿಮೆಯ ಅವಧಿ ೪೮ ಗಂಟೆ ಮೀರಬಾರದು. ಕೆಲವು ಕ್ಷೇತ್ರಗಳಲ್ಲಿ ಐದು ದಿನಗಳ ವಾರ, ಇನ್ನು ಕೆಲವೆಡೆ ಆರು ದಿನಗಳ ವಾರ ಚಾಲ್ತಿಯಲ್ಲಿದೆ. ಕಾರ್ಖಾನೆಗಳು ದಿನಕ್ಕೆ ಎಂಟು ತಾಸಿನಂತೆ ಆರು ದಿನಗಳ ನಂತರ ಒಂದು ದಿನದ ವಿಶ್ರಾಂತಿ ನೀಡುತ್ತಿವೆ.
ಮೂರ್ತಿಯವರ ಹೇಳಿಕೆ ಬಂಡವಾಳಶಾಹಿಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ ಎನ್ನುವ ಮೂಸೆಯಲ್ಲಿಯೇ ಶ್ರಮಿಕ ವರ್ಗ ನೋಡುತ್ತಿದೆ.
ಅಷ್ಟು ತಾಸು ಕೆಲಸ ನಿರ್ವಹಿಸಿದರೆ ಆರೋಗ್ಯದ ಮೇಲಿನ ದುಷ್ಪರಿಣಾಮ, ಸಾಮಾಜಿಕ- ಕೌಟುಂಬಿಕ ಸಮಸ್ಯೆಗಳ ಬಗ್ಗೆ ಹೊಸ ಬೆಳಕನ್ನು ಚೆಲ್ಲಲಾಗುತ್ತಿದೆ. ಹಾಗಂತ ಇವೆಲ್ಲವೂ ಸಂಘಟಿತ ವಲಯದ ಮತ್ತು ಬೌದ್ಧಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಕೂಗು.
ಈ ಕೂಗು ತಪ್ಪು ಎಂದಲ್ಲ. ಹಾಗಂತ ಮೂರ್ತಿಯವರ ಕಳಕಳಿ- ಕಾಳಜಿ ಟೀಕಾರ್ಹ ಮತ್ತು ಅಪೇಕ್ಷಿತವೂ ಅಲ್ಲ. ಚರ್ಚೆಯ ವಿಭಿನ್ನ ಮಗ್ಗಲುಗಳ ಬಗ್ಗೆ ನೋಡಿದಾಗ ಮತ್ತು ಇತ್ತೀಚಿನ ಯುವ ಜನಾಂಗದ ಚಟುವಟಿಕೆಗಳನ್ನು ಗಮನಿಸಿದರೆ ಉಳಿತಾಯ, ಬಂಡವಾಳ, ಸಂಬಂಧಗಳಿಗೆ ಬೆಲೆ ಇಲ್ಲದೇ ಕೇವಲ ಮೋಜು ಮಸ್ತಿ ಹಾಗೂ ಆ ದಿನದ, ಆ ಕ್ಷಣದ ವ್ಯವಹಾರ ಜೀವನ ಎನ್ನುವಂತಾಗಿದೆ.
ಎಪ್ಪತ್ತು ತಾಸು ಕೆಲಸ ನಿರ್ವಹಿಸಿ ಎನ್ನುವ ಮೂರ್ತಿ ಮಾತು ಈಗ ನೌಕರ ವರ್ಗದ, ಉದ್ಯೋಗಿಗಳ ಕಾರ್ಯವೈಖರಿ, ಗುಣಮಟ್ಟ ಮತ್ತು ಕ್ಷಮತೆ-ಬದ್ಧತೆಗಳ ಬಗ್ಗೆಯೂ ಚರ್ಚೆಯ ಮಗ್ಗಲು ತಳೆದಿದೆ. ಸರ್ಕಾರಿ ನೌಕರರಂತೂ ದಿನಕ್ಕೆ ಎರಡು ತಾಸು ಕಾರ್ಯನಿರ್ವಹಿಸಿದರೆ ಹೆಚ್ಚು ಎನ್ನುವ ಆರೋಪ ಒಂದೆಡೆಯಾದರೆ, ಲಂಚ ರುಷುವತ್ತು ಇಲ್ಲದೇ ಕೆಲಸ ಆಗುತ್ತಿದೆಯೇ ಎನ್ನುವ ಆರೋಪ ಸ್ವರೂಪದ ಮಾತು ಸರ್ವೇ ಸಾಮಾನ್ಯ.
