ಸಂದರ್ಭ ಬಂದರೆ ಕುಮಾರಸ್ವಾಮಿ ಬಂಧನ
ಕೊಪ್ಪಳ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಬಂಧಿಸುವ ಅಗತ್ಯಬಿದ್ದರೆ ಮುಲಾಜಿಲ್ಲದೆ ಬಂದಿಸ್ತೀವಿ ಆದರೆ ಈಗ ಇನ್ನೂ ಬಂಧಿಸುವ ಸನ್ನಿವೇಶ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಮಾರಸ್ವಾಮಿಯವರ ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯಪಾಲರು, ನನ್ನ ವಿರುದ್ಧ ಮಾತ್ರ ಯಾವುದೇ ತನಿಖಾ ವರದಿಯನ್ನು ಆಧರಿಸದೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇದು ತಾರತಮ್ಯವಲ್ಲದೆ ಮತ್ತೇನು? ಕುಮಾರಸ್ವಾಮಿಯವರು ಈಗಲೇ ಹೆದರಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಬಹುದು ಎಂಬ ಭಯ ಅವರನ್ನು ಕಾಡುತ್ತಿದೆ. ಅವರ ವಿರುದ್ಧ ಲೋಕಾಯುಕ್ತ ಎಸ್.ಐ.ಟಿ ಯವರು ತನಿಖಾ ವರದಿ ನೀಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದಾಗ್ಯೂ ರಾಜ್ಯಪಾಲರಿಂದ ಯಾವುದೇ ಕ್ರಮವಾಗದ ಕಾರಣ, ಎಸ್.ಐ.ಟಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದೆ. ಲೋಕಾಯುಕ್ತ ಸಂಸ್ಥೆ ರಾಜ್ಯಪಾಲರ ಬಳಿ ಹಿಂದೆಯೇ ಅನುಮತಿ ಕೇಳಿತ್ತು. ಈಗ ಮತ್ತೆ ಎರಡನೇ ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ರಾಜ್ಯಪಾಲರು ತಾರತಮ್ಯ ಮಾಡುತ್ತಿದ್ದಾರೆ.ಟಿ.ಜೆ. ಅಬ್ರಹಾಂ ಕೊಟ್ಟ ದೂರಿನ ಮೇಲೆ ಒಂದೇ ದಿನದಲ್ಲಿ ನನಗೆ ನೋಟಿಸ್ ಕೊಟ್ಟರು. ಕುಮಾರಸ್ವಾಮಿ ಅವರ ಕೇಸ್ ನಲ್ಲಿ ಯಾಕೆ ಅನುಮತಿ ಕೊಟ್ಟಿಲ್ಲ. ನನ್ನ ಕೇಸ್ ನಲ್ಲಿ ಪೊಲೀಸ್ ಅಧಿಕಾರಿ, ಲೋಕಾಯುಕ್ತ ಅಧಿಕಾರಿ ಅನುಮತಿ ಕೇಳಿಲ್ಲ. ನನ್ನ ಮೇಲೆ ಯಾವುದೇ ತನಿಖೆಯೂ ಆಗಿಲ್ಲ. ಆದರೂ ರಾಜ್ಯಪಾಲರು ನನ್ನ ಮೇಲೆ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರ ಮೇಲೆ ಲೋಕಾಯುಕ್ತರು ತನಿಖೆ ಮಾಡಿ, ಅನುಮತಿ ಕೊಡಿ ಎಂದು ಕೇಳಿದರೂ ಕೊಟ್ಟಿಲ್ಲ. ಇದು ರಾಜ್ಯಪಾಲರು ಮಾಡುತ್ತಿರುವ ತಾರತಮ್ಯ ಅಲ್ಲವೇ, ನನ್ನ ಪತ್ನಿ ಪತ್ರ ಬರೆದಿದ್ದಾರೆ ಎನ್ನುವುದು ಸುಳ್ಳು. ಕುಮಾರಸ್ವಾಮಿ ಯಾವತ್ತೂ ಹಿಟ್ ಎಂಡ್ ರನ್ ಕೇಸ್ ಮಾಡುತ್ತಾರೆ. ಯಾವುದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿದ್ದಾರೆ ಹೇಳಿ? ಅವರು ಯಾವುದನ್ನು ತೆಗೆದುಕೊಂಡು ಹೋಗಿಲ್ಲ. ಪೆನ್ ಡ್ರೈವ್ ಕೇಸ್ ಜೇಬಿನಲ್ಲೇ ಇದೆ ಎಂದು ತೋರಿಸಿದರು. ಯಾಕೆ ಏನೂ ಮಾಡಲಿಲ್ಲ ಎಂದರು.