For the best experience, open
https://m.samyuktakarnataka.in
on your mobile browser.

ಶ್ರೀಗಳಿಗೆ ಭಕ್ತರ ಪ್ರತಿಭಟನೆಯ ಬಿಸಿ

02:21 PM Feb 17, 2024 IST | Samyukta Karnataka
ಶ್ರೀಗಳಿಗೆ ಭಕ್ತರ ಪ್ರತಿಭಟನೆಯ ಬಿಸಿ

ಕಲಾದಗಿ(ಬಾಗಲಕೊಟೆ): ಸಮೀಪದ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆಂದು ಹೊರಟಿದ್ದ ರಂಭಾಪುರಿ ಶ್ರೀಗಳವರಿಗೆ ಸ್ಥಳಿಯ ಭಕ್ತರ ಗುಂಪೊಂದರಿಂದ ಭಾರಿ ಪ್ರತಿಭಟನೆಯ ಬಿಸಿ ತಟ್ಟಿದ್ದು,ಇದೇ ಸಂದರ್ಭದಲ್ಲಿ ಮಹಿಳೆಯೊರ್ವಳು ಶ್ರೀಗಳವರ ಕಾರಿನತ್ತಿ ಚಪ್ಪಲಿಯನ್ನು ತೂರಿದ್ದು ಕಂಡು ಬಂದಿದೆ.
ಪೀಠಾದಿಪತಿಯ ನೇಮಕಕ್ಕೆ ಕಳೆದ 10 ವರ್ಷಗಳಿಂದ ಮಠದ ಸ್ಥಳಿಯ ಭಕ್ತರ ಬಣವೊಂದರ ಹಾಗು ರಂಭಾಪುರಿ ಶ್ರೀಗಳವರ ನಡುವೆ ನಡೆಯುತ್ತಿರುವ ವ್ಯಾಜ್ಯವೇ ಇವತ್ತಿನ ಪ್ರತಿಭಟನೆಗೆ ಮೂಲವಾಗಿದೆ.
ತಮ್ಮ ಒಪ್ಪಿಗೆ ಇಲ್ಲದಿದ್ದರು ಗಂಗಾಧರ ಸ್ವಾಮಿಜಿ ಅವರನ್ನು ರಂಭಾಪುರಿ ಶ್ರೀಗಳು ಮಠಕ್ಕೆ ನೇಮಿಸಿದ್ದಾರೆ.ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಮಠದ ಆಸ್ತಿಗಳನ್ನು ಗಂಗಾಧರ ಶ್ರೀಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ, ಇದನ್ನು ತಡೆಯಬೇಕೆಂದು ಪ್ರತಿಭಟನೆಗೆ ಮುಂದಾಗಿರುವುದಾಗಿ ಪ್ರತಿಭಟನಾ ನಿರತರು ಹೇಳುತ್ತಿದ್ದಾರೆ.
ಉದ್ವಿಗ್ನ ಸ್ಥಿತಿ: ಗ್ರಾಮದ ಪ್ರವಾಸಿಮಂದಿರದ ಬಳಿ ಸೇರಿದ್ದ ಪ್ರತಿಭಟನಾ ಕಾರರು ರಂಭಾಪುರಿ ಶ್ರೀಗಳು ಅದೇ ಮಾರ್ಗದಲ್ಲಿ ಸಂಚರಿಸುವಾಗ ಕೆಲ ಹೊತ್ತು ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು.
ಅದೇ ಮಾರ್ಗದಲ್ಲಿ ಉದಗಟ್ಟಿ ಗ್ರಾಮಸ್ಥರು ಶ್ರೀಗಳವರನ್ನು ಸುರಕ್ಷಿತವಾಗಿ ಕರೆದೊಯ್ಯಲು ಮುಂದಾದರೆ, ಪ್ರತಿಭಟನಾ ನಿರತರು ಶ್ರೀಗಳ ವಿರುದ್ದ ಪ್ರತಿಭಟನಾ ಧ್ವನಿ ಹೊರಡಿಸಿದರು. ಈ ಸಂದರ್ಭದಲ್ಲಿಯೇ ಚಪ್ಪಲಿ ತೂರಿದ ಸಲ್ಲದ ಬೆಳವಣಿಗೆಯೂ ನಡೆದಿದ್ದು ಪರಿಸ್ಥಿತಿಯನ್ನು ನಿಯಂತ್ರಿಸಲು ಪೋಲಿಸರು ಹರಸಾಹಸ ಪಡಬೇಕಾಯಿತು.
ಮುಂದುವರೆದ ಪ್ರತಿಭಟನೆ: ಈ ನೂಕಾಟ,ತಳ್ಳಾಟ,ಧಿಕ್ಕಾರ,ಜಯ ಜಯಕಾರಗಳ ನಡುವೆಯೆ ರಂಭಾಪುರಿ ಶ್ರೀಗಳು ಉದಗಟ್ಟಿಗೆ ಸುರಕ್ಷಿತವಾಗಿ ತೆರಳಿದ್ದು, ಇತ್ತ ಪ್ರತಿಭಟನಾ ಕಾರರು ಶ್ರೀ ಗುರುಲಿಂಗೇಶ್ವರ ಮಠದ ಮುಂದೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.