ಶ್ರೀಲೇಶ್ ಕಣ್ಣಲ್ಲಿ ಪೆಪೆ ರಕ್ತಸಿಕ್ತ ಚಿತ್ರಣ
ವಿನಯ್ ರಾಜ್‌ಕುಮಾರ್ ಹಿಂದೆಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಪೆಪೆ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಹರಿಬಿಟ್ಟಾಗಲೇ ತಿಳಿದಿತ್ತು. ಆನಂತರದ ಕಂಟೆಂಟ್‌ಗಳಲ್ಲೂ ಸಖತ್ ರಗಡ್ ಆಗಿಯೇ ಕಾಣಸಿಕ್ಕರು. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಅವೆಲ್ಲವನ್ನೂ ಮತ್ತಷ್ಟು ದೃಢಪಡಿಸುವುದರ ಜತೆಗೆ ಇದೊಂದು ಪಕ್ಕಾ ರಿಯಾಲಿಸ್ಟಿಕ್ ಹಾಗೂ ರಾ ಸಬ್ಜೆಕ್ಟ್ ಎಂಬ ಠಸ್ಸೆ ಒತ್ತಿದೆ. ಹೀಗಾಗಿ ರಾಜ್ ವಂಶದ ಕುಡಿ ಈ ಬಾರಿ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುವ ಮುನ್ಸೂಚನೆ ಎದ್ದು ಕಾಣುತ್ತಿದೆ.
ಯುವ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ಪೆಪೆ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಆಗಸ್ಟ್ ೩೦ ರಂದು ‘ಪೆಪೆ’ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇಡೀ ಚಿತ್ರವನ್ನು ದೇಸಿ ಟಚ್ ಜತೆಗೆ ನೆಲದ ಕಥೆಯನ್ನು ಬೇರೆ ರೂಪದಲ್ಲಿ ತೋರಿಸಲು ಮುಂದಾಗಿದ್ದಾರಂತೆ. ಚಿತ್ರದ ಕುರಿತು ಮಾತನಾಡುವ ಅವರು, ‘ಚಿತ್ರದ ಕಥಾನಾಯಕನ ಹೆಸರು ಪ್ರದೀಪ್. ಎಲ್ಲರೂ ಅವನನ್ನು ಪೆಪೆ ಎಂದು ಕರೆಯುತ್ತಾರೆ. ನಾನು ಮೂಲ ಕೇರಳದವನು ಅಲ್ಲಿ ಈ ಹೆಸರು ಸಾಮಾನ್ಯ. ಇಲ್ಲಿ ನಾಯಕನ ಪಾತ್ರದ ಹೆಸರೇ ಚಿತ್ರದ ಶೀರ್ಷಿಕೆ. ಇದು ನನ್ನ ಮೊದಲ ಕಮರ್ಷಿಯಲ್ ಸಿನಿಮಾ. ಕಥೆಯ ಪಾತ್ರಕ್ಕೆ ವಿನಯ್ ಸೂಕ್ತವೆನಿಸಿದರು. ಹೊಸಬರಿಗೆ ಅವರು ಅವಕಾಶ ಕೊಡ್ತಾರೋ ಇಲ್ಲವೋ ಎಂಬ ಅಳಕಿತ್ತು. ನಾನು ಮೊದಲು ಕಥೆ ಹೇಳಿದ್ದೇ ವಿನಯ್ ಅವರಿಗೆ. ಒಂದೇ ಬಾರಿ ಕೇಳಿ, ಇಷ್ಟಪಟ್ಟು ಸಿನಿಮಾ ಒಪ್ಪಿಕೊಂಡ್ರು. ಕೆಲವು ವಿಷಯಗಳನ್ನು ನೇರವಾಗಿ ಹೇಳಲಾಗಿದೆ’ ಎನ್ನುತ್ತಾರೆ ಶ್ರೀಲೇಶ್.
ಕಾಜಲ್ ಕುಂದರ್ ನಾಯಕಿ. ಮಯೂರ್ ಪಟೇಲ್, ಯಶ್ ಶೆಟ್ಟಿ, ಬಲ ರಾಜ್‌ವಾಡಿ, ಅರುಣಾ ಬಾಲರಾಜ್, ತಾರಾಬಳಗದಲ್ಲಿದ್ದಾರೆ. ಉದಯ್ ಶಂಕರ್.ಎಸ್ ಹಾಗೂ ಬಿ.ಎಂ. ಶ್ರೀರಾಮ್ ಜಂಟಿಯಾಗಿ ನಿರ್ಮಿಸಿದ್ದಾರೆ.