ಶ್ರೀರಂಗಪಟ್ಟಣ: ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ಶ್ರೀರಂಗಪಟ್ಟಣ: ಡಿ.08 ರಿಂದ 10 ರ ವರೆಗೆ ಟ್ಟಣದ ಶ್ರೀರಂಗನಾಥಸ್ವಾಮಿ ದೇಗುಲದ ಆವರಣದಲ್ಲಿ ಸ್ಮಾಷರ್ಸ್ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಹೊನಲು ಬೆಳಕಿನ 'ಕಾವೇರಿ ಕಪ್ 2023' ಕ್ರಿಕೆಟ್ ಪಂದ್ಯಾವಳಿಗೆ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಚಾಲನೆ ನೀಡಿ ಆಟಗಾರರಿಗೆ ಶುಭಹಾರೈಸಿದರು.
ಜ್ಯೋತಿ ಬೆಳಗಿಸಿ ಮಾತನಾಡಿದ ಅವರು, ಕ್ರಿಕೆಟ್ ಆಟವಿಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದೆ. ಶ್ರೀರಂಗಪಟ್ಟಣದಲ್ಲಿ ರಾಷ್ಟ್ರ ಮಟ್ಟದ ಟೂರ್ನಿ ಆಯೋಜಿಸಿರುವುದು ಸಂತಸ ತಂದಿದೆ. ಕ್ರೀಡಾಪಟುಗಳು ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಸ್ಪೂರ್ತಿ ಮೆರೆಯಬೇಕು ಎಂದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವ ಜನತೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳಚಣಿಗೆ. ಕ್ರೀಡೆಗಳು ಹೆಚ್ಚು ಹೆಚ್ಚು ಆಯೋಜನೆಯಾಗುವ ಮೂಲಕ ಹೆಚ್ಚು ಕ್ರೀಡಾಪಟುಗಳನ್ನು ಸೃಷ್ಟಿಸಬೇಕೆಂದು ಕಿವಿ ಮಾತು ಹೇಳಿದರು.
ಪುರಸಭೆ ಸದಸ್ಯ ಎಸ್.ಪ್ರಕಾಶ್ ಮಾತನಾಡಿ, ತಮ್ಮ ಹಿಂದಿನ ಕ್ರೀಡಾ ಚಟುವಟಿಕೆಗಳ ದಿನಗಳನ್ನು ಸ್ಮರಿಸಿಕೊಂಡು ಹಿರಿಯ ಕ್ರೀಡಾಪಟುಗಳಿಗೆ ನಮನ ತಿಳಿಸಿದರು. ಅವರು ನಮ್ಮನ್ನು ಬಳಸಿಕೊಳ್ಳುತ್ತಿದ್ದ ರೀತಿ, ನಮ್ಮನ್ನು ಕ್ರೀಡಾಪಟುಗಳನ್ನಾಗಿ ತಯಾರು ಮಾಡಿದ್ದನ್ನು ಸ್ಮರಿಸಿಕೊಂರು.
ಹಿರಿಯ ಕ್ರೀಡಾಪಟು ಎಸ್.ಜಯಸಿಂಹ ಮಾತನಾಡಿ, ಟೂರ್ನಿಯ ವ್ಯವಸ್ಥಾಪನೆ ಹಾಗೂ ಯಶಸ್ಸಿಗೆ ಕಾರಣಕರ್ತರಾಗುತ್ತಿರುವ ಎಲ್ಲಾ ಆಟಗಾರರ ಪರಿಶ್ರಮಕ್ಕೆ ಅಭಿನಂಧನೆ ಸಲ್ಲಿಸಿದರು. ಹಗಲಿರುಳೆನ್ನದೆ ದುಡಿಯುತ್ತಿರುವ ಯುವಕರಿಗೆ ಟೂರ್ನಿಯ ಯಶಸ್ಸು ಲಭಿಸಬೇಕೆಂದು ಹಾರೈಸಿದರು. ಮತ್ತೋರ್ವ ಹಿರಿಯ ಕ್ರೀಡಾಪಟು ಎಸ್.ಜೆ.ವೆಂಕಟರಾಮು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಆಟಗಾರರಿಗೆ ಶುಭ ಹಾರೈಸಿದರು. ಆಯೋಜಕರಲ್ಲಿ ಪ್ರಮುಖರಾದ ಸುಬ್ರಹ್ಮಣ್ಯಂ.ಎಸ್.ಎನ್. ಬಾಲರಾಜ್.ಬಿ.ಕೆ, ಕೊಕೋ ಕೋಲಾ ಪಾನೀಯ ಸಂಸ್ಥೆಯ ಅಬ್ರಹಾಂ ಸೇರಿದಂತೆ ಇತರರು ಉಪಸ್ಥಿತರಿದ್ದರು. ಬಳಿಕ ತಹಸೀಲ್ದಾರ್ ಪರಶುರಾಮ್ ಸತ್ತಿಗೇರೆ ಕ್ರೀಡಾಂಗಣದಲ್ಲಿ ಟೇಪ್ ಕತ್ತರಿಸಿ, ಬ್ಯಾಟ್ ಬೀಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.
ಟೂರ್ನಿಯಲ್ಲಿ ಪಾಂಡವಪುರ, ಮೈಸೂರು, ನಂಜನಗೂಡು, ಮಂಗಳೂರು, ಉಡುಪಿ, ಬೆಂಗಳೂರು, ಚೆನೈ ಸೇರಿದಂತೆ ಪ್ರಮುಖ 14 ತಂಡಗಳು ಭಾಗವಹಿಸಿ ಗೆಲುವಿಗಾಗಿ ಸೆಣಸಾಟ ನಡೆಸುವ ಮೂಲಕ ಕ್ರೀಡಾ ಪ್ರೇಮಿಗಳಿಗೆ ರಸದೌತಣ ನೀಡಿದವು.
ಪ್ರಥಮ ಬಹುಮಾನ ರೂ. 3 ಲಕ್ಷ ನಗದು ಹಾಗೂ ಅತ್ಯಾಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ.1.5 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ವಿಜೇತ ತಂಡಗಳಿಗೆ ನೀಡಲಾಗುತ್ತಿದ್ದು, ಪಂದ್ಯಗಳು ಮೊದಲ ಹಂತದಲ್ಲಿ ಲೀಗ್ ಮಾದರಿಯಲ್ಲಿ ನಂತರದ ಹಂತದಲ್ಲಿ ನಾಕ್ ಔಟ್ ಮಾದರಿಯಲ್ಲಿ ನಡೆಯಲಿವೆ. ಟೂರ್ನಿಯ ಎಲ್ಲಾ ಪಂದ್ಯಗಳನ್ನು Y Sports ಯೂಟೂಬ್ ಮೂಲಕ ನೇರ ಪ್ರಸಾರ ಮಾಡಲಾಗುತ್ತಿದ್ದು, ರಾಜ್ಯ ಮತ್ತು ರಾಷ್ಟ್ರಾದ್ಯಂತ ಸಾವಿರಾರು ಕ್ರೀಡಾ ಪ್ರೇಕ್ಷಕರು ಪಂದ್ಯಗಳನ್ನು ವೀಕ್ಷಣೆ ಮಾಡುವ ಮೂಲಕ ಕ್ರೀಡೆಯನ್ನು ಪ್ರೋತ್ಸಾಹಿಸುತ್ರಿದ್ದಾರೆ.