For the best experience, open
https://m.samyuktakarnataka.in
on your mobile browser.

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ

05:53 PM Nov 22, 2024 IST | Samyukta Karnataka
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ

ಮಂಗಳೂರು: ಕಾರ್ತಿಕ ಮಾಸದ ಮಂಗಳ ಬಹುಳ ಏಕಾದಶಿಯಿಂದ ಅಮಾವಾಸ್ಯೆಯವರೆಗಿನ ಮಂಗಳ ಪರ್ವದಲ್ಲಿ ಕನ್ನಡ ನಾಡಿನ ಪಾವನ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ, ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಸಂಭ್ರಮವು ನ. ೨೬ರಿಂದ ೩೦ರವರೆಗೆ ನಡೆಯಲಿದೆ.
ನ. ೨೬ರಂದು ಮಂಗಳವಾರ ೩ ಗಂಟೆಗೆ ಉಜಿರೆಯಿಂದ ಧರ್ಮಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮಾಜಿ ಸದಸ್ಯ ಹರೀಶ್ ಕುಮಾರ್ ನೇತೃತ್ವದಲ್ಲಿ ೨೫,೦೦೦ಕ್ಕೂ ಮಿಕ್ಕಿ ಊರ-ಪರವೂರಿನ ಭಕ್ತರು, ಅಭಿಮಾನಿಗಳು ಪಾದಯಾತ್ರೆಯಲ್ಲಿ ಪ್ರಾರ್ಥನೆ ಭಜನೆ ಹಾಗೂ ಶಿವಪಂಚಾಕ್ಷರಿ ಪಠಣದೊಂದಿಗೆ ಬಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ನ. ೨೮ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ ೫.೩೦ರಿಂದ ೭ ಗಂಟೆಯವರೆಗೆ ನಾಗಸ್ವರ ವಾದನ, ೭ ರಿಂದ ೮ರವರೆಗೆ ಸಾತ್ವಿಕ ಸಂಗೀತ, ಬಳಿಕ ನೃತ್ಯಾರ್ಚನೆ ಮತ್ತು ಮಾಯಾವಿಲಾಸ ನೃತ್ಯರೂಪಕ ನಡೆಯಲಿದೆ.
ಸರ್ವಧರ್ಮ ಸಮ್ಮೇಳನ: ಅಮೃತವರ್ಷಿಣಿ ಸಭಾಭವನದಲ್ಲಿ ನ. ೨೯ರಂದು ಸಂಜೆ ೫ ಗಂಟೆಯಿಂದ ಸರ್ವಧರ್ಮ ಸಮ್ಮೇಳನದ ೯೨ನೇ ಅಧಿವೇಶನ ನಡೆಯಲಿದ್ದು, ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಉದ್ಘಾಟಿಸುವರು. ಬೆಂಗಳೂರು ರಾಜರಾಜೇಶ್ವರಿ ನಗರದ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಬಳಿಕ ಸಂಶೋಧಕ ಡಾ. ಜಿ.ಬಿ.ಹರೀಶ್, ಡಾ. ಜೋಸೆಫ್ ಎನ್.ಎಂ., ಮೆಹತಾಬ ಇಬ್ರಾಹಿಂ ಸಾಬ ಕಾಗವಾಡ ಅವರಿಂದ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ೮.೩೦ರಿಂದ ಭರತನಾಟ್ಯ ನೆರವೇರಲಿದೆ.
ಸಾಹಿತ್ಯ ಸಮ್ಮೇಳನ: ನ.೩೦ರಂದು ಸಂಜೆ ೫ ಗಂಟೆಯಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ ೯೨ನೇ ಅಧಿವೇಶನ ನಡೆಯಲಿದ್ದು ಬೆಂಗಳೂರು ಬಹುಶ್ರುತ ವಿದ್ವಾಂಸ ಶತಾವಧಾನೀ ಡಾ. ರಾ. ಗಣೇಶ ಉದ್ಘಾಟಿಸುವರು. ಲೇಖಕ, ಸಂಶೋಧಕ ಡಾ. ಪಾದೇಕಲ್ಲು ವಿಷ್ಣು ಭಟ್ಟ ಅಧ್ಯಕ್ಷತೆ ವಹಿಸುವರು. ಬಳಿಕ ಡಾ. ಪ್ರಮೀಳಾ ಮಾಧವ, ಡಾ. ಬಿ.ವಿ.ವಸಂತ ಕುಮಾರ್, ಪ್ರೊ. ಮೊರಬದ ಮಲ್ಲಿಕಾರ್ಜುನ ಅವರಿಂದ ಉಪನ್ಯಾಸ ನಡೆಯಲಿದೆ. ಸಾಂಸ್ಕೃತಿಕ ಕಾರ್ಯ ಕ್ರಮದಂಗವಾಗಿ ೮.೩೦ರಿಂದ ಶ್ರೀ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ಸಂಜೆ ನೆರವೇರಲಿದೆ. ಪ್ರತಿದಿನ ಸಂಜೆ ೬.೩೦ ರಿಂದ ರಾತ್ರಿ ೧೧ರವರೆಗೆ ವಸ್ತು ಪ್ರದರ್ಶನ ಮಂಟಪದಲ್ಲಿ ಹಾಗೂ ಅಮೃತವರ್ಷಿಣಿ ವೇದಿಕೆಯಲ್ಲಿ ಸಾಂಸ್ಕೃತಿಕ-ಸಂಗೀತ ಹಬ್ಬವೇ ನೆರವೇರಲಿದೆ.
ನ. ೨೬ರಿಂದ ಡಿ. ೧ರವರೆಗೆ ಧರ್ಮಸ್ಥಳದ ಪ್ರೌಢಶಾಲಾ ವಠಾರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯಮಟ್ಟದ ವಸ್ತುಪ್ರದರ್ಶನ ನಡೆಯಲಿದ್ದು, ನ. ೨೬ರಂದು ಬೆಳಗ್ಗೆ ೧೦.೩೦ಕ್ಕೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಉದ್ಘಾಟಿಸಲಿರುವರು. ಕೃಷಿ, ಆರೋಗ್ಯ, ವಾಣಿಜ್ಯ, ಶಿಕ್ಷಣ, ಗ್ರಾಮೀಣ ಗುಡಿಕೈಗಾರಿಗಳಿಗೆ ಸಂಬಂಧಿಸಿದ ೩೦೦ಕ್ಕೂ ಮಿಕ್ಕಿ ಮಳಿಗೆಗಳಿರಲಿವೆ.

Tags :