ಶ್ರೀ ರಾಮ-ಬಸವಣ್ಣರ ಬಿಂಬದಲ್ಲಿ ಅಪಸವ್ಯಗಳೇಕೊ…
ಈ ಎರಡೂ ಕಾರ್ಯಸಾಧನೆ ಮುಗಿದಿವೆ. ಇವೆರಡರ ಹಿಂದೂ ಹೋರಾಟಗಳಿವೆ. ಚಿಂತನೆ ಇದೆ. ಭಕ್ತಿ ಭಾವ ಇದೆ..
ಒಂದು, ಶತಮಾನಗಳ ಹೋರಾಟ… ಬಹುಸಂಖ್ಯಾತರ ಭಾವನೆಗಳ ಅಭಿವ್ಯಕ್ತಿ, ಭಾರತದ ಅಸ್ಮಿತೆಯಾದ ಶ್ರೀ ರಾಮ ಮಂದಿರ. ಮತ್ತೊಂದು, ಪ್ರಜಾಪ್ರಭುತ್ವವನ್ನು ಹನ್ನೆರಡನೇ ಶತಮಾನದಲ್ಲೇ ನಾಡಿಗೆ ಪರಿಚಯಿಸಿ, ಸಾಧಿಸಿ ತೋರಿಸಿದ ಮಹಾನುಭಾವ ಬಸವಣ್ಣ. ದೇಶದ ಪ್ರಥಮ ಪ್ರಜಾಸತ್ತೆಯ ಹರಿಕಾರ ಬಸವಣ್ಣವರೀಗ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ.
ನಾಲ್ಕು ದಿನಗಳ ಅಂತರದಲ್ಲಿ ನಡೆದ ಈ ಘಟನೆಗಳನ್ನು ಜನ ಸಂಭ್ರಮಿಸಿದ್ದಾರೆ. ಒಪ್ಪಿಕೊಂಡಿದ್ದಾರೆ. ಆರಾಧನೆಗೈದಿದ್ದಾರೆ. ಹಾಗೆ ನೋಡಿದರೆ ನಾಲ್ಕು ದಿನಗಳ ಈ ಸಂಭ್ರಮ ಐತಿಹಾಸಿಕ, ಅವಿಸ್ಮರಣೀಯ ಕ್ಷಣ.
ಆದರ್ಶ ಪುರುಷೋತ್ತಮ, ರಾಜಧರ್ಮದ ಪರಿಪಾಲಕ ಶ್ರೀರಾಮಚಂದ್ರನ ಜನ್ಮಸ್ಥಾನ ಅಯೋಧ್ಯೆಯಲ್ಲಿ ರಾಮ ಮಂದಿರ ಸ್ಥಾಪನೆಯಾಗಿದೆ. ಐದು ನೂರು ವರ್ಷಗಳ ಸುದೀರ್ಘ ಇತಿಹಾಸದ ಅಯೋಧ್ಯಾ ಹೋರಾಟಕ್ಕೆ ಒಂದು ಅಂತಿಮ ತಾರ್ಕಿಕ ಅಂತ್ಯದ ಕ್ಷಣವನ್ನು, ಇಡೀ ದೇಶದ ಜನ ಜಾತಿ ಮತ ಧರ್ಮ ಬೇಧವಿಲ್ಲದೇ ಸಂಭ್ರಮಿಸಿತು. ಭಕ್ತಿ ಭಾವ ಪರವಶತೆ ಮೆರೆಯಿತು. ಸಂಘರ್ಷ, ಹೋರಾಟ, ಕಾನೂನು, ಹಿಂಸಾಕೃತ್ಯ ಇತ್ಯಾದಿಗಳ ನಂತರ ಟೆಂಟ್ನಲ್ಲಿದ್ದ ಶ್ರೀರಾಮ ಸುಂದರವಾಗಿ ಮೈದಳೆದ ಮಂದಿರದಲ್ಲಿ ನೆಲೆಸಿದ್ದರಿಂದ ಅದು ಸಾಮರಸ್ಯದ ಕೇಂದ್ರವಾಗಿ ಕಂಡಿದೆ.
