For the best experience, open
https://m.samyuktakarnataka.in
on your mobile browser.

ಷೇರುಪೇಟೆಯಲ್ಲಿ ರಕ್ತದೋಕುಳಿ

11:11 PM Aug 05, 2024 IST | Samyukta Karnataka
ಷೇರುಪೇಟೆಯಲ್ಲಿ ರಕ್ತದೋಕುಳಿ

ನವದೆಹಲಿ: ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿಯಿಂದ ಭಾರತದ ಷೇರು ಮಾರುಕಟ್ಟೆ ಸೋಮವಾರ ದಿಢೀರ್ ಕುಸಿದಿದೆ. ಸೆನ್ಸೆಕ್ಸ್ ೨,೩೦೦ ಪಾಯಿಂಟ್ ಮತ್ತ ನಿಫ್ಟಿ ೪೦೦ ಪಾಯಿಂಟ್‌ಗಳ ಹೂಡಿಕೆದಾರರಿಗೆ ಭಾರೀ ಹೊಡೆತ ನೀಡಿದೆ.
ಜುಲೈ ೧ರಂದು ದಾಖಲೆ ೮೨೧೨೯ ತಲುಪಿದ್ದ ಸೆನ್ಸೆಕ್ಸ್, ಸೋಮವಾರ ದಿನದಂತ್ಯಕ್ಕೆ ೭೮,೫೮೮ ಅಂಕಗಳಿಗೆ ಮುಕ್ತಾಯವಾಗಿದೆ. ಇದರಿಂದ ಹೂಡಿಕೆದಾರರು ೧೫ ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಟಾಟಾ ಮೋಟಾರ್ಸ್, ಒಎನ್‌ಜಿಸಿ, ಅದಾನಿ ಪೋರ್ಟ್ಸ್, ಟಾಟಾ ಸ್ಟೀಲ್ ಮತ್ತು ಹಿಂಡಾಲ್ಕೊ ಸೇರಿದಂತೆ ಅತಿ ಹೆಚ್ಚು ನಷ್ಟಕ್ಕೊಳಗಾದ ಷೇರುಗಳು. ಇವೆಲ್ಲವೂ ಶೇಕಡ ೭ರಷ್ಟು ಕುಸಿದಿದೆ. ಹಿಂದೂಸ್ತಾನ್ ಯೂನಿಲಿವರ್ ಮತ್ತು ನೆಸ್ಲೆ ಇಂಡಿಯಾ ಮಾತ್ರ ಲಾಭ ಗಳಿಸುವಲ್ಲಿ ಯಶಸ್ವಿಯಾದವು.
ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ ೪ ಕ್ಕಿಂತ ಹೆಚ್ಚು ಕುಸಿಯುವುದರೊಂದಿಗೆ ವಿಶಾಲವಾದ ಸೂಚ್ಯಂಕಗಳು ಸಹ ಅನುಭವಿಸಿದವು.
ಕಾರಣಗಳೇನು?: ಇಸ್ರೇಲ್ ವಿರುದ್ಧ ಇರಾನ್ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಗುಡುಗಿರುವುದು ಮತ್ತೊಂದು ಯುದ್ಧದ ಕಾರ್ಮೋಡ ಕವಿಯುವ ಸಾಧ್ಯತೆ ಮೂಡಿಸಿದೆ. ಹೂಡಿಕೆದಾರರು ಎಚ್ಚರಿಕೆಯ ನಡೆ ತೋರಿಸಿದ್ದು, ಬಂಡವಾಳವನ್ನು ಹಿಂದೆ ಪಡೆದುಕೊಂಡಿದ್ದಾರೆ. ಅಮೆರಿಕದ ಡಾಲರ್ ವಿರುದ್ಧ ಜಪಾನಿನ ಯೆನ್ ಮೌಲ್ಯವರ್ಧನೆಯಾಗಿರುವುದು ಇನ್ನೊಂದು ಕಾರಣ. ಅಮೆರಿಕ ಆರ್ಥಿಕ ಹಿಂಜರಿತದ ಭೀತಿ ಎದುರಿಸುತ್ತಿರುವುದು ಹೂಡಿಕೆದಾರರಿಗೆ ಆತಂಕ ಮೂಡಿಸಿದೆ. ಹೀಗಾಗಿ ವಿದೇಶಿ ಹೂಡಿಕೆದಾರರು ಬಂಡವಾಳ ಹಿಂಪಡೆದುಕೊಂಡಿದ್ದಾರೆ.