ಸಂಕ್ರಮಣಕ್ಕೆ ಎಚ್ಚರಿಕೆಯಿಂದ ಇರುವಂತೆ ಭವಿಷ್ಯ ನುಡಿದಿದ್ದರು
ಬೆಳಗಾವಿ: ಸಂಕ್ರಮಣದ ಅಕ್ಕಪಕ್ಕದಲ್ಲಿ, ಕರಿ ಮುಗಿಯುವ ವೇಳೆ ಇಂಥ ಘಟನೆಗಳು ನಡೆಯುತ್ತವೆ ಎಂದು ಮನೆಯಲ್ಲಿ ಹಿರಿಯರು ಹೇಳುತ್ತಿರುತ್ತಾರೆ. ನಮಗೆ ಬೇಕಾದವರು ಸಂಕ್ರಮಣ ಮುಗಿಯೋವರೆಗೂ ಎಚ್ಚರಿಕೆಯಿಂದ ಇರುವಂತೆ ಭವಿಷ್ಯ ಹೇಳಿದ್ದರು. ಆದರೆ, ಈಗ ನಮ್ಮಿಂದಲೇ ಈ ಅಚಾತುರ್ಯ ನಡೆದು ಬಿಟ್ಟಿದೆ ಎಂದು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತಿಳಿಸಿದರು.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಹೋದರಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಎಲ್‌ಪಿ ಸಭೆ ಮುಗಿಸಿ ನಿನ್ನೆ ರಾತ್ರಿ ೧೧ ಗಂಟೆಗೆ ಬೆಂಗಳೂರಿನ ನಮ್ಮ ನಿವಾಸದಿಂದ ಬೆಳಗಾವಿಗೆ ಪ್ರಯಾಣ ಬೆಳೆಸಿದೆವು ಎಂದರು.
ಅಡ್ಡ ಬಂದ ನಾಯಿ:
ಇಂದು ಸಂಕ್ರಮಣಕ್ಕೆ ಮನೆದೇವರಾದ ಚಿಕ್ಕಹಟ್ಟಿಹೊಳಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಮನೆಯವರೆಲ್ಲ ಹೋಗಲು ನಿರ್ಧರಿಸಿದ್ದೆವು. ಹಾಗಾಗಿ, ತರಾತುರಿಯಲ್ಲಿ ನಾನು, ಸಹೋದರಿ ಬರುತ್ತಿದ್ದೆವು. ಆದರೆ, ದುರಾದೃಷ್ಟವಶಾತ್ ಇನ್ನೇನು ೧೫ ನಿಮಿಷದೊಳಗೆ ಬೆಳಗಾವಿಗೆ ಸೇರುವ ಮೊದಲೇ ಬೆಳಗ್ಗೆ ೫ ಗಂಟೆಗೆ ಗಾಡಿಗೆ ಎರಡು ನಾಯಿಗಳು ಅಡ್ಡ ಬಂದವು. ಆಗ ಚಾಲಕನಿಗೆ ಪಾಪ ಏನು ಮಾಡಬೇಕು ಅಂತಾ ಗೊತ್ತಾಗದೇ, ಆ ಪ್ರಾಣಿಗಳ ಜೀವ ಉಳಿಸಲು ಕಾರನ್ನು ಎಡಕ್ಕೆ ತೆಗೆದುಕೊಂಡಾಗ ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಕಾರು ಡಿಕ್ಕಿ ಹೊಡೆಯಿತು ಎಂದು ಘಟನೆಯನ್ನು ವಿವರಿಸಿದರು.
ಘಟನೆಯಲ್ಲಿ ನನಗೆ ತಲೆ, ಕಿವಿ, ಮುಖ, ಬಲ ತೋಳಿಗೆ ಗಾಯವಾಗಿದೆ. ಅದೇ ರೀತಿ ಸಹೋದರಿಗೆ ಸಣ್ಣಪುಟ್ಟ ಗಾಯದ ಜೊತೆಗೆ ಎಲ್ ೧, ಎಲ್-೪ ಬೆನ್ನು ಮೂಳೆಗಳ ಏರ್ ಲೈನ್ ಫ್ರ್ಯಾಕ್ಚರ್ ಆಗಿದ್ದು, ೧ ತಿಂಗಳು ಬೆಡ್ ರೆಸ್ಟ್ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಸಚಿವರು ಆರಾಮವಾಗಿದ್ದಾರೆ. ನೋವಿದೆ. ಅವರಿಗೆ ಸರಿಯಾಗಿ ಮಾತನಾಡಲು ಕಷ್ಟವಾಗುತ್ತಿದೆ. ಆದರೂ ಅವರು ಧೈರ್ಯವಾಗಿದ್ದಾರೆ. ಅಪಾಯದಿಂದ ಪಾರಾಗಿದ್ದಾರೆ. ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ದೇವರು ಮತ್ತು ಜನರ ಆಶೀರ್ವಾದಿಂದ ಆರಾಮವಾಗಿದ್ದಾರೆ. ಆದಷ್ಟು ಬೇಗ ಗುಣಮುಖರಾಗಿ ಜನಸೇವೆ ಪುನರಾರಂಭಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮನೆಯವರೆಲ್ಲಾ ಗಾಬರಿ ಆಗಿದ್ದರಿಂದ ಬೆಳಗ್ಗೆ ಮನೆಗೆ ಹೋಗಿ ಧೈರ್ಯ ತುಂಬಿ, ಈಗ ಮತ್ತೆ ಆಸ್ಪತ್ರೆಗೆ ಬಂದು ಅಕ್ಕನನ್ನು ಮಾತಾಡಿಸಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಅಚಾತುರ್ಯ ನಮ್ಮಿಂದಲೇ ಆಗಿದೆ:
ನಮ್ಮ ವಾಹನ ಚಾಲಕ ಶಿವು ತುಂಬಾ ಒಳ್ಳೆಯವ. ಘಟನೆ ಆಗುವ ೧೫ ನಿಮಿಷ ಮುಂಚೆ ಅವನ ಜೊತೆಗೆ ಪೆಟ್ರೋಲ್ ಹಾಕಿಸುವ ಬಗ್ಗೆ ಮಾತಾಡಿದ್ದೇನೆ. ಆಗ ಬೇಡ ಅಣ್ಣಾ, ಇನ್ನೇನು ೧೫ ನಿಮಿಷದೊಳಗೆ ಬೆಳಗಾವಿ ಮುಟ್ಟುತ್ತೇವೆ ಎಂದು ಹೇಳಿದ. ನಿರಂತರವಾಗಿ ಅವನನ್ನು ನಾನು ಮಾತಾಡಿಸುತ್ತಿದ್ದೆ. ಹಾಗಾಗಿ, ಇದರಲ್ಲಿ ಚಾಲಕನ ಯಾವುದೇ ರೀತಿ ತಪ್ಪಿಲ್ಲ. ಮುಂದೆ ಎರಡು ನಾಯಿಗಳು ಅಡ್ಡ ಬಂದವು. ಅವುಗಳ ಮುಂದೆ ಒಂದು ಕ್ಯಾಂಟರ್ ನಿಧಾನವಾಗಿ ಚಲಿಸುತ್ತಿತ್ತು. ಇದೇ ಕಾರಣಕ್ಕೆ ದುರ್ಘಟನೆ ಸಂಭವಿಸಿತು. ನಾವು ತಡರಾತ್ರಿ ಬೆಂಗಳೂರು ಬಿಟ್ಟಿದ್ದರಿಂದ ಬೆಂಗಾವಲು ಪಡೆಯವರಿಗೆ ತಿಳಿಸಿರಲಿಲ್ಲ. ಅಚಾತುರ್ಯ ನಮ್ಮಿಂದಲೇ ಆಗಿದೆ. ಹಬ್ಬ ಇದ್ದಿದ್ದರಿಂದ ಇನ್ನೊಬ್ಬ ಚಾಲಕ ಬೇಡ ಎಂದಿದ್ದೆ. ಹಬ್ಬ ಇದ್ದಿದ್ದರಿಂದ ದಾವಣಗೆರೆಗೆ ಇನ್ನೊಬ್ಬ ಚಾಲಕ ಬರುವುದು ಬೇಡ ಎಂದಿದ್ದೆ. ಬೆಳಗ್ಗೆ ಹೊಳಿಗೆ ಜಳಕಕ್ಕೆ ಹೋಗೋಣ ಎಂದಿದ್ದೆವು ಆದರೆ, ದಾವಣಗೆರೆಗೆ ಚಾಲಕನ ಕರೆಸಿಕೊಂಡಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ ಎಂದ ಚನ್ನರಾಜ ಹಟ್ಟಿಹೊಳಿ ಅವರು, ನಾನು ಚಾಲಕನ ಹಿಂದೆ ಕುಳಿತಿದ್ದೆ. ಗನ್ ಮ್ಯಾನ್ ಹಿಂದೆ ಸಹೋದರಿ ಲಕ್ಷ್ಮೀ ಹೆಬ್ಬಾಳ್ಕರ್ ಕುಳಿತುಕೊಂಡಿದ್ದರು. ಚಾಲಕ ಶಿವಾನಂದ ಮತ್ತು ಗನ್ ಮ್ಯಾನ್ ಈರಣ್ಣ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದರು.
ಎಂಆರ್‌ಐ ವರದಿ ಬಂದಿದೆ. ತಜ್ಞ ವೈದ್ಯರ ಜೊತೆಗೆ ಸಮಾಲೋಚನೆ ನಡೆಸಿದ್ದೇವೆ. ಹಾಗಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬೆಂಗಳೂರಿಗೆ ರವಾನಿಸುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ, ಸಭಾಧ್ಯಕ್ಷ ಯು.ಟಿ.ಖಾದರ್, ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಗೃಹ ಸಚಿವ ಪರಮೇಶ್ವರ ಅವರು ಸೇರಿದಂತೆ ಪಕ್ಷಾತೀತವಾಗಿ ವಿರೋಧ ಪಕ್ಷದವರು ಸೇರಿದಂತೆ ಎಲ್ಲರೂ ನನ್ನ ಮತ್ತು ಅಕ್ಕನ ಆರೋಗ್ಯ ವಿಚಾರಿಸಿದ್ದಾರೆ. ಅವರಿಗೆಲ್ಲ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದರು.