ಸಂತೋಷದ ದಾನದಿಂದ ಶ್ರೇಯಸ್ಸು ವೃದ್ಧಿ
ದಾನ ನಮ್ಮ ಶಾಸ್ತ್ರಗಳು ಸೂಚಿಸಿದ ಧರ್ಮ ಆಚರಣೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಶ್ರುತಿ, ಸ್ಮೃತಿ, ಪುರಾಣ, ಇತಿಹಾಸ ಇವೆಲ್ಲವೂ ದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿವೆ. ಯಾಗ, ಹೋಮ, ಉಪವಾಸ, ತಪಸ್ಸು, ಅಧ್ಯಯನ ಹೀಗೆ ಶಾಸ್ತ್ರಗಳಲ್ಲಿ ಸೂಚಿಸಿರುವ ಅನೇಕ ಕರ್ಮಾನುಷ್ಟಾನಗಳಲ್ಲಿ ದಾನವೂ ಪ್ರಮುಖ ಭಾಗವಾಗಿದೆ. ದಾನವಿಲ್ಲದ ಯಾವುದೇ ಕರ್ಮಾನುಷ್ಠಾನ ಪೂರ್ತಿಯಾಗುವುದಿಲ್ಲ. ವಿಶೇಷವಾಗಿ ಕಲಿಯುಗದಲ್ಲಿ, ದಾನವು ಅತ್ಯಂತ ಅವಶ್ಯಕವಾಗಿದೆ ಏಕೆಂದರೆ ಇದು ಪಾಪವನ್ನು ಸುಡಲು ಮತ್ತು ಪುಣ್ಯವನ್ನು ಪಡೆಯಲು ಸುಲಭವಾದ ಮಾರ್ಗವಾಗಿದೆ.
ವೇದಗಳಲ್ಲಿ ತಿಳಿಸಿದಂತೆ ದಾನ ಯಾವಾಗ ಹೇಗೆ ಕೊಡಬೇಕು ಎಂದರೆ ಶ್ರದ್ಧಯಾ ದೇಯಂ' ಶ್ರದ್ಧೆಯಿಂದ ದಾನ ಮಾಡು, 'ಅಶ್ರದ್ಧಯ ದೇಯಂ' ಶ್ರದ್ಧೆ ಇಲ್ಲದೆ ಇದ್ದರೂ ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ.
ಶ್ರಿಯಾ ದೇಯಂ' ಪ್ರೀತಿಯಿಂದ ಸಂಯಮದಿಂದ ಆಸಕ್ತಿಯಿಂದ ದಾನ ಮಾಡು, `ಹ್ರಿಯಾ ದೇಯಂ' ಇಷ್ಟವಿಲ್ಲದಿದ್ದರೂ ದಾನ ಮಾಡು, 'ಭಿಯಾ ದೇಯಂ' ನರಕ ಅಥವಾ ಯಾವುದೇ ಭಯದಿಂದಲಾದರೂ ದಾನ ಮಾಡು, 'ಸಂವಿದ ದೇಯಂ' ಜ್ಞಾನಪೂರ್ವಕವಾಗಿ ದಾನ ಮಾಡುವುದು. ಇದರ ಅರ್ಥ.
ಯಾವುದೇ ಸ್ಥಿತಿಯಲ್ಲಿದ್ದರೂ ದಾನ ಮಾಡುವುದು ಶ್ರೇಷ್ಠ. ದಾನದಲ್ಲಿ ೩ ಮುಖ್ಯ ವಿಭಾಗಗಳಿವೆ-ಸಾತ್ವಿಕ-ಯಾವುದನ್ನು ನಿರೀಕ್ಷೆಯ ಭಾವವಿಲ್ಲದೆ ಕೊಡುವುದು, ರಾಜಸಿಕ-ಸ್ವರ್ಗ ಅಥವಾ ವಿಶೇಷ ಸೌಕರ್ಯಗಳನ್ನು ಪಡೆಯಬೇಕೆಂಬ ಆಸೆಯಿಂದ ಕೊಡುವ ದಾನ, ತಾಮಸಿಕ-ಅಹಂಕಾರದಿಂದ ಕೊಡುವ ದಾನ, ಈ ದಾನದಿಂದ ಫಲವಿಲ್ಲದಿದ್ದರೂ ಮುಂದೆ ಪುಣ್ಯ ಸಂಪಾದನೆಗೆ ಮಾರ್ಗ ತೋರುತ್ತದೆ.
ದಾನದಲ್ಲಿ ಆರು ಗುಣಲಕ್ಷಣಗಳಿವೆ. ಮಹಾಭಾರತದ, ಅನುಶಾಸನ ಪರ್ವದಲ್ಲಿ ಹೇಳಿದಂತೆ..
ದಾನವನ್ನು ಮಾಡುವ ವ್ಯಕ್ತಿಯು ಶುದ್ಧನಾಗಿದ್ದರೆ, ಒಳ್ಳೆಯ ಗುಣವುಳ್ಳವನಾಗಿದ್ದರೆ ಮತ್ತು ಭಗವಂತನಲ್ಲಿ ಭಕ್ತಿಯಿಂದ ಮತ್ತು ದೃಢವಿಶ್ವಾಸದಿಂದ ಕೂಡಿದ್ದರೆ : ಅಂತಹ ದಾನಿಯು ಕೊಟ್ಟ ದಾನಕ್ಕೆ ವಿಶೇಷ ಫಲಗಳುಂಟು. ದಾನವಾಗಿ ಕೊಡುವ ವಸ್ತು ಕದ್ದ ಆಸ್ತಿ, ಅಕ್ರಮವಾಗಿ ಸಂಪಾದಿಸಿದ, ಮೋಸದಿಂದ ಅಥವಾ ಇತರರಿಗೆ ತೊಂದರೆ ಕೊಡುವ ಮೂಲಕ ಗಳಿಸಿದ ವಸ್ತುವಾಗಿರಬಾರದು. ದಾನ ಸ್ವೀಕರಿಸುವವರು ಪ್ರತಿಗೃಹಿತಾ-ಉತ್ತಮ ಕುಟುಂಬದಿಂದ ಬಂದವನು, ವಿದ್ಯಾವಂತನೂ (ಶಾಸ್ತ್ರಗಳಲ್ಲಿ), ತನ್ನ ಕರ್ತವ್ಯವನ್ನು ತಪ್ಪದೆ ನಿರ್ವಹಿಸುವವನೂ ಮತ್ತು ಉತ್ತಮ ಚಾರಿತ್ರ‍್ಯವನ್ನು ಹೊಂದಿದವನಾಗಿರಬೇಕು.
ದಾನ ಕೊಡುವ ಸಮಯದಲ್ಲಿ ನಮಗೆ ಅತ್ಯಂತ ಪ್ರಿಯವಾದುದು ಮತ್ತು ಅಮೂಲ್ಯವಾದುದನ್ನು ದಾನ ಮಾಡಿದರೆ ವಿಶೇಷ ಪುಣ್ಯ ಲಭಿಸುತ್ತದೆ. ಜೊತೆಗೆ ಪುಣ್ಯ ಕಾಲಗಳಲ್ಲಿ, ವಿಶೇಷ ಸ್ಥಳ. ತೀರ್ಥ ಕ್ಷೇತ್ರಗಳಲ್ಲಿ, ನದಿಗಳ ದಡದಲ್ಲಿ, ಪವಿತ್ರ ನಗರಗಳಲ್ಲಿ ಮತ್ತು ಸಾತ್ವಿಕ ಜನರು ವಾಸಿಸುವ ಸ್ಥಳಗಳಲ್ಲಿ ಮಾಡುವ ದಾನವು ಉತ್ತಮವಾಗಿದೆ. ಶರದ್ ಮತ್ತು ವಸಂತ ಋತುಗಳು, ವೈಶಾಖ, ಕಾರ್ತಿಕ ಹಾಗು ಮಾಘ ಮಾಸಗಳು, ಶುಕ್ಲ ಪಕ್ಷ, ಪೂರ್ಣಿಮಾ ಮತ್ತು ಗ್ರಹಣಗಳ ಸಮಯ - ಇವು ದಾನಕ್ಕೆ ಅತ್ಯಂತ ಸೂಕ್ತವಾದ ಸಮಯವಾಗಿದೆ.