ದುಡಿಯುವರೇ ಕೆಲಸ ಮಾಡುತ್ತಿರಬೇಕು. ಕರ್ತವ್ಯ ನಿರ್ವಹಿಸದವರು ನೂರೆಂಟು ನೆಪ ತೋರುತ್ತ ಸಮಯ ಹಾಗೂ ಕೆಲಸ ಸಂಬಳಕ್ಕಾಗಿ ಮಾತ್ರ ಎಂಬ ಧೋರಣೆ ಹೊಂದಿದ ಸಂಖ್ಯೆಯೇ ಹೆಚ್ಚು.
ಹಿಂದೆ ಐದು ದಿನದ ಕೆಲಸ ನೀಡಿದಾಗ ಪ್ರತಿ ಸೋಮವಾರ ಅತ್ಯಂತ ದಕ್ಷತೆ, ಉತ್ಸಾಹದಿಂದ ನೌಕರ ಬರುತ್ತಾನೆ, ಆತನ ಕಾರ್ಯಕ್ಷಮತೆ ಇಮ್ಮಡಿಯಾಗುತ್ತದೆ ಎನ್ನುವ ನಿರೀಕ್ಷೆ ಇತ್ತು. ಯಾರೋ ಮಹಾತ್ಮನ ವರದಿಯಾಧರಿಸಿ ನಡೆದಿದ್ದ ಪ್ರಕ್ರಿಯೆ ಇದು. ಆದರೆ ಹೀಗೆ ಐದು ದಿನ ಕೆಲಸದ ಅವಧಿ ಸೌಲಭ್ಯ ಪಡೆದ ನೌಕರ ಬೇಗವೂ ಬರಲಿಲ್ಲ. ಉತ್ಸಾಹವನ್ನೂ ತೋರಲಿಲ್ಲ. ಜೊತೆಗೆ ಅಕ್ರಮ-ಭ್ರಷ್ಟಾಚಾರಗಳೇನೂ ಕಡಿಮೆಯಾಗಲಿಲ್ಲ.
ಬ್ಯಾಂಕುಗಳಲ್ಲಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಎರಡನೇ ಶನಿವಾರ, ನಾಲ್ಕನೇ ಶನಿವಾರ ರಜೆ ಘೋಷಿಸಲಾಗಿದೆ. ದೂರವಾಣಿ ಇಲಾಖೆಗಳಲ್ಲಿ ಐದು ದಿನ ಕೆಲಸದ ಆದೇಶವೂ ಹೊರಬಿತ್ತು. ಆದರೆ ಆ ಎಲ್ಲ ಸಂಸ್ಥೆಗಳ ಕಾರ್ಯಕ್ಷಮತೆ ಹೆಚ್ಚಾಯಿತೇ?
ಈಗ ಹೆಚ್ಚಾಗಿ ಚರ್ಚೆಯಾಗುತ್ತಿರುವ ಕೆಲಸಗಳೆಂದರೆ ಐಟಿ-ಬಿಟಿ, ವೈಟ್ ಕಾಲರ್ ಕರ್ತವ್ಯ, ತಾಂತ್ರಿಕ ಪರಿಣಿತ ವಲಯ ಇತ್ಯಾದಿಗಳು. ಒಂದೊಂದು ಇಲಾಖೆಯವರು ಮತ್ತೊಂದು ಇಲಾಖೆಯನ್ನು ಮೂದಲಿಸುತ್ತಾರೆ. ಶಾಲಾ ಮಾಸ್ತರರಿಗೆಲ್ರೀ ಕೈ ತುಂಬ ಕೆಲಸ? ರಜೆಯೇ ಹೆಚ್ಚು ಎಂದು ಸರ್ಕಾರಿ ನೌಕರರೇ ಆಡಿಕೊಳ್ಳುತ್ತಾರೆ. ಯೂನಿವರ್ಸಿಟಿ ನೋಡಿ ದಿನಕ್ಕೊಂದು ಗಂಟೆ ಪಾಠ ಮಾಡಿದರೆ ಆಯ್ತು, ಹೊಸತನವಿಲ್ಲ, ಏನಿಲ್ಲ, ಲಕ್ಷಲಕ್ಷ ಸಂಬಳ ಎಂದು ಉದಾಹರಿಸಲಾಗುತ್ತದೆ. ಪೊಲೀಸು, ಕಂದಾಯ ಇಲಾಖೆಯವರು ಹೆಚ್ಚು ಕೆಲಸ ಮಾಡುತ್ತಾರೆ. ಏಕೆಂದರೆ ಅವರು ಹೆಚ್ಚು ಕೆಲಸ ಮಾಡಿದಾಗ ಲಂಚ ರುಷುವತ್ತು ಜಾಸ್ತಿ ಸಿಗುತ್ತದೆ ಬಿಡಿ.. ಎನ್ನುವ ಆರೋಪ.