ಇದೇ ಎರಡು ದಿನಗಳ ಮೊದಲು `ದಯವೇ ಧರ್ಮದ ಮೂಲವಯ್ಯ' ಎಂದು ಹೇಳಿ ಕಾಯಕ ಸಂಸ್ಕೃತಿಯನ್ನು ಆಳವಾಗಿ ಪ್ರತಿಪಾದಿಸಿದ ಬಸವೇಶ್ವರರಿಗೆ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಸರ್ಕಾರವು ಜನಾಶಯಕ್ಕೆ ಪೂರಕವಾಗಿ ನಡೆದುಕೊಂಡಿದೆ. ಇಡೀ ಕನ್ನಡ ನಾಡಷ್ಟೇ ಅಲ್ಲ, ದೇಶದ ಸಾಂಸ್ಕೃತಿಕ-ಪ್ರಜಾಪ್ರಭುತ್ವವಾದಿಗಳೆಲ್ಲ ಬಸವಣ್ಣನವರ ರಾಯಭಾರತ್ವವನ್ನು ಸಹೃದಯದಿಂದ ಒಪ್ಪಿ ಅಪೂರ್ವ ಗೌರವವನ್ನೇ ನೀಡಿದರು.
ಯುಗ ಯುಗಗಳ ಅಂತರ ಇರಬಹುದು. ಆದರೆ ಸಾಮ್ಯತೆ ಈ ಇಬ್ಬರಲ್ಲೂ ಇದೆ. ಶ್ರೀ ರಾಮ ರಾಜ. ರಾಜ-ಧರ್ಮ ಪ್ರತಿಪಾದಕ. ರಾಮ ರಾಜ್ಯ ಬಿತ್ತಿ ಬೆಳೆಸಿ ಸುಂದರ, ಆದರ್ಶ ಬದುಕು ಕಲ್ಪಿಸಿದರು. ಬಸವೇಶ್ವರರು ಕೂಡ ರಾಜ. ಅವರು ಪಾಲಿಸಿದ್ದು ರಾಜ ಧರ್ಮವನ್ನೇ. ಇಡೀ ಜಗತ್ತಿಗೆ, ಜನರಿಂದಲೇ-ಜನರಿಗೋಸ್ಕರ ಆಡಳಿತ ನಡೆಸುವ ಪರಿಕಲ್ಪನೆ ನೀಡಿದ್ದೇ ಬಸವೇಶ್ವರರು. ಅಪ್ಪಟ ಪ್ರಜಾಪ್ರಭುತ್ವವಾದಿ. ವಚನ ಪರಂಪರೆಯ ಶ್ರೇಷ್ಠ ಪ್ರತಿನಿಧಿ.
ರಾಮನು ದುಷ್ಟ ಸಂಹಾರಿ. ಶ್ರೇಷ್ಠ ಪ್ರಜಾಪಾಲಕ ರಾಜ್ಯ. ಕಟ್ಟ ಕಡೆಯ ವ್ಯಕ್ತಿಗೂ ಗೌರವ ನೀಡಿದವನು. ಆದರ್ಶ ಮೂರ್ತಿ. ಬಸವಣ್ಣನವರು ಜಾತಿ-ಲಿಂಗ ಬೇಧ ಇಲ್ಲದ ಸಮಾಜ ರೂಪಿಸಿದ ಪ್ರವರ್ತಕ. ರಾಮ ರಾಜ್ಯ ಪರಿಪಾಲನೆಯ ಆಶಯ ಸಂವಿಧಾನದ ಮೂಲ ಪುಟದಲ್ಲಿಯೇ ಇದೆ ಎಂದರೆ, ಇಡೀ ಸಂವಿಧಾನವನ್ನು ಕಟ್ಟಿ ಬೆಳೆಸಿದ ಅಕ್ಷರ ಅಕ್ಷರಗಳಲ್ಲಿ ಇರುವುದು ಬಸವಣ್ಣನವರ ಚಿಂತನೆಗಳು. ಇಡೀ ನಾಡು ಶ್ರೀ ರಾಮನ ಬಿಂಬದಲ್ಲಿ ಒಂದಾಗಿದೆ. ಬಸವಣ್ಣ ಇಡೀ ಸಮುದಾಯಕ್ಕೆ, ಕಟ್ಟಕಡೆಯ ವ್ಯಕ್ತಿಗೂ ಧ್ವನಿ ನೀಡಿದ ಮಹಾನ್ ಚೇತನ. ಶ್ರೀ ರಾಮನ ಆದರ್ಶ, ರಾಜಧರ್ಮ ಯುಗಯುಗಳಿಂದ ಸಮಾಜದ ಮೇಲ್ಪಂಕ್ತಿಯಾಗಿದ್ದರೆ, ಬಸವಣ್ಣವರ ಮಾನವತಾವಾದ ಸಮಾಜಕ್ಕೆ ಅನಿವಾರ್ಯ ಎಂಬುದು ಎಲ್ಲರೂ ಒಪ್ಪಬೇಕಾದ ಸಂಗತಿ.