ಪಾತ್ರರಿಗೆ ಅಂದರೆ ವಸ್ತುವಿನ ಅವಶ್ಯಕತೆ ಇರುವವರಿಗೆ, ನಿರ್ಗತಿಕರಿಗೆ ಅಥವಾ ಬಡವರಿಗೆ ದಾನ ಮಾಡುವುದು ಹೆಚ್ಚು ಉಚಿತ. ದ್ವೇಷದ ಮನೋಭಾವದಿಂದ ಎಂದಿಗೂ ದಾನ ಮಾಡಬೇಡಿ. ದುಃಖದ ಹೃದಯದಿಂದ ಮಾಡಿದ ದಾನವು ಪ್ರಯೋಜನವನ್ನು ನೀಡುವುದಿಲ್ಲ. ಸಂತೋಷದಿಂದ ದಾನ ಮಾಡಿದರೆ ಶ್ರೇಯಸ್ಸು ವೃದ್ಧಿಯಾಗುತ್ತದೆ. ಒಬ್ಬ ವ್ಯಕ್ತಿಯು ಅತ್ಯಂತ ಬಡತನದಲ್ಲಿದ್ದರೆ (ಮಹಾ ದಾರಿದ್ರ‍್ಯ), ಅವನು ದಾನದ ಸಂಕಲ್ಪ ಮಾಡಿದರೂ ಸಾಕು ಪುಣ್ಯ ಲಭಿಸುತ್ತದೆ.
ದಾನಗಳಲ್ಲಿ ಪ್ರಮುಖವಾಗಿ ಅನ್ನದಾನ, ಸುವರ್ಣದಾನ, ಗೋದಾನ, ಭೂದಾನ, ಕನ್ಯಾದಾನ, ವಿದ್ಯಾದಾನ, ದೀಪದಾನ, ತಿಲದಾನ, ಆಜ್ಯ ದಾನ, ವಸ್ತ್ರದಾನ, ಧನ್ಯ ದಾನ, ಲವಣ ದಾನ, ಪುಸ್ತಕ ದಾನ, ಸಾಲಿಗ್ರಾಮ ದಾನ, ಮಧು ದಾನ, ಕ್ಷೀರ ದಾನ, ಫಲ ದಾನ, ಕುಂಭ ದಾನ, ಅಶ್ವ ದಾನ ಇತ್ಯಾದಿ.
ನಾವು ಸಾತ್ವಿಕತನದಿಂದ ಸಂಪಾದಿಸಿರುವುದರಲ್ಲಿ, ನೂರರಲ್ಲಿ ಒಂದು ಭಾಗವನ್ನು ಸಂಕಲ್ಪ ಸಹಿತವಾಗಿ, ದೇವರ ಪ್ರೀತ್ಯರ್ಥವಾಗಿ, ದೇವರು ಕೊಟ್ಟಿದ್ದನ್ನ ದೇವರಿಗೆ ದಾನ ಮಾಡುತ್ತಿದ್ದೇನೆ (ಕೆರೆಯ ನೀರನು ಕೆರೆಗೆ ಚಲ್ಲಿ) ಎನ್ನುವ ಭಾವದಿಂದ ದಾನ ಮಾಡಿದರೆ ಜನ್ಮಜನ್ಮಾಂತರದ ಪಾಪಗಳು ಭಸ್ಮವಾಗಿ ಪುಣ್ಯ ಪ್ರಾಪ್ತಿಯಾಗುವುದು ನಿಶ್ಚಿತ.