ಕಳೆದ ಕೆಲ ತಿಂಗಳ ಹಿಂದೆ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ಒಂದು ಆದೇಶ ಹೊರಡಿಸಿದೆ. ಕಾರ್ಮಿಕರು ಒಂದು ಗಂಟೆ ಹೆಚ್ಚು ಕೆಲಸ ಮಾಡಬೇಕು ಎಂದು. ಇದಕ್ಕೆ ಕಾರ್ಮಿಕರಿಗಿಂತ ಸಂಘಟನೆಗಳ ವಿರೋಧವೇ ಹೆಚ್ಚಾಗಿ ಬಂತು. ಕಳೆದ ೨೦೨೨ರ ಆಗಸ್ಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೇತನ ಪರಿಷ್ಕರಣೆಗೆ ಹೊಸ ವೇತನ ಆಯೋಗವನ್ನು ರಚಿಸಿದರು. ಆಗ ನೌಕರ ಸಂಘವನ್ನು ಉದ್ದೇಶಿಸಿ ಪ್ರತಿಯೊಬ್ಬ ಸರ್ಕಾರಿ ನೌಕರ ದಿನಕ್ಕೊಂದು ಗಂಟೆ ಹೆಚ್ಚು ಕೆಲಸ ನಿರ್ವಹಿಸಿ, ಅಂದಿನ ಕೆಲಸ ಅಂದೇ ಪೂರ್ಣಗೊಳಿಸಿ ಎಂದು ಉದಾರವಾಗಿ ಸಲಹೆ ನೀಡಿದರು. ಅಷ್ಟಕ್ಕೇ ನೌಕರ ವರ್ಗದಲ್ಲಿ ಭಿನ್ನಮತ ಜೋರಾಯಿತು.
ಈ ಹೆಚ್ಚು ದುಡಿಯಿರಿ, ಹೆಚ್ಚು ಉತ್ಪಾದಿಸಿ ಎನ್ನುವ ಸಿದ್ಧಾಂತವನ್ನು ಹಲವು ಸಮಾಜ ಸುಧಾರಕರು ಹೇಳುತ್ತಲೇ ಬಂದಿದ್ದಾರೆ. ಉತ್ಪಾದನೆ, ಖರ್ಚು, ವ್ಯವಹಾರ, ವ್ಯಾಪಾರ ಇತ್ಯಾದಿ ಲಾಜಿಕ್ ಮೊದಲಿನಿಂದಲೂ ಇದ್ದುದೇ. ಇದೊಂದು ವಾಣಿಜ್ಯ ವ್ಯವಹಾರದ ಮತ್ತು ಬದುಕಿನ ಸರ್ಕಲ್. ಹೆಚ್ಚು ದುಡಿಯಿರಿ ಎಂದರೆ ಬೇರೆ ದೇಶದವರೊಂದಿಗೆ ಈಗ ತುಲನೆ ನಡೆಯುತ್ತದೆ. ಅಂದು ಅವರು ದುಡಿದಿರಬಹುದು, ಇಂದು? ಎಂದು ಪ್ರಶ್ನಿಸುತ್ತಾರೆ. ಶೇಕಡಾ ೫೦ಕ್ಕೂ ಹೆಚ್ಚಿರುವ ಯುವಜನತೆ ಈ ದೇಶ ಕಟ್ಟುವುದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎನ್ನುವುದು ಭಾವನಾತ್ಮಕ ಹೇಳಿಕೆಯಾಗುತ್ತದೆ ಅಷ್ಟೇ ಎನ್ನುವ ಮಾತೂ ಬರುತ್ತದೆ.
