ಶ್ರೀರಂಗನಾಥನ ಸನ್ನಿಧಿಯಲ್ಲಿ ಕಂಗೊಳಿಸದ ಲಕ್ಷ ದೀಪೋತ್ಸವದ ಮೆರುಗು
ಶ್ರೀರಂಗಪಟ್ಟಣ : ಮಕರ ಸಂಕ್ರಾಂತಿ ಹಬ್ಬದ ಹಿನ್ನಲೆ ಪಟ್ಟಣದ ಶ್ರೀರಂಗನಾಥನ ಸನ್ನಿಧಿಯಲ್ಲಿ ಸೋಮವಾರ ರಾತ್ರಿ ಲಕ್ಷ ದೀಪೋತ್ಸವ ಮೆರುಗು ಭಕ್ತರ ಕಣ್ಮನ ಥಣಿಸಿತು.
ಶ್ರೀರಂಗನಾಥವಸ್ವಾಮಿ ದೇಗುಲದ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವ ಸಮಿತಿಯ ಲಕ್ಷ್ಮೀಶ್ ಶರ್ಮಾ ಮತ್ತು ತಂಡ ದೇವಾಲಯದ ಎದುರಿಗಿನ ರಸ್ತೆಯ ಎರಡೂ ಬದಿಗಳಲ್ಲಿ ಮರದ ತಟ್ಟಿಗೆಗಳನ್ನು ಕಟ್ಟಿ ದೀಪಗಳನ್ನಿಟ್ಟು ಜೊತೆಗೆ ರಸ್ತೆಯ ಮದ್ಯ ಭಾಗದಲ್ಲಿ ಸಾಲು ಸಾಲುಗಳ ದೀಪ ಜೋಡಣೆ ಮಾಡಿ ಗಮನ ಸೆಳೆದರು.
ವೇಧ ಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ, ದೇವಾಲಯದ ಪ್ರಧಾನ ಅರ್ಚಕ ವಿಜಯ ಸಾರಥಿ ಸೇರಿದಂತೆ ಮುಜರಾಯಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ವೈಧಿಕರ ತಂಡ ಹೋಮ ಹವನಗಳನ್ನು ನಡೆಸಿ ಶ್ರೀಗನಾಥ ಸ್ವಾಮಿಯನ್ನು ಪ್ರಾರ್ಥಿಸಿದರು. ಶಾಸಕ ರಮೇಶ್ ಬಂಡಿಸಿದ್ದೇಗೌಡ ಪೂಜೆಯಲ್ಲಿ ಪಾಲ್ಗೊಂಡು ಲಕ್ಷ ದೀಪೋತ್ಸವಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.
ಸಾಲು ಸಾಲುಗಳಲ್ಲಿ ಬೆಳಗುತ್ತಿದ್ದ ಲಕ್ಷ ದೀಪಗಳ ವೈಭವವನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ದೇವಾಲಯಕ್ಕೆ ತೆರಳಿ ಶ್ರೀರಂಗನಾಥ ಸ್ವಾಮಿಯ ದರ್ಶನ ಪಡೆದು ವರ್ಷಕ್ಕೊಮ್ಮೆ ತೆರೆಯುವ ಸ್ವರ್ಗದ ಬಾಗಿಲಿನ ಪ್ರದರ್ಶಣೆ ಹಾಕಿದರು.
ವಿಶೇಷವಾಗಿ ಅಲಂಕೃತಗೊಂಡಿದ್ದ ಶ್ರೀರಂಗನಾಥಸ್ವಾಮಿಗೆ ಮಕರ ಸಂಕ್ರಾಂತಿಯ ಹಬ್ಬದ ವಿಶೇಷವಾಗಿ ಬೆಣ್ಣೆ ಅಲಂಕಾರದಿಂದ ಸಿಂಗರಿಸಲಾಗಿತ್ತು. ಈ ವೇಳೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದ್ದು,
ಬೆಳಿಗ್ಗೆಯಿಂದ ಮದ್ಯ ರಾತ್ರಿವರೆಗೂ ಶ್ರೀರಂಗನಾಥನ ದರ್ಶನಕ್ಕೆ ವಿಶೇಷ ಅವಕಾಶ ಕಲ್ಪಿಸಲಾಗಿತ್ತು. ಮುಂಜಾಗೃತಾ ಕ್ರಮವಾಗಿ ಹೆಚ್ಚಿನ ಪೋಲೀಸರ ಭಿಗಿ ಭದ್ರತೆ ಒದಗಿಸಲಾಗಿತ್ತು.
ಕಳೆದ 34 ವರ್ಷಗಳಿಂದ ಲಕ್ಷ ದೀಪೋತ್ಸವ ಆಚರಣೆ ಮಾಡಿಕೊಂಡು ಬರುತ್ತಿದ್ದು, ರಾಜ್ಯ, ಹೊರ ರಾಜ್ಯ ಸೇರಿದಂತೆ ವಿದೇಶಿಗರೂ ಲಕ್ಷ ದೀಪೋತ್ಸವದ ಸೊಬಗನ್ನು ಕಣ್ತುಂಬಿಕೊಂಡರು.