ಶ್ರೀ ರಾಮ ಮತ್ತು ಬಸವೇಶ್ವರರಿಬ್ಬರೂ ಜನರ ಪಾಲಿಗೆ ದೇವರು. ಶ್ರೀ ರಾಮ ಅವತಾರ ಪುರುಷ ಎಂದು ದೈವತ್ವ ಪಡೆದರೆ, ಬಸವಣ್ಣನವರು ೧೨ನೇ ಶತಮಾನದಲ್ಲಿ ರಾಮನ ಧರ್ಮ ಪಾಲನೆಯನ್ನು ಮಾಡಿ ತೋರಿಸಿದವರು.
ಅಯೋಧ್ಯೆಯ ರಾಮ ಮಂದಿರ ಮತ್ತು ಬಾಲ ರಾಮನ ಪ್ರತಿಷ್ಠಾಪನೆಯ ಬಗ್ಗೆ ರಾಜಕೀಯ ಕಾರಣಗಳಿಂದ ಅಪಸ್ವರಗಳೆದ್ದಿವೆ. ಬಾಲ ರಾಮನ ಪ್ರತಿಷ್ಠಾಪನೆ, ಮಂದಿರ ಇತ್ಯಾದಿಗಳು ರಾಜಕೀಯ ದಾಳವಾಗಲೂಬಹುದು. ಧರ್ಮ ಹಾಗೂ ಈ ರಾಜಕೀಯದ ನಡುವಿನ ಗೆರೆ ಅಳಿಸಿ ಹೋಗುವಾಗ ಇವೆಲ್ಲ ಸಾಧ್ಯ. ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ರಾಜಕೀಯ ದಾಳವಾಗಬಾರದಿತ್ತು. ಅದರ ಹಿಂದಿನ ತಂತ್ರ ಏನೇ ಇದ್ದರೂ ಬಹು ಸಮುದಾಯ ಒಪ್ಪಿಕೊಂಡ ನಂತರ, ಮಾನ್ಯತೆ ದೊರಕಿದ ನಂತರ ಅಪಸ್ವರಗಳು ಬೇಕಾಗಿರಲಿಲ್ಲ. ಪ್ರಧಾನಿ ಮಂದಿರ ಉದ್ಘಾಟಿಸಬೇಕಿತ್ತೇ? ಶ್ರೀರಾಮನ ಪ್ರತಿಷ್ಠಾಪನೆ ಮಾಡಲು ಯಜಮಾನ್ಯ ವಹಿಸಬೇಕಾಗಿತ್ತೇ? ಇದೊಂದು ರಾಜಕೀಯ ಸಮಾರಂಭ. ರಾಮನನ್ನು ಗೌರವಿಸುತ್ತೇವೆ. ಆದರೆ ರಾಜಕೀಯ ವಿರೋಧಿಸುತ್ತೇವೆ ಎನ್ನುವ ಮಾತುಗಳೆಲ್ಲ ಹತ್ತಾರು ಪಕ್ಷ ಪಂಗಡಗಳ ನಾಡಲ್ಲಿ ಸಹಜವೇ. ಆದರೆ ಬಹುಜನತೆ ಮತ್ತು ಸಮಾಜ ಒಪ್ಪಿಕೊಂಡಾಗ ಅದರಲ್ಲಿ ಪಾಲ್ಗೊಂಡು ಜನಮನ್ನಣೆಯನ್ನು ಗಳಿಸಬಹುದಿತ್ತೇನೋ? ಈ ನಿಟ್ಟಿನಲ್ಲಿ ದೇಶದ ಕೆಲವು ಪ್ರತಿಪಕ್ಷಗಳು ಎಡವಿದವು.