ನಾರಾಯಣಮೂರ್ತಿ ಎಪ್ಪತ್ತು ತಾಸು ದುಡಿಯಿರಿ ಎಂದರೆ, ಕೇವಲ ತನ್ನ ಉದ್ಯಮದಲ್ಲಿ, ತನ್ನ ನೌಕರರಾಗಿ ಕೆಲಸ ಮಾಡಿ ಎಂದಲ್ಲ. ಆ ಸಂಸ್ಥೆಗಿರುವ ಸಮಾಜಮುಖಿ ಕಾಳಜಿ, ಬದ್ಧತೆ ಮತ್ತು ದೇಶದ ಹಿತದೃಷ್ಟಿಯ ತನ್ಮಯತೆಯಲ್ಲಿ ಹೀಗೆ ಹೇಳಿರಬಹುದು ಎನ್ನುವ ಮಾತು ಉದ್ಯಮ ವಲಯದಿಂದಲೇ ಬರುತ್ತದೆ. ಆದರೆ, ಈ ಎಲ್ಲ ಚರ್ಚೆ ನಡೆಯುತ್ತಿರುವುದೀಗ ಕೇವಲ ಸಂಘಟಿತ ವಲಯದಲ್ಲಿ ಮಾತ್ರ. ಅದೂ ಈಗ ಜಾತಿ, ಬಣ್ಣ, ಲಾಭ ನಷ್ಟಗಳ ಕುರಿತ ಮಾತಾಗಿದೆ. ನಾರಾಯಣಮೂರ್ತಿ ಆಗಿರದೇ ಬರ‍್ಯಾವುದೋ ಸಮುದಾಯದ ನಾಯಕರು ಹೇಳಿದ್ದರೆ ಅದನ್ನು ಟೀಕಿಸುವ-ಚರ್ಚಿಸುವ ಧೈರ್ಯವನ್ನು ತೋರಲಾಗುತ್ತಿತ್ತೇ? ಯೋಚಿಸಬೇಕಾದದ್ದೇ ಅಲ್ಲವೇ!
ದೇಶದ ಜಾತಿ ವ್ಯವಸ್ಥೆಯಲ್ಲಿ ಮಾತೂ ಕೂಡ ಜಾತಿ ಬಣ್ಣ ಪಡೆಯುತ್ತದೆ ಎನ್ನುವುದು ಮೂರ್ತಿಯವರ ಹೇಳಿಕೆ ನಂತರದ ಚರ್ಚೆಯಿಂದ ವಿಧಿತವಾಗುತ್ತದೆ.
ತಮಾಷೆ ಎಂದರೆ ಈ ಎಲ್ಲ ಚರ್ಚೆಯನ್ನು ಗಮನಿಸುತ್ತಿರುವ ರೈತ, ವಾರದ ಏಳೂ ದಿನ ಕನಿಷ್ಠ ಹದಿನೈದು ತಾಸು ಕೆಲಸ ಮಾಡುತ್ತಿರುವೆನಲ್ಲ ಎಂದು ಅಚ್ಚರಿ ವ್ಯಕ್ತಪಡಿಸುತ್ತಾನೆ. ಉತ್ಪಾದನೆ ಹೆಚ್ಚಳ ಮತ್ತು ಶ್ರಮ, ಹೆಚ್ಚು ಕೆಲಸ ಇದನ್ನು ರೈತರಿಗೆ ಯಾರೂ ಹೇಳಿದವರಿಲ್ಲ. ಹಾಗೇ ರೈತ ಕಾರ್ಮಿಕರಿಗೂ ಅಷ್ಟೇ. ಆತ ದಿನವಿಡೀ ದುಡಿಯುತ್ತಿದ್ದಾನೆ. ಹೊಲ, ಗದ್ದೆ, ತೋಟ, ಮನೆ ಕಸುಬು ಎಲ್ಲವೂ ಅವನಿಗೆ ಜೀವನದ ಕ್ರಮ. ಎಪ್ಪತ್ತು ತಾಸು ಕೆಲಸ ಮಾಡಿ ಎಂದದ್ದನ್ನು ವಿರೋಧಿಸುವ ಮಂದಿ ಈ ದೇಶದ ಬೆನ್ನೆಲುಬಾದ ರೈತನ ಬಗೆಗೆ, ಆತನ ಬದುಕು ಬವಣೆಯ ಬಗ್ಗೆ ಕಾಳಜಿ ಕಳಕಳಿ ವ್ಯಕ್ತಪಡಿಸಿದ್ದಾರಾ?
