ಸಂಗೀತ ಮನದಲ್ಲಿದ್ದರೆ ಅಪಸ್ವರ, ಅಸಹನೆಗೆ ಸ್ಥಾನವಿಲ್ಲ
ಧಾರವಾಡ: ಮನಸಿನಲ್ಲಿ ಸಂಗೀತ ತುಂಬಿಕೊಂಡಿದ್ದರೆ ಯಾವುದೇ ಅಪಸ್ವರ, ಅಸಹನೆ ಹಾಗೂ ಅಹಂಕಾರಕ್ಕೆ ಸ್ಥಾನ ಇರುವುದಿಲ್ಲ ಎಂದು ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.
ಕಲಾ ಸಂವಹನ ಟ್ರಸ್ಟ್ ವತಿಯಿಂದ ಸೃಜನಾ ರಂಗಮಂದಿರದಲ್ಲಿ ರವಿವಾರ ಆಯೋಜಿಸಿದ ಉಸ್ತಾದ್ ಹಮೀದ್ ಖಾನ್ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಉಸ್ತಾದ್ ಹಮೀದ್ ಖಾನ್ ಸ್ಮರಣಾರ್ಥ ಕೊಡಮಾಡುವ `ಸಿತಾರ್ ಮಾಂತ್ರಿಕ ಹಮೀದ್ ಖಾನ್ ಸಂಗೀತ ಸಾಧಕ' ಪ್ರಶಸ್ತಿಯನ್ನು ಪುಣೆಯ ಹಿರಿಯ ಗಾಯಕ ಪಂ. ಆನಂದ ಭಾಟೆ ಅವರಿಗೆ ಪ್ರದಾನ ಮಾಡಿ ಮಾತನಾಡಿದರು. ಸಂಗೀತದೊಂದಿಗೆ ನಮ್ಮದು ಅವಿನಾಭಾವ ಸಂಬಂಧ. ಚಲನಚಿತ್ರದ ಹಿನ್ನೆಲೆ ಸಂಗೀತ ಇದ್ದಂತೆ, ಪ್ರತಿಯೊಬ್ಬರ ಜೀವನಕ್ಕೂ ಹಿನ್ನೆಲೆ ಸಂಗೀತವಿರುತ್ತದೆ. ಕೆಲವು ಚಿತ್ರಗೀತೆಗಳು ನಮಗೆ ಯಾವುದೋ ಘಟನೆಯನ್ನು ನೆನಪಿಸುತ್ತವೆ, ಯಾವುದೋ ಜಾಗವನ್ನು ಸ್ಮರಣೆಗೆ ತರುತ್ತವೆ, ಯಾವುದೋ ವ್ಯಕ್ತಿಯ ಚಿತ್ರ ಕಣ್ಣೆದುರು ಬಂದು ನಿಲ್ಲುತ್ತದೆ. ಸಂಗೀತವನ್ನು ನಾವು ಆಸ್ವಾದಿಸಬೇಕು ಎಂದು ತಿಳಿಸಿದರು.
ಜ್ಞಾನ ಹಾಗೂ ಪ್ರೀತಿ ಹಂಚಿದಷ್ಟು ಹೆಚ್ಚಾಗುತ್ತದೆ. ಜ್ಞಾನ ಹಾಗೂ ಪ್ರೀತಿ ನೀಡಿದ ವ್ಯಕ್ತಿ ಎಂದಿಗೂ ಬಡವನಾಗಲಾರ. ಧಾರವಾಡ ಘರಾಣೆಯ ಖಾನ್ ಕುಟುಂಬ ಕಲಾಜ್ಞಾನವನ್ನು ಹಂಚುತ್ತ ಬಂದಿದೆ. ತಲೆಮಾರಿನಿಂದ ತಲೆಮಾರಿಗೆ ಕಲಾವಿದರು ಕಲಾಸೇವೆ ಮಾಡುತ್ತಿದ್ದಾರೆ. ೩೦ ಕಲಾವಿದರು ಸೇರಿ ಸಿತಾರ್‌ನಲ್ಲಿ ಒಂದೇ ರಾಗ ನುಡಿಸಿದ್ದು ಸ್ವರ ಮೇಳ ಖುಷಿ ನೀಡಿತು. ಸಾಮೂಹಿಕ ಸಿತಾರ ವಾದನದಲ್ಲಿ ದೈವಿಕತೆ ಕಂಡಿತು. ಇದು ಸಮಾಜಕ್ಕೆ ಒಂದು ರೂಪಕವಿದ್ದಂತೆ. ವಿವಿಧ ಭಾಷೆ, ನಂಬಿಕೆ, ಸಂಗೀತ ವಿಧಾನ, ಮಾಧ್ಯಮಗಳು ಸೇರಿರುವ ಸಮಾಜ ರಂಗಮೇಳವಾಗಿದೆ ಎಂದರು.
ಸಂಗೀತ ವಾದ್ಯ ಉಪಕರಣ ತಯಾರಕ ಮೀರಜ್‌ನ ನೌಶಾದ್ ಗುಲಾಬ್‌ಸಾಹೇಬ್ ಸಿತಾರಮೇಕರ್ ಅವರನ್ನು ಸತ್ಕರಿಸಲಾಯಿತು. ಹುಡಾ ಅಧ್ಯಕ್ಷ ಶಾಕೀರ್ ಸನದಿ, ಕುಮಾರ ಬೆಕ್ಕೇರಿ, ಕಲಾವಿದ ಸಂಜಯ್ ಕರಮಲಕರ್, ಉಸ್ತಾದ್ ಉಸ್ಮಾನ್ ಖಾನ್ ಇದ್ದರು. ಕಲಾ ಸಂವಹನ ಟ್ರಸ್ಟ್ ಅಧ್ಯಕ್ಷೆ ರಾಜೇಶ್ವರಿ ವಸ್ತ್ರದ ಸ್ವಾಗತಿಸಿದರು. ಶ್ರೀನಿವಾಸ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕರ್ಣಿ ನಿರೂಪಿಸಿದರು.
ಚಿತ್ತ ಸೆಳೆದ ಸಿತಾರ್ ಸೌರಭ
ಉಸ್ತಾದ್ ಹಮೀದ್ ಖಾನ್ ಹಾಗೂ ಉಸ್ತಾದ್ ಮೊಹ್ಸಿನ್ ಖಾನ್ ಅವರ ೩೦ ಜನ ಶಿಷ್ಯರು ಏಕಕಾಲಕ್ಕೆ ಸಿತಾರ್ ಪ್ರಸ್ತುತಪಡಿಸಿದ್ದು ಗಮನ ಸೆಳೆಯಿತು. ಸ್ವರಗಳ ಮೇಳವನ್ನು ಸಂಗೀತ ರಸಿಕರು ಮೆಚ್ಚಿಕೊಂಡರು. ೬ ವರ್ಷದಿಂದ ೬೦ ವರ್ಷದವರೆಗಿನ ಕಲಾವಿದರು ಸಿತಾರ್ ಪ್ರದರ್ಶನ ನೀಡಿದರು.