ಆ ನಂತರವೂ ಅಷ್ಟೇ. ರಾಮ ಯಾರು? ಅವನೊಬ್ಬನೇ ದೇವರಾ? ಸಾಂವಿಧಾನಿಕವಾಗಿ ಕೆಲಸ ಮಾಡಬೇಕೇ ವಿನಾ ಧರ್ಮ ಕಾರ್ಯದಲ್ಲಿ ಪ್ರಧಾನಿ ಪಾಲ್ಗೊಳ್ಳಬಾರದು ಇತ್ಯಾದಿ ಮಾತುಗಳು ಕೇಳಿ ಬಂದವು. ಈ ಕಾರ್ಯದಲ್ಲಿ ತಮ್ಮದೂ ಸಹಮತ-ಕೊಡುಗೆ ಇದೆ ಎಂದು ಘೋಷಿಸಿದ್ದರೆ ಬಹಶಃ ಜನ ಬೆಂಬಲವನ್ನು ಗಳಿಸಬಹುದಿತ್ತು. ಹಾಗೆಯೇ ಮುಂದೆ ರಾಜಕೀಯಕ್ಕೆ ಇದನ್ನು ಬಳಸಿಕೊಳ್ಳುವ ಇಚ್ಛೆ ಇದ್ದವರಿಗೆ ಅಷ್ಟರ ಮಟ್ಟಿಗೆ ನಿಯಂತ್ರಣ ಹಾಕಿದಂತಾಗುತ್ತಿತ್ತು.
ಈ ನಿಟ್ಟಿನಲ್ಲಿ ಸ್ವತಃ ದೇಶದ ರಾಜಕಾರಣಿಗಳು, ಪಕ್ಷ ರಾಜಕಾರಣದ ಭಿನ್ನ ಘಟ್ಟದಲ್ಲಿ ಜನಾಶಯವನ್ನು ಮರೆತರೇನೋ ಎನಿಸುತ್ತದೆ. ಹಾಗೆಯೇ ಇವರೇ ರಾಜಕೀಯ ಆಟಗಳಿಗೆ ಮಂದಿರವನ್ನು ಕೇಂದ್ರವನ್ನಾಗಿಸಿಕೊಂಡು, ಧರ್ಮ ದೇವರನ್ನು ಬಳಸಿಕೊಳ್ಳುವ ಸಾಕಷ್ಟು ಅವಕಾಶವನ್ನು ನೀಡಿದಂತಾಯಿತು ಅಲ್ಲವೇ?
