ಏಕ ಕಾಲದ ಚುನಾವಣೆ ಸಮಾಲೋಚನೆ ಅಗತ್ಯ
ಭಾರತ ಯಾವುದೇ ದೃಷ್ಟಿಕೋನದಿಂದ ನೋಡಿದರೂ ವೈವಿಧ್ಯಗಳ ಆಗರ. ಪರಂಪರೆಯಿಂದ ಹಿಡಿದು ಭಾಷೆ, ಸಂಸ್ಕೃತಿ, ಜಾತಿ, ವರ್ಗ, ಬಣ್ಣ ಸೇರಿದಂತೆ ಬಹುತೇಕ ವಿಚಾರಗಳಲ್ಲಿ ಉತ್ತರ ಭಾರತದ ರೀತಿಗೂ ದಕ್ಷಿಣ ಭಾರತದ ರೀತಿಗೂ ಗುಣಾತ್ಮಕ ವ್ಯತ್ಯಾಸ. ಹಾಗೆಯೇ ಪೂರ್ವ ಭಾರತ ಮತ್ತು ಪಶ್ಚಿಮ ಭಾರತದ ನಡುವೆಯೂ ಕೂಡಾ ಇದೇ ರೀತಿಯ ಸ್ಥಿತಿ. ಇಷ್ಟೆಲ್ಲಾ ವೈವಿಧ್ಯತೆಯ ನಡುವೆಯೂ ಏಕತೆಯನ್ನು ಕಂಡುಕೊಂಡು ಗಣರಾಜ್ಯವಾಗಿ ರೂಪುಗೊಂಡು ಯಶಸ್ಸಿನ ದಾರಿಯಲ್ಲಿರುವ ಭಾರತದಲ್ಲಿ ಒಂದು ದೇಶ-ಒಂದು ಚುನಾವಣೆ ಎಂಬ ಉದಾತ್ತ ಧ್ಯೇಯದ ಪ್ರಸ್ತಾಪ ವಿಧ್ಯುಕ್ತವಾಗಿ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. ಏಕೆಂದರೆ, ಇಂತಹ ಯಾವತ್ತಿಗೂ ವಿವಿಧ ಆಯಾಮಗಳಲ್ಲಿ ಸಂವಾದಕ್ಕೆ ಗ್ರಾಸವಾದರಷ್ಟೇ ಅದರ ಸಾಧಕ ಬಾಧಕಗಳ ಅರಿಯಲು ಸಾಧ್ಯ. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಗಣ್ಯರ ಸಮಿತಿ ಈ ಪ್ರಸ್ತಾಪವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಈಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವುದರಿಂದ ನಿರೀಕ್ಷಿಸಬಹುದಾದ ಬೆಳವಣಿಗೆ ಎಂದರೆ ಎಲ್ಲಾ ರಾಜಕೀಯ ಪಕ್ಷಗಳ ಹಂತದಲ್ಲಿ ಮುಕ್ತ ಚರ್ಚೆ. ಲೋಕಸಭಾ ಚುನಾವಣೆಯ ನೆರಳಿನಲ್ಲಿ ಇಂತಹ ಪ್ರಸ್ತಾಪವೂ ಚರ್ಚೆಗೆ ಬರುತ್ತಿರುವುದು ವಾಸ್ತವಿಕ ನೆಲಗಟ್ಟನ್ನು ಆಧರಿಸಿದ ಒಲವು ನಿಲುವುಗಳನ್ನು ಕಂಡುಕೊಳ್ಳಲು ಸಾಧ್ಯವಾಗಬಹುದೇನೋ. ಉದಾತ್ತ ಪ್ರಸ್ತಾಪಗಳು ಸಾಮಾನ್ಯವಾಗಿ ಭಾವನಾತ್ಮಕ ನೆಲೆಯಲ್ಲಿ ರೂಪುಗೊಂಡಿರುವುದು ಸ್ವಾಭಾವಿಕ. ಆದರೆ, ಇಂತಹ ಪ್ರಸ್ತಾಪಗಳು ಆಚರಣೆಗೆ ಬರಬೇಕಾದಾಗ ವಾಸ್ತವಿಕ ನೆಲೆಗಟ್ಟು ಅತ್ಯಗತ್ಯ. ಈ ಹಂತದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಒಂದು ದೇಶ ಒಂದು ಚುನಾವಣೆ ಪ್ರಸ್ತಾಪ ಚರ್ಚೆಗೆ ಒಳ್ಳೆಯ ವಸ್ತು.
ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಒಂದು ದೇಶ ಒಂದು ಚುನಾವಣೆಯ ಪ್ರಸ್ತಾಪವನ್ನು ಕಾರ್ಯರೂಪಕ್ಕೆ ತರುವುದು ನಿಜಕ್ಕೂ ದೊಡ್ಡ ಸವಾಲು. ಏಕೆಂದರೆ, ಲೋಕಸಭೆಯಿಂದ ಹಿಡಿದು ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಯವರೆಗೆ ಚುನಾವಣೆಗಳು ನಡೆಯಬೇಕಾದ ಅನಿವಾರ್ಯತೆ ಇದೆ. ಭಾರತದಲ್ಲಿ ಜಾರಿಯಲ್ಲಿರುವ ನಿಯಮಾವಳಿಯ ಪ್ರಕಾರ ಲೋಕಸಭೆ ಹಾಗೂ ವಿಧಾನಸಭೆಯ ಅವಧಿಗಳು ಐದು ವರ್ಷ ಎಂದಿದ್ದರೂ ರಾಜಕೀಯ ಸ್ಥಿತ್ಯಂತರಗಳ ಹೊಡೆತದಿಂದಾಗಿ ವರ್ಷದೊಳಗೆ ವಿಸರ್ಜನೆಯಾಗಿರುವ ನಿದರ್ಶನಗಳು ನಮ್ಮ ಕಣ್ಣೆದುರಿಗೇ ಇದೆ. ಸ್ವಾತಂತ್ರö್ಯದ ನಂತರ ಲೋಕಸಭೆ ಹಾಗೂ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯಲು ಸಾಧ್ಯವಾಗಿದ್ದಕ್ಕೆ ಕಾರಣ ಆಗಿನ ಏಕಚಕ್ರಾಧಿಪತ್ಯ ರೀತಿಯ ರಾಜಕೀಯ ಪರಿಸ್ಥಿತಿ. ತದನಂತರ ಸಮ್ಮಿಶ್ರ ರಾಜಕಾರಣದ ಸ್ಥಿತಿ ಆರಂಭವಾದ ಮೇಲೆ ಯಾವುದೇ ಸರ್ಕಾರವನ್ನೂ ಕೂಡಾ ಸುಭದ್ರ ಎಂದು ಹೇಳುವಂತಿಲ್ಲ. ಹೀಗಾಗಿ ಏಕಕಾಲದ ಚುನಾವಣೆ ಪ್ರಸ್ತಾಪ ಸಮಂಜಸವೇ ಎಂಬ ಪ್ರಶ್ನೆ ಬೃಹದಾಕಾರವಾಗಿ ಎದುರಾಗುತ್ತದೆ. ಹಾಗೊಮ್ಮೆ ಇದು ಕಾರ್ಯರೂಪಕ್ಕೆ ಬರಲೇಬೇಕೆಂದು ನಿರ್ಧರಿಸಿದಾಗ ತತ್ಸಂಬಂಧಿತವಾಗಿ ಸಂವಿಧಾನದ ತಿದ್ದುಪಡಿ ಮೂಲಕ ಸಾಕಷ್ಟು ಬದಲಾವಣೆಗಳನ್ನು ಜಾರಿಗೊಳಿಸಬೇಕಾಗುತ್ತದೆ. ಪಕ್ಷಾಂತರ ನಿಷೇಧ ಕಾಯ್ದೆಯಿಂದ ಹಿಡಿದು ಶಾಸನಸಭೆಯ ಬಹುಮತ ಹಾಗೂ ಅಲ್ಪಮತದ ಪರಿಣಾಮಗಳ ಬಗ್ಗೆಯೂ ಮುಕ್ತ ಚರ್ಚೆಯ ಮೂಲಕ ಬದಲಾವಣೆ ಆಗಬೇಕು. ಇದಲ್ಲದೆ, ರಾಜ್ಯಗಳಲ್ಲಿ ಸರ್ಕಾರಗಳು ಬಹುಮತ ಕಳೆದುಕೊಂಡಾಗ ಉಸ್ತುವಾರಿ ಸರ್ಕಾರಗಳ ಆಡಳಿತಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಹಾಗೆಯೇ, ರಾಷ್ಟ್ರಪತಿ ಆಡಳಿತಕ್ಕೂ ಮುಕ್ತ ಅವಕಾಶ ಉಂಟು. ಆದರೆ, ಕೇಂದ್ರದಲ್ಲಿ ಸರ್ಕಾರ ಬಹುಮತ ಕಳೆದುಕೊಂಡಾಗ ಉಸ್ತುವಾರಿ ಸರ್ಕಾರ ರಚನೆಗೆ ಕಾನೂನಿನಲ್ಲಿ ಅವಕಾಶವಿಲ್ಲ, ರಾಷ್ಟ್ರಪತಿ ಆಡಳಿತದ ಜಾರಿಗೂ ಸುತಾರಾಂ ಅವಕಾಶವಿಲ್ಲ. ಇಂತಹ ಬದಲಾವಣೆಗಳನ್ನು ಕಾರ್ಯರೂಪಕ್ಕೆ ತರಬೇಕಾದರೆ ಸಮಗ್ರವಾಗಿ ಸಂವಿಧಾನದ ತಿದ್ದುಪಡಿ ಆಗಬೇಕು. ಜನಮತಗಣನೆಯ
(ರೆಫೆರೆಂಡಮ್) ಮೂಲಕ ಜನಾಭಿಪ್ರಾಯವನ್ನು ಸಂಗ್ರಹಿಸಬೇಕು. ಆದರೆ, ಸಂವಿಧಾನದಲ್ಲಿ ಜನಮತಗಣನೆಗೆ ಅವಕಾಶವಿಲ್ಲ. ಹೀಗಾಗಿ ಮುಂದಿನ ದಾರಿ ಯಾವುದು ಎಂಬ ಬಗ್ಗೆ ಸಂಶೋಧನಾತ್ಮಕ ರೀತಿಯಲ್ಲಿ ಸಂವಾದಗಳು ನಡೆದರಷ್ಟೇ ಭಾರತದ ಸ್ಥಿತಿಯನ್ನು ಸುಧಾರಿಸಬಹುದು.
ಭಾರತದಲ್ಲಿ ಸದಾ ಕಾಲ ಒಂದಿಲ್ಲೊಂದು ಚುನಾವಣೆ ನಡೆಯುತ್ತಿರುವುದು ನಿಜಕ್ಕೂ ಅಪೇಕ್ಷಣೀಯವಲ್ಲ. ಆದರೆ, ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಇದೊಂದು ಅನಿವಾರ್ಯ ಪ್ರಾರಬ್ಧ. ಬೇಡದ ಅತಿಥಿಯಂತೆ ವಕ್ಕರಿಸುವ ಈ ಚುನಾವಣೆಗಳನ್ನು ನಿಗ್ರಹಿಸಿ ವಾಸ್ತವಿಕ ನೆಲೆಗಟ್ಟಿನಲ್ಲಿ ಒಂದು ದೇಶ ಒಂದು ಚುನಾವಣೆ ಎಂಬ ಚೌಕಟ್ಟಿನಲ್ಲಿ ನಡೆಸುವುದು ಔಚಿತ್ಯಪೂರ್ಣವಾದರೂ ಅದು ಕಾರ್ಯಸಾಧು ಹಾಗೂ ಕಾರ್ಯಯೋಗ್ಯವೇ ಎಂಬುದನ್ನು ಖಾತರಿಪಡಿಸಿಕೊಳ್ಳುವುದು ದೇಶದ ಸುಭದ್ರತೆಯ ದೃಷ್ಟಿಯಿಂದ ಸೂಕ್ತವಾದ ಎಚ್ಚರದ ಕ್ರಮ.