ಸಂಗೀತದ ಮೂಲಕ ಯುವ ಮನಸ್ಸುಗಳ ಮನಗೆದ್ದ ಬೆನ್ನಿ ದಯಾಳ್
ಮೂಡುಬಿದಿರೆ: ರ್ಯಾಶ್ ಮತ್ತು ರ್ಯಾಪ್ ಸಾಂಗ್ ಗಳನ್ನು ಹಾಡುವ ಮೂಲಕ ಯುವ ಸಮುದಾಯವನ್ನು ಸೆಳೆಯುತ್ತಾ ಬಂದಿರುವ ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕ ಬೆನ್ನಿ ದಯಾಳ ಅವರು ಆಳ್ವಾಸ್ ವಿರಾಸತ್ ನ ಎರಡನೇ ದಿನವಾದ ಶುಕ್ರವಾರದಂದು "ಐಯಾಮೆ ಡಿಸ್ಕೋ ಡ್ಯಾನ್ಸರ್", "ಚಲ್ ಚಯ್ಯಾ ಚಯ್ಯಾ", "ಬಡ್ತ ಮ್ಯೂಸಿಕಲ್", "ಡ್ಯಾನ್ ಸಾಲಾ", ' ಚುಮ್ಮಾ ಚುಮ್ಮಾ ದೇ ದೇ" ಸಹಿತ ಹಲವಾರು ಜನಪ್ರಿಯ ಹಾಡುಗಳನ್ನು ಹಾಡುವ ಮೂಲಕ ಯುವ ಸಮುದಾಯವನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.ಕನ್ನಡ ಸಹಿತ ವಿವಿಧ ಭಾಷೆಯಲ್ಲಿ ಹಲವಾರು ಹಾಡಿ ಯುವ ಸಮುದಾಯಕ್ಕೆ ಹತ್ತಿರವಾಗಿರುವ ಬೆನ್ನಿ ದಯಾಳ್ ಅವರು ವಿರಾಸತ್ ನಲ್ಲಿ "ಗಾನ ವೈಭವ"ವನ್ನು ನಡೆಸಿ ಕೊಡಲು ವೇದಿಕೆಗೆ ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು ಶಿಳ್ಳೆ ಮತ್ತು ಚಪ್ಪಾಳೆಯ ಮೂಲಕ ಜೋಶ್ ತುಂಬಿದರು. ರ್ಯಾಪ್ ಸಾಂಗ್ ಗಳಿಗೆ ಹೆಜ್ಜೆ ಹಾಕುತ್ತಾ ಹಾಡಲು ಆರಂಭಿಸುತ್ತಿದ್ದಂತೆ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುತ್ತಾ ಬೊಬ್ಬೆ ಹಾಕುತ್ತಾ ಬೆನ್ನಿ ದಯಾಳ್ ಅವರನ್ನು ಇನ್ನಷ್ಟು ಹಾಡುಗಳನ್ನು ಹಾಡಲು ಹುರಿ ತುಂಬಿಸಿದರು. ಒಟ್ಟಾರೆಯಾಗಿ ಯುವ ಸಮುದಾಯವನ್ನು ತನ್ನತ್ತ ಸೆಳೆಯುವ ಕಲೆಯನ್ನು ಮೈಗೂಡಿಸಿಕೊಂಡಿರುವ ಬೆನ್ನಿ ದಯಾಳ್ ಗಾನ ವೈಭವವನ್ನು ಉತ್ತಮವಾಗಿ ಪ್ರಸ್ತುತಪಡಿಸಿದರು. ಆಳ್ವಾಸ್ ನ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ವಿಭಾಗದ ಅನಂತಕೃಷ್ಣ ಕಾರ್ಯಕ್ತಮ ನಿರೂಪಿಸಿದರು.