ಜನಪ್ರತಿನಿಧಿಗಳು, ವಿಶೇಷವಾಗಿ ಸರ್ಕಾರ ಜನಕಲ್ಯಾಣ ಕಾರ್ಯಕ್ರಮವನ್ನು ಕೈಗೊಳ್ಳಬೇಕು. ಮಂದಿರ-ಸ್ಥಾವರಗಳನ್ನಲ್ಲ ಎನ್ನುವ ಮಾತು ನಿಜವೇ. ಧರ್ಮ ನಿರಪೇಕ್ಷ ತತ್ವ ಹೊಂದಿರುವ ದೇಶ-ಸಂವಿಧಾನದಲ್ಲಿ ದತ್ತಿ, ಧರ್ಮ, ಭಾವನೆಗಳಿಗೆ ಅವಕಾಶ ಇಲ್ಲ ಎಂಬುದು ತಾತ್ವಿಕವಾಗಿ ನಿಜ ಎನ್ನಿಸಿದರೂ, ರಾಜಕಾರಣ ಜನರ ಗಮನ ಸೆಳೆಯುವ ತಂತ್ರವಲ್ಲವೇ? ಅಷ್ಟರ ಮಟ್ಟಿಗೆ ಪ್ರಧಾನಿ ಮೋದಿ ಈ ಅಂಶವನ್ನು ಗಳಿಸಿಕೊಂಡಿದ್ದಾರೆ. ಅದಕ್ಕೆ ಜನಾಪೇಕ್ಷೆಯ ವಿರುದ್ಧವಾಗಿಯೇ ಪ್ರತಿಪಕ್ಷಗಳು ಸಾಥ್ ಕೊಟ್ಟಂತಾಗುತ್ತದೆ ಅಲ್ಲವೇ?
ಅಯೋಧ್ಯಾ ರಾಮ ಮಂದಿರ ರಾಮ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಜೊತೆಗೆ, ಶ್ರೀ ರಾಮನ ರಾಜ ಧರ್ಮದ ಕೇಂದ್ರವಾಗಬೇಕು ಇದು. ಶ್ರೀ ರಾಮನ ಆದರ್ಶವನ್ನೇ ಕಾರ್ಯರೂಪಕ್ಕೆ ತರುವಂತಾಗಬೇಕು. ರಾಮನ ಪ್ರಜಾಪ್ರಭುತ್ವದ ಮೌಲ್ಯವನ್ನು ಪ್ರತಿಪಾದಿಸುವಂತಹ ಕೇಂದ್ರವಾಗಬೇಕು.
ಶ್ರೀ ರಾಮ ವಚನ ಪಾಲಕ. ತಂದೆ ನೀಡಿದ ಮಾತನ್ನು ಈಡೇರಿಸಿದವನು. ರಾಜ್ಯ ಬಿಟ್ಟು ಕೊಟ್ಟವನು. ಜನರ ಸಂಕಷ್ಟಕ್ಕೆ, ರಾಜ ಧರ್ಮಕ್ಕೆ ಅನುಗುಣವಾಗಿ, ಕಳಂಕರಹಿತನಾಗಿ ರಾಜ್ಯಭಾರ ಮಾಡಿದವನು. ಇದೇ ಆದರ್ಶ ನಮ್ಮ ಪ್ರತಿನಿಧಿಗಳಿಗೆ ಪ್ರೇರಣೆಯಾಗಬೇಕು. ಸಂವಿಧಾನ ಬದ್ಧವಾಗಿ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸುವಷ್ಟಾದರೂ, ಹಾಗೂ ಜನರ ದುಡ್ಡಿನಲ್ಲಿ ಐಷಾರಾಮಿ ಭೋಗದ ಜೀವನ ನಡೆಸುವುದರಿಂದ ಹೊರ ಬರುವಂತಾಗಬೇಕು. ಆಡಳಿತ ನಡೆಸುವ ಪ್ರಜಾ ಪ್ರತಿನಿಧಿಗಳು ಶ್ರೀ ರಾಮನಿಂದ ಪ್ರೇರಣೆ ಪಡೆಯಬೇಕಾದ ಅಂಶಗಳು ಇವೇ ಆಗಿವೆ.
ಟೀಕೆ ಟಿಪ್ಪಣಿ ಸಹಿಸಿಕೊಳ್ಳುವ, ಅಧಿಕಾರವನ್ನು ತ್ಯಾಗ ಮಾಡಬೇಕಾದ ಗುಣಧರ್ಮವನ್ನು ಅಯೋಧ್ಯೆಯ ರಾಮ ದಯಪಾಲಿಸಲಿ ಎನ್ನುವುದಷ್ಟೇ ಈಗ ಎಲ್ಲರ ಆಶಯ.
ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿ ಬಸವಣ್ಣನವರನ್ನು ಘೋಷಿಸಿದಾಗ ಎಲ್ಲರೂ ಖುಷಿ ಪಟ್ಟರು. ಜಾತಿ ಬೇಧ, ಲಿಂಗ ಬೇಧ ಇಲ್ಲದ ಸಮಾಜವನ್ನು ೧೨ನೇ ಶತಮಾನದಲ್ಲಿ ರೂಪಿಸಿದ ಬಸವೇಶ್ವರರು ಇಂದಿಗೂ ಪ್ರಸ್ತುತ. ಸಂವಿಧಾನದ ಮೊದಲ ರೂಪಕರೂ ಹೌದು. ವಿಶ್ವಕ್ಕೆ ಮಾದರಿಯಾದ ವಿಶ್ವಮಾನ್ಯ ಚೇತನ. ಬಸವಣ್ಣ ಕೇವಲ ಜಾತಿ ಸೂಚಕವೂ ಅಲ್ಲ. ವ್ಯಕ್ತಿ ಸೂಚಕವೂ ಅಲ್ಲ. ಅವರು ಆಡಿರುವ ಮಾತು, ಮಾಡಿರುವ ಪ್ರತಿಪಾದನೆ, ಕೆಲಸ ಇವೆಲ್ಲ ಇಡೀ ಪ್ರಜಾಪ್ರಭುತ್ವದ ಅಡಿಗಲ್ಲುಗಳು. ನಾಡಿನಾದ್ಯಂತ ಧರ್ಮ ರಾಜಕಾರಣ, ಕುತ್ಸಿತ ಬುದ್ಧಿ, ಹಿಂಸೆ ತಾಂಡವವಾಡುತ್ತಿರುವ ಇಂದಿನ ಸಮಾಜದಲ್ಲಿ ಬಸವಣ್ಣನವರ ಆದರ್ಶ, ಬದ್ಧತೆ, ತತ್ವ, ಬೋಧನೆ ದಾರಿದೀಪಗಳಾಬೇಕು.
ಶ್ರೀ ರಾಮನ ಆದರ್ಶ ರಾಜ್ಯವನ್ನು ನಿಜವಾಗಿ ಅಳವಡಿಸಿಕೊಂಡವರು ಬಸವೇಶ್ವರರು. ನಾಡು ನುಡಿಯ ಮೌಲ್ಯ, ಬದುಕಿನ ಬದ್ಧತೆ, ತ್ಯಾಗ ಎಲ್ಲವನ್ನೂ ಪ್ರತಿಪಾದಿಸುವ ಜೊತೆಗೆ ಅನುಕರಣೀಯ ಪಥವನ್ನು ಬಿಟ್ಟು ಹೋದವರು. ಸರ್ಕಾರ, ಸಮಾಜ ಕೂಡ ಕೇವಲ ಸಾಂಸ್ಕೃತಿಕ ನಾಯಕ-ರಾಯಭಾರಿ ಎಂದು ಘೋಷಿಸಿದರೆ ಸಾಲದು. ಬಸವ ತತ್ವ, ಅವರ ಆಳ್ವಿಕೆ, ಆದರ್ಶ, ತತ್ವ ಎಲ್ಲವನ್ನೂ ಪಾಲಿಸುವ ವ್ಯವಸ್ಥೆ ಆಗಬೇಕು.
ಶ್ರೀ ರಾಮ, ಶ್ರೀ ಬಸವೇಶ್ವರ… ವಾಸ್ತವ ಮತ್ತು ಆದರ್ಶಗಳ ಪ್ರತೀಕ. ಇವುಗಳಲ್ಲೇಕೆ ರಾಜಕೀಯ ಕೀಳು ಮನಸ್ಸು? ಅಪಸ್ವರ, ಅಪಸವ್ಯಗಳೇಕೆ ಅಲ್ಲವೇ?
ದಯವೇ ಧರ್ಮದ ಮೂಲವಯ್ಯ….!!