ರೈತ ಅನ್ನದಾತ. ಬಿತ್ತುವನು ಬೆಳೆಯನ್ನು. ಹಾಗೇ ಬಿಕ್ಕುವವನೂ ಆತನೇ. ಆತನಿಗೆ ಕೆಲಸದ ಸಮಯ ಇದೆಯಾ? ಮುಂಜಾನೆಯಿಂದ ರಾತ್ರಿಯವರೆಗೂ ನಿರಂತರ ಚಟುವಟಿಕೆಯಲ್ಲೇ ಇರತ್ತಾನವನು. ಉತ್ತು ಬಿತ್ತುವಲ್ಲಿ ಆಲಸ್ಯ ತೋರಿದರೆ ಉಪವಾಸ ಅವನಿಗೆ ಮಾತ್ರವಲ್ಲ, ಇಡೀ ದೇಶಕ್ಕೆ. ರೈತ ಮೈಮರೆತರೆ, ಕೃಷಿ ಕಡೆಗಣಿಸಿದರೆ ಊಟಕ್ಕೇನು? ಈಗಿನ ಬರ, ಅನಾವೃಷ್ಟಿ, ಬೆಲೆ ಕುಸಿತ ಎಲ್ಲ ಸಂಕಷ್ಟಗಳಿಗೆ ಸ್ಪಂದಿಸಿದ ಪ್ರಮಾಣವೆಷ್ಟು? ಆತನ ದುಡಿಮೆಗೇನು ತಕ್ಕ ಪ್ರತಿಫಲ ಇದೆಯೇ? ಈ ಸಂಬಂಧ ಎಂದಾದರೂ ಚರ್ಚೆ ನಡೆದಿದೆಯೇ?
ಎಪ್ಪತ್ತು ತಾಸು ದುಡಿಮೆಯ ಕುರಿತು ಎಲ್ಲ ಟಿವಿ ಚಾನೆಲ್‌ಗಳಲ್ಲಿ ಗಂಟೆಗಟ್ಟಲೇ ಬಹಳ `ಅಧ್ಯಯನ ಪೂರ್ಣ'ವಾಗಿ ತರ್ಕ ವಿತರ್ಕಗಳು ನಡೆದರೆ ರೈತರು ಕೌತುಕದಿಂದ ಇದೇನು ದೊಡ್ಡ ವಿಷಯ ಎಂಬಂತೆ ತಾತ್ಸಾರದಿಂದ ನೋಡುತ್ತಿದ್ದಾರೆ.
ಮೂರ್ತಿಯವರ ಉತ್ಪಾದನೆ ಹೆಚ್ಚಿಸಿ ಎನ್ನುವ ಮಾತು ರೈತರಿಗೆ ಅನ್ವಯವಾಗದು. ಆದರೆ ಅವರ ಉತ್ಪಾದನೆ ಹೆಚ್ಚಿಸುವಲ್ಲಿ ಪೂರಕ ವಾತಾವರಣ ಕಲ್ಪಿಸಬೇಕಾದವರು ಮೂರ್ತಿಯಂಥವರು ಮತ್ತು ನಮ್ಮನ್ನಾಳುವ ಸರ್ಕಾರಗಳು.
ರೈತರ ಶ್ರಮಕ್ಕೆಲ್ಲಿ ಬೆಲೆಯಿದೆ? ಹಾಗೆಯೇ ಈಗಿನ ಗೃಹಿಣಿಯರ ಕೆಲಸದಲ್ಲಿದೆ ಸಮಯದ ಮಿತಿ? ರೈತಾಬಿ ವರ್ಗ ಮತ್ತು ಗೃಹಿಣಿಯರಲ್ಲಿರುವುದು ಜವಾಬ್ದಾರಿ..!
ಹಾಗೆಯೇ ರೈತ ಮಹಿಳೆಗೆಲ್ಲಿದೆ ಎಪ್ಪತ್ತು ತಾಸಿನ ಮಿತಿ? ಗುಜರಿ ಆಯುವವರಿಗೆ ಎಲ್ಲಿದೆ ದಿನಕ್ಕೆ ಎಂಟೇ ತಾಸು ಎನ್ನವುದು? ವ್ಯಾಪಾರಸ್ಥರಿಗೆಲ್ಲಿದೆ? ರಿಕ್ಷಾ ಚಾಲಕರಿಗೆಲ್ಲಿದೆ? ಅವರ‍್ಯಾರೂ ಸಮಯ ನೋಡಿಲ್ಲ.. ಜವಾಬ್ದಾರಿ ಅರಿತಿದ್ದಾರೆ…
ಎಪ್ಪತ್ತು ತಾಸು ಅಥವಾ ಸೀಮಿತ ಅವಧಿಯ ಕೆಲಸ ಎನ್ನುವುದು ಕೆಲವೇ ಕೆಲವು ವಿಭಾಗಕ್ಕಾದರೂ ಇಂಥವರ ಧ್ವನಿಯೇ ಹೆಚ್ಚು. ೨೪ ಗಂಟೆ ಸಾಲದು ಎನ್ನುವವರೂ ಇದ್ದಾರೆ.
ನಿತ್ಯ ಹದಿನಾಲ್ಕು ತಾಸು ಕೆಲಸ ನಿರ್ವಹಿಸಿ ೭೦-೮೦ ವರ್ಷ ನಿಶ್ಚಿಂತೆಯಿಂದ ಗಟ್ಟಿ ಮುಟ್ಟಾಗಿ ಬದುಕಿದ ಜನರಿಲ್ಲವೇ? ಶತಾಯುಷಿಗಳ ಜೀವನ ಚರಿತ್ರೆಯನ್ನು ನೋಡಿ, ಅವರೆಲ್ಲ ಯೌವನದಲ್ಲಿ, ಅಷ್ಟೇ ಅಲ್ಲ, ಬಹುತೇಕ ಜೀವನ ಪರ್ಯಂತ ಹತ್ತು ಹನ್ನೆರಡು ತಾಸು ಕೆಲಸ ಮಾಡಿದವರು. ತಮ್ಮ ದುಡಿಮೆಯನ್ನು ಶ್ರದ್ಧೆಯಿಂದ ಮಾಡಿ, ಆ ಕೆಲಸವನ್ನು ಪ್ರೀತಿಸಿದವರು. ದೇಹ ಮನಸ್ಸಿನ ಸ್ವಾಸ್ಥ್ಯವನ್ನು ಕೆಲಸದಿಂದಲೇ ಗಳಿಸಿದವರು.
ಬಹುಶಃ ಮೂರ್ತಿ ಮಾತನ್ನು ಈ ಅರ್ಥದಲ್ಲಿ ಪರಿಗಣಿಸಿದರೆ ಹೆಚ್ಚು ಅಪ್ಯಾಯಮಾನವಾಗುತ್ತದೆ ಅಲ್ಲವೇ?
ಹೀಗೊಂದು ವ್ಯಂಗ್ಯ ಮತ್ತು ಅಷ್ಟೇ ಗಹನವಾದ ಮಾತು ವೈರಲ್ ಆಗಿತ್ತು.
ಆಗತಾನೇ ಉದ್ಯೋಗ ಸೇರಿದ ಓರ್ವ ಯುವಕನನ್ನು ಸಂದರ್ಶಿಸಲಾಗುತ್ತದೆ. ಆತನನ್ನು ಕೇಳುತ್ತಾರೆ.
ನೀನೇನು ಮಾಡುತ್ತೀ?
ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ.
ಅಪ್ಪ..?
ಆತ ದೊಡ್ಡ ಅಧಿಕಾರಿ
ಅಮ್ಮ…?
ಅಮ್ಮ ಮನೆಯಲ್ಲಿರುತ್ತಾಳೆ. ಅವಳಿಗೆ ಕೆಲಸವಿಲ್ಲ..
ಊಟ…
ಅಮ್ಮ ಅಡುಗೆ ಮಾಡುತ್ತಾಳೆ, ಅವಳಿಗೆ ಬೇರೆ ಕೆಲಸ ಇಲ್ಲವಲ್ಲ…
ನಿನ್ನ ಬಟ್ಟೆ ತೊಳೆಯುವುದು, ಇಸ್ತ್ರಿ, ಮನೆ ಸ್ವಚ್ಛತೆ, ಮಕ್ಕಳ ಶಾಲೆ?
ಎಲ್ಲ ಅಮ್ಮ ಮಾಡುತ್ತಾಳೆ, ಅವಳಿಗೆ ಕೆಲಸ ಇಲ್ಲವಲ್ಲ…
ಹೇಗಿದೆ ನೋಡಿ ವಿಪರ್ಯಾಸ… ಗೃಹಿಣಿಯ ಶ್ರಮದ ಮೌಲ್ಯವೇ ನಿರ್ಧಾರವಾಗಿಲ್ಲ. ಆಕೆಯದ್ದು ರಜೆ ಇಲ್ಲದ ಮುನ್ನೂರ ಆರವತ್ತೈದು ದಿನದ ದುಡಿಮೆ.