ಸಂಕ್ರಾಂತಿಗೆ ಬಂದಿದ್ದ ಅತ್ತೆಯನ್ನೇ ಕೊಲೆಗೈದ ಅಳಿಯ..!
ಬೆಳಗಾವಿ: ಮಗಳಿಗೆ ಸಂಕ್ರಾಂತಿಗೆ ಬುತ್ತಿ ಕೊಡೊಕೆ ಬಂದಿದ್ದ ಅತ್ತೆಯನ್ನೇ ಅಳಿಯ ಹತ್ಯೆ ಮಾಡಿದ ಘಟನೆ ಇಲ್ಲಿನ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳಗಾವಿ ಕಲ್ಯಾಣ ನಗರದ ನಿವಾಸಿ ರೇಣುಕಾ ಶ್ರೀಧರ ಪಡುಮುಖೆ(೪೪) ಕೊಲೆಯಾದ ಮಹಿಳೆ. ಮಗಳಿಗೆ ಸಂಕ್ರಾಂತಿ ಹಬ್ಬದೂಟ ಕೊಡೊಕೆ ಬಂದಿದ್ದ ಅತ್ತೆಯನ್ನು ಅಳಿಯ ಚಾಕುವಿನಿಂದ ಇರಿದು ಕೊಲೆ ಮಾಡಿದನೆಂದು ಹೇಳಲಾಗಿದೆ. ಮಲಪ್ರಭಾ ನಗರದ ಶುಭಂ ದತ್ತಾ ಬಿರ್ಜೆ(೨೪) ಎಂಬಾತನಿಂದ ಕೃತ್ಯ ನಡೆದಿದೆ.
ಸದ್ಯ ರೈತ ಗಲ್ಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆಷ್ಟೇ ಛಾಯಾ ಜತೆಗೆ ಮದುವೆಯಾಗಿತ್ತು. ನಮ್ಮ ಮನೆಗೆ ಏಕೆ ಬರ್ತೀಯಾ ಎಂದು ಅಳಿಯ ಕ್ಯಾತೆ ತೆಗೆದಿದ್ದ, ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಅತ್ತೆಯ ತೊಡೆಯ ಭಾಗಕ್ಕೆ ಇರಿದಿದ್ದ. ಗಂಭೀರ ಗಾಯಗೊಂಡಿದ್ದ ರೇಣುಕಾಳನ್ನು ಬೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಘಟನಾ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್, ಸಿಪಿಐ ಭೇಟಿ ಪರಿಶೀಲನೆ ನಡೆಸಿದರು.