ಸಂಡೂರಿನಲ್ಲಿ ಡಿಸಿಎಂ ಡಿಕೆಶಿ ಅಬ್ಬರದ ಪ್ರಚಾರ
ಬಳ್ಳಾರಿ: ರಾಜ್ಯಕ್ಕೆ, ಸಂಡೂರಿಗೆ ಬಿಜೆಪಿಯವರು ಏನೂ ಕೊಟ್ಟಿಲ್ಲ. ಅವರಿಗೆ ವೋಟು ಕೊಡಬೇಡಿ. ಜನರ ಬದುಕಿಗೆ ಆಧಾರವಾಗಿದ್ದು ಕಾಂಗ್ರೆಸ್. ಗ್ಯಾರಂಟಿ ಜಾರಿ ಮಾಡಿ ಹೆಣ್ಣು ಮಕ್ಕಳಿಗೆ ಶಕ್ತಿ ತುಂಬಿದ್ದು ಕಾಂಗ್ರೆಸ್ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸಂಡೂರು ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಪರ ತಿರುಮಲಾಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಇ ತುಕಾರಾಂ ಅವರು, ಸೋಲಿಲ್ಲದ ಸರದಾರ. ಅವರಿಗೆ ನಾಲ್ಕು ಬಾರಿ ಸತತವಾಗಿ ಆಶೀರ್ವಾದ ಮಾಡಿದ್ದೀರಿ. ಅವರ ಸ್ಥಾನಕ್ಕೆ ನಿಮ್ಮ ಸೇವೆ ಮಾಡುವ ಅನ್ನಪೂರ್ಣ ಅವರಿಗೆ ನಮ್ಮ ಪಕ್ಷ ಅವಕಾಶ ನೀಡಿದೆ. ಜನಾರ್ಧನ ರೆಡ್ಡಿ ಜಿಲ್ಲೆಗೆ ಏನು ಮಾಡಿದರು ಅಂತ ಇಲ್ಲಿನ ಜನರಿಗೆ ಗೊತ್ತಿದೆ. ಇಡೀ ಜಿಲ್ಲೆಗೆ ರಾಜ್ಯಕ್ಕೆ ಯಾವ ಪರಿಸ್ಥಿತಿ ಬಂತು ಎಂದು ಗೊತ್ತಿದೆ ಎಂದರು.
ಕನಕಪುರದಲ್ಲಿ ನಾನು ಮಾಡಿದ ಕೆಲಸಕ್ಕಿಂತ ಹೆಚ್ಚು ಕೆಲಸ ತುಕಾರಾಂ ಅವರು ಮಾಡಿದ್ದಾರೆ. 200 ಹಾಸಿಗೆಯ ದೊಡ್ಡ ಆಸ್ಪತ್ರೆ ಇಲ್ಲಿ ಇದೆ. ಈ ಅಭಿವೃದ್ಧಿ ಕೆಲಸ ಹೀಗೆಯೇ ಮುಂದುವರಿಯಬೇಕು. ಆದ್ದರಿಂದ ಈ ಬಾರಿಯೂ ಕಾಂಗ್ರೆಸ್ ಬೆಂಬಲಿಸಿ ಎಂದು ಹೇಳಿದರು.
371ಜೆ ಕೊಟ್ಟು ವಿಶೇಷ ಪ್ಯಾಕೇಜ್ ಅನ್ನು ಕಾಂಗ್ರೆಸ್ ಕೊಟ್ಟಿದೆ. ಹಿಂದುಳಿದ ಪ್ರದೇಶಗಳ ಜನರಿಗೆ ದೊಡ್ಡ ಶಕ್ತಿ ಸಿಕ್ಕಿದೆ. ಯುವಕರ ಭವಿಷ್ಯಕ್ಕೆ ನೆರವಾಗಿದೆ ಎಂದರು.
ನಾನು ತುಕಾರಾಂ ಅವರ ಕೆಲಸ ನೋಡಿದ್ದೇನೆ. ಅವರು ಜನರಿಗಾಗಿ ಸದಾ ತೊಡಗಿಕೊಂಡವರು. ದೇವರು ವರ ಮತ್ತು ಶಾಪ ಕೊಡೋದಿಲ್ಲ ಆದರೆ ಅವಕಾಶ ಕೊಡುತ್ತಾನೆ. ತುಕಾರಾಂ ಅವರು ಸಿಕ್ಕ ಅವಕಾಶ ಉಪಯೋಗಿಸಿಕೊಂಡು ನಿಮ್ಮ ಹೃದಯ ಗೆದ್ದಿದ್ದಾರೆ. ಆದ್ದರಿಂದ ಅನ್ನಪೂರ್ಣ ಅವರಿಗೂ ಅವಕಾಶ ನೀಡಿ ಎಂದರು.
ಬಿಜೆಪಿಯವರು ಏನಾದರೂ ಕೊಟ್ಟಿದ್ದಾರೆಯೇ. ಯಡಿಯೂರಪ್ಪ ಏನು ಮಾಡಿದ್ದಾರೆ. ನಮಗೆ ವೋಟು ಮುಖ್ಯವಲ್ಲ ಬದುಕು ಮುಖ್ಯ. ಇಡೀ ಸರ್ಕಾರ ಅನ್ನಪೂರ್ಣ ಅವರ ಜತೆ ನಿಲ್ತೇವೆ, ನೀವು ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸಚಿವರಾದ ಸಂತೋಷ್ ಲಾಡ್, ಸಚಿವರಾದ ಡಿ ಸುಧಾಕರ್, ಬಳ್ಳಾರಿ ಸಂಸದ ಇ ತುಕಾರಾಮ್, ಮಾಜಿ ಸಚಿವರಾದ ನಾಗೇಂದ್ರ, ಮಾಜಿ ಸಂಸದ ಉಗ್ರಪ್ಪ, ಮಾಜಿ ಸಚಿವರಾದ ಪರಮೇಶ್ವರ್ ನಾಯ್ಕ ರವರು, ಕಂಪ್ಲಿ ಶಾಸಕರಾದ ಗಣೇಶ್, ಮಾಜಿ ಕೆಪಿಸಿಸಿ ಅಧ್ಯಕ್ಷರಾದ ಅಲ್ಲಂ ವೀರಭದ್ರಪ್ಪ, ಮಾಜಿ ಸಚಿವರಾದ ರೇವಣ್ಣ ಉಪಸ್ಥಿತರಿದ್